ಮಂಗಳವಾರ, ಆಗಸ್ಟ್ 11, 2020
26 °C

ಶಿಕ್ಷಣ ಸಾಲದ ಬಡ್ಡಿ ಮನ್ನಾಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಪಡೆದ ಸಾಲದ ಬಡ್ಡಿ ಹಾಗೂ ಅಸಲು ಮನ್ನಾ ಮಾಡುವಂತೆ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಕೇಂದ್ರ ಸರ್ಕಾರವನ್ನು ಕೋರಿದೆ.

ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್‌ ಅವರಿಗೆ ಈ ಕುರಿತ ಮನವಿ ಸಲ್ಲಿಸಲಾಗಿದ್ದು, ಶಿಕ್ಷಣ ಸಾಲದ ಬಡ್ಡಿ ಹಣವನ್ನು ಬ್ಯಾಂಕ್‌ಗಳಿಗೆ ಭರಿಸುವ ಮೂಲಕ ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಈ ಹಿಂದೆಯೇ ತಿಳಿಸಿದ್ದರೂ, ಇದುವರೆಗೆ ಜಾರಿಯಾಗಿಲ್ಲ ಇದರಿಂದಾಗಿ ಬಡ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಬ್ಯಾಂಕ್‌ಗಳು ಕಿರುಕುಳ ನೀಡುತ್ತಿವೆ ಎಂದು ತಿಳಿಸಲಾಗಿದೆ.

ಶಿಕ್ಷಣಕ್ಕಾಗಿ ಪಡೆದ ಸಾಲದ ಬಡ್ಡಿ ಮನ್ನಾ ಮಾಡುವುದಾಗಿ 2009ಮತ್ತು 2014ರಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಸರ್ಕಾರಆದೇಶ ನೀಡಿದೆ. ಎಲ್ಲ ಬ್ಯಾಂಕ್‌ಗಳಿ ಬಡ್ಡಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಈ ಹಿಂದಿನ ಸಚಿವೆ ಸ್ಮೃತಿ ಇರಾನಿ ಲಿಖಿತ ಹೇಳಿಕೆ ನೀಡಿದ್ದರೂ ಈವರೆಗೆ ಬಡ್ಡಿ ಮನ್ನಾ ಆಗಿಲ್ಲ ಎಂದು ದೂರಲಾಗಿದೆ.

ಗೃಹ ಸಾಲ, ವಾಹನ ಸಾಲ ಸೇರಿದಂತೆ ಅನೇಕ ರೀತಿಯ ಸಾಲಗಳಿಗೆ ಆಕರಿಸುವ ಬಡ್ಡಿ ದರಕ್ಕಿಂತ ಶಿಕ್ಷಣ ಸಾಲದ ಬಡ್ಡಿ ದರ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಸುದ್ದಿಗಾರರಿಗೆ ತಿಳಿಸಿದರು.

ಶಿಕ್ಷಣ ಸಾಲಕ್ಕೆ ಶೇ 12ರಿಂದ 16ರಷ್ಟು ಬಡ್ಡಿ ಪಡೆಯಲಾಗುತ್ತಿದೆ. ಶಿಕ್ಷಣ ಪೂರ್ಣಗೊಂಡ ಒಂದು ವರ್ಷದ ಬಳಿಕ ಸಾಲ ಮರು ಪಾವತಿಸಬೇಕೆಂಬ ನಿಯಮವಿದ್ದರೂ ಶಿಕ್ಷಣ ಪೂರ್ಣಗೊಂಡ ತಕ್ಷಣದಿಂದಲೇ ನೋಟಿಸ್‌ ನೀಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ತೀವ್ರ ಬಡತನದಲ್ಲಿ ಇರುವವರ ಮಕ್ಕಳಿಗೆ ಶಿಕ್ಷಣ ಸಾಲವನ್ನೇ ನೀಡದ ಬ್ಯಾಂಕ್‌ಗಳು ಕೇವಲ ಜಮೀನು, ಮನೆ ಇದ್ದ ರೈತರು ಮತ್ತು ಮಧ್ಯಮ ವರ್ಗದವರ ಮಕ್ಕಳಿಗೇ ಭದ್ರತೆಯೊಂದಿಗೆ ಸಾಲ ನೀಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂಬ ಹೇಳಿಕೆ ನೀಡುತ್ತಾರೆ. ಆದರೆ, ಅಂಗವಿಕಲೆಯರಾದ ಹೆಣ್ಣು ಮಕ್ಕಳಿಗೂ ಶಿಕ್ಷಣ ಸಾಲ ದೊರೆಯುತ್ತಿಲ್ಲ. ಇಡೀ ದೇಶದಲ್ಲಿ ಇಂತಹ ಸ್ಥಿತಿ ಇದೆ ಎಂದು ಅವರು ಆರೋಪಿಸಿದರು.

ಹಿಂದುಳಿದ ಹೈದರಾಬಾದ್– ಕರ್ನಾಟಕ ಪ್ರದೇಶದಲ್ಲಿ 371 ‘ಜೆ’ ಆಧಾರದಲ್ಲಿ ಶಿಕ್ಷಣ ಸಾಲ ಮನ್ನಾ ಮಾಡಬೇಕು. ಸಾಲ ಪಡೆದ ಪದವೀ

ಧರರಿಗೆ ಉದ್ಯೋಗ ಕೊಡಿಸಬೇಕು. ಅಥವಾ ಸ್ವಯಂ ಉದ್ಯೋಗಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ₹ 10 ಲಕ್ಷದವರೆಗೆ ಬಡ್ಡಿರಹಿತ ಸಾಲ ಮಂಜೂರು ಮಾಡಬೇಕು ಎಂದು ಅವರು ಕೋರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.