ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿಯಿಂದ ಸನ್ಯಾಸ ದಿನಚರಿ ಪರಿಪಾಲನೆ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದಿಚುಂಚನಗಿರಿ ಮಠದಲ್ಲಿ ಅಪ್ಪಟ ಸನ್ಯಾಸಿ ದಿನಚರಿಯನ್ನೇ ಅನುಸರಿಸಲಿದ್ದಾರೆ.

ಶನಿವಾರ ರಾತ್ರಿ ನಗರಕ್ಕೆ ಬಂದ ಯೋಗಿ ಆದಿತ್ಯನಾಥ ಕುಂಬಳಗೋಡು ಬಿಜಿಎಸ್‌ ನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿದರು.

ಭಾನುವಾರ ಬೆಳಿಗ್ಗೆ ವಿಜಯನಗರ ಎಂ.ಸಿ.ಲೇಔಟ್ ನಲ್ಲಿರುವ ಬಾಲಗಂಗಾಧರನಾಥ ಮಹಾಸ್ವಾಮೀಜಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ಪರಿವರ್ತನಾ ಯಾತ್ರೆಯಲ್ಲಿ ಮುಖ್ಯಭಾಷಣ ಮಾಡಲಿದ್ದಾರೆ.

ಆದಿತ್ಯನಾಥ ವಾಸ್ತವ್ಯದ ಉಸ್ತುವಾರಿಯನ್ನು ಬಿಜೆಪಿ ಶಾಸಕ ಆರ್‌.ಅಶೋಕ್‌ ವಹಿಸಿದ್ದಾರೆ. ‘ಯೋಗಿ ವಾಸ್ತವ್ಯಕ್ಕೆ ಅಗತ್ಯ ತಯಾರಿಯನ್ನು ಕಳೆದ ಒಂದು ವಾರದಿಂದಲೇ ನಡೆಸಲಾಗಿದೆ. ನಾಥ ಪರಂಪರೆಯನ್ನು ಅನುಸರಿಸಲು ಇಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ಅಶೋಕ್‌ ತಿಳಿಸಿದರು.

ಯೋಗಿ ಪ್ರತಿ ದಿನ ಮುಂಜಾನೆ 3 ಕ್ಕೆ ಏಳುತ್ತಾರೆ. ಬಳಿಕ ಪೂಜೆ ಮಾಡಿ ಯೋಗಾಭ್ಯಾಸ ಮಾಡುತ್ತಾರೆ. ಬೆಳಗ್ಗಿನ ಉಪಹಾರಕ್ಕೆ ಹಣ್ಣು, ಬೇಳೆ–ಕಾಳುಗಳು ಮತ್ತು ಓಟ್ಸ್‌ ಸೇವಿಸುತ್ತಾರೆ. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಇವೆಲ್ಲವನ್ನೂ ಮಠದ ಸಿಬ್ಬಂದಿಯೇ ಮಾಡಿ ಬಡಿಸುತ್ತಾರೆ ಎಂದು ಅಶೋಕ್‌ ಹೇಳಿದರು.

ಆದಿಚುಂಚನಗಿರಿ ಮಠ ಮತ್ತು ಗೋರಖನಾಥ್‌ ಮಠಕ್ಕೂ ಪುರಾತನ ಸಂಬಂಧವಿದೆ. ಎರಡೂ ಮಠಗಳು ನಾಥ ಪರಂಪರೆಗೆ ಸೇರಿವೆ. ಆದಿತ್ಯನಾಥ ಗೋರಖನಾಥ್‌ ಮಠದ ಮುಖ್ಯಸ್ಥರೂ ಆಗಿದ್ದಾರೆ. ಭಾನುವಾರ ಬೆಳಿಗ್ಗೆ ಮಠದಲ್ಲೆ ಪೂಜೆ ಮಾಡಿ ಬಳಿಕ ಪರಿವರ್ತನಾ ಸಮಾವೇಶಕ್ಕೆ ಬರುತ್ತಾರೆ.  ಮಧ್ಯಾಹ್ನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಜತೆ ಭೋಜನ ಸ್ವೀಕರಿಸಲಿದ್ದಾರೆ.

ಈ ಸಂದರ್ಭದಲ್ಲಿ ಅನಗತ್ಯ ನೂಕು–ನುಗ್ಗಲು ತಪ್ಪಿಸಲು ಬಿಜೆಪಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಠದಿಂದ ದೂರ ಉಳಿಯು
ವಂತೆ ನಿರ್ಮಲಾನಂದನಾಥ ಸ್ವಾಮೀಜಿ ಸೂಚಿಸಿದ್ದಾರೆ.

ಮಠದಲ್ಲಿ ಅನಗತ್ಯ ನೂಕು ನುಗ್ಗಲು ತಪ್ಪಿಸಲು ಸ್ವತಃ ಸ್ವಾಮೀಜಿಯವರೇ ಈ ಸೂಚನೆ ನೀಡಿದ್ದಾರೆ. ಪಕ್ಷದ ಉಳಿದ ನಾಯಕರಿಗೆ ವಿ. ಸೋಮಣ್ಣ ಅವರ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT