ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಒಡೆದ ಮನೆಯಾದ ಜೆಡಿಎಸ್‌

Last Updated 8 ಜನವರಿ 2018, 9:03 IST
ಅಕ್ಷರ ಗಾತ್ರ

ಚಿಂತಾಮಣಿ: ವಿಧಾನಸಭಾ ಚುನಾ ವಣೆಯ ಹೊಸ್ತಿಲಲ್ಲಿ ಕ್ಷೇತ್ರದ ಜೆಡಿಎಸ್‌ ನಾಯಕರ ನಡುವೆ ಭುಗಿಲೆದ್ದಿರುವ ಭಿನ್ನಮತ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.

ಜೆಡಿಎಸ್‌ನಲ್ಲಿರುವ ಕೆಲ ಮುಖಂಡರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸಿದ್ದ ಮುಖಂಡ ಕೋನಪ್ಪರೆಡ್ಡಿ ಅವರನ್ನು ಈ ಬಾರಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರಿಗೆ ಪರ್ಯಾಯ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿದ್ದಾರೆ ಎನ್ನುವ ಶಂಕೆ ಪಕ್ಷದೊಳಗೆ ಒಡಕು ಉಂಟು ಮಾಡಿದೆ ಎಂದು ತಿಳಿದು ಬಂದಿದೆ.

ಎಲ್ಲ ಪಕ್ಷಗಳಲ್ಲೂ ವ್ಯಕ್ತಿ ಪ್ರತಿಷ್ಠೆ ಪ್ರಧಾನವಾಗಿರುವುದೇ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ವಿಶೇಷ. 2013ರ ವಿಧಾನಸಭೆ ಚುನಾವಣೆ ವರೆಗೂ ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಅವರು ಸ್ಥಳೀಯವಾಗಿ ಜೆಡಿಎಸ್‌ ಹೈಕಮಾಂಡ್‌ನಂತಿದ್ದರು. ಅವರ ಬಳಿಕ ಶಾಸಕ ಎಂ.ಕೃಷ್ಣಾರೆಡ್ಡಿ ಅವರ ಉತ್ತರಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎನ್ನುವುದು ಭಿನ್ನಹಾದಿ ತುಳಿದವರ ಆರೋಪ. ಇದರಿಂದಾಗಿ ಬಹಳ ದಿನಗಳಿಂದ ಒಳಗಡೆ ಹೊಗೆಯಾಡುತ್ತಿದ್ದ ಭಿನ್ನಮತ ಇತ್ತೀಚೆಗೆ ಬಹಿರಂಗಕ್ಕೆ ಬರಲು ಆರಂಭಿಸಿದೆ.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್‌.ರಾಜಗೋಪಾಲ್‌ ಮುಖಂಡತ್ವದ ಗುಂಪು ಶಾಸಕರು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರ ವಿರುದ್ಧ ಅಸಮಾಧಾನ ಗೊಂಡಿದೆ. ಇನ್ನೊಂದೆಡೆ ಶಾಸಕರ ಬೆಂಬಲಿಗ ಗುಂಪು ಕೆಲ ಹಿರಿಯ ಮುಖಂಡರು ಕೃಷ್ಣಾರೆಡ್ಡಿ ಅವರ ಮೇಲೆ ಸವಾರಿ ಮಾಡಲು ಹವಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ ಎನ್ನುತ್ತವೆ ಪಕ್ಷದ ಮೂಲಗಳು.

ಇತ್ತೀಚೆಗೆ ಬಟ್ಲಹಳ್ಳಿಯಲ್ಲಿ ನಡೆದ ಸಭೆಯ ನಂತರ ಶಾಸಕರಾಡಿದ, ‘ವರಿಷ್ಠರು ಪರ್ಯಾಯವಾಗಿ ಬೇರೆ ಯಾವುದೇ ಮುಖಂಡರಿಗೆ ಟಿಕೆಟ್‌ ನೀಡಿದರೂ ನಾನು ಕಾಯಾ ವಾಚಾ ಮನಸಾ ದುಡಿಯುತ್ತೇನೆ’ ಎನ್ನುವ ಮಾತುಗಳು ಮುಸುಕಿನ ಗುದ್ದಾಟವನ್ನು ಬಯಲಿಗೆ ತಂದು ನಿಲ್ಲಿಸಿವೆ.

ಅದರ ಬೆನ್ನಲ್ಲೇ ತಳಗವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ ಗೋಪಾಲ್‌, ‘ಶಾಸಕರು ಒಂದೆಡೆ ಪಕ್ಷದಲ್ಲಿ ಭಿನ್ನಮತ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಹೈಕಮಾಂಡ್‌ ಯಾರಿಗೇ ಟಿಕೆಟ್‌ ಕೊಟ್ಟರೂ ದುಡಿಯುತ್ತೇನೆ ಎನ್ನುತ್ತಾರೆ. ಆದರೆ ನಾವು ಯಾರು ಕೂಡ ಪರ್ಯಾಯ ನಾಯಕನ ಹುಡು ಕಾಟದಲ್ಲಿ ತೊಡಗಿಲ್ಲ. ಕೋನಪ್ಪರೆಡ್ಡಿ ಅವರು ಕೂಡ ಪಕ್ಷದ ಮುಖಂಡರು. ಅವರ ಭೇಟಿಗೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ. ವೈಯಕ್ತಿಕ ಹಿತಕ್ಕಿಂತ ಪಕ್ಷದ ಒಳಿತು ಮುಖ್ಯ’ ಎಂದು ಸ್ಪಷ್ಟನೆ ನೀಡಿದರು.

ಸದ್ಯ ಜೆಡಿಎಸ್‌ನಲ್ಲಿರುವ ಎರಡು ಗುಂಪುಗಳು ನಮ್ಮಲ್ಲಿ ‘ಭಿನ್ನಮತ’ ಇಲ್ಲ ಎನ್ನುತ್ತಲೇ ತೆರೆಮರೆಯಲ್ಲಿ ಪರಸ್ಪರ ದೂಷಣೆ ಮಾಡುತ್ತ ಅದನ್ನು ತೋರ್ಪಡಿಸಿಕೊಳ್ಳುತ್ತಿವೆ. ಇದೆಲ್ಲದರ ನಡುವೆಯೇ ಕೃಷ್ಣಾರೆಡ್ಡಿ ಅವರು ಪಕ್ಷದ ಮುಖಂಡರನ್ನು ಪಕ್ಕಕ್ಕಿಟ್ಟು ತಮ್ಮದೇ ಕಾರ್ಯಕರ್ತರ ಪಡೆಯ ಮೂಲಕ ಮತದಾರರನ್ನು ಸಂಪರ್ಕಿಸುವ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

‘ಬೆಂಗಳೂರಿನಿಂದ ಬಂದ ಕೃಷ್ಣಾರೆಡ್ಡಿ ಅವರಿಗೆ ನಾವೆಲ್ಲ ಒತ್ತಾಸೆಯಾಗಿ ನಿಂತು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಲು ಸಹಕಾರ ನೀಡಿದ್ದೇವೆ. ಈ ಉಪಕಾರ ಸ್ಮರಣೆ ಮರೆತ ಶಾಸಕರು ತಮ್ಮದೇ ಆದ ಪಟಾಲಂ ಕಟ್ಟಿಕೊಂಡು ಪಕ್ಷಕ್ಕಾಗಿ ದುಡಿದವರನ್ನೇ ಮೂಲೆಗುಂಪು ಮಾಡಲು ಹೊರಟಿದ್ದಾರೆ. ಇದ್ಯಾವ ನ್ಯಾಯ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಮುಖಂಡರೊಬ್ಬರು ಬೇಸರ ತೋಡಿಕೊಂಡರು.

ಜೆಡಿಎಸ್‌ನಲ್ಲಿ ಮತ್ತೊಂದು ಗುಂಪಿನ ನಾಯಕ ಶ್ರೀನಿವಾಸರೆಡ್ಡಿ ಈಗಾಗಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದೀಗ ಅವರನ್ನು ಹಿಂಬಾಲಿಸಲು ಕೆಲ ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಯಿಂದ ಪಕ್ಷಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶ್ರೀನಿವಾಸರೆಡ್ಡಿ ಕುಟುಂಬದವರೇ ಪತ್ರಿಕಾಗೋಷ್ಠಿ ನಡೆಸಿ, ‘ಮುಖಂಡರಾದ ಶ್ರೀನಿವಾಸರೆಡ್ಡಿ ಮತ್ತು ಚಲಪತಿ ಇಬ್ಬರು ಮಾತ್ರ ಕಾಂಗ್ರೆಸ್ ಸೇರಿದ್ದಾರೆ. ನಾವು ಶೇ 90 ಕಾರ್ಯಕರ್ತರು ಜೆಡಿಎಸ್‌ನಲ್ಲೇ ಇದ್ದೇವೆ’ ಎಂದು ಹೇಳಿದ್ದಾರೆ.

ಶ್ರೀನಿವಾಸರೆಡ್ಡಿ ಸತತವಾಗಿ ಮೂರು ಬಾರಿ ನಗರಸಭೆ ಸದಸ್ಯರಾಗಿ ಉತ್ತಮ ಹೆಸರನ್ನು ಪಡೆದಿದ್ದಾರೆ. ಅವರು ಪಕ್ಷ ತ್ಯಜಿಸಿರುವುದು ಸಾಕಷ್ಟು ನಷ್ಟವಾಗಿದೆ ಎನ್ನುವುದು ಆ ಭಾಗದ ಮತದಾರರ ಅಭಿಪ್ರಾಯ.

ಚುನಾವಣೆಗಳು ಸಮೀಪಿಸುತ್ತಿರು ವಂತೆ ಕ್ಷೇತ್ರದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಲಯಗಳಲ್ಲಿ ಮಹತ್ವದ ರಾಜಕೀಯ ಧ್ರುವೀಕರಣ ಮತ್ತು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಕ್ಷದೊಳಗಿನ ಈ ಭಿನ್ನಮತವನ್ನು ವರಿಷ್ಠರು ಹೇಗೆ ಶಮನಗೊಳಿಸುತ್ತಾರೆ? ಯಾರಿಗೆ ಟಿಕೆಟ್‌ ನೀಡುತ್ತಾರೆ ಎನ್ನುವ ಕುತೂಹಲ ಸದ್ಯ ಜೆಡಿಎಸ್ ಕಾರ್ಯಕರ್ತರಷ್ಟೇ ಮತದಾರರಲ್ಲಿ ಮನೆ ಮಾಡಿದೆ.

* * 

ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ, ನಾನೇ ಅಭ್ಯರ್ಥಿ ಎಂದು ಶಾಸಕ ಕೃಷ್ಣಾರೆಡ್ಡಿ ಅವರು ತಿಳಿಸಿದರೆ ಇಷ್ಟೆಲ್ಲ ರಂಪಾಟವೇ ಇರುತ್ತಿರಲಿಲ್ಲ
ಕುರುಬೂರು ರವೀಂದ್ರಗೌಡ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT