ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಗ್ಗಟ್ಟು ಒಡೆಯುವವರನ್ನು ಸೋಲಿಸಿ’

Last Updated 8 ಜನವರಿ 2018, 5:46 IST
ಅಕ್ಷರ ಗಾತ್ರ

ರಾಮನಗರ: ರಾಜ್ಯದಲ್ಲಿ ಯಾವುದೆ ಪಕ್ಷ ಧರ್ಮವನ್ನು ಒಡೆಯುವ ರಾಜಕಾರಣದಲ್ಲಿ ತೊಡಗಿಕೊಂಡರೆ ಆ ಪಕ್ಷವನ್ನು ಚುನಾವಣೆಯಲ್ಲಿ ಮಟ್ಟ ಹಾಕಲು ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ವೀರಶೈವ ಲಿಂಗಾಯತ ಮುಖಂಡ ಮಹದೇವ ಪ್ರಕಾಶ್ ಹೇಳಿದರು.

ಇಲ್ಲಿನ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯಿತ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಳೆದ ನಾಲ್ಕು ವರ್ಷಗಳಿಂದ ನಾನು ಅಹಿಂದ ಮುಖ್ಯಮಂತ್ರಿ ಎಂದು ಹೇಳಿಕೊಂಡು ರಾಜಕಾರಣ ಮಾಡಿದ ಸಿದ್ದರಾಮಯ್ಯ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ವೀರಶೈವ ಲಿಂಗಾಯತ ಸಮುದಾಯದವನ್ನು ಓಲೈಸಲು ಮುಂದಾಗುತ್ತಿದ್ದಾರೆ. ಲಿಂಗಾಯಿತ ಸಮಾಜವನ್ನು ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು, ಲಿಂಗಾಯತರು ಕಡಿಮೆ ಸಂಖ್ಯೆಯಲ್ಲಿರುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು ಎಂದರು.

ಹಿರಿಯ ಮುಖಂಡ ಎಚ್.ಎಸ್. ಶಿವಪ್ರಸಾದ್ ಮಾತನಾಡಿ, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈ ಸಮುದಾಯದಲ್ಲಿ ಒಡಕನ್ನು ಉಂಟುಮಾಡಲು ಸಿದ್ಧರಾಮಯ್ಯ ಅವರಿಂದ ಸರ್ವ ಪ್ರಯತ್ನಗಳು ನಡೆಯುತ್ತಿವೆ. ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾಗಿದೆ. ವೀರಶೈವ ರಾಜಕೀಯ ಮುಖಂಡರನ್ನು ಸತತವಾಗಿ ತುಳಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಂತಹ ಪ್ರಯತ್ನಗಳನ್ನು ಮೆಟ್ಟಿ ನಿಲ್ಲಲು ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ಶಕ್ತಿ ತುಂಬಬೇಕಿದೆ ಎಂದರು.

ಹಿರಿಯ ಮುಖಂಡ ಕೆ.ಎಸ್. ಶಂಕರಯ್ಯ ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ ವೀರಶೈವರು ನೀಡಿದ ಕಾಣಿಕೆ ಅನನ್ಯವಾಗಿದೆ. ಎಲ್ಲಾ ಸಮುದಾಯದ ಜನರನ್ನು ಒಗ್ಗಟ್ಟಿನಿಂದ ಕರೆದೊಯ್ದ ಹೆಗ್ಗಳಿಕೆ ಸಲ್ಲುತ್ತದೆ ಎಂದು ಬಣ್ಣಿಸಿದರು. ಬಸವಣ್ಣನವರು  ವಚನಗಳ ಮೂಲಕ ಇಡಿ ವಿಶ್ವಕ್ಕೆ ನೀಡಿದ ಕೊಡುಗೆ ಅಪಾರವಾದುದು. ಇಂತಹ ವ್ಯಕ್ತಿಯ ಹೆಸರಿನಲ್ಲಿ ಇಂದು ರಾಜಕಾರಣ ನಡೆಯುತ್ತಿರುವುದು ವಿಪರ್ಯಾಸ ಎಂದರು.

ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜ್ಯೋತಿಪ್ರಕಾಶ್ ಮಿರ್ಜಿ ಮಾತನಾಡಿ, ವಿಶ್ವಕ್ಕೆ ಕಾಯಕ ಮತ್ತು ದಾಸೋಹದ ಮೂಲಕ ಬಸವಣ್ಣ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇದು ಒಂದೇ ಧರ್ಮವಾಗಿದ್ದು, ಸ್ವತಂತ್ರ ಧರ್ಮ ಕೊಡುವ ನೆಪದಲ್ಲಿ ಒಡಕನ್ನು ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಸಮಾಜದ ಪ್ರಮುಖರಾದ ಡಿವೈಎಸ್ ಪಿ ಅಶೋಕ್ ಕುಮಾರ್, ಪೊಲೀಸ್ ರುದ್ರೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ಮಾಗಡಿ ಜಂಗಮ ಮಠದ ಸಿದ್ಧಲಿಂಗ ಸ್ವಾಮೀಜಿ, ಕನಕಪುರ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಚನ್ನಪಟ್ಟಣ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಕಂಚಗಲ್ಲು ಬಂಡೆಮಠದ ಬಸವಲಿಂಗ ಸ್ವಾಮೀಜಿ, ಸೋಲೂರು ಗದ್ದುಗೆ ಮಠದ ಮಹಾಂತೇಶ್ವರ ಸ್ವಾಮೀಜಿ, ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಚಿಕ್ಕಕಲ್ಲುಬಾಳು ಮಠದ ಶಿವಾನಂದ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯಸ್ವಾಮೀಜಿ, ಚೌಕಿ ಮಠದ ಹುಚ್ಚಪ್ಪ ಸ್ವಾಮೀಜಿ, ಎಸ್‍ಆರ್‍ಎಸ್ ಬೆಟ್ಟದ ಪಟ್ಟದ ಶಿವಾಚಾರ್ಯ ಸ್ವಾಮೀಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೂನಮುದ್ದನಹಳ್ಳಿ ರುದ್ರೇಶ್, ಯೋಗಾನಂದ, ಶಿವಲಿಂಗ ಪ್ರಸಾದ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟದ ಕಾರ್ಯದರ್ಶಿ ಎಂ.ಎಂ. ರಾಜಶೇಖರ್‌ ಇದ್ದರು.
ಶಿಕ್ಷಕ ಸಿ.ವಿ. ಜಯಣ್ಣ ನಿರೂಪಿಸಿದರು.

ಮತ್ತೊಂದು ಧರ್ಮ ಬೇಕಾಗಿಲ್ಲ

ಹನ್ನೆರಡನೇ ಶತಮಾನದಲ್ಲಿ ಸಮಾನ ಸಮಾಜಕ್ಕಾಗಿ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣ ಅವರ ಅನುಭವ ಮಂಟಪದ ಧರ್ಮವೇ ವೀರಶೈವ ಲಿಂಗಾಯತರಿಗೆ ನಿಜವಾದ ಧರ್ಮವಾಗಿದೆ. ಮತ್ತೊಂದು ಧರ್ಮ ನಮಗೆ ಬೇಕಾಗಿಲ್ಲ ಎಂಬುದನ್ನು ಬಹಿರಂಗವಾಗಿ ತಿಳಿಸಲು ಚುನಾವಣೆಯೊಂದು ದಾರಿಯಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಕೈ ಬಲಪಡಿಸಿ ನಮ್ಮ ಶಕ್ತಿಯನ್ನು ತೋರಿಸುವಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬೆಂಬಲಿಸಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಕಾಂಗ್ರೆಸ್ ಮತ್ತಷ್ಟು ಶಕ್ತಿ ಪಡೆದುಕೊಳ್ಳುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಶತೃವಾಗಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಿ ಎಂದರು.

* *

ಜಾತ್ಯತೀತ ವೈಚಾರಿಕ ಧರ್ಮವನ್ನು ಬಸವಣ್ಣನವರು ಕೊಡುಗೆ ನೀಡಿದ್ದಾರೆ. ಅವರ ಅನುಭವ ಮಂಟಪದ ಧರ್ಮವೇ ನಮ್ಮ ಧರ್ಮ
ಜ್ಯೋತಿಪ್ರಕಾಶ್ ಮಿರ್ಜಿ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT