ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಸೋ ದೊಣ್ಣೆ ತಪ್ಪಿಸಿಕೊಂಡ ಸರ್ಕಾರ!

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವತಂತ್ರ ವೀರಶೈವ– ಲಿಂಗಾಯತ ಧರ್ಮದ ಬೇಡಿಕೆ ಕುರಿತು ಪರಿಶೀಲಿಸುತ್ತಿರುವ ತಜ್ಞರ ಸಮಿತಿಯು ಕಾಲಾವಕಾಶ ವಿಸ್ತರಿಸುವಂತೆ ಕೇಳಿರುವುದರಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೀಸೋ ದೊಣ್ಣೆಯಿಂದ ಪಾರಾದಂತಾಗಿದೆ.

‘ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಅತ್ಯಂತ ಸೂಕ್ಷ್ಮವಾಗಿದ್ದು, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಪರಿಣಾಮಗಳು ಏನಾಗಬಹುದೋ ಎಂಬ ಆತಂಕ ರಾಜ್ಯ ಸರ್ಕಾರವನ್ನು ಕಾಡಿತ್ತು. ಈಗ ಸಮಿತಿಯೇ ಸಮಯಾವಕಾಶ ವಿಸ್ತರಿಸುವಂತೆ ಕೇಳಿರುವುದರಿಂದ ನಿರಾಳಭಾವ ಮೂಡಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಖಿಲ ಭಾರತ ವೀರಶೈವ ಮಹಾಸಭಾ 2016ರ ಜುಲೈ ಮೊದಲ ವಾರ ನಗರದ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕುರಿತು ಮನವಿ ಸಲ್ಲಿಸಲಾಗಿತ್ತು. ಎರಡೂ ಬಣ ಒಟ್ಟಿಗೆ ಬಂದರೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಅವರು ಭರವಸೆ ನೀಡಿದ್ದರು. ಅದರೆ, ಎರಡೂ ಗುಂಪುಗಳು ವಿಭಿನ್ನ ನಿಲುವು ತಳೆದಿದ್ದರಿಂದ ಸರ್ಕಾರದ ತೀರ್ಮಾನ ವಿಳಂಬವಾಗಿತ್ತು.

‘ವೀರಶೈವ ಮತ್ತು ಲಿಂಗಾಯತರ ನಡುವೆ ಒಡಕು ಮೂಡಿಸಿ, ರಾಜಕೀಯ ಲಾಭ ಪಡೆಯಲು ಸಿದ್ದರಾಮಯ್ಯ ಕುತಂತ್ರ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪ ಮಾಡುತ್ತಿದೆ. ಈ ಆರೋಪದಿಂದ ಪಾರಾಗುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ರಾಜ್ಯ ಸರ್ಕಾರ ಇರುವಾಗಲೇ ತಜ್ಞರ ಸಮಿತಿ ಅದರ ನೆರವಿಗೆ ಧಾವಿಸಿದೆ’ ಎಂದು ಮೂಲಗಳು ವ್ಯಾಖ್ಯಾನಿಸಿವೆ.

ನ್ಯಾ. ನಾಗಮೋಹನದಾಸ್‌ ನೇತೃತ್ವದಲ್ಲಿ ಶನಿವಾರ ಮೊದಲ ಸಭೆ ನಡೆಸಿದ ತಜ್ಞರ ಸಮಿತಿ ಎರಡು ಗಂಟೆ ಸುದೀರ್ಘವಾಗಿ ಚರ್ಚಿಸಿತು.

‘ಕರಾವಳಿಯಲ್ಲಿ ಕೋಮು ಗಲಭೆ ನಡೆಯುತ್ತಿರುವ ಸಮಯದಲ್ಲೇ ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕುರಿತೂ ವರದಿ ಕೊಟ್ಟರೆ ಸರ್ಕಾರಕ್ಕೆ ಇನ್ನಷ್ಟು ಸಮಸ್ಯೆಯಾಗಲಿದೆ. ಈ ಕಾರಣಕ್ಕೆ ಕಾಲಾವಕಾಶವನ್ನು ಆರು ತಿಂಗಳು ವಿಸ್ತರಿಸುವಂತೆ ಮನವಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದರು.

‘ತಜ್ಞರ ಸಮಿತಿ ಅಧ್ಯಕ್ಷರೇ ಇನ್ನಷ್ಟು ಕಾಲಾವಕಾಶ ಕೇಳುವ ಸಲಹೆಯನ್ನು ಸಭೆ ಮುಂದಿಟ್ಟರು. ಒಬ್ಬರು ಮಾತ್ರ ಎರಡು ಅಥವಾ ಮೂರು ತಿಂಗಳು ವಿಸ್ತರಣೆ ಕೇಳಿದರೆ ಸಾಕೆಂದರು. ಉಳಿದವರು ಆರು ತಿಂಗಳು ಕೇಳುವುದೇ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ಇದನ್ನು ಸಮಿತಿ ಒಕ್ಕೊರಲಿನಿಂದ ಒಪ್ಪಿಕೊಂಡಿತು ಎಂದರು.

‘ನಾವು ವರದಿ ಕೊಡುವ ಹೊತ್ತಿಗೆ ಚುನಾವಣೆ ಮುಗಿದಿರುತ್ತದೆ. ಇದರಿಂದ ಸರ್ಕಾರಕ್ಕೆ ಲಾಭವೂ ಆಗುವುದಿಲ್ಲ. ನಷ್ಟವೂ ಆಗುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ವೀರಶೈವ– ಲಿಂಗಾಯತ ಧರ್ಮದ ಬೇಡಿಕೆಗೆ ಸುದೀರ್ಘ ಇತಿಹಾಸವಿದೆ. ವಸಾಹತುಶಾಹಿ ಕಾಲದಲ್ಲೇ ಈ ಕೂಗು ಕೇಳಿಬಂದಿತ್ತು. ಸಮಿತಿ ಕೊಡುವ ವರದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಹೀಗಾಗಿ ಬೇಡಿಕೆಯನ್ನು ಅತ್ಯಂತ ಗಂಭೀರವಾಗಿ ಅಧ್ಯಯನ ನಡೆಸಬೇಕಾಗಿದೆ. ಧಾರ್ಮಿಕ– ಐತಿಹಾಸಿಕ ದೃಷ್ಟಿಯಿಂದಲೂ ನೋಡಬೇಕಿದೆ. ಸಾಕಷ್ಟು ದಾಖಲೆ ಸಂಗ್ರಹಿಸಬೇಕಿದೆ. ಉಭಯ ಬಣಗಳ ಹೇಳಿಕೆಗಳೂ ದಾಖಲಾಗಬೇಕು. ಹೀಗಾಗಿ ಆರು ತಿಂಗಳು ಬೇಕಾಗಲಿದೆ’ ಎಂದು ಸಮಿತಿಯ ಮತ್ತೊಬ್ಬ ಸದಸ್ಯರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT