ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಚುಗಳ ಸ್ವರ್ಗ ‘ನುಸಪೆನಿಡ’

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ನುಸಪೆನಿಡ ದ್ವೀಪ ಬಾಲಿಯ ಪಶ್ಚಿಮ ಭಾಗದಲ್ಲಿದ್ದು, ಅದರ ಅಕ್ಕಪಕ್ಕ, ನುಸ ಲಕ್ಯಾಂಬೋಂಗಾನ್‌ ಮತ್ತು ನುಸ ಕೆನಿಂಗಾನ್‌  ದ್ವೀಪಗಳಿವೆ.

ಇಂಡೊನೇಷ್ಯಾದಲ್ಲಿರುವ ಬಾಲಿ ದ್ವೀಪದಿಂದ ಒಂದು ಗಂಟೆ ಸ್ಪೀಡ್ ಬೋಟಿನಲ್ಲಿ ಪ್ರಯಾಣಿಸಿದರೆ ‘ನುಸಪೆನಿಡ ಟಾಪಿಕಲ್ ಐಲ್ಯಾಂಡ್’ ತಲುಪಬಹುದು.

ನಾವು ಬಾಲಿ ದ್ವೀಪದಿಂದ ಹೊರಟು, ಹಾರ್ಬರ್‌ನಲ್ಲಿ ಸ್ಪೀಡ್ ಬೋಟ್ ಹತ್ತಿದಾಗ ಬೆಳಗ್ಗೆ 7.30ರ ಸಮಯ. (ಬಾಲಿಯ ಸಮಯಕ್ಕೂ, ಭಾರತದ ಸಮಯಕ್ಕೂ 2.30 ಗಂಟೆ ವ್ಯತ್ಯಾಸವಿದೆ) ಅಲ್ಲಿ ಬಹಳ ಬೇಗ ಬೆಳಕಾಗುತ್ತದೆ.

ಸ್ಪೀಡ್ ಬೋಟ್ ಸಮುದ್ರವನ್ನು ಸೀಳಿಕೊಂಡು, ಬಿಳಿನೊರೆಯ ನಡುವೆ ಬಾಣದಂತೆ ನುಗ್ಗುವುದು ರೋಮಾಂಚಕಾರಿ ಅನುಭವ ಮಾತ್ರವಲ್ಲ, ಹೃದಯದ ಬಡಿತವನ್ನು ಹೆಚ್ಚಿಸುತ್ತದೆ.

ಒಂದು ಗಂಟೆ ಪ್ರಯಾಣಿಸಿದ ಮೇಲೆ ಅರ್ಧ ಚಂದ್ರಾಕಾರದಲ್ಲಿ, ಹಸಿರಾದ ದ್ವೀಪ ಕಾಣತೊಡಗುತ್ತದೆ. ಹತ್ತಿರ ಹೋದಂತೆಲ್ಲ ಸಾಲಾಗಿ ನಿಂತ ಬೋಟುಗಳು, ಹಸಿರು ದಟ್ಟವಾಗಿ ಕಾಣುತ್ತದೆ. ಹೊಯ್ದಾಡುವ ಬೋಟಿನಿಂದ ಕೆಳಗಿಳಿದಾಗ ಪಾದಗಳನ್ನು ಮುತ್ತಿಕ್ಕುವ ಅಲೆಗಳು, ಪಾರದರ್ಶಕ ಸಮುದ್ರದಲ್ಲಿ ಬಣ್ಣದ ಮೀನುಗಳ ಮಿನುಗಾಟ ನೋಡಲು ಬಲುಚಂದ.

ನಮ್ಮ ಪ್ರವಾಸದಲ್ಲಿ ಈ ದ್ವೀಪ ಒಂದು ದಿನದ ಪ್ಯಾಕೇಜ್ ಆಗಿತ್ತು. ಗೈಡ್, ಬೋರ್ಡ್ ಹಿಡಿದು ನಮ್ಮನ್ನು ಸ್ವಾಗತಿಸಲು ನಿಂತಿದ್ದ. ಮತ್ತೆ ಪ್ರಯಾಣ ಮುಂದುವರಿಯಿತು. ಪಶ್ಚಿಮ ಘಟ್ಟಗಳನ್ನು ನೆನಪಿಸುವಂತಹ ನಿತ್ಯಹರಿದ್ವರ್ಣದ ಕಾಡುಗಳು. ಮತ್ತೊಂದು ಕಡೆ ತೋಟಗಳು, ಹಲಸು, ಮಾವು, ಕಿತ್ತಲೆ, ಬಾಳೆ, ಅದರ ಪಕ್ಕದಲ್ಲೇ ಮುಸುಕಿನ ಜೋಳ, ಭತ್ತದ ಗದ್ದೆಗಳು ಹುಲುಸಾಗಿ ಬೆಳೆದಿದ್ದವು. ನಡುವೆ ರಸ್ತೆ ಹಾವಿನಂತೆ ಮಲಗಿತ್ತು. ಅಲ್ಲಲ್ಲಿ ಮುದ್ದಾದ ಕಂದು ಬಣ್ಣದ ಹಸು – ಕರುಗಳು ಮೇಯುತ್ತಿರುವ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು.

ಕಾಡು–ತೋಟಗಳ ನಡುವೆ ನಮ್ಮ ಪ್ರಯಾಣ ಸಾಗಿತು. ಬ್ರೋಕನ್‌ ಬೀಚ್‌ ತಲುಪಿದಾಗ, ಪ್ರಯಾಣಿಸಿದ ಆಯಾಸವೆಲ್ಲ ಕ್ಷಣಮಾತ್ರದಲ್ಲಿ ಮಾಯವಾದ ಅನುಭವ. ಸಮುದ್ರರಾಜನ ಕೈಯಲ್ಲಿ ಸೃಷ್ಟಿಯಾದ ಅದ್ಭುತ ಕೆತ್ತನೆಗಳನ್ನು ಇಲ್ಲಿ ನೋಡಬಹುದೇ ಹೊರತು, ಅಲೆಗಳೊಂದಿಗೆ ಆಡಲಾಗದು. ಸಾಹಸ ಪ್ರವೃತ್ತಿಯವರು ಕೊರಕಲಿನಲ್ಲಿ ಇಳಿದು, ಹತ್ತಿರದಿಂದ ಆನಂದಿಸಬಹುದು.

ಅದೇ ಹಾವಿನ ರಸ್ತೆಯಲ್ಲಿ ಪ್ರಯಾಣಿಸಿ, ಕ್ಲಿಂಗ್‌ ಕಿಂಗ್‌ ಬೀಚಿಗೆ ಬಂದೆವು. ಸಮುದ್ರರಾಜನ ಕೈಯಲ್ಲಿ ಸೃಷ್ಟಿಯಾದ ಮತ್ತೊಂದು ರೀತಿಯ ಅದ್ಭುತ ಶಿಲ್ಪಗಳನ್ನು ನೋಡಬಹುದಿತ್ತು. ಬಿಳಿದಾದ ಮರಳಿನ ಮೇಲೆ ಕಡು ಹಸಿರು, ನೀಲಿ ಬಣ್ಣಗಳ ಬೆಡಗು, ನೊರೆ ಎರಚುತ್ತ ಬರುವ ಅಲೆಗಳಾಟದ ನಡುವೆ ನಿಂತಿರುವ ದೊಡ್ಡ ದೊಡ್ಡ ಬಂಡೆಗಳು, ನೋಡುಗರನ್ನು ಸಮ್ಮೋಹನಗೊಳಿಸುತ್ತವೆ. ಇಲ್ಲೂ ಸಾಹಸ ಪ್ರಿಯರಿಗೆ ಅವಕಾಶವಿದೆ, ಕಾಲುದಾರಿಯಲ್ಲಿ ಕೆಳಗಿಳಿದು ಸಮೀಪದಿಂದ ಆ ಸೌಂದರ್ಯ ಸವಿಯಬಹುದು.

ಸ್ವಲ್ಪ ಮೇಲೆ ಬಂಡೆಗಳನ್ನು ಹತ್ತಿಬಂದಾಗ ಸಮತಟ್ಟಾದ ಜಾಗದಲ್ಲಿ ಬಿದಿರು – ಬೊಂಬುಗಳಿಂದ ನಿರ್ಮಿಸಲಾದ ಹೋಟೆಲ್‌ಗಳ ಸಮುಚ್ಚಯ ಕಾಣಿಸಿತು. ನಮಗೂ ಹತ್ತಿ–ಇಳಿದು ಸಾಕಷ್ಟು ಆಯಾಸವಾಗಿತ್ತು. ಲಘು ಆಹಾರ ಸೇವಿಸಿ, ಸ್ವಲ್ಪ ಹೊತ್ತು ವಿಶ್ರಮಿಸಿದೆವು.

ಕ್ರಿಸ್ಟಲ್‌ ಬೇ ಬೀಚ್‌ ಕಡೆ ನಮ್ಮ ಪ್ರಯಾಣ ಮುಂದುವರಿಯಿತು. ಈ ಬೀಚ್‌–ಅಲೆಗಳೊಡನೆ ಮನದಣಿಯೆ ಆಡಬಹುದಾದ ಸುಂದರ ಜಾಗ. ಕೋರಲ್‌ಗಳ ದೊಡ್ಡ– ದೊಡ್ಡ ಬಂಡೆಗಳು ಅಲ್ಲಿ ನಿಂತಿದ್ದವು. ಗಿಡ–ಮರಗಳು ಬೆಳೆದಿರುವ ನಡು ಗಡ್ಡೆಗಳು, ನಡುವೆ ಬಾಗಿಲಿನಂತೆ ಕೊರೆದ ಆಕಾರಗಳು, ಮಲಿನತೆಯೇ ಇಲ್ಲದ, ಪಾರದರ್ಶಕ ಅಲೆಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ. ಏಡಿಯಾಕಾರದ ಬೋಟುಗಳಲ್ಲಿ ಸಮುದ್ರ ವಿಹಾರ ಮಾಡಬಹುದು. ಮನದಣಿಯೆ ಅಲೆಗಳೊಡನೆ ಆಡಿ, ನಲಿದು ಮುಂದೆ ಸಾಗಿದಾಗ, ತೆಂಗಿನ ತೋಟ, ಅಲ್ಲಲ್ಲಿ ಮೇಯುವ ಕಂದುಬಣ್ಣದ ಹಸುಗಳು, ಪಕ್ಕದಲ್ಲೇ, ಅದ್ಭುತ ಕೆತ್ತನೆಗಳಿರುವ ದೇವಸ್ಥಾನ ಇಂತಹ ಪರಿಸರದಲ್ಲಿ ಈ ಕ್ರಿಸ್ಟಲ್‌ ಬೇ  ಬೀಚ್‌ ಇದೆ.

ಆ ಸುಂದರ ವಾತಾವರಣವನ್ನು ಬಿಟ್ಟು ಬರಲು ಸಾಧ್ಯವೇ ಆಗದೇ ಮನಸ್ಸು ಚಡಪಡಿಸುತ್ತಿತ್ತು. ‘ಬರಲಾರೆ’ ಎಂದು ಹಟ ಹಿಡಿದಿದ್ದ ಮನವನ್ನು ಬಲವಂತದಿಂದ ಹೊತ್ತು ‘ಬಾಲಿ’ ದ್ವೀಪದತ್ತ ಮರಳಿ ಪ್ರಯಾಣಿಸಿದೆವು. ಮನಸ್ಸಿನ ತುಂಬ ನೋಡಿಬಂದ ದ್ವೀಪದ ಚೆಲುವು ತುಂಬಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT