ಯೋಗೇಶ್ವರ್‌ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

7

ಯೋಗೇಶ್ವರ್‌ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

Published:
Updated:
ಯೋಗೇಶ್ವರ್‌ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಚನ್ನಪಟ್ಟಣ: ಸಚಿವ ಡಿ.ಕೆ.ಶಿವಕುಮಾರ್‌ಗೆ ಪೊರಕೆಯಲ್ಲಿ ಹೊಡಿಸುತ್ತೇನೆ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸಿ.ಪಿ.ಯೋಗೇಶ್ವರ್ ಕ್ರಮವನ್ನು ಖಂಡಿಸಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಕುವೆಂಪುನಗರ ತಾಲ್ಲೂಕು ಕಾಂಗ್ರೆಸ್ ಸಮಿತಿ ಕಚೇರಿ ಬಳಿಯಿಂದ ಬೆಂಗಳೂರು ಮೈಸೂರು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಯೋಗೇಶ್ವರ್ ವಿರುದ್ಧ ಧಿಕ್ಕಾರ ಕೂಗಿ, ಗಾಂಧಿಭವನದ ಎದುರು ಧರಣಿ ನಡೆಸಿ, ಯೋಗೇಶ್ವರ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

‘ಡಿ.ಕೆ.ಶಿವಕುಮಾರ್ ಅವರ ಮುಖವಾಡ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ನಾವೆಲ್ಲರೂ ಶಿವಕುಮಾರ್. ನಮಗೆ ಪೊರಕೆಯಲ್ಲಿ ಹೊಡೆಯಲಿ, ಯೋಗೇಶ್ವರ್‌‌ಗೆ ನೈತಿಕತೆ ಇದ್ದರೆ ಈಗಲೇ ಬರಲಿ ನಮಗೆ ಪೊರಕೆಯಲ್ಲಿ ಹೊಡೆಯಲಿ’ ಎಂದು ಸವಾಲು ಹಾಕಿದರು.

ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರವನ್ನು ರಾಜಕೀಯವಾಗಿ ಮದುವೆಯಾಗಿರುವುದಾಗಿ ಹೇಳಿರುವುದನ್ನು ಬೇಕಂತಲೇ ಬೇರೊಂದು ಅರ್ಥದಲ್ಲಿ ಬಿಂಬಿಸುತ್ತಿರುವ ಯೋಗೇಶ್ವರ್ ಕೀಳುಮಟ್ಟದ ರಾಜಕಾರಣವನ್ನು ತೋರಿಸುತ್ತಿದ್ದಾರೆ ಎಂದು ದೂರಿದರು.

ಯಾರನ್ನು ಮದುವೆಯಾಗಿದ್ದಾರೆ ಎಂಬುದನ್ನು ತೋರಿಸಲಿ ಎಂದು ಹೇಳುವ ಮೂಲಕ ತಾಲ್ಲೂಕಿನ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಬಂದಾಗ ಗಿಮಿಕ್ ಮಾಡುತ್ತಾ, ಬೇರೆ ಪಕ್ಷಗಳಿಗೆ ವಲಸೆ ಹೋಗುವ ಯೋಗೇಶ್ವರ್ ಗೆ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.

ಶಾಸಕ ಸ್ಥಾನವನ್ನು ವ್ಯಾಪಾರ ಮಾಡುವ ಅವರು ಈ ರೀತಿ ಮಾತನಾಡುವುದು ಅವರಿಗೆ ತಕ್ಕುದಲ್ಲ. ಅವರ ಎಲ್ಲಾ ದೌರ್ಜನ್ಯವನ್ನೂ ಕ್ಷೇತ್ರದ ಜನತೆ ಸಹಿಸಿಕೊಂಡಿದ್ದಾರೆ ಎಂದರು. ಮನಬಂದಂತೆ ಆಡುತ್ತಿರುವ ಅವರಿಗೆ ಜನತೆಯೆ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಕೂಡಲೇ ಅವರು ಅವಹೇಳನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆ ಯಾಚಿಸಬೇಕು. ಹಾಗೆಯೇ ತಾಲ್ಲೂಕಿನ ಮಹಿಳೆಯಲ್ಲಿ ಕ್ಷಮೆ ಯಾಚನೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರೇಗೌಡ, ಶಿವಮಾದು, ಮುದ್ದುಕೃಷ್ಣ, ಮುಖಂಡರಾದ ಶರತ್ ಚಂದ್ರ, ಚಂದ್ರಸಾಗರ್, ತಿಮ್ಮಪ್ಪರಾಜು, ತಾಲ್ಲೂಕು ಮಹಿಳಾ ಸಮಿತಿ ಅಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಲ್ಲೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಯ್ಯ, ಮುಖಂಡರಾದ ಎಸ್.ಸಿ.ಶೇಖರ್, ಸಿದ್ದರಾಮಯ್ಯ, ವಾಸಿಲ್ ಆಲಿಖಾನ್, ರಮೇಶ್, ಸತೀಶ್, ಪುಟ್ಟರಾಜು, ನವಾಜ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry