ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲುಗೆ 3.6 ವರ್ಷ ಜೈಲು; ರಾಂಚಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆ

Last Updated 6 ಜನವರಿ 2018, 19:51 IST
ಅಕ್ಷರ ಗಾತ್ರ

ರಾಂಚಿ/ಪಟ್ನಾ: ಬಹುಕೋಟಿ ಮೇವು ಹಗರಣದ ಎರಡನೇ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಮೂರೂವರೆ ವರ್ಷ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್‌ ಸಿಂಗ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಿಕ್ಷೆಯ ಪ್ರಮಾಣ ಘೋಷಿಸಿದರು. ‘ಒಂದು ವೇಳೆ, ಲಾಲು ದಂಡ ಪಾವತಿಸಲು ವಿಫಲರಾದರೆ ಆರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದರು.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ (ವಂಚನೆ, ಕ್ರಿಮಿನಲ್‌ ಪಿತೂರಿ, ದಾಖಲೆ ತಿದ್ದುಪಡಿ) ಲಾಲು ಮತ್ತು ಇತರ 15 ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

ಮೇವು ಹಗರಣದ ಒಟ್ಟು ಆರು ಪ್ರಕರಣಗಳಲ್ಲಿ ಲಾಲು ಪ್ರಸಾದ್‌ ಶಿಕ್ಷೆಗೆ ಗುರಿಯಾದ ಎರಡನೇ ಪ್ರಕರಣ ಇದಾಗಿದೆ.

ದೇವಗಡ ಖಜಾನೆಯಿಂದ ₹89.27 ಲಕ್ಷ ಹಣವನ್ನು ಅಕ್ರಮವಾಗಿ ಪಡೆದ ಹಗರಣ 21 ವರ್ಷಗಳ ಹಿಂದೆ ಬೆಳಕಿಗೆ ಬಂದಿತ್ತು.

ಜಾಮೀನಿಗೆ ಕುತ್ತು

ಸದ್ಯ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿರುವ ಲಾಲು ಪ್ರಸಾದ್‌ ಅವರಿಗೆ ತಕ್ಷಣಕ್ಕೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಜಾಮೀನು ಸಿಗುವುದು ಕಷ್ಟ.

ಶಿಕ್ಷೆಯ ಅವಧಿ ಮೂರು ವರ್ಷಕ್ಕಿಂತ ಹೆಚ್ಚಿರುವ ಕಾರಣ ತಕ್ಷಣಕ್ಕೆ ಸಿಬಿಐ ನ್ಯಾಯಾಲಯದಿಂದ ಜಾಮೀನು ಸಿಗುವುದಿಲ್ಲ. ಹೀಗಾಗಿ ಸೋಮವಾರ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ಲಾಲು ಪರ ವಕೀಲರು ತಿಳಿಸಿದರು.

ತಮ್ಮ ಕಕ್ಷಿದಾರರ ವಯಸ್ಸು (69 ವರ್ಷ) ಮತ್ತು ಆರೋಗ್ಯ ಗಮನದಲ್ಲಿರಿಸಿಕೊಂಡು ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸುವಂತೆ ಇದಕ್ಕೂ ಮೊದಲು ಲಾಲು ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ

2017ರ ಡಿ. 23ರಂದು ತೀರ್ಪು ಪ್ರಕಟಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯ, 22 ಆರೋಪಿಗಳ ಪೈಕಿ ಲಾಲು ಸೇರಿದಂತೆ 16 ಮಂದಿಯನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು.

ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್‌ ಮಿಶ್ರಾ ಸೇರಿದಂತೆ ಆರು ಮಂದಿಯನ್ನು  ಖುಲಾಸೆಗೊಳಿಸಿತ್ತು.

ಬಿಹಾರದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಆರು ಮಂದಿ ನಿವೃತ್ತ ಅಧಿಕಾರಿಗಳು ಭಾಗಿಯಾಗಿದ್ದ ಈ ಪ್ರಕರಣ ದೇಶದ ಗಮನ ಸೆಳೆದಿತ್ತು.

ಹೈಕೋರ್ಟ್‌ಗೆ ಮೊರೆ: ತೇಜಸ್ವಿ

ಪಟ್ನಾದಲ್ಲಿ ಪಕ್ಷದ ನಾಯಕರ ಜತೆ ತುರ್ತುಸಭೆ ನಡೆಸಿದ ಲಾಲು ಕಿರಿಯ ಪುತ್ರ ತೇಜಸ್ವಿ ಯಾದವ್‌, ಜಾಮೀನು ಕೋರಿ ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸುವುದಾಗಿ ಹೇಳಿದರು.

‘ಲಾಲು ಅವರೊಬ್ಬರೇ ಭ್ರಷ್ಟರು ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಬಿಹಾರದಲ್ಲಿ ನಡೆದ ₹1000 ಕೋಟಿಗಳ ಸೃಜನ್‌ ಹಗರಣದ ಬಗ್ಗೆ ಏಕೆ ಯಾರೂ ಚಕಾರ ಎತ್ತುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

ಷಡ್ಯಂತ್ರಕ್ಕೆ ಬಲಿ: ಆರ್‌ಜೆಡಿ ಟೀಕೆ

‘ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಬಿಜೆಪಿಯ ಷಡ್ಯಂತ್ರಕ್ಕೆ ಲಾಲು ಪ್ರಸಾದ್‌ ಬಲಿಯಾಗಿದ್ದಾರೆ’ ಎಂದು ಆರ್‌ಜೆಡಿ ಆರೋಪಿಸಿದೆ.

‘ದೇಶ ಕೊಳ್ಳೆ ಹೊಡೆದವರು ಎಂತಹ ದೊಡ್ಡ ವ್ಯಕ್ತಿಯಾದರೂ ನ್ಯಾಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯದ ಎದುರು ಎಲ್ಲರೂ ಸಮಾನರು’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

‘ಲಾಲು ಪ್ರಸಾದ್‌ ನಾಯಕತ್ವದಲ್ಲಿ ಆರಂಭವಾಗಿದ್ದ ಭ್ರಷ್ಟಾಚಾರ ರಾಜಕಾರಣದ ಅಧ್ಯಾಯಕ್ಕೆ ಇದರೊಂದಿಗೆ ತೆರೆ ಬಿದ್ದಿದೆ’ ಎಂದು ಜೆಡಿಯು ಹೇಳಿದೆ.

‘ಕಾಂಗ್ರೆಸ್‌ ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದೆ. ಆರ್‌ಜೆಡಿಯೊಂದಿಗೆ ನಾವು ಮೈತ್ರಿ ಮಾಡಿದ್ದೇವೆ ವಿನಾ ನಿರ್ದಿಷ್ಟ ವ್ಯಕ್ತಿಯೊಂದಿಗೆ ಅಲ್ಲ’ ಎಂದು ಕಾಂಗ್ರೆಸ್‌ ಹೇಳಿದೆ.

ಮೊದಲ ಪ್ರಕರಣದಲ್ಲಿ ಐದು ವರ್ಷ ಜೈಲು

ಮೇವು ಹಗರಣದ ಮೊದಲ ಪ್ರಕರಣದಲ್ಲಿ (ಆರ್‌ಸಿ 20ಎ/96) 2013ರ ಸೆಪ್ಟೆಂಬರ್‌ 13ರಂದು ನ್ಯಾಯಾಲಯ ಲಾಲು ಪ್ರಸಾದ್‌ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಇದರಿಂದಾಗಿ ಲೋಕಸಭಾ ಸದಸ್ವತ್ವ ಕಳೆದುಕೊಂಡಿದ್ದ ಅವರು, ಮೂರು ತಿಂಗಳಲ್ಲೇ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು.

ಬಾಕಿ ಇರುವ ಪ್ರಕರಣ

* ದುಮಕಾ ಖಜಾನೆಯಿಂದ ₹3.97 ಕೋಟಿ ಪಡೆದ ಪ್ರಕರಣ

* ಚಾಯೀಬಾಸಾ ಖಜಾನೆಯಿಂದ ₹36 ಕೋಟಿ ಬಳಸಿದ ಪ್ರಕರಣ

* ಡೋರಂಡಾ ಖಜಾನೆಯಿಂದ ₹184 ಕೋಟಿ ತೆಗೆದ ಪ್ರಕರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT