ಮಂಗಳವಾರ, ಆಗಸ್ಟ್ 4, 2020
22 °C

ಆನಂದ್ ಆಟ ಇನ್ನೂ ಇದೆ...

ಮಹಮ್ಮದ್‌ ನೂಮಾನ್‌ Updated:

ಅಕ್ಷರ ಗಾತ್ರ : | |

ಆನಂದ್ ಆಟ ಇನ್ನೂ ಇದೆ...

ವಿಶ್ವ ರ‍್ಯಾಪಿಡ್ ಚಾಂಪಿಯನ್‌ಷಿಪ್ ಮತ್ತು ಬ್ಲಿಟ್ಜ್‌ ಟೂರ್ನಿಯಲ್ಲಿ ಆಡಿದ ರೀತಿ ಖುಷಿ ನೀಡಿದೆ. ವೃತ್ತಿಜೀವನದ ಸ್ಮರಣೀಯ ಗೆಲುವುಗಳಲ್ಲಿ ಇದೂ ಒಂದು.

ರಿಯಾದ್‌ನಲ್ಲಿ ಹೋದ ತಿಂಗಳು ನಡೆದ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ವಿಶ್ವನಾಥನ್ ಆನಂದ್ ಈ ರೀತಿ ಪ್ರತಿಕ್ರಿಯಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ಆನಂದ್‌ಗೆ ಹೊಸದಲ್ಲ. 2000 ರಿಂದ 2012ರ ವರೆಗಿನ ಅವಧಿಯಲ್ಲಿ ಐದು ಸಲ ವಿಶ್ವ ಚೆಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆದರೆ ಅವರ ಇತ್ತೀಚಿನ ಕೆಲ ತಿಂಗಳುಗಳ ಪ್ರದರ್ಶನದ ಗ್ರಾಫ್ ನೋಡಿದರೆ ರ‍್ಯಾಪಿಡ್ ಟೂರ್ನಿಯಲ್ಲಿ ದೊರೆತ ಪ್ರಶಸ್ತಿಗೆ ಹೆಚ್ಚಿನ ಮಹತ್ವ ದೊರೆತಿದೆ. ಸಾಲು ಸಾಲು ನಿರಾಸೆ ಮರೆಸಲು ಆನಂದ್‌ಗೆ ಒಂದು ಪ್ರಶಸ್ತಿ ಅನಿವಾರ್ಯವಾಗಿತ್ತು. ಅದು ಲಭಿಸಿದ ಕಾರಣ ಸಹಜವಾಗಿ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. 

ಸತತ ಸೋಲು ಮತ್ತು ಟೀಕೆಗಳಿಂದ ಕುಗ್ಗಿ ಹೋಗಿದ್ದ ಆನಂದ್‌ 48ರ ಹರೆಯದಲ್ಲಿ ಮತ್ತೆ ಪುಟಿದೆದ್ದು ನಿಂತಿದ್ದಾರೆ. ‘ವಯಸ್ಸಾಯಿತು. ಇನ್ನು ಆಡಿದ್ದು ಸಾಕು’ ಎಂದು ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ವಯಸ್ಸು ಕೇವಲ ಸಂಖ್ಯೆಯಷ್ಟೆ, ಅದರಿಂದ ಬದ್ಧಿಮತ್ತೆಗೆ ಧಕ್ಕೆಯಾಗಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಆನಂದ್ 2017 ರಲ್ಲಿ ಯಶಸ್ಸಿಗಿಂತ ಹೆಚ್ಚು ನಿರಾಸೆಯನ್ನೇ  ಅನುಭವಿಸಿದ್ದರು. ವರ್ಷದ ಕೊನೆಯಲ್ಲಿ ದೊರೆತ ಜಯ ಹೊಸ ಹುರುಪು ನೀಡಿದೆ.

ಆನಂದ್ ಈ ಗೆಲುವನ್ನು 2014 ರಲ್ಲಿ ರಷ್ಯಾದ ಕಾಂತಿ–ಮನ್‌ಸಿಸ್ಕ್‌ನಲ್ಲಿ ನಡೆದಿದ್ದ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ದೊರೆತ ಗೆಲುವಿಗೆ ಹೋಲಿಸಿದ್ದಾರೆ. ಕ್ಯಾಂಡಿಡೇಟ್ಸ್‌ ಟೂರ್ನಿಯ ಗೆಲುವು ಆನಂದ್ ಅವರ ಸುದೀರ್ಘ ಕ್ರೀಡಾಜೀವನದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಏಕೆಂದರೆ 2013 ರಲ್ಲಿ ಹುಟ್ಟೂರು ಚೆನ್ನೈನಲ್ಲಿ ನಡೆದಿದ್ದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಕೈಯಲ್ಲಿ ಸೋಲು ಎದುರಾಗಿತ್ತು. ತವರಿನಲ್ಲಿ ಎದುರಾದ ನಿರಾಸೆ ‘ವಿಶಿ’ಗೆ ಆಘಾತ ನೀಡಿತ್ತು. ಆನಂದ್‌ ಯುಗ ಮುಗಿಯಿತು ಎಂದು ಹಲವರು ಷರಾ ಬರೆದಿದ್ದರು.

ಆದರೆ ಕೆಲವೇ ತಿಂಗಳುಗಳ ಬಳಿಕ ನಡೆದಿದ್ದ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಗೆದ್ದು ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಮತ್ತೊಮ್ಮೆ ಕಾರ್ಲ್‌ಸನ್ ಅವರನ್ನು ಎದುರಿಸಲು ಅರ್ಹತೆ ಪಡೆದುಕೊಂಡಿದ್ದರು. ಆನಂದ್‌ ಅಂದು ಪುಟಿದೆದ್ದ ರೀತಿ ಮತ್ತು ರಿಯಾದ್‌ನಲ್ಲಿ ಇತ್ತೀಚೆಗೆ ಪುಟಿದೆದ್ದು ನಿಂತ ರೀತಿಗೂ ಸಾಕಷ್ಟು ಸಾಮ್ಯತೆಗಳಿವೆ.

ರಿಯಾದ್‌ನಲ್ಲಿ ನಡೆದ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಟೂರ್ನಿಗಳಲ್ಲಿ ಐದು ದಿನಗಳ ಅಂತರದಲ್ಲಿ 38 ಪಂದ್ಯಗಳನ್ನು ಆಡಿದ್ದಾರೆ. ಕೇವಲ ಒಂದು ಪಂದ್ಯದಲ್ಲಿ ಸೋಲು ಎದುರಾಗಿತ್ತು. ರ‍್ಯಾಪಿಡ್ ಚಾಂಪಿಯನ್‌ಷಿಪ್‌ನ 9ನೇ ಸುತ್ತಿನಲ್ಲಿ ಹಾಲಿ ವಿಶ್ವಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಜಯಿಸಿದ್ದರು. ಈ ಗೆಲುವು ತುಂಬಾ ವಿಶೇಷವಾದುದು ಎಂದು ಟೂರ್ನಿಯ ಬಳಿಕ ಆನಂದ್ ಪ್ರತಿಕ್ರಿಯಿಸಿದ್ದರು. 14ನೇ ಸುತ್ತಿನಲ್ಲಿ ಅಲೆಕ್ಸಾಂಡರ್‌ ಗ್ರಿಸ್ಚುಕ್ ಎದುರಿನ ಗೆಲುವು ಅವರಿಗೆ ನಿರ್ಣಾಯಕವಾಗಿತ್ತು. 

ಫೆಡರರ್ ಸ್ಫೂರ್ತಿ

ಕಳೆದ ಕೆಲ ತಿಂಗಳುಗಳಲ್ಲಿ ಹೆಚ್ಚಿನ ಟೂರ್ನಿಗಳನ್ನು ಗೆಲ್ಲಲು ಸಾಧ್ಯವಾಗದ್ದರಿಂದ ಆನಂದ್ ಅವರ ರೇಟಿಂಗ್ ಕುಸಿತ ಕಂಡಿದೆ. 2767 ರೇಟಿಂಗ್ ಹೊಂದಿರುವ ಅವರು ಫಿಡೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿದ್ದಾರೆ. ‘ರೇಟಿಂಗ್ ಹೆಚ್ಚಿಸುವುದು 2018ರ ನನ್ನ ಪ್ರಮುಖ ಗುರಿ’ ಎಂದಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರ ಪ್ರದರ್ಶನದಿಂದ ಆನಂದ್ ಸ್ಫೂರ್ತಿ ಕಂಡುಕೊಂಡಿದ್ದಾರೆ. ‘2017ರಲ್ಲಿ ಫೆಡರರ್ ಅವರ ಪುನರಾಗಮನ ನೋಡಿದ್ದೇವೆ. ಅಂತಹ ಹಿರಿಯ ಆಟಗಾರನಿಗೆ ಅದು ಸಾಧ್ಯವಾಗುವುದಾದರೆ ನನ್ನಂತ ಹಿರಿಯ ಆಟಗಾರನಿಗೆ ಮತ್ತೆ ಪುಟಿದೇಳಲು ಸಾಧ್ಯ’ ಎಂಬ ಭರವಸೆಯ ನುಡಿಗಳನ್ನಾಡಿದ್ದಾರೆ.

‘ದೇಹವನ್ನು ಸದಾ ಹುರುಪಿನಿಂದ ಇಟ್ಟುಕೊಂಡು ಮನಸ್ಸಿಗೆ ಉತ್ತೇಜನ ನೀಡಬೇಕಾದರೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು. ಆ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ. ಭಾರತದ ಬುದ್ಧಿಮತ್ತೆಯನ್ನು ಜಗತ್ತಿಗೆ ಪರಿಚಯಿಸಿದ ಆನಂದ್‌ಗೆ ಹೊಸ ವರ್ಷ ಅದೃಷ್ಟ ತರುವುದೇ ಎಂ‌ಬುದನ್ನು ನೋಡಬೇಕು.

***

ಏನಿದು ರ‍್ಯಾಪಿಡ್, ಬ್ಲಿಟ್ಜ್‌ ಚೆಸ್ ?

ಫಿಡೆ ನಡೆಸುವ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಪಂದ್ಯಗಳಲ್ಲಿ ಆಟಗಾರರಿಗೆ ಮೊದಲ 40 ನಡೆಗಳಿಗೆ 100 ನಿಮಿಷ, ಬಳಿಕದ 20 ನಡೆಗಳಿಗೆ 50 ನಿಮಿಷ ಮತ್ತು ಇನ್ನುಳಿದ ನಡೆಗಳಿಗೆ 15 ನಿಮಿಷಗಳನ್ನು ನೀಡಲಾಗುತ್ತದೆ. ಇದಲ್ಲದೆ ಪ್ರತಿಯೊಂದು ನಡೆಗೆ ಹೆಚ್ಚುವರಿಯಾಗಿ 30 ಸೆಕುಂಡುಗಳನ್ನು ತೆಗೆದುಕೊಳ್ಳಬಹುದು.

ಆದರೆ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್ ‘ವೇಗದ ಚೆಸ್’ ಆಗಿದ್ದು, ಆಟಗಾರರಿಗೆ ಹೆಚ್ಚಿನ ಸಮಯವಿರುವುದಿಲ್ಲ. ಫಿಡೆ ನಿಯಮದಂತೆ ರ‍್ಯಾಪಿಡ್ ಚೆಸ್‌ನಲ್ಲಿ ಒಬ್ಬ ಆಟಗಾರ ಕನಿಷ್ಠ 10 ನಿಮಿಷ ಮತ್ತು ಗರಿಷ್ಠ 60 ನಿಮಿಷಗಳ ಒಳಗೆ ತನ್ನ ಎಲ್ಲ ನಡೆಗಳನ್ನು ಪೂರೈಸಬೇಕು. ‘ಬ್ಲಿಟ್ಜ್‌’ ಆಟ ಇನ್ನೂ ವೇಗವಾಗಿದ್ದು, ಒಬ್ಬ ಆಟಗಾರ ಗರಿಷ್ಠ 10 ನಿಮಿಷಗಳ ಒಳಗೆ ಎಲ್ಲ ನಡೆಗಳನ್ನು ಪೂರ್ತಿಗೊಳಿಸಬೇಕು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.