ಶನಿವಾರ, ಜೂಲೈ 4, 2020
21 °C

ಕ್ಯಾಂಟೀನೂ ಮಾಧ್ಯಮದವರೂ...!

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಬಳ ಹೆಚ್ಚಳದ ಮಸೂದೆಗೆ ಸಂಬಂಧಿಸಿದಂತೆ ಕಳೆದ ಗುರುವಾರ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಕೆಲವು ಸದಸ್ಯರು, ‘ನ್ಯಾಯಮೂರ್ತಿಗಳ ಸಂಬಳದ ಜೊತೆಗೆ ನಮ್ಮ ಸಂಬಳವೂ ಹೆಚ್ಚಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಮಗೂ ಸಾಕಷ್ಟು ಖರ್ಚು ಇರುತ್ತದೆ. ನಿತ್ಯ ಮನೆಗೆ ಬರುವವರಿಗೆ ಊಟ, ಉಪಾಹಾರ ಅಥವಾ ಚಹಾ–ಕಾಫಿಯನ್ನಾದರೂ ಕೊಡಬೇಕಾಗುತ್ತದೆ. ನಮಗೆ ಸರ್ಕಾರಿ ನೌಕರರಿಗಿಂತಲೂ ಕಡಿಮೆ ಸಂಬಳ ಸಿಗುತ್ತಿದೆ. ಆದರೂ ಮಾಧ್ಯಮಗಳು ಸದಾ ನಮ್ಮನ್ನು ಹಳಿಯುತ್ತವೆ. ಸಂಸದರಿಗೆ ಸಂಸತ್‌ನಲ್ಲಿ ಕಡಿಮೆ ದರದ ಕ್ಯಾಂಟೀನ್‌ ಸೌಲಭ್ಯವಿದೆ ಎಂದು ದೂರುತ್ತವೆ. ಶೇ 90ರಷ್ಟು ಸಂಸದರು ಇಲ್ಲಿನ ಕ್ಯಾಂಟೀನ್‌ನಲ್ಲಿ ಊಟ ಮಾಡುವುದೇ ಇಲ್ಲ. ಮಿಕ್ಕ ಶೇ 10ರಷ್ಟು ಸಂಸದರು ಚಹಾ, ಕಾಫಿ ಅಥವಾ ಜ್ಯೂಸ್‌ ಮಾತ್ರ ಕುಡಿಯುತ್ತಾರೆ. ಕ್ಯಾಂಟೀನ್‌ ಸೌಲಭ್ಯವನ್ನು ಸಂಸತ್‌ನ ಸಿಬ್ಬಂದಿ, ಭದ್ರತಾ ಕಾರ್ಯದಲ್ಲಿ ನಿರತರಾದವರು ಪಡೆಯುತ್ತಾರೆ’ ಎಂದು ಆಂಧ್ರದ ಅಮಲಾಪುರಂ ಕ್ಷೇತ್ರದ ಸದಸ್ಯ ರವೀಂದ್ರ ಬಾಬು ಹೇಳಿದರು.

ಈ ಹೇಳಿಕೆಯನ್ನು ಬೆಂಬಲಿಸಿದ ಬಹುತೇಕ ಸದಸ್ಯರು, ‘ಇಲ್ಲಿನ ಕ್ಯಾಂಟೀನ್‌ನಲ್ಲಿ ಮಾಧ್ಯಮದವರೇ ಹೆಚ್ಚಾಗಿ ತಿನ್ನುತ್ತಾರೆ’ ಎಂದು ಗಟ್ಟಿದನಿಯಲ್ಲಿ ಕೂಗಿದರು.

ಮಾತು ಮುಂದುವರಿಸಿದ ರವೀಂದ್ರಬಾಬು, ‘ಏರ್‌ ಇಂಡಿಯಾದಲ್ಲಿ ಗಗನಸಖಿಯಾಗಿರುವ ನನ್ನ ಪತ್ನಿಗೆ ಮಾಸಿಕ ₹ 4 ಲಕ್ಷ ಸಂಬಳವಿದೆ. ನನಗಿರುವ ಕಡಿಮೆ ಸಂಬಳದ ಬಗ್ಗೆ ಮಗಳೊಂದಿಗೆ ಪ್ರಸ್ತಾಪಿಸುವ ಪತ್ನಿ, ‘ನೋಡು ನಿಮ್ಮ ಅಪ್ಪ ಎಷ್ಟೊಂದು ‘ಬೇಕಾರ್‌’ ಇದ್ದಾನೆ’ ಎಂದು ಹಳಿಯುತ್ತಾಳೆ. ನಮಗೆ ಮನೆಯಲ್ಲೇ ಮರ್ಯಾದೆ ಸಿಗುತ್ತಿಲ್ಲ. ಕಡಿಮೆ ದರದ ಕ್ಯಾಂಟೀನ್‌ನಲ್ಲೂ ದುಡ್ಡು ಕೊಟ್ಟು ತಿನ್ನುವುದಕ್ಕೆ ನಮಗೆ ಆಗುವುದಿಲ್ಲ. ಜನರೂ ಎಂ.ಪಿ.ಗಳು ಎಂದರೆ ಪಿ.ಎಂ ಎಂದೇ ಭಾವಿಸಿದಂತಿದೆ’ ಎಂದು ಹಾಸ್ಯದ ಧಾಟಿಯಲ್ಲೇ ವಿವರಿಸಿದರು.

ಆಗ ಮತ್ತೆ ‘ಹೋ’ ಎಂದು ದನಿಗೂಡಿಸಿದ ಸದಸ್ಯರು, ‘ಮಾಧ್ಯದ ಪ್ರತಿನಿಧಿಗಳೇ ಹೆಚ್ಚಾಗಿ ಇಲ್ಲಿನ ಕ್ಯಾಂಟೀನ್‌ ಸೌಲಭ್ಯ ಪಡೆದುಕೊಳ್ಳುತ್ತಾರೆ ಎಂಬುದನ್ನೂ ಹೇಳಿ’ ಎನ್ನುತ್ತಾ ಪತ್ರಕರ್ತರ ವಿರುದ್ಧದ ಸಿಟ್ಟನ್ನು ಹೊರಗೆಡವಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.