ಮಂಗಳವಾರ, ಜುಲೈ 14, 2020
26 °C

ಅಂಗನವಾಡಿಗಳ ಅವ್ಯವಸ್ಥೆ: ತೀವ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗನವಾಡಿಗಳ ಅವ್ಯವಸ್ಥೆ: ತೀವ್ರ ಅಸಮಾಧಾನ

ಔರಾದ್: ಸರ್ಕಾರದ ಹೆಚ್ಚು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿತು. ಬೆಳಿಗ್ಗೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ತಂಡ ಸಕಾಲ ಸೇವೆ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕಡತಗಳು ಪರಿಶೀಲಿಸಿದರು. ಸಕಾಲ ಸೇವೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಟಿ.ಎಂ. ವಿಜಯಭಾಸ್ಕರ್ ‘ಕರ್ತವ್ಯ ನಿಭಾಯಿಸಲು ಇಲ್ಲದೊಂದು ನೆಪ ಹೇಳಬಾರದು ಎಂದು ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ಯಾವ ಯಾವ ಸೇವೆಗಳು ಸಕಾಲ ವ್ಯಾಪ್ತಿಗೆ ಬರುತ್ತವೆ. ಮತ್ತು ಎಷ್ಟು ದಿನಗಳಲ್ಲಿ ಸೇವೆ ಲಭ್ಯ ಎಂಬುದರ ಕುರಿತು ಜನರಿಗೆ ಕಾಣುವ ಹಾಗೆ ನಾಮಫಲಕ ಹಾಕುವಂತೆ’ ಸೂಚಿಸಿದರು.

ನಂತರ ತಾಲ್ಲೂಕಿನ ಯನಗುಂದಾ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅವ್ಯವಸ್ಥೆ ಕಂಡು ಬಂತು. ಅಂಗನವಾಡಿ ಕಾರ್ಯಕರ್ತೆ ಈ ವೇಳೆ ಇರಲಿಲ್ಲ. ಸಹಾಯಕಿ ಇದ್ದರು. ಇಬ್ಬರು ಮಕ್ಕಳು ಮಾತ್ರ ಇದ್ದರು. ಮಕ್ಕಳಿಗೆ ಏನೇನು ಊಟ ಕೊಡುತ್ತೀರಿ ಎಂದು ಕೇಳಿದಾಗ ಸಹಾಯಕಿಯಿಂದ ಸೂಕ್ತ ಉತ್ತರ ಸಿಗಲಿಲ್ಲ.

ಇದರಿಂದ ಸಿಡಿಮಿಡಿಗೊಂಡ ವಿಜಯ್‌ ಭಾಸ್ಕರ್‌ ಅಂಗನವಾಡಿಗಳಿಗೆ ಯಾರೂ ಮೇಲ್ವಿಚಾರಣೆ ಮಾಡುವುದಿಲ್ಲವೇ? ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕೇಳಿದರು. ಅದೇ ಊರಿನ ಮತ್ತೊಂದು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ನಾಲ್ಕು ಮಕ್ಕಳಿದ್ದರು. 24 ಹಾಜರಾತಿ ಇತ್ತು. ಮಕ್ಕಳಿಗೆ ಕೊಡುವ ಆಹಾರ ಧಾನ್ಯ ಪರಿಶೀಲಿಸಿದರು. ಮಕ್ಕಳ ಕಲಿಕೆ ಪರಿಶೀಲಿಸಿದರು. ಮಕ್ಕಳಿಗೆ ಕನಿಷ್ಠ ಹಾಡು ಆದರೂ ಕಲಿಸಬಾರದೆ ಎಂದು ಅಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡರು.

ಅಂಗನವಾಡಿಗಳ ಸರಿಯಾದ ಮೇಲ್ವಿಚಾರಣೆ ಮಾಡಬೇಕು. ಸಿಡಿಪಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪ್ರಗತಿ ಹಂತದಲ್ಲಿರುವ ಶೌಚಾಲಯಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಜತೆ ಮಾತನಾಡಿದರು. ಕೆಲ ಕಡೆ ಶೌಚಾಲಯ ಬಳಸದೆ ಇರುವುದು ಕಂಡು ಜನರಲ್ಲಿ ತಿಳಿವಳಿಕೆ ಮೂಡಿಸುವಂತೆ ಪಿಡಿಒಗೆ ಸಲಹೆ ನೀಡಿದರು.

ಯನಗುಂದಾ ಗ್ರಾಮದ ಪಡಿತರ ಅಂಗಡಿಗೆ ಭೇಟಿ ನೀಡಿದಾಗ ನ್ಯಾಯಬೆಲೆ ಅಂಗಡಿ ಮಾಲೀಕ ಜನರಿಂದ ಹೆಚ್ಚುವರಿ ಹಣ ಪಡೆಯುತ್ತಿರುವುದಾಗಿ ದೂರು ಬಂತು. ಪಡಿತರ ಧಾನ್ಯ ಪಡೆಯಲು ಆಯಾ ಗ್ರಾಮದಲ್ಲೇ ಬಯೊಮೆಟ್ರಿಕ್ ವ್ಯವಸ್ಥೆ ಮಾಡಿಕೊಳ್ಳಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಜನರಿಗೆ ತೊಂದರೆ ಮಾಡುವವರ ಪರವಾನಗಿ ರದ್ದು ಮಾಡ ಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ ತಿಳಿಸಿದರು.

ಚಿಂತಾಕಿ ವಿದ್ಯಾರ್ಥಿ ವಸತಿ ನಿಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಮತ್ತು ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿವಿಧೆಡೆ ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸೆಲ್ವಮಣಿ, ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ತಹಶೀಲ್ದಾರ್ ಎಂ. ಚಂದ್ರಶೇಖರ, ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎ. ಜಬ್ಬಾರ್‌, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹೇಶ ಬಿರಾದಾರ, ಸ್ವಚ್ಛ ಭಾರತ ನೊಡಲ್ ಅಧಿಕಾರಿ ಗೌತಮ ಅರಳಿ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಅಮಾನತು

ಔರಾದ್: ಅನಧಿಕೃತವಾಗಿ ಗೈರು ಹಾಜರಿದ್ದ ಯನಗುಂದಾ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ ತಿಳಿಸಿದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಶನಿವಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಕಾರ್ಯಕರ್ತೆ ಗೈರು ಮತ್ತು ಅವ್ಯವಸ್ಥೆ ಮೇಲಾಧಿಕಾರಿಗಳಲ್ಲಿ ಅಸಮಾಧಾನ ತಂದಿದೆ. ಸಿಡಿಪಿಒ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

* * 

ಇಲ್ಲಿಯ ಅಂಗನವಾಡಿಗಳ ಇಂತಹ ಪರಿ ಅವ್ಯವಸ್ಥೆ ನೋವಿನ ಸಂಗತಿ. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುತ್ತಿಲ್ಲ. ಸರಿಯಾದ ಮೇಲ್ವಿಚಾರಣೆ ಇಲ್ಲ.

ಟಿ.ಎಂ. ವಿಜಯ್‌ಭಾಸ್ಕರ್

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.