ಸೇವೆಗೆ ಮುಕ್ತವಾಗದ ಅನಿಲ ಚಿತಾಗಾರ

7

ಸೇವೆಗೆ ಮುಕ್ತವಾಗದ ಅನಿಲ ಚಿತಾಗಾರ

Published:
Updated:
ಸೇವೆಗೆ ಮುಕ್ತವಾಗದ ಅನಿಲ ಚಿತಾಗಾರ

ಕೋಲಾರ: ನಗರದ ರಹಮತ್‌ನಗರ ಹಿಂದೂ ರುದ್ರಭೂಮಿ ಆವರಣದಲ್ಲಿ ಅನಿಲ ಚಿತಾಗಾರ ನಿರ್ಮಿಸಿ ಮೂರು ವರ್ಷ ಕಳೆದರೂ ಜಿಲ್ಲಾ ನಿರ್ಮಿತಿ ಕೇಂದ್ರ ಮತ್ತು ನಗರಸಭೆ ನಡುವಿನ ಹಗ್ಗ ಜಗ್ಗಾಟದಿಂದಾಗಿ ಚಿತಾಗಾರ ಆರಂಭಕ್ಕೆ ಕಾಲ ಕೂಡಿ ಬಂದಿಲ್ಲ.

ಮುಜರಾಯಿ ಇಲಾಖೆಯ ₹ 1.10 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ಈ ಚಿತಾಗಾರವು ಸೇವೆಗೆ ಸಂಪೂರ್ಣ ಸಿದ್ಧವಿದೆ. ಆದರೆ, ಚಿತಾಗಾರದ ನಿರ್ವಹಣೆ ವಿಷಯವಾಗಿ ನಿರ್ಮಿತಿ ಕೇಂದ್ರ ಹಾಗೂ ನಗರಸಭೆ ನಡುವೆ ಶೀತಲ ಸಮರ ನಡೆಯುತ್ತಿರುವ ಕಾರಣ ಚಿತಾಗಾರವು ಸಾರ್ವಜನಿಕ ಸೇವೆಗೆ ಮುಕ್ತವಾಗಿಲ್ಲ.

ನಗರದಲ್ಲಿ ಶವ ಸಂಸ್ಕಾರಕ್ಕೆ ಹೆಚ್ಚಿನ ಸ್ಥಳಾವಕಾಶವಿಲ್ಲದೆ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸುವ ಉದ್ದೇಶಕ್ಕಾಗಿ ನಗರಸಭೆ ಜಾಗದಲ್ಲಿ ಚಿತಾಗಾರ ನಿರ್ಮಿಸಲಾಗಿದೆ. ಚಿತಾಗಾರ ನಿರ್ಮಾಣದ ಹೊಣೆ ಹೊತ್ತಿದ್ದ ನಿರ್ಮಿತಿ ಕೇಂದ್ರವು ಕಟ್ಟಡ, ಯಂತ್ರೋಪಕರಣ, ರಸ್ತೆ, ವಿದ್ಯುತ್‌, ನೀರು, ಶೌಚಾಲಯ, ಕೊಳವೆ ಬಾವಿ, ದೇವಾಲಯ, ಕ್ರಿಯಾ ಕರ್ಮದ ಕಟ್ಟೆ, ತಡೆಗೋಡೆ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ.

ಅನಿಲ ಚಿತಾಗಾರವು ಪರಿಸರ ಸ್ನೇಹಿಯಾಗಿದ್ದು, ವಾತಾವರಣವನ್ನು ಕಲುಷಿತಗೊಳಿಸುವುದಿಲ್ಲ. ಶವ ಸುಡುವಾಗ ಹೊರ ಬರುವ ಹೊಗೆಯಲ್ಲಿನ ರಾಸಾಯನಿಕ ಮಿಶ್ರಿತ ಅಂಶವನ್ನು ಹಿಡಿದಿಟ್ಟುಕೊಂಡು ಶುದ್ಧೀಕರಿಸಿದ ಹೊಗೆ ಮಾತ್ರ ಚಿಮಣಿ ಮೂಲಕ ಹೊರ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

ಕಿರಿಕಿರಿ ಇಲ್ಲ: ವಿದ್ಯುತ್ ಚಿತಾಗಾರಕ್ಕೆ ನಿರಂತರ ವಿದ್ಯುತ್‌ ಪೂರೈಕೆ ಅತ್ಯಗತ್ಯ. ಶವ ಸುಡುವಾಗ ವಿದ್ಯುತ್‌ ಸೇವೆ ಕಡಿತಗೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ, ಅನಿಲ ಚಿತಾಗಾರದಲ್ಲಿ ಆ ಕಿರಿಕಿರಿ ಇಲ್ಲ. ಇನ್ನು ಮರದ ತುಂಡುಗಳು ಅಥವಾ ಕಟ್ಟಿಗೆಯಲ್ಲಿ ಶವ ಸುಡುವ ಕ್ರಮ ದುಬಾರಿ ವೆಚ್ಚದ್ದು. ಕಟ್ಟಿಗೆಯಲ್ಲಿ ಶವ ಸುಡುವುದರಿಂದ ಪರಿಸರ ಮಾಲಿನ್ಯವಾಗುತ್ತದೆ.

ತಜ್ಞರ ತಾಂತ್ರಿಕ ಸಲಹೆ ಮೇರೆಗೆ ಆಧುನಿಕ ಶೈಲಿಯಲ್ಲಿ ಅನಿಲ ಚಿತಾಗಾರವನ್ನು ವಿನ್ಯಾಸ ಮಾಡಲಾಗಿದೆ. ಈ ಚಿತಾಗಾರದಲ್ಲಿ ಒಂದು ಶವ ಸುಡಲು ಕನಿಷ್ಠ ₹ 1,000 ವೆಚ್ಚ ತಗಲುತ್ತದೆ. ಜತೆಗೆ ಪರಿಸರಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ನಗರಸಭೆ ಹಿಂದೇಟು: ಈ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ 2014ರ ಡಿ.4ರಂದು ಈ ಚಿತಾಗಾರವನ್ನು ಲೋಕಾರ್ಪಣೆ ಮಾಡಿದ್ದರು. ನಿಯಮದ ಪ್ರಕಾರ ಕಾಮಗಾರಿ ಪೂರ್ಣಗೊಂಡ ಬಳಿಕಚಿತಾಗಾರವು ನಗರಸಭೆಗೆ ಹಸ್ತಾಂತರವಾಗಬೇಕಿತ್ತು. ಆದರೆ, ನಗರಸಭೆ ಆಡಳಿತ ಯಂತ್ರವು ಚಿತಾಗಾರ ನಿರ್ವಹಣೆಯ ಹೊಣೆ ಹೊರಲು ಹಿಂದೇಟು ಹಾಕುತ್ತಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಕೊಡಿಸಿ, ಚಿತಾಗಾರವನ್ನು ಹಸ್ತಾಂತರಿಸಿಕೊಳ್ಳುವಂತೆ ನಗರಸಭೆಗೆ ಏಳೆಂಟು ಬಾರಿ ಪತ್ರ ಬರೆದಿದ್ದಾರೆ. ಆದರೆ, ನಗರಸಭೆ ಆಡಳಿತ ಯಂತ್ರವು ಕಾಮಗಾರಿಯ ಜತೆಗೆ ಚಿತಾಗಾರದಲ್ಲಿನ ಯಂತ್ರೋಪಕರಣಗಳ ನಿರ್ವ

ಹಣೆ ಬಗ್ಗೆ ಸಿಬ್ಬಂದಿಯನ್ನು ತರಬೇತುಗೊಳಿಸುವುದು ನಿರ್ಮಿತಿ ಕೇಂದ್ರದ ಜವಾಬ್ದಾರಿ ಎಂದು ಕುಂಟು ನೆಪ ಹೇಳುತ್ತಾ ಚಿತಾಗಾರ ಹಸ್ತಾಂತರಿಸಿಕೊಳ್ಳದೆ ಕಾಲ ದೂಡುತ್ತಿದೆ.

ಕೇಂದ್ರದ ಜವಾಬ್ದಾರಿಯಲ್ಲ: ಗುತ್ತಿಗೆ ಕರಾರಿನ ಪ್ರಕಾರ ಚಿತಾಗಾರದ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಜತೆಗೆ ವಿದ್ಯುತ್‌, ಗ್ಯಾಸ್‌ ಸಂಪರ್ಕ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದೇವೆ. ನಗರಸಭೆಯೇ ಚಿತಾಗಾರ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಸಿಬ್ಬಂದಿ ನೇಮಕ ಮತ್ತು ಅವರ ತರಬೇತಿಯು ತಮ್ಮ ಜವಾಬ್ದಾರಿಯಲ್ಲ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ಸಿಬ್ಬಂದಿ ಇಲ್ಲ: ಚಿತಾಗಾರ ಸೇವೆಗೆ ಮುಕ್ತವಾಗುವ ಮುನ್ನವೇ ರುದ್ರಭೂಮಿ ಆವರಣದಲ್ಲಿನ ಸೌರ ದೀಪಗಳ ಬ್ಯಾಟರಿ, ವಯರ್‌ ಮತ್ತು ಬಲ್ಬ್‌ಗಳು ಕಳವಾಗಿವೆ. ರುದ್ರಭೂಮಿಯ ಒಂದು ಪಾರ್ಶ್ವದಲ್ಲಿ ತಡೆಗೋಡೆ ಕುಸಿದಿದೆ. ಚಿತಾಗಾರ ನಿರ್ಮಾಣಕ್ಕೆ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಲಾಗಿದೆ. ಆದರೆ, ಶವ ಸುಡುವ ಕಾರ್ಯ ವಿಧಾನದ ಬಗ್ಗೆ ತರಬೇತಿ ಪಡೆದ ಸಿಬ್ಬಂದಿಯೇ ನಗರಸಭೆಯಲ್ಲಿ ಇಲ್ಲ. ನಗರಸಭೆ ಮತ್ತು ನಿರ್ಮಿತಿ ಕೇಂದ್ರದ ನಡುವಿನ ಮುಸುಕಿನ ಗುದ್ದಾಟದಿಂದ ಚಿತಾಗಾರ ನಿರುಪಯುಕ್ತವಾಗಿದೆ.

* * 

ಹಲವು ಬಾರಿ ಪತ್ರ ಬರೆದಿದ್ದೇವೆ. ಆದರೆ ಅಲ್ಲಿನ ಚಿತಾಗಾರದಲ್ಲಿನ ಯಂತ್ರೋಪಕರಣಗಳ ನಿರ್ವಹಣೆಗೆ ಸಿಬ್ಬಂದಿಯಿಲ್ಲ ಎನ್ನುತ್ತಾರೆ

ನಾರಾಯಣಗೌಡ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry