ಸೋಮವಾರ, ಆಗಸ್ಟ್ 3, 2020
25 °C
ಪುನಶ್ಚೇತನಕ್ಕೆ ಸಮಯ ನೀಡಿ: ಸ್ಥಾಯಿ ಸಮಿತಿ ಶಿಫಾರಸು

‘ಏಐ’ ಖಾಸಗೀಕರಣ ಬೇಡ

ಪಿಟಿಐ Updated:

ಅಕ್ಷರ ಗಾತ್ರ : | |

‘ಏಐ’ ಖಾಸಗೀಕರಣ ಬೇಡ

ನವದೆಹಲಿ: ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾದ ಷೇರು ವಿಕ್ರಯಕ್ಕೆ ಇದು ಸೂಕ್ತ ಸಮಯ ಅಲ್ಲ. ಸಂಸ್ಥೆಯ ಪುನಶ್ಚೇತನಕ್ಕೆ ಐದು ವರ್ಷಗಳವರೆಗೆ ಕಾಲಾವಕಾಶವನ್ನೇಕೆ ನೀಡಬಾರದು ಎಂದು  ಸಂಸದೀಯ ಸಮಿತಿಯು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದೆ.

‘ಏಐ’ ಬಲವರ್ಧನೆಗೆ ಕೇಂದ್ರ ಸರ್ಕಾರ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಷೇರು ವಿಕ್ರಯ, ಬಂಡವಾಳ ನೆರವು, ಖಾಸಗೀಕರಣಗೊಳಿಸುವುದನ್ನೂ ಪರಿಶೀಲಿಸುತ್ತಿದೆ.

ಉದ್ದೇಶಿತ ಷೇರು ವಿಕ್ರಯದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಕರಡು ವರದಿ ಸಿದ್ಧಪಡಿಸಿದ್ದು, ಹಲವಾರು ಶಿಫಾರಸುಗಳನ್ನು ಮಾಡಿದೆ.

2012 ರಿಂದ 2022ರವರೆಗೆ ಸಂಸ್ಥೆಯ ಪುನಶ್ಚೇತನ ಮತ್ತು ಆರ್ಥಿಕ ಪುನರ್‌ರಚನೆ ಯೋಜನೆ (ಎಫ್‌ಆರ್‌ಪಿ) ಜಾರಿಯಲ್ಲಿದೆ. ಇದರಿಂದ ‘ಏಐ’ ವಿವಿಧ ರೀತಿಯಲ್ಲಿ  ಸುಧಾರಣೆ ಕಾಣುತ್ತಿದೆ. ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಹೊರಬರುತ್ತಿದೆ. ಹೀಗಾಗಿ ಈ ಯೋಜನೆಗಳ ಅವಧಿ ಮುಗಿದ ಬಳಿಕವೇ ಸಂಸ್ಥೆಯ ಸ್ಥಿತಿಗತಿ ಪರಿಶೀಲನೆ ನಡೆಸಿ ಅದರಂತೆ ಕ್ರಮ ಕೈಗೊಳ್ಳಿ ಎಂದು  ಸಲಹೆ ನೀಡಿದೆ.

ಸಂಸ್ಥೆಯು ಕಾರ್ಯಾಚರಣೆಯ ಲಾಭ ಗಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಷೇರು ವಿಕ್ರಯ ನಿರ್ಧಾರ ಸರಿಯಲ್ಲ ಎನ್ನುವುದು ಸಮಿತಿಯ ಅಭಿಪ್ರಾಯವಾಗಿದೆ.

ಅಂಗ ಸಂಸ್ಥೆಗಳಾದ ಏರ್‌ ಇಂಡಿಯಾ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್‌, ಏರ್‌ ಇಂಡಿಯಾ ಎಸ್‌ಎಟಿಎಸ್‌ ಏರ್‌ಪೋರ್ಟ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌, ಅಲಯನ್ಸ್‌ ಏರ್‌ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಲಾಭದಲ್ಲಿವೆ. ಹೀಗಾಗಿ ಈ ಸಂಸ್ಥೆಗಳ ಷೇರುವಿಕ್ರಯ ಮಾಡದಂತೆಯೂ ತಿಳಿಸಿದೆ.

‘ಸಂಸ್ಥೆಯನ್ನು ಪ್ರಗತಿ ಹಾದಿಗೆ ಕೊಂಡೊಯ್ಯಲು ಸಮಗ್ರವಾಗಿ ಯೋಜನೆ ರೂಪಿಸಲಿಲ್ಲ. ಇದರಿಂದ ಸಂಸ್ಥೆಯ ಆರ್ಥಿಕ ಮತ್ತು ಕಾರ್ಯಾಚರಣೆ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಯಿತು. ಆ ನಷ್ಟ ತುಂಬಿಕೊಳ್ಳಲು ಸಂಸ್ಥೆಯು ಗರಿಷ್ಠ ಬಡ್ಡಿದರಕ್ಕೆ ಸಾಲ ಪಡೆಯಬೇಕಾದ ಸಂದರ್ಭ ಎದುರಾಯಿತು’ ಎಂದು  ಸಮಿತಿಯು ವಿಶ್ಲೇಷಣೆ ಮಾಡಿದೆ.

ವಿಮಾನಯಾನ ಸಚಿವಾಲಯದ ನೀತಿ ನಿರ್ದೇಶನಗಳಿಂದಾಗಿಯೇ ಸಂಸ್ಥೆ ನಷ್ಟಕ್ಕೆ ಒಳಗಾಗಿದೆ. ಕಡಿಮೆ ನಿಯಂತ್ರಣದೊಂದಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸಲು ಏರ್‌ಇಂಡಿಯಾಗೆ ಅನುಮತಿ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.

ಏರ್‌ ಇಂಡಿಯಾ ದೇಶದ ಹೆಮ್ಮೆಯ ಪ್ರತೀಕ. ಅದನ್ನು ಖಾಸಗೀಕರಣ ಅಥವಾ ಷೇರು ವಿಕ್ರಯ ಮಾಡುವುದು ಅಷ್ಟು ಸೂಕ್ತವಲ್ಲ. ಬದಲಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ನಿರ್ಧಾರಗಳನ್ನು ಪರಾಮರ್ಶೆ ನಡೆಸಲಿ ಎಂದಿದೆ.

ದೇಶ ಅಥವಾ ವಿದೇಶಗಳಲ್ಲಿ ನೈಸರ್ಗಿಕ ವಿಕೋಪ, ಸಾಮಾಜಿಕ ಅಥವಾ ರಾಜಕೀಯ ಅಶಾಂತಿ ಉಂಟಾದ ಸಂದರ್ಭಗಳಲ್ಲಿ ಏರ್‌ ಇಂಡಿಯಾ ಸೇವೆ ಒದಗಿಸಿದೆ. ಹೀಗಾಗಿ ನೀತಿ ಆಯೋಗ ಹೇಳಿರುವಂತೆ ಕೇವಲ ವ್ಯಾವಹಾರಿಕ ದೃಷ್ಟಿಯಿಂದಷ್ಟೇ ಸಂಸ್ಥೆಯನ್ನು ಪರಿಗಣಿಸುವುದು ಅಷ್ಟು ಸಮಂಜಸವಲ್ಲ ಎಂದು ಸಮಿತಿ ಹೇಳಿದೆ.

***

ಸಮಿತಿ ಶಿಫಾರಸು

* ಖಾಸಗೀಕರಣದ ನಿರ್ಧಾರ ಪರಾಮರ್ಶೆ ಮಾಡಿ

* ಸರ್ಕಾರವೇ ಸಾಲ ವಜಾ ಮಾಡಲಿ

* ಸಂಸ್ಥೆಯ ಉದ್ಯೋಗಿಗಳ ಹಿತರಕ್ಷಣೆ ಕ್ರಮ ಅಗತ್ಯ

* ಅಂಗ ಸಂಸ್ಥೆಗಳ ಷೇರು ವಿಕ್ರಯ ಬೇಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.