ಬುಧವಾರ, ಜೂಲೈ 8, 2020
23 °C

ಯುವಕನನ್ನು ಅಪಹರಿಸಿಕೊಂಡು ಬಂದು ಬೆದರಿಕೆಯೊಡ್ಡಿ ಬಲವಂತ ವಿವಾಹ; ಯುವಕ ಕಣ್ಣೀರಿಡುತ್ತಿರುವ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಕನನ್ನು ಅಪಹರಿಸಿಕೊಂಡು ಬಂದು ಬೆದರಿಕೆಯೊಡ್ಡಿ ಬಲವಂತ ವಿವಾಹ; ಯುವಕ ಕಣ್ಣೀರಿಡುತ್ತಿರುವ ವಿಡಿಯೊ ವೈರಲ್

ಪಟ್ನಾ:  29ರ ಹರೆಯದ ಇಂಜಿನಿಯರ್ ಒಬ್ಬರನ್ನು ಅಪಹರಿಸಿಕೊಂಡು ಬಂದು ಗನ್ ತೋರಿಸಿ ಬೆದರಿಸಿ ಯುವತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿದ ಘಟನೆ ಬಿಹಾರದ ಪಂಡಾರಕ್ ಎಂಬಲ್ಲಿ ನಡೆದಿದೆ. ಬೊಕಾರೋ ಸ್ಟೀಲ್ ಪ್ಲಾಂಟ್‍ನಲ್ಲಿ ಜ್ಯೂನಿಯರ್ ಮ್ಯಾನೇಜರ್ ಆಗಿರುವ ವಿನೋದ್ ಕುಮಾರ್ ಎಂಬ ಯುವಕನನ್ನು ಬಲವಂತವಾಗಿ ವಿವಾಹ ಮಾಡುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ವಿವಾಹಕ್ಕೆ ಸಮ್ಮತಿಸುವಂತೆ ಒತ್ತಾಯಿಸುತ್ತಿರುವ ವಧುವಿನ ಬಂಧುಗಳು ಒಂದೆಡೆಯಾದರೆ ಮದುವೆ ಬೇಡ ಎಂದು ಅಳುತ್ತಿರುವ ವರ. ಬಲವಂತ ಮದುವೆಯ ಈ ದೃಶ್ಯಗಳು ಭಾರಿ ಚರ್ಚೆಗೀಡಾಗಿದೆ.

ವಧುವಿಗೆ ಸಿಂದೂರವಿಡಲು ಯುವಕ ನಿರಾಕರಿಸಿದಾಗ, ನಾವಿಲ್ಲಿ ನಿನ್ನ ಮದುವೆ ಮಾಡುತ್ತಿದ್ದೇವೆ. ನಿನ್ನನ್ನು ನೇಣಿಗೇರಿಸುತ್ತಿಲ್ಲ ಎಂದು ವಧುವಿನ ಕುಟುಂಬದವರು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಸ್ನೇಹಿತರೊಬ್ಬರ ಮದುವೆಯಲ್ಲಿ ಭೇಟಿಯಾದ ತನ್ನನ್ನು ಇಲ್ಲಿಗೆ ಬಲವಂತವಾಗಿ ಕರೆದುಕೊಂಡು ಬಂದು ಗನ್ ತೋರಿಸಿ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ ಎಂದು ಯುವ ಇಂಜಿನಿಯರೇ ಹೇಳಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯುವಕನ ಈ ದೂರನ್ನು ಸ್ವೀಕರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳೆದ ತಿಂಗಳು ವಿನೋದ್ ಮನೆಗೆ ಬರದೇ ಇದ್ದಾಗ ಆತನ ಸಹೋದರಸಂಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಆಮೇಲೆ ಸಂಜಯ್ ಕುಮಾರ್ ಅವರಿಗೆ ಅನಾಮಿಕರೊಬ್ಬರು ಕರೆ ಮಾಡಿ ವಿನೋದ್ ನ ಬಲವಂತ ವಿವಾಹ ನಡೆಯುತ್ತಿದೆ ಎಂದು ಹೇಳಿದ್ದರು.

ನನ್ನ ಸಹೋದರ ಬೊಕಾರೋದಿಂದ ಹಟಿಯಾ- ಪಟ್ನಾ ಎಕ್ಸ್ ಪ್ರೆಸ್ ಏರಿ ಡಿಸೆಂಬರ್ 3ರಂದು ಪಟ್ನಾದಲ್ಲಿ ನಡೆಯಲಿರುವ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ಬರುತ್ತಿದ್ದರು. ಆ ವೇಳೆ ವಧುವಿನ ಅಣ್ಣ  ಸುರೇಂದರ್ ಯಾದವ್ ಮೊಕಾಮಾ ಎಂಬಲ್ಲಿಗೆ ಬರುವಂತೆ ವಿನೋದ್‍ಗೆ ಒತ್ತಾಯಿಸಿದ್ದಾರೆ.

ಅಲ್ಲಿಂದ ವಿನೋದ್‍ನ್ನು ಅಪಹರಿಸಿ ಪಂಡಾರಕ್ ಎಂಬಲ್ಲಿಗೆ ಕರೆತಂದು ಯುವತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಲಾಗಿದೆ, ಪೊಲೀಸರ ಸಹಾಯ ಬೇಡಿದ್ದರೂ ಅವರು ಸಹಾಯಕ್ಕೆ ಬರಲಿಲ್ಲ ಎಂದು ಸಂಜಯ್ ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ನಿರಾಕರಿಸಿದ ಪಂಡಾರಕ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ವಿಶ್ವಕರ್ಮ, ವಿನೋದ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿ ಎಂದು ನಾವು ಕುಟುಂಬದವರಿಗೆ ಹೇಳಿದ್ದೆವು ಎಂದಿದ್ದಾರೆ. ಆದಾಗ್ಯೂ, ಈ ಘಟನೆ ಬಗ್ಗೆ  ನಾವು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಪಟ್ನಾ ನಗರ ಎಸ್‍ಪಿ ಅಮರ್‍‍ಕೇಶ್ ನ್ಯೂಸ್ 18 ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.