ಕಾಮನ್ವೆಲ್ತ್ ಗೇಮ್ಸ್ನ ಕುಸ್ತಿ ಸ್ಪರ್ಧೆಗಾಗಿ ದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಕುಸ್ತಿಪಟುಗಳ ಬೆಂಬಲಿಗರು ಮಾರಾಮಾರಿ ನಡೆಸಿದ್ದು ಈಚೆಗೆ ದೊಡ್ಡ ಸುದ್ದಿಯಾಗಿತ್ತು.

ಪ್ರಕರಣ ನಡೆದ ಮರುದಿನವೇ ಸುಶೀಲ್ ಕುಮಾರ್ ಮತ್ತು ಬೆಂಬಲಿಗರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದರು. ಇದರ ಬೆನ್ನಲ್ಲೇ ಪ್ರವೀಣ್ ರಾಣಾ ರಣಕಹಳೆ ಮೊಳಗಿಸಿದರು. ‘ಪ್ರೊ ಕುಸ್ತಿ ಲೀಗ್ನಲ್ಲಿ ಸುಶೀಲ್ ಕುಮಾರ್ನನ್ನು ಮಣಿಸಿಯೇ ತೀರುತ್ತೇನೆ’ ಎಂಬ ಅವರ ಸವಾಲು ಕುಸ್ತಿ ಪ್ರಿಯರ ನರನಾಡಿಗಳನ್ನು ಬಿಗಿ ಮಾಡಿದೆ. ಅವರೆಲ್ಲರ ಗಮನ ಈಗ ಪ್ರೊ ಕುಸ್ತಿ ಲೀಗ್ನತ್ತ ಸಾಗಿದೆ.

ಜನವರಿ 9ರಿಂದ 18ರ ವರೆಗೆ ದೆಹಲಿಯ ಸಿರಿ ಪೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಲೀಗ್ನಲ್ಲಿ ದೇಶ–ವಿದೇಶದ ಖ್ಯಾತ ಕುಸ್ತಿಪಟುಗಳು ಕಾದಾಡಲಿದ್ದಾರೆ. ಆದರೆ ಸುಶೀಲ್ ಮತ್ತು ರಾಣಾ ಅವರ ಬೌಟ್ ಲೀಗ್ನ ಪ್ರಮುಖ ಆಕರ್ಷಣೆ ಆಗಲಿದೆ.
ಎರಡು ಬಾರಿ ಒಲಿಂಪಿಕ್ ಪದಕಗಳನ್ನು ಗೆದ್ದ ಸುಶೀಲ್ ಕುಮಾರ್ ಮತ್ತು ಕಾಮನ್ವೆಲ್ತ್ ಯುವ ಗೇಮ್ಸ್ನ ಕುಸ್ತಿಯಲ್ಲಿ ಚಿನ್ನ ಗೆದ್ದು ಬೆಳಕಿಗೆ ಬಂದ ಪ್ರವೀಣ್ ರಾಣಾ ಇಬ್ಬರೂ ಅಪ್ರತಿಮ ಹೋರಾಟಗಾರರು. ಸುಶೀಲ್ ಇದೇ ಮೊದಲು ಪ್ರೊ ಕುಸ್ತಿ ಲೀಗ್ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಕುಸ್ತಿಪಟುಗಳ ಹರಾಜಿನಲ್ಲಿ ದಾಖಲೆ ಮೊತ್ತ ನೀಡಿ ಅವರನ್ನು ಡೆಲ್ಲಿ ಸುಲ್ತಾನ್ಸ್ ಪಡೆದುಕೊಂಡಿದೆ.

ಪ್ರವೀಣ್ ರಾಣಾಗೆ ಇದು ಮೂರನೇ ಲೀಗ್. ಮೊದಲ ಬಾರಿ ಪಂಜಾಬ್ ರಾಯಲ್ಸ್ ಪರ ಕಣಕ್ಕೆ ಇಳಿದಿದ್ದ ಅವರು ಕಳೆದ ಬಾರಿ ತವರಿನ ಡೆಲ್ಲಿ ಸುಲ್ತಾನ್ಸ್ಗಾಗಿ ಪಟ್ಟು ಹಾಕಿದ್ದರು. ಸುಶೀಲ್ ಮತ್ತು ರಾಣಾ ಅವರ ಬೆಂಬಲಿಗರು ಹೊಡೆದಾಡಿಕೊಂಡದ್ದಕ್ಕೆ ಕೇವಲ ಕ್ಷಣಿಕ ಕೋಪ ಕಾರಣವಲ್ಲ. ಅವರ ಜಗಳಕ್ಕೆ ನಾನಾ ಆಯಾಮಗಳಿವೆ. ಪ್ರದೇಶ, ಕುಸ್ತಿ ಗರಡಿಗಳಲ್ಲಿನ ಸ್ಪರ್ಧೆ, ಬೆಂಬಲಿಗರ ಜಿದ್ದಾಜಿದ್ದಿ ಮುಂತಾದ ಅಂಶಗಳು ಹೊಡೆದಾಟದ ಮೂಲಕ ಬೀದಿಗೆ ಬಂದಿವೆ.

ರಿತು ಪೋಗಟ್ (ಬಿಳಿ ಪೋಷಾಕು) ಮತ್ತಿ ನಿರ್ಮಲಾ ದೇವಿ ಪೈಪೋಟಿಯ ಕ್ಷಣ

ಇವರು ಇಬ್ಬರೂ ದೆಹಲಿಯ ಕುಸ್ತಿಪಟುಗಳು. ಸುಶೀಲ್ ಕುಮಾರ್ ನಜಾಫ್ಗಡದ ಬಪ್ರೋಲಾ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ರಾಣಾ ಅವರ ಹುಟ್ಟೂರು ಕುತುಬ್ಘರ್ ಗ್ರಾಮ. ತಂದೆ ಬಳಿ ಕುಸ್ತಿ ಪಟ್ಟುಗಳನ್ನು ಕಲಿತು ಬೆಳೆದ ರಾಣಾ ನಂತರ ಸುಶೀಲ್ ಕುಮಾರ್ ಅಭ್ಯಾಸ ಮಾಡುವ ಛತ್ರಶಾಲಾ ವ್ಯಾಯಮ ಶಾಲೆ ಸೇರಿದರು. ಅಲ್ಲಿ ಬಹಳ ವೇಗವಾಗಿ ಸಾಧನೆಗಳನ್ನು ಮಾಡಿದರು.

ಯುವ ಕಾಮನ್ವೆಲ್ತ್, ಜೂನಿಯರ್ ವಿಶ್ವ ಚಾಂಪಿಯನ್ಷಿಪ್ ಮುಂತಾದ ಪ್ರಮುಖ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ಅವರ ಸುತ್ತ ಸಹಜವಾಗಿ ದ್ವೇಷದ ಹುತ್ತ ನಿರ್ಮಾಣವಾಯಿತು. ‘ಸುಶೀಲ್ ಕುಮಾರ್ ವಿರುದ್ಧ ಸ್ಪರ್ಧಿಸುವಷ್ಟು ಧೈರ್ಯವೇ ನಿನಗೆ’ ಎಂದು ಕಾಮನ್ವೆಲ್ತ್ ಗೇಮ್ಸ್ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಕೆಲವರು ಪ್ರಶ್ನಿಸಿದ್ದಾಗಿ ರಾಣಾ ದೂರಿದ್ದಾರೆ. ಇದು ನಿಜವಾಗಿದ್ದರೆ ಅದಕ್ಕೆ ಕಾರಣ ಈ ದ್ವೇಷವೇ. ‘ಪ್ರೊ ಕುಸ್ತಿ ಲೀಗ್ನಲ್ಲಿ ನೋಡಿಕೊಳ್ಳುತ್ತೇನೆ’ ಎಂದು ರಾಣಾ ರಣಕಹಳೆ ಮೊಳಗಿಸಿರುವುದೂ ಇಂಥ ಜಿದ್ದಿನ ಭಾಗವೇ.

ಒಲಿಂಪಿಯನ್, ವಿಶ್ವ ಚಾಂಪಿಯನ್ನರು

ಒಲಿಂಪಿಕ್ ಪದಕ ವಿಜೇತ 11 ಮಂದಿ, 23 ಒಲಿಂಪಿಯನ್ಗಳು ಮತ್ತು ಅಷ್ಟೇ ಸಂಖ್ಯೆಯ ವಿಶ್ವ ಚಾಂಪಿಯನ್ನರ ಹಣಾಹಣಿಗೆ ಸಾಕ್ಷಿಯಾಗಲಿದೆ ಪ್ರೊ ಕುಸ್ತಿ ಲೀಗ್. ಕಳೆದ ಎರಡು ಬಾರಿಯೂ ಅತ್ಯುತ್ತಮ ಸಾಮರ್ಥ್ಯ ಮೆರೆದ ಕುಸ್ತಿಪಟುಗಳ ಪೈಕಿ ಬಹುತೇಕರು ಈ ಬಾರಿಯೂ ಕಣಕ್ಕೆ ಇಳಿಯಲಿದ್ದಾರೆ. ಕೆಲವರ ತಂಡಗಳು ಬದಲಾಗಿವೆ. ಈ ಬಾರಿ ಗ್ರಿಕೊ ರೋಮನ್ ಶೈಲಿಯನ್ನು ಕೂಡ ಅಳವಡಿಸಿಕೊಂಡಿರುವುದರಿಂದ ಪ್ರೇಕ್ಷಕರಿಗೆ ವಿಭಿನ್ನ ಅನುಭವ ದಕ್ಕಲಿದೆ.

ಪ್ರತಿ ತಂಡದಲ್ಲಿ ಒಂಬತ್ತು ಆಟಗಾರರು ಇರುತ್ತಾರೆ. ಇವರ ಪೈಕಿ ಒಬ್ಬರು ಐಕಾನ್ ಆಟಗಾರ ಆಗಿರುತ್ತಾರೆ. ನಾಲ್ವರು ವಿದೇಶಿಯರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಪ್ರತಿ ತಂಡಕ್ಕೂ ಅಕಾಶವಿದೆ. ತಂಡದಲ್ಲಿ ನಾಲ್ವರು ಮಹಿಳೆಯರು ಇರುತ್ತಾರೆ.

ಭಾರತದ ಕುಸ್ತಿ ಭವಿಷ್ಯ ಇಲ್ಲಿದೆ

ಪ್ರೊ ಕುಸ್ತಿ ಲೀಗ್ ಭಾರತದ ಕುಸ್ತಿಯ ಭವಿಷ್ಯವನ್ನು ಉಜ್ವಲಗೊಳಿಸಲು ನೆರವಾಗಲಿದೆ ಎಂದು ಕುಸ್ತಿ ಲೀಗ್ ಆಯೋಜಿಸುವ ಪ್ರೊ ಸ್ಪೋರ್ಟಿಫೈ ಸಂಸ್ಥೆಯ ಸ್ಥಾಪಕ ಕಾರ್ತಿಕೇಯ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ಮುಂದಿನ ವರ್ಷಗಳಲ್ಲಿ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾರತಕ್ಕೆ ಹೆಚ್ಚು ಪದಕಗಳು ಬರಲಿವೆ’ ಎಂದಿರುವ ಅವರು ‘ಪ್ರೊ ಕುಸ್ತಿ ಲೀಗ್ ವಾಣಿಜ್ಯ ದೃಷ್ಟಿಯಿಂದ ಮಾತ್ರವಲ್ಲ, ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದಲೂ ಕುಸ್ತಿಗೆ ಹೊಸ ಆಯಾಮ ನೀಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಒಟ್ಟು 30 ಒಲಿಂಪಿಯನ್ನರು ಲೀಗ್ನಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.