ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ಜಾನಪದ ಕಲೆಯ ತವರೂರು’

Last Updated 7 ಜನವರಿ 2018, 9:59 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ಭಾರತ ಜಾನಪದ ಕಲೆಯ ತವರಾಗಿದ್ದು, ವಿಶ್ವದ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ’ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಕಾಳೇಗೌಡ ನಾಗವಾರ ಹೇಳಿದರು. ಜಿಲ್ಲಾ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ, ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಆಶ್ರಯದಲ್ಲಿ ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ನಡೆದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

‘ಕೊಡಗು ಜಿಲ್ಲೆಯಲ್ಲಿ ವೈವಿಧ್ಯಮಯವಾದ ಜಾನಪದ ಕಲೆಯನ್ನು ಕಾಣಬಹುದು. ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಸೂರ್ಲಬ್ಬಿ ನಾಡಿನ ಬಗ್ಗೆ ಅಧ್ಯಯನ ಆಗಬೇಕಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಜಾನಪದ ಕಲೆ ಮತ್ತು ಸಂಸ್ಕೃತಿ ನಾಶವಾಗುತ್ತಿದ್ದರೂ, ಗರ್ವಾಲೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಇನ್ನೂ ಉಳಿದಿದೆ. ಇಲ್ಲಿನ ಕಲೆ, ಸಂಸ್ಕೃತಿ ಮತ್ತು ವಾತಾವರಣ ಹಾಗೂ ಜೀವನ ಪದ್ಧತಿ ಸಂಶೋಧಕರಿಗೆ ಹೆಚ್ಚಿನ ನೆರವು ನೀಡಲಿದೆ. ಇಂದಿಗೂ ಈ ಭಾಗದಲ್ಲಿ ಪ್ರಾಚೀನ ಕ್ರೀಡೆಗಳು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಶ್ಲಾಘಿಸಿದರು.

‘ಕಲುಷಿತ ಪರಿಸರ ಸಮಾಜಕ್ಕೆ ಕಂಟಕವಾಗಿದೆ. ಸಾಂಸ್ಕೃತಿಕ ಅಂಶಗಳು ಜಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಸಂಶೋಧನಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು. ಜಾನಪದ ಕಲೆಗಳನ್ನು ಕರಗತ ಮಾಡಿಕೊಂಡು ಬಾಯಿ ಮಾತಿನ ಮೂಲಕ ಜಾನಪದ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೂ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ‘ಈ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ನಮ್ಮ ಹಿರಿಯರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ, ಇಂದಿನ ಯುವ ಜನಾಂಗ ಪಟ್ಟಣದಲ್ಲಿ ನೆಲೆಸುವ ಪ್ರವೃತ್ತಿಯನ್ನು ಬಿಟ್ಟು, ಜನರ ಜೀವನಾಡಿಯಾದ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡು, ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು’ ಎಂದು ಕರೆ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ‘ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಇಂದಿಗೂ ಕಾಣಸಿಗುವ ವೀರಗಲ್ಲುಗಳು ಗ್ರಾಮದ ವೀರ ಪರಂಪರೆಯನ್ನು ತಿಳಿಸುತ್ತಿವೆ. ಆದರೆ, ಇಲ್ಲಿಯವರೆಗೂ ಸ್ಥಳೀಯ ಜನರ ಬದುಕು ಹಸನಾಗಿಲ್ಲ. ಬದುಕನ್ನು ರೂಪಿಸುವ ಕೆಲಸವಾಗಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ನಡೆಯುತ್ತಿರುವ ಮೋಜು ಮಸ್ತಿಯಿಂದ ಪುಣ್ಯ ಕ್ಷೇತ್ರಗಳು ಕಲುಷಿತಗೊಳ್ಳೂತ್ತಿವೆ. ಇದಕ್ಕೆ ಸಂಬಂಧಿಸಿದವರು ಕಡಿವಾಣ ಹಾಕಬೇಕಾಗಿದೆ’ ಎಂದು ಎಚ್ಚರಿಸಿದರು.

ಜಾನಪದ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ನಾಡು ತಕ್ಕರಾದ ಮೇದುರ ಪೂವಯ್ಯ, ಸೂರ್ಲಬ್ಬಿ ನಾಡು ಅಧ್ಯಕ್ಷರಾದ ಮುದ್ದಂಡ ತಿಮ್ಮಯ್ಯ, ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನ್ನಿಕಂಡ ಸುಭಾಶ್, ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಸದಸ್ಯೆ ಮಾಯಮ್ಮ, ಕೊಡವ ಟ್ರಸ್ಟ್ ಅಧ್ಯಕ್ಷ ಅಜ್ಜಿನಂಡ ತಮ್ಮು ಪೂವಯ್ಯ, ಹಿರಿಯರಾದ ಅಂಬೆಕಲ್ ಕುಶಾಲಪ್ಪ ಉಪಸ್ಥಿತರಿದ್ದರು.

ಹಿರಿಯ ಜಾನಪದ ಕಲಾವಿದರಾದ ಮುದ್ದಂಡ ತಿಮ್ಮಯ್ಯ, ಪುದಿಯತಂಡ ಪೂವಮ್ಮ, ಉದಿಯಂಡ ಪೊನ್ನಪ್ಪ, ಕಾಕೇರ ಪೊನ್ನಪ್ಪ, ಮುದ್ದಂಡ ಶಿವಯ್ಯ, ಓಡಿಯಂಡ ಬೆಳ್ಳಿಯಪ್ಪ, ನಾಪಂಡ ಪೂವಯ್ಯ, ಗೌಡಂಡ ತಮ್ಮಯ್ಯ, ನಾಳಿಯಮ್ಮಂಡ ಮೇದಮಯ್ಯ ಹಾಗೂ ಜಾನಪದ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಂಚೇಟ್ಟೀರ ಫ್ಯಾನ್ಸಿ ಮುತ್ತಣ್ಣ ಅವರುಗಳನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲಿ ಮೆರವಣಿಗೆ ನಡೆಸಲಾಯಿತು. ನಂತರ, ನಾಲ್ಗುಡಿ ದೇವರನ್ನು ಪ್ರಾರ್ಥಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ಸಾರ್ವಜನಿಕರಿಗೆ ಗೋಣಿಚೀಲ ಓಟ, ರೆಗ್ಗೆ, ಚಿಲಕಿ ಆಟ, ಮಡಿಕೆ ಒಡೆಯುವುದು, ವಲಿಬಾಲ್, ಮಹಿಳಾ ಕಬಡ್ಡಿ, ತೆಂಗೆಪೋರ್ ಕ್ರೀಡಾ ಸ್ಪರ್ಧೆಗಳು ನಡೆದವು.

* *

ಸಾಂಸ್ಕೃತಿಕ ಅಂಶಗಳು ಜಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಸಂಶೋಧನಾ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು
– ಕಾಳೇಗೌಡ ನಾಗವಾರ, ಮಾಜಿ ಅಧ್ಯಕ್ಷ, ಜಾನಪದ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT