ಗುರುವಾರ , ಜೂಲೈ 2, 2020
23 °C

ಗಣಿತಗುಮ್ಮನಿಗೆ ಹೆದರದಿರಿ!

ಎಲ್‌.ಪಿ.ಕುಲಕರ್ಣಿ Updated:

ಅಕ್ಷರ ಗಾತ್ರ : | |

ಗಣಿತಗುಮ್ಮನಿಗೆ ಹೆದರದಿರಿ!

ಝೀರೋದಿಂದ ಹೀರೋವನ್ನು, ಹೀರೋದಿಂದ ಝೀರೋವನ್ನು ಮಾಡುವುದು ಈ ಗಣಿತ! ಇದು ಅಕ್ಷರಃಶ ಸತ್ಯ. ಪ್ರೌಢಶಾಲೆ, ಇಲ್ಲವೇ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಅಧಿಕ ಕಾಟವನ್ನು ಕೊಡುವ ವಿಷಯವೇ ಈ ಭಯಾನಕ ಗಣಿತ!

ಹೌದು! ಸರ್ವೇ ಸಾಮಾನ್ಯವಾಗಿ ಗಣಿತವನ್ನು ಕಂಡರೆ ಮಕ್ಕಳಿಗೆ ಏಕಿಷ್ಟು ಭಯ? ಇದನ್ನು ಕರಗತ ಮಾಡಿಕೊಳ್ಳಲು ಏನಾದರೂ ಸಲಹೆ, ಸೂಚನೆ ಹಾಗೂ ವಿಶಿಷ್ಟ ವಿಧಾನಗಳಿವೆಯೇ? ಖಂಡಿತ ಇವೆ, ಅವುಗಳನ್ನು ತಿಳಿದುಕೊಂಡು ಗಣಿತ ಭಯಮುಕ್ತ ವಾತಾವರಣವನ್ನು ನಿರ್ಮಿಸುವುದೇ ಈ ಲೇಖನದ ಮೂಲ ಉದ್ದೇಶ.

ಹೀಗೆ ಮಕ್ಕಳಿಗೆ ಭಯ ಕೊಡುವ ಈ ಗಣಿತವನ್ನು ಜಯಿಸಲು ಕೆಲವೊಂದಿಷ್ಟು ಟಿಪ್ಸ್‌ಗಳನ್ನು ನೊಡೋಣ.

ಗಣಿತದ ಮೇಲೆ ಪ್ರೀತಿ: ಕತೆಗಳನ್ನು ಒಳಗೊಂಡ ಭಾಷಾ ವಿಷಯಗಳು ಹೇಗೆ ಮಕ್ಕಳಿಗೆ ಇಷ್ಟವಾಗುತ್ತವೊ ಹಾಗೆಯೇ ಗಣಿತವನ್ನು ಕ್ರಮಬದ್ಧವಾಗಿಯೂ, ಕುತೂಹಲಕಾರಿಯಾಗಿಯೂ ನೈಜಸನ್ನಿವೇಶಗಳಿಂದಲೂ ತಿಳಿಸಿ ಕೊಟ್ಟು, ಮಕ್ಕಳಲ್ಲಿ ಆ ವಿಷಯದ ಮೇಲೆ ಪ್ರೀತಿ ಹುಟ್ಟುವ ಹಾಗೆ ಮಾಡುವುದು ನಮ್ಮೆಲ್ಲರ ಮೊದಲ ಕರ್ತವ್ಯ.

ಮಕ್ಕಳನ್ನು ಮಾರುಕಟ್ಟೆಗೆ ಕಳುಹಿಸಿ: ಮಕ್ಕಳು ಕೇವಲ ನಾಲ್ಕು ಗೋಡೆಗಳ ನಡುವೆ ಕುಳಿತು ಗಣಿತವನ್ನು ಕಲಿಯುವುದು ಅಸಾಧ್ಯದ ಮಾತು. ಹೀಗಾಗಿ, ಅವರಿಗೆ ನಿರ್ದಿಷ್ಟ ಹಣವನ್ನು ಕೊಟ್ಟು ಮಾರುಕಟ್ಟೆಗೆ ದೈನಂದಿನ ಸಾಮಾನುಗಳನ್ನು ತರಲು ಕಳುಹಿಸಿ. ಇದರಿಂದ ಆ ಮಕ್ಕಳಲ್ಲಿ ವಸ್ತುವಿನ ಬೆಲೆ ಎಷ್ಟು? ಅದಕ್ಕೆ ಇವರೆಷ್ಟು ಹಣ ಕೊಡಬೇಕು. ಒಂದು ವೇಳೆ ಹೆಚ್ಚಿನ ಹಣ ವ್ಯಾಪಾರಿಗೆ ನೀಡಿದ್ದರೆ ಆತ ಮರಳಿ ಎಷ್ಟು ಹಣ ನಮಗೆ ಕೊಟ್ಟ, ಎನ್ನುವ ವ್ಯವಹಾರಿಕ ಗಣಿತ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿ ಗಣಿತ ಕಲಿಕೆ ಸುಲಭವಾಗುತ್ತದೆ.

ನೋಡಿ ಕಲಿ, ಕೇಳಿ ಕಲಿ, ಮಾಡಿ ನಲಿ – ಎಂಬ ತತ್ತ್ವದ ಆಧಾರದಲ್ಲಿ ಮಕ್ಕಳ ಗಣಿತದ ಕಲಿಕೆ ಸಾಗುವಂತೆ ನೋಡಿಕೊಳ್ಳುವುದು ಬಹು ಮುಖ್ಯ.

ಗಣಿತ ಒಂದು ಕಠಿಣ ವಿಷಯವೆಂದು ಮಕ್ಕಳಲ್ಲಿ ಅನ್ನಿಸದೇ, ಅದರಲ್ಲಿಯೂ ಸಾಕಷ್ಟು ಸಾಧಿಸಬಹುದು ಎಂಬುದನ್ನು ಶ್ರೀನಿವಾಸ ರಾಮಾನುಜನ್, ಆರ್ಯಭಟ ಮುಂತಾದ ಗಣಿತಜ್ಞರ ಜೀವನಚರಿತ್ರೆಗಳನ್ನು ಹೇಳುವುದರ ಮೂಲಕ ಆಸಕ್ತಿ ಬೆಳೆಸುವುದು.

ಕನಸು ಕಾಣುವುದು, ಬಡಬಡಿಸುವುದು: ಮಕ್ಕಳ ಮನದಲ್ಲಿ ಗಣಿತ ಕಲಿಕೆ ಹೇಗೆ ಪರಿಣಾಮ ಬೀರಬೇಕು ಎಂದರೆ, ಅಂದು ತರಗತಿಯಲ್ಲಿ ನಡೆದ ಗಣಿತ ಪಾಠಗಳು, ಅದರಲ್ಲಿ ಬರುವ ಸೂತ್ರಗಳು, ಪ್ರಮೇಯ ಸಾಧನೆಗಳೆಲ್ಲವೂ, ಕನಸಲ್ಲಿ ಬರಬೇಕು. ಹಾಗೇ ಆ ಮಗು ನಿದ್ರೆಯಲ್ಲಿರುವಾಗಲೇ ಸೂತ್ರಗಳನ್ನು, ಪ್ರಮೇಯದ ಹೇಳಿಕೆಗಳನ್ನು ಬಡಬಡಿಸಬೇಕು (ನಿದ್ರೆ ಮಾಡುತ್ತಾ ತನಗರಿವಿಲ್ಲದೇ  ಮಾತನಾಡುವ ಪ್ರಕ್ರಿಯೆಯೇ ಬಡಬಡಿಕೆ).

ಮಗುವಿಗೆ ಕೈಯಲ್ಲಿ ಮೊಬೈಲ್ ಬದಲು ಪುಸ್ತಕ ಹಿಡಿದು ಓದುವುದನ್ನು, ತನ್ನ ಜೇಬಿನಲ್ಲಿ ಯಾವಾಗಲೂ ಒಂದು ಪೆನ್ನು, ಕಾಗದ ಇಟ್ಟುಕೊಂಡು, ಖಾಲಿ ಕುಳಿತ ಸಮಯದಲ್ಲಿ, ಆ ಕಾಗದದ ಮೇಲೆ, ಗಣಿತಸೂತ್ರಗಳನ್ನು ಸ್ಮರಿಸಿ ಬರೆಯುವುದು ಮುಂತಾದ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸುವುದು. ಇದರಿಂದ ಮಗುವಿನ ಜ್ಞಾಪಕಶಕ್ತಿ ಹೆಚ್ಚಿಸುವುದಲ್ಲದೇ ಕ್ರೀಯಾಶೀಲನಾಗಿಯೂ ಇರುವಂತೆ ಮಾಡುತ್ತದೆ.

ಆಟದ ಮೂಲಕ ಗಣಿತ ಕಲಿಕೆ: ನಾವು ಚಿಕ್ಕವರಿದ್ದಾಗ ಚಿನ್ನಿದಾಂಡು ಆಡಿದ ನೆನಪು. ಅಲ್ಲಿ‌ ಚಿನ್ನಿ ಬಿದ್ದ ದೂರವನ್ನು ಪ್ರಾರಂಭಿಕ ಸ್ಥಾನದಿಂದ ನಿರ್ದಿಷ್ಟ ಗಾತ್ರದ ದಾಂಡಿನಿಂದ ಅಳೆಯುತ್ತಿದ್ದೆವು. ಇದರಿಂದ ಮಗುವಿನಲ್ಲಿ ದೂರ ಅಳೆಯುವ ಕೌಶಲ ವೃದ್ಧಿಸುವುದು. ಈಗ ಕ್ರಿಕೆಟ್‌! ಟಿ.ವಿ.ಯಲ್ಲಿ ಮ್ಯಾಚ್ ನೋಡುತ್ತಾ ಮಗು, ‘ಸ್ಕೋರ್ ಎಷ್ಟಾಯ್ತು?’ ಎಂದು ಕೇಳುತ್ತದೆ. ಇನ್ನೊಂದು ಮಗು ಇಂತಿಷ್ಟಾಯ್ತು ಎಂದು ಹೇಳುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಸಂಖ್ಯೆ/ಎಣಿಕೆ. ಹೀಗೆ ಮಗುವನ್ನು ಆಟದ ನೈಜ ಸನ್ನಿವೇಶದ ಅರಿವಿಗೆ ತೊಡಗಿಸಿ ಗಣಿತದ ಕಲಿಕೆಗೆ ಪ್ರೇರೇಪಿಸುವುದು.

ತತ್‌ಕ್ಷಣದಲ್ಲಿ ಪರೀಕ್ಷೆ: ತರಗತಿಯಲ್ಲಿ ಶಿಕಕ್ಷರು ಒಂದು ಪಾಠವನ್ನು ಓದಿಕೊಂಡು ಅದರ ಮೇಲೆ ಪರೀಕ್ಷೆ ನಡೆಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲಿ ಮಕ್ಕಳ ನಿಖರ‌ ಕಲಿಕೆ ಅಳೆಯಲು‌ ಪರೀಕ್ಷಾ ಮುನ್ಸೂಚನೆ ಕೊಡದೇ ಪರೀಕ್ಷೆ ನಡೆಸುವುದು. ಇದರಿಂದ ಮಗುವಿನ ನಿಖರ ಕಲಿಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಪಠ್ಯದಲ್ಲಿನ ಗಣಿತ ಸಮಸ್ಯೆಗಳಿಗಷ್ಟೆ ಒತ್ತು ಕೊಡದೇ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಮಕ್ಕಳ ಗಣಿತ ಅಭ್ಯಾಸಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ತರಗತಿಯಲ್ಲಿ ಬಿಡಿಸಿ ವಿಶ್ಲೇಶಿಸುವುದರಿಂದ ಮಗುವಿನಲ್ಲಿ ಗಣಿತದ ಮೇಲಿನ ಭಯ ಕಡಿಮೆಯಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.