ಸೋಮವಾರ, ಆಗಸ್ಟ್ 3, 2020
26 °C

ರಾಗಿ ಒಕ್ಕಣೆಗೆ ರಸ್ತೆಗಳೇ ಕಣ–ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಗಿ ಒಕ್ಕಣೆಗೆ ರಸ್ತೆಗಳೇ ಕಣ–ಸಮಸ್ಯೆ

ವಿಜಯಪುರ : ಎಲ್ಲೆಡೆ ರಾಗಿ ಒಕ್ಕಣೆ ಕಾಲ, ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆ ಬೆಳೆದಿರುವ ರೈತರು, ಬೆಳೆಗಳಿಂದ ಧಾನ್ಯಗಳು, ಹುಲ್ಲನ್ನು ಬೇರ್ಪಡಿಸಕೊಳ್ಳಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಅಲ್ಪ ಪ್ರಮಾಣದಲ್ಲಿ ಬೆಳೆ ಬೆಳೆದಿರುವ ರೈತರು ಯಂತ್ರಗಳಿಗೆ ಹೆಚ್ಚು ಹಣ ತೊಡಗಿಸಲು ಸಾಧ್ಯವಾಗದೆ, ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಂಡಿದ್ದಾರೆ.

ರಾಗಿಯನ್ನು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರು ಆತಂಕದಲ್ಲಿ ಸಂಚಾರ ಮಾಡಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಫಸಲು ಬಂದಿದ್ದು, ಬೆಳೆ ಕಟಾವು ಮಾಡಿರುವ ರೈತರು ಸಂಕ್ರಾಂತಿ ಸುಗ್ಗಿ ವೇಳೆಗೆ ಧಾನ್ಯವನ್ನು ಮನೆಗೆ ಕೊಂಡೊಯ್ಯುವಲ್ಲಿ ನಿರತರಾಗಿದ್ದಾರೆ.

ಬಹುತೇಕ ರೈತರು, ಕೂಲಿ ಕಾರ್ಮಿಕರು, ಟ್ರ್ಯಾಕ್ಟರ್ ಬಾಡಿಗೆ ಸೇರಿ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಬೆಳೆದಿರುವ ಬೆಳೆಗಳಿಂದ ಕಾಳುಗಳನ್ನು ಬೇರ್ಪಡಿಸಲು ರಾಗಿ, ಹುರುಳಿ ಬೆಳೆಗಳನ್ನು ಒಕ್ಕಣೆಗೆ ಹಾಕುತ್ತಿರುವುದರಿಂದ ವಾಹನ ಸವಾರರಿಗೆ ರಸ್ತೆಗಳು ಮೃತ್ಯುಕೂಪವಾಗಿ ಪರಿಣಮಿಸಿದೆ ಎಂಬ ಆರೋಪ ವಾಹನ ಸವಾರರದು.

ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಹಾಗೂ ಮೃತಪಟ್ಟಿರುವ ಘಟನೆಗಳೂ ನಡೆದಿವೆ. ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ, ಚೆಕ್ ಡ್ಯಾಂ ನಿರ್ಮಾಣ, ಮನೆ, ಕ್ರೀಡಾಂಗಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಜತೆ ಕಣಗಳ ನಿರ್ಮಾಣಕ್ಕೂ ಆರ್ಥಿಕ ನೆರವು ನೀಡಲಾಗುತ್ತದೆ.

ಬಹಳಷ್ಟು ಕಾಮಗಾರಿಗಳ ಕುರಿತು ಜನರಿಗೆ ಮಾಹಿತಿ ನೀಡಿದರು ಕಣಗಳ ನಿರ್ಮಾಣದ ಬಗ್ಗೆ ರೈತರಿಗೆ ಅರಿವು ಮೂಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದರಿಂದ ರೈತರು ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಂಡಿದ್ದಾರೆ.

ಹಳ್ಳಿಗಳಲ್ಲಿ ಪ್ರವೇಶವಾಗಿರುವ ರಾಜಕೀಯ ದ್ವೇಷಗಳಿಂದ ಜನರಲ್ಲಿ ಸಾಮರಸ್ಯದ ಕೊರತೆಯಿಂದಾಗಿ ರೈತರು ಒಟ್ಟುಗೂಡಿ ಕಣಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿಲ್ಲ. ಇರುವ ಕಣಗಳು ಒತ್ತುವರಿ ಮಾಡಿಕೊಂಡಿದ್ದಾರೆ ಆದ್ದರಿಂದ ಒಕ್ಕಣೆಗಳನ್ನು ರಸ್ತೆಗಳಲ್ಲೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ರೈತ ಅಜ್ಜಪ್ಪ, ಮುನಿರಾಜು ಹೇಳಿದರು.

ಹಳ್ಳಿಗಳಲ್ಲಿ ಕಣಗಳು ಮಾಯ

ಹೊಲಗಳು ಕಟಾವಾದ ನಂತರ ಹಳ್ಳಿಗಳಲ್ಲಿನ ರೈತರು, ಒಟ್ಟಿಗೆ ಸೇರಿ ಹೊಲದಲ್ಲೆ ಕಣಗಳನ್ನು ನಿರ್ಮಾಣ ಮಾಡಿಕೊಂಡು, ಒಬ್ಬ ರೈತರಾದ ನಂತರ ಒಬ್ಬರು ಸರದಿ ಪ್ರಕಾರ ಕಣಗಳಲ್ಲೆ ಒಕ್ಕಣೆ ಮಾಡಿಕೊಂಡು ಧಾನ್ಯವನ್ನು ಮನೆಗೆ ತುಂಬಿಸಿಕೊಳ್ಳುತ್ತಿದ್ದರು. ಕಣಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಹಣದ ಬದಲಿಗೆ ಒಂದು ದಿನಕ್ಕೆ ಒಂದು ಕೊಳಗ (8 ಸೇರು) ರಾಗಿ ಕೊಡುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.