ಸೋಮವಾರ, ಜೂಲೈ 6, 2020
21 °C
ಎಸ್‌ಟಿಪಿ ದುರಂತ l ಕಳೇಬರಗಳ ಮುಂದೆ ಕಣ್ಣೀರಿಟ್ಟ ಬಂಧು– ಬಳಗ

ಅಪ್ಪಾಜಿ ಹೇಳದೇ ಹೋದರು...ನಮಗ್ಯಾರು ಗತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ಪಾಜಿ ಹೇಳದೇ ಹೋದರು...ನಮಗ್ಯಾರು ಗತಿ?

ಬೆಂಗಳೂರು: ‘ಆಗಿನ್ನೂ ಬೆಳಿಗ್ಗೆ 6.30. ನಾನು ಮಲಗಿದ್ದೆ. ಕೆಲಸವಿರುವುದಾಗಿ ತಾಯಿ ಬಳಿಯಷ್ಟೇ ಹೇಳಿ ಹೋದ ಅಪ್ಪಾಜಿ, ಮಧ್ಯಾಹ್ನವಾದರೂ ಬರಲೇ ಇಲ್ಲ. ಬಂದದ್ದು ಅವರ ಸಾವಿನ ಸುದ್ದಿ. ನಮಗೆ ಇನ್ಯಾರು ಗತಿ?’

ಎಚ್‌.ಎಸ್‌.ಆರ್‌ ಲೇಔಟ್‌ನ ಸೋಮಸುಂದರಪಾಳ್ಯದ ಎನ್‌.ಡಿ. ಸೆಪಲ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ದುರಸ್ತಿ ವೇಳೆ ಮೃತಪಟ್ಟ ಮಾದೇಗೌಡ ಅವರ ಮಗಳು ಜಮುನಾಳ ಅಳಲು ಇದು.

ತುಮಕೂರು ಜಿಲ್ಲೆಯ ಮಾದೇಗೌಡ, 15 ವರ್ಷಗಳ ಹಿಂದೆ ಪತ್ನಿ ಮಂಜುಳಾ ಸಮೇತ ಬೆಂಗಳೂರಿಗೆ ಬಂದು ಸೋಮಸುಂದರ ಪಾಳ್ಯದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಪ್ರಥಮ ಪಿಯುಸಿ ಓದುತ್ತಿದ್ದು, ಮಗ ಅಪ್ಪು 8ನೇ ತರಗತಿ ವಿದ್ಯಾರ್ಥಿ.

ಆರಂಭದಲ್ಲಿ ಪತ್ನಿ ಜತೆಗೆ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದ ಅವರು, ಕೆಲ ವರ್ಷಗಳ ಹಿಂದಷ್ಟೇ ಅಲ್ಲಿ ಕೆಲಸ ಬಿಟ್ಟಿದ್ದರು. ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ವೇಳೆ ಶ್ರೀನಿವಾಸ್‌ ಅವರ ಪರಿಚಯವಾಗಿತ್ತು. ಬಳಿಕ ಅವರಿಬ್ಬರು ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಭಾನುವಾರ ಬೆಳಿಗ್ಗೆ ಶ್ರೀನಿವಾಸ್‌, ಮಾದೇಗೌಡರ ಮನೆಗೆ ಹೋಗಿ ಅವರನ್ನು ಕರೆದುಕೊಂಡು ಹೋಗಿದ್ದರು.

ಘಟನಾ ಸ್ಥಳದಿಂದ ಮೃತದೇಹಗಳನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ತರಲಾಗಿತ್ತು. ಅಲ್ಲಿ ಸೇರಿದ್ದ ಕುಟುಂಬದವರು, ಕಳೇಬರಗಳ ಮುಂದೆ ಕಣ್ಣೀರಿಟ್ಟರು. ನಿರ್ಲಕ್ಷ್ಯ ವಹಿಸಿದ್ದ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮಧ್ಯಾಹ್ನ ಮನೆಯ ಬಳಿ ಸ್ನೇಹಿತೆಯರ ಜತೆ ನಿಂತಿದ್ದೆ. ಅಲ್ಲಿಗೆ ಬಂದ ಅಮ್ಮ, ನನ್ನನ್ನು ಕರೆದುಕೊಂಡು ಸ್ಥಳಕ್ಕೆ ಹೋದರು. ಅಲ್ಲಿ ಅಪ್ಪಾಜಿ ಶವ ಕಂಡು ದಿಕ್ಕೇ ತೋಚಲಿಲ್ಲ’ ಎಂದು ಮಾದೇಗೌಡ ಅವರ ಮಗಳು ಕಣ್ಣೀರಿಟ್ಟರು.

‘ನಾನು ಎಷ್ಟೇ ಕೂಗಿದರೂ ಅಪ್ಪಾಜಿ ಏಳುತ್ತಿಲ್ಲ. ನನಗೆ ನನ್ನ ಅಪ್ಪಾಜಿ ಬೇಕು. ಪ್ಲೀಸ್‌ ನೀವಾದರೂ ಅವರನ್ನು ಎಬ್ಬಿಸಿ’ ಎಂದು ಅಂಗಲಾಚಿದರು.

ಪತ್ನಿ ಮಂಜುಳಾ, ‘ಮೋಟರ್‌ ಇಳಿಸುವ ಕೆಲಸವಿರುವುದಾಗಿ ಹೇಳಿ ಹೋಗಿದ್ದರು. ಮಲಗಿದ್ದ ಮಕ್ಕಳು ಇವತ್ತು ಅಪ್ಪನ ಮುಖವನ್ನು ನೋಡಲಿಲ್ಲ. ಮಧ್ಯಾಹ್ನ 12ಕ್ಕೆ ಸಂಬಂಧಿಕರೊಬ್ಬರು ಕರೆ ಮಾಡಿದಾಗಲೇ ವಿಷಯ ಗೊತ್ತಾಯಿತು’ ಎಂದರು.

‘ಭಾನುವಾರ ಮನೆಯಲ್ಲಿರುವಂತೆ ಹೇಳಿದರೂ ಅವರು ಕೆಲಸಕ್ಕೆ ಹೋಗುತ್ತಿದ್ದರು. ನಾನು ಗಾರ್ಮೆಂಟ್ಸ್‌ಗೆ ಹೋಗಿ ದುಡಿಯುತ್ತಿದ್ದುದು ಯಾವುದಕ್ಕೂ ಸಾಲುತ್ತಿರಲಿಲ್ಲ. ಅವರ ದುಡಿಮೆಯೇ ನಮಗೆ ಆಧಾರವಾಗಿತ್ತು. ನಾನು, ನನ್ನ ಮಕ್ಕಳು ಈಗ ಅನಾಥರಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು.

ಎಲ್ಲ ಕೆಲಸಕ್ಕೂ ಸೈ ಎನ್ನುತ್ತಿದ್ದರು:

ಅವಘಡದಲ್ಲಿ ಮೃತಪಟ್ಟ ಇನ್ನೊಬ್ಬ ಕಾರ್ಮಿಕ ಶ್ರೀನಿವಾಸ್‌ ಕಡೂರಿನವರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಆರಂಭದಲ್ಲಿ ಗಾರ್ಮೆಂಟ್ಸ್‌ಗೆ ಹೋಗುತ್ತಿದ್ದರು. ವರ್ಷದ ಹಿಂದೆ ಆ ಕೆಲಸ ಬಿಟ್ಟು, ಕೂಲಿ ಕಾರ್ಮಿಕರಾಗಿದ್ದರು.

ಔಷಧಿ ಸಿಂಪರಣೆ, ಪೇಂಟಿಂಗ್‌, ಉದ್ಯಾನ ನಿರ್ವಹಣೆ ಮುಂತಾದ ಕೆಲಸಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದರು. ವರ್ಷದ ಹಿಂದೆ ಅವರಿಗೆ ನಾರಾಯಣಸ್ವಾಮಿ ಪರಿಚಯವಾಗಿದ್ದರು. ಅಂದಿನಿಂದಲೇ ಅವರು ಅಪಾರ್ಟ್‌ಮೆಂಟ್‌ ಸಮುಚ್ಚಯದ ಕೆಲಸಕ್ಕೆ ಹೋಗಲಾರಂಭಿಸಿದ್ದರು. ಯಾವುದೇ ಕೆಲಸವಿದ್ದರೂ ನಾರಾಯಣಸ್ವಾಮಿ, ಶ್ರೀನಿವಾಸ್‌ ಅವರಿಂದಲೇ ಮಾಡಿಸುತ್ತಿದ್ದರು.

‘ಘಟನೆ ಬಗ್ಗೆ ಶ್ರೀನಿವಾಸ್‌ ಅವರ ಪತ್ನಿ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದೇವೆ. ಸದ್ಯ ಮೃತದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಇರಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ನಾರಾಯಣಸ್ವಾಮಿ:

ಅವಘಡದಲ್ಲಿ ಮೃತಪಟ್ಟ ಸ್ವಚ್ಛತಾ ಮೇಲ್ವಿಚಾರಕ ನಾರಾಯಣಸ್ವಾಮಿ ಕೋಲಾರದವರು. ಆರಂಭದಲ್ಲಿ ಕೈಗೊಂಡನಹಳ್ಳಿಯಲ್ಲಿದ್ದರು. ಬಳಿಕ ಸೋಮಸುಂದರಪಾಳ್ಯಕ್ಕೆ ಬಂದಿದ್ದರು. ಅವರಿಗೆ ಪತ್ನಿ ಹಾಗೂ ಮಗ ಇದ್ದಾರೆ.

ನಿರ್ಮಾಣ ಹಂತದ ಹಾಗೂ ಬಹುಮಹಡಿ ಕಟ್ಟಡಗಳಿಗೆ ಅಗತ್ಯವಾಗಿದ್ದ ಎಲೆಕ್ಟ್ರಿಕ್‌ ಉಪಕರಣ ಮಾರಾಟ ಮಾಡುತ್ತಿದ್ದರು. ಆ ಮೂಲಕವೇ ಎನ್‌.ಡಿ. ಸೆಪಲ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳಿಗೆ ಪರಿಚಯವಾಗಿದ್ದರು. ತದನಂತರ ನಿವಾಸಿಗಳು, ಅವರನ್ನು ಸ್ವಚ್ಛತಾ ಮೇಲ್ವಿಚಾರಕರನ್ನಾಗಿ ನೇಮಿಸಿಕೊಂಡಿದ್ದರು.

ಎಸ್‌ಟಿಪಿ ನಿರ್ವಹಣೆ ಜವಾಬ್ದಾರಿ ಇವರ ಮೇಲಿತ್ತು. ಅವರು ಶ್ರೀನಿವಾಸ್‌ ಅವರ ಮೂಲಕ ಮಾದೇಗೌಡ ಅವರನ್ನು ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಕರೆಸಿದ್ದರು.

ಎಸ್‌ಟಿಪಿ ನಿರ್ವಹಣೆಗಾಗಿ ₹21 ಸಾವಿರಕ್ಕೆ ಒಪ್ಪಂದ:

‘ಎಸ್‌ಟಿಪಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ನಾರಾಯಣಸ್ವಾಮಿ, ತಿಂಗಳಿಗೆ ₹21,000ಕ್ಕೆ ನಿವಾಸಿಗಳ ಸಂಘದ ಜತೆ ಒಪ್ಪಂದ ಮಾಡಿಕೊಂಡಿದ್ದರು. ಪ್ರತಿ ತಿಂಗಳು ಅವರ ಖಾತೆಗೆ ಹಣ ಜಮೆ ಆಗುತ್ತಿತ್ತು. ಅದರಲ್ಲಿ ಶ್ರೀನಿವಾಸ್‌ ಹಾಗೂ ಮಾದೇಗೌಡ ಅವರಿಗೆ ತಲಾ 5,000 ಕೊಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಎರಡು ತಿಂಗಳಿಗೊಮ್ಮೆ ಎಸ್‌ಟಿಪಿ ಸ್ವಚ್ಛ ಮಾಡಬೇಕು. ನೀರು ಗಲೀಜಾಗದಂತೆ ನೋಡಿಕೊಳ್ಳಬೇಕು. ಎಲೆಕ್ಟ್ರಿಕಲ್ ಉಪಕರಣಗಳು ಕೆಟ್ಟು ಹೋದರೆ, ದುರಸ್ತಿ ಮಾಡಬೇಕು ಎಂಬ ಷರತ್ತುಗಳನ್ನು ಸಂಘದವರು ವಿಧಿಸಿದ್ದರು. ಎರಡು ವರ್ಷಗಳಿಂದ ನಾರಾಯಣಸ್ವಾಮಿ ಈ ಕೆಲಸಗಳನ್ನು ಮಾಡಿಸುತ್ತಿದ್ದರು’ ಎಂದರು.

ಮೃತದೇಹ ಸ್ಥಳಾಂತರಕ್ಕೆ ಒತ್ತಡ

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಎಸ್‌ಟಿಪಿಯಿಂದ ಹೊರಗೆ ತೆಗೆದು ಮಲಗಿಸಿದ್ದರು. ಅದೇ ವೇಳೆ ಸ್ಥಳದಲ್ಲಿದ್ದ ಕೆಲ ನಿವಾಸಿಗಳು, ಶವಗಳನ್ನು ತ್ವರಿತವಾಗಿ ಸ್ಥಳಾಂತರಿಸುವಂತೆ ಸಿಬ್ಬಂದಿ ಮೇಲೆಯೇ ಒತ್ತಡ ಹಾಕಿದರು.

‘ಯಾರದ್ದೋ ಶವಗಳು ನಮ್ಮ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಇಡಬೇಡಿ. ತೆಗೆದುಕೊಂಡು ಹೋಗಿ. ಇಲ್ಲಿ ಇಟ್ಟರೆ, ಪರಿಸ್ಥಿತಿ ಹದಗೆಡುತ್ತದೆ. ಅದಕ್ಕೆ ನೀವೇ (ಅಗ್ನಿಶಾಮಕ ದಳದ ಸಿಬ್ಬಂದಿ) ಕಾರಣವಾಗುತ್ತೀರಾ’ ಎಂದು ಬೆದರಿಸಿದ್ದರು.

ಮೃತರ ಕುಟುಂಬಸ್ಥರು ಅದನ್ನು ಪ್ರಶ್ನಿಸುತ್ತಿದ್ದಂತೆ ಸಮಾಧಾನಪಡಿಸಲು ಮುಂದಾದ ನಿವಾಸಿಗಳು, ‘ಸಣ್ಣ ಮಕ್ಕಳಿದ್ದಾರೆ. ಶವ ನೋಡಿ ಹೆದರುತ್ತಾರೆ. ತೆಗೆದುಕೊಂಡು ಹೋಗಿ’ ಎಂದು ಸಬೂಬು ಹೇಳಿದರು. ಗೊಂದಲದ ನಡುವೆಯೇ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

‘ಜೀವ ಉಳಿಸಬಹುದಿತ್ತು’

‘ಎಸ್‌ಟಿಪಿ ನೀರು ಗಲೀಜಾಗಿತ್ತು. ಮುಚ್ಚಳ ಸಣ್ಣದ್ದಾಗಿದ್ದರಿಂದ ಉಸಿರಾಟಕ್ಕೆ ಬೇಕಾಗುವಷ್ಟು ಗಾಳಿಯೂ ಅಲ್ಲಿರಲಿಲ್ಲ. ಭದ್ರತಾ ಸಿಬ್ಬಂದಿ ನೋಡಿದಾಗಲೇ, ನಿವಾಸಿಗಳು ಎಸ್‌ಟಿಪಿ ಬಳಿ ಹೋಗಿ ಮೂವರನ್ನು ಮೇಲಕ್ಕೆ ಎತ್ತಿದ್ದರೆ ಜೀವ ಉಳಿಯುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

‘ಕಾರ್ಮಿಕರು ಎಸ್‌ಟಿಪಿಯಲ್ಲಿ ಸಿಲುಕಿದ ವಿಷಯ ತಿಳಿದ ಭದ್ರತಾ ಸಿಬ್ಬಂದಿ ಯಾರಾದರೂ ಆಂಬುಲೆನ್ಸ್‌ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡುವಂತೆ ಕೂಗಿ ಹೇಳಿದ್ದರು. ಯಾರೊಬ್ಬರೂ ಸ್ಪಂದಿಸದಿದ್ದಾಗ, ಸಂಘದ ಸದಸ್ಯರಿಗೆ ವಿಷಯ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿರುವ ನಿವಾಸಿಗಳು ವಿದ್ಯಾವಂತರು. ಕಾರ್ಮಿಕರು ಸಾಯುವ ವೇಳೆ ಅವರು ಕೈ ಕಟ್ಟಿಕೊಂಡು ಮಹಡಿಯಿಂದಲೇ ನೋಡಿದ್ದಾರೆ. ಅವರು ಮಾನವೀಯತೆ ಇಲ್ಲದವರು’ ಎಂದು ಮೃತರ ಸಂಬಂಧಿಕರು ಕಿಡಿಕಾರಿದರು.

‘ಎನ್‌.ಡಿ. ಸೆಪಲ್‌’ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು ‘ಎನ್‌.ಡಿ. ಡೆವಲಪರ್ಸ್‌’ ನಿರ್ಮಿಸಿದೆ. ನಾಲ್ಕು ಮಹಡಿಯ 5 ಬ್ಲಾಕ್‌ಗಳು ಇಲ್ಲಿವೆ. ಅವೆಲ್ಲವುಗಳ ಕೊಳಚೆ ನೀರು ಈ ಎಸ್‌ಟಿಪಿಗೆ ಬಂದು ಸೇರುತ್ತದೆ. ಮೋಟರ್‌ ಕೆಟ್ಟಿದ್ದರಿಂದ, ನೀರು ಶುದ್ಧೀಕರಣ ಸರಿಯಾಗಿ ಆಗುತ್ತಿರಲಿಲ್ಲ. ಆ ಬಗ್ಗೆ ಕೆಲ ನಿವಾಸಿಗಳು, ನಿವಾಸಿಗಳ ಸಂಘದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೋಟರ್‌ ಬದಲಿಸುವಂತೆ ಒತ್ತಾಯಿಸಿದ್ದರು. ಅದರಿಂದಾಗಿ ಸಂಘದವರು, ಮೋಟರ್‌ ಬದಲಿಸುವಂತೆ ನಾರಾಯಣಸ್ವಾಮಿ ಅವರಿಗೆ ಹೇಳಿದ್ದರು.

***

‘ಎಸ್‌ಟಿಪಿ ನಿರ್ವಹಣೆ ಗೊತ್ತಿರಲಿಲ್ಲ’

ಪತಿ ನಾರಾಯಣಸ್ವಾಮಿ ಅವರು ಎಸ್‌ಟಿಪಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದರು ಎಂಬುದೇ ನನಗೆ ಗೊತ್ತಿರಲಿಲ್ಲ. ಅವರು ಭಾನುವಾರ ಎಲ್ಲಿಯೂ ಹೋಗುತ್ತಿರಲಿಲ್ಲ. ಆದರೆ, ಇವತ್ತು ಕೆಲಸವಿದೆ ಎಂದು ಬೆಳಿಗ್ಗೆಯೇ ಮನೆಯಿಂದ ಹೊರಟರು. ಅವರ ಸಾವಿನ ಸುದ್ದಿ ಸಂಬಂಧಿಕರಿಂದ ತಿಳಿಯಿತು. ಆಸ್ಪತ್ರೆ ಹೋದಾಗ ನನಗೆ ಹಾಗೂ ನನ್ನ 13 ವರ್ಷದ ಮಗನಿಗೆ ಆಘಾತವಾಯಿತು

– ರಾಧಮ್ಮ, ಮೃತ ನಾರಾಯಣಸ್ವಾಮಿ ಪತ್ನಿ

ಶ್ರೀನಿವಾಸ್‌ ಎಷ್ಟೇ ಕಷ್ಟವಿದ್ದರೂ ಯಾರೊಬ್ಬರ ಬಳಿಯೇ ಕೈ ಚಾಚುತ್ತಿರಲಿಲ್ಲ. ಸಮಯ, ದಿನವೆನ್ನದೇ ಕೆಲಸಕ್ಕೆ ಹೋಗುತ್ತಿದ್ದರು.  ಅವರಿಗೆ ಮಗ ವಿಜಯ್‌ ಅಂದರೆ, ತುಂಬಾ ಇಷ್ಟ. ಆತ ಇತ್ತೀಚೆಗೆ ಕಚೇರಿಯೊಂದರಲ್ಲಿ ಸಹಾಯಕವಾಗಿ ಕೆಲಸಕ್ಕೆ ಸೇರಿದ್ದ. ಆತನ ಭವಿಷ್ಯದ ಬಗ್ಗೆಯೂ ಹೆಚ್ಚು ಮಾತನಾಡುತ್ತಿದ್ದರು. ಈಗ ವಿಜಯ್‌ ಹಾಗೂ ಶ್ರೀನಿವಾಸ್‌ ಪತ್ನಿ ಲಕ್ಷ್ಮಿ ಅನಾಥರಾಗಿದ್ದಾರೆ.

– ನಾಗೇಶ್‌, ಮೃತ ಶ್ರೀನಿವಾಸ್‌ ಸ್ನೇಹಿತ

***

ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ...ನಿರ್ಲಕ್ಷ್ಯಕ್ಕಿಲ್ಲ ಅಂಕುಶ....

ಬೆಂಗಳೂರು: ಮ್ಯಾನ್‌ಹೋಲ್‌, ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ವಚ್ಛಗೊಳಿಸಲು, ದುರಸ್ತಿ ಮಾಡಲು ಯಾವುದೇ ಸುರಕ್ಷತಾ ಕ್ರಮಗಳನ್ನು ವಹಿಸದೆಯೇ ಕಾರ್ಮಿಕರನ್ನು ಬಳಸಿಕೊಳ್ಳುವ ಪದ್ಧತಿ ನಗರದಲ್ಲಿ ಇನ್ನೂ ಜೀವಂತವಾಗಿದೆ. ಐದು ವರ್ಷದಲ್ಲಿ 25 ಮಂದಿ ಇದರಿಂದಾಗಿ ಮೃತಪಟ್ಟಿದ್ದಾರೆ.

2008ರಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮ್ಯಾನ್‌ ಹೋಲ್‌ ಮತ್ತು ಎಸ್‌ಟಿಪಿ ದುರಸ್ತಿ ವೇಳೆ 31 ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಹತ್ತು ವರ್ಷಗಳಲ್ಲಿ ಒಟ್ಟು 12 ಮಂದಿ ಎಸ್‌ಟಿಪಿ ದುರಸ್ತಿ ವೇಳೆ ಪ್ರಾಣಕಳೆದುಕೊಂಡಿದ್ದಾರೆ. 2017ರ ನವೆಂಬರ್‌ 18ರಂದು ಬಿ.ಡಿ. ಜತ್ತಿ ಅವರ ‘ಜತ್ತಿ ದ್ವಾರಕಮಯಿ’

ವಸತಿ ಸಮುಚ್ಚಯದ ಎಸ್‌ಟಿಪಿಗೆ ಇಳಿದು ಒಬ್ಬ ಕಾರ್ಮಿಕ ಮೃತ

ಪಟ್ಟಿದ್ದರು. ಈ ವೇಳೆ ಇಬ್ಬರು ಅಸ್ವಸ್ಥಗೊಂಡಿದ್ದರು.

‘ಇಷ್ಟೆಲ್ಲ ಆದರೂ ಸುರಕ್ಷತಾ ಕ್ರಮ ಕೈಗೊಳ್ಳುವುದನ್ನು ಖಾತರಿಪಡಿಸುವ ಯಾವುದೇ ವ್ಯವಸ್ಥೆ ನಗರದಲ್ಲಿಲ್ಲ. ಇಂತಹ ಪ್ರಕರಣಗಳು ವರದಿಯಾದಾಗ ಮಾತ್ರ ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌.

ಮುಚ್ಚಿಹೋಗಿವೆ ಪ್ರಕರಣಗಳು: ‘ವಸತಿ ಸಮುಚ್ಚಯಗಳಲ್ಲಿ ಎಸ್‌ಟಿಪಿಗೆ ಇಳಿದು ಮೃತಪಟ್ಟಿರುವ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಆದರೆ, ಬೆಳಕಿಗೆ ಬಂದಿರುವ ಪ್ರಕರಣಗಳು ಕಡಿಮೆ’ ಎಂದು ಅವರು ತಿಳಿಸಿದರು.

ಮಲ ಹೊರುವ ಪದ್ಧತಿ ಜೀವಂತ: ‘ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆ ಪ್ರಕಾರ ನಗರದ ಪ್ರದೇಶಗಳಲ್ಲಿ 302 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 374 ಮಂದಿ ಮಲಹೊರುವವರು ಈಗಲೂ ಇದ್ದಾರೆ. ಆಯೋಗ ನಡೆಸಿದ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಅವರ ಸಂಖ್ಯೆ 15,000 ದಾಟುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ ಸುಮಾರು 1,000 ಮಂದಿ ಇದ್ದಾರೆ’ ಎಂದು ಅವರು ವಿವರಿಸಿದರು.

ನಿಯಮ ಏನು ಹೇಳುತ್ತದೆ?

ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ‘ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು- 2012’ರ ನಿಯಮಗಳ ಪ್ರಕಾರ ಪರ್ಯಾಯ ಮಾರ್ಗವಿಲ್ಲದಾಗ ಮಾತ್ರ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಅಥವಾ ಎಸ್‌ಟಿಪಿಗೆ ಇಳಿಸಬಹುದು.  ಒಳಗಿಳಿದಾಗ ಅವರಿಗೆ ಆಮ್ಲಜನಕ ಪೂರೈಸುವುದು ಸೇರಿದಂತೆ ಅಗತ್ಯ ಸುರಕ್ಷತೆಗಳನ್ನು ಒದಗಿಸಬೇಕು.

ಮ್ಯಾನ್‌ ಹೋಲ್‌ನಲ್ಲಿ ಹಾಗೂ ಎಸ್‌ಟಿಪಿಗಳಲ್ಲಿ ಮೀಥೇನ್‌ (ಸಿಎಚ್‌4), ಕಾರ್ಬನ್‌ ಮೊನಾಕ್ಸೈಡ್‌ನಂಥ ವಿಷಕಾರಿ ಅನಿಲಗಳು ಇರುತ್ತವೆ. ಹೀಗಾಗಿ, ಇಳಿಯುವುದಕ್ಕೂ ಮುನ್ನ ಕನಿಷ್ಠ ಒಂದು ಗಂಟೆ ಮೊದಲು ಮುಚ್ಚಳ ತೆರೆದಿರಬೇಕು. ಬಳಿಕ ಮೈಗೆಲ್ಲ ಕೊಬ್ಬರಿ ಎಣ್ಣೆ ಸವರಿಕೊಂಡು, ಮಾಸ್ಕ್, ಕೈಗವಸು ಹಾಗೂ ಬೂಟು ಧರಿಸಿ ಗುಂಡಿಗೆ ಇಳಿಯಬೇಕು.

ನಂತರ ಪ್ರತಿ ಮೂರು ನಿಮಿಷಕ್ಕೊಮ್ಮೆ ಸಹಾಯಕರೊಬ್ಬರು ಅನಿಲ ಪರೀಕ್ಷೆ ಮಾಡುತ್ತಲೇ ಇರಬೇಕು. ಗುಂಡಿಯೊಳಗಿನ ವಿಷ ಅನಿಲದಿಂದ ರಕ್ಷಣೆ ನೀಡಲು ಹೊರಗಿನ ಗಾಳಿಯನ್ನು ಬ್ಲೋವರ್ಸ್‌ (ಗಾಳಿ ಹಾಯಿಸುವ ಯಂತ್ರ) ಮೂಲಕ ಒಳಗಡೆ ಬಿಡಬೇಕು. ಜತೆಗೆ ಆಗಾಗ್ಗೆ ಅವರನ್ನು ಮಾತನಾಡಿಸುತ್ತಿರಬೇಕು.

ಗುತ್ತಿಗೆದಾರಿಗೆ ₹1 ಕೋಟಿ ದಂಡ

‘2017ರ ಮಾರ್ಚ್‌ನಲ್ಲಿ ಮೂವರು ಕಾರ್ಮಿಕರು ಕಗ್ಗದಾಸಪುರದಲ್ಲಿನ ಮ್ಯಾನ್‌ಹೋಲ್‌ಗೆ ಇಳಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಂದ ₹1 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಸದ್ಯ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ’ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಮಂಜುನಾಥ್‌ ತಿಳಿಸಿದರು.

‘ಜಲಮಂಡಳಿಗೆ ನೋಟಿಸ್‌’

‘ಒಳಚರಂಡಿ ಸಂಪರ್ಕ ನೀಡಲು ಜಲಮಂಡಳಿ ಹಣ ಪಡೆಯುತ್ತದೆ. ವಸತಿ ಸಮುಚ್ಚಯಗಳಲ್ಲಿ ಎಸ್‌ಟಿಪಿ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಎಂದು ನಿಗಾ ಇಡಬೇಕಾದದ್ದು ಅದರದ್ದೇ ಜವಾಬ್ದಾರಿ. ಹಾಗಾಗಿ ಜಲಮಂಡಳಿಗೆ ನೋಟಿಸ್‌ ನೀಡಲಾಗುವುದು’ ಎಂದು ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್‌ ತಿಳಿಸಿದರು.

ಎಲ್ಲರ ಮೇಲೂ ನಿಗಾ ಇಡಲಾಗದು: ‘ಎಸ್‌ಟಿಪಿ ಸ್ವಚ್ಛಗೊಳಿಸುವುದಕ್ಕೂ ಸಕ್ಕಿಂಗ್‌ ಯಂತ್ರವನ್ನೇ ಬಳಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡು ಕಾರ್ಮಿಕರನ್ನು ಬಳಸಿಕೊಳ್ಳಬಹುದು. ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು- 2012 ಇದಕ್ಕೂ ಅನ್ವಯ ಆಗುತ್ತದೆ. ನಾವು ಎಲ್ಲರ ಮೇಲೂ ನಿಗಾ ಇಡಲು ಆಗುವುದಿಲ್ಲ. ಅವರೇ ಸುರಕ್ಷತೆಗಳನ್ನು ಕೈಗೊಳ್ಳಬೇಕು’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ ತಿಳಿಸಿದರು.

ಇದು ಜಲಮಂಡಳಿಯ ಎಸ್‌ಟಿಪಿಯಲ್ಲಿ ನಡೆದ ಘಟನೆಯಲ್ಲ. ಹಾಗಾಗಿ ನಾವು ಯಾವುದೇ ಕ್ರಮಕೈಗೊಳ್ಳುವುದಿಲ್ಲ

–ತುಷಾರ್‌ ಗಿರಿನಾಥ್‌ , ಜಲಮಂಡಳಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.