ಸೋಮವಾರ, ಜೂಲೈ 6, 2020
27 °C

ಸ್ವಪ್ರೇರಣೆ ಬದಲಾದರೆ ಉನ್ನತ ಮಟ್ಟಕ್ಕೇರಲು ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ‘ಬೇರೆಯವರು ಹೇಳುವುದಕ್ಕೆ ಮುನ್ನವೇ ಸ್ವಪ್ರೇರಣೆಯಿಂದ ನಮ್ಮನ್ನು ನಾವು ಬದಲಾಯಿಸಿಕೊಂಡರೆ ಉನ್ನತ ಮಟ್ಟಕ್ಕೇರುವುದರಲ್ಲಿ ಸಂಶಯವಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.

ಕಡೂರು ಪೊಲೀಸ್ ತರಬೇತಿ ಶಾಲೆಯ ಮೂರನೇ ತಂಡದ ನಾಗರೀಕ ಪೊಲೀಸ್ ಕಾನ್ಸ್‌ಟೆಬಲ್‌ಗಳ 8 ತಿಂಗಳ ಬುನಾದಿ ತರಬೇತಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

‘ಪೊಲೀಸ್ ಸಮವಸ್ತ್ರ ನಮಗೆ ಸಾಮಾಜಿಕ ಗೌರವವನ್ನು ತಂದು ಕೊಡುತ್ತದೆ. ಇಲಾಖೆಗೆ ಸೇರಿದ ನಂತರ ಎಲ್ಲ ರೀತಿಯ ಜನಗಳೊಡನೆ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಬೇಕಾಗಿರುವುದು ಕೌಶಲ ಮತ್ತು ಸಾಮಾನ್ಯ ಜ್ಞಾನ. ಅದನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ. ಇಲ್ಲಿ ಪಡೆದ ತರಬೇತಿ ನಮ್ಮ ವೃತ್ತಿಯಲ್ಲಿ ಅತ್ಯಂತ ಸಹಾಯಕವಾಗುತ್ತದೆ. ನಮಗೆ ನೀಡುವ ಸಂಬಳ ಜನಸಾಮಾನ್ಯರ ತೆರಿಗೆಯಿಂದ ಬಂದದ್ದು. ಆದ್ದರಿಂದ ಸಾಮಾಜಿಕವಾಗಿ ನಿಷ್ಟೆಯಿಂದ ಕೆಲಸವನ್ನು ಮಾಡುತ್ತೇವೆ’ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕು ಎಂದರು.

‘ಪೊಲೀಸ್ ಇಲಾಖೆಯಲ್ಲಿ ಎಲ್ಲರೂ ಒತ್ತಡದಿಂದಲೇ ಕಾರ್ಯ ನಿರ್ವಹಿ ಸಬೇಕಾಗುತ್ತದೆ. ಆದರೆ ಅದನ್ನು ಅಭಿವ್ಯಕ್ತಿಗೊಳಿಸುವುದು ಸಾಧುವಲ್ಲ. ಅದನ್ನೇ ಈ ತರಬೇತಿಯಲ್ಲಿ ಪ್ರಮು ಖವಾಗಿ ತಿಳಿಸಲಾಗುತ್ತದೆ. ಜರ್ಮ ನಿಯಲ್ಲಿ ಪೊಲೀಸ್ ತರಬೇತಿ ನೀಡುವ ಕೇಂದ್ರಗಳಿಗೆ ನಮ್ಮ ಇಲಾಖೆಯ ನಿಯೋಗ ಭೇಟಿ ನೀಡಿ ಅಧ್ಯಯನ ನಡೆಸಲಾಗಿದ್ದು, ಆ ವ್ಯವಸ್ಥೆಯನ್ನು ಇಲ್ಲಿಯೂ ಅಳವಡಿಸುವ ಬಗ್ಗೆ ಚಿಂತನೆಯನ್ನು ಹಿರಿಯ ಅಧಿಕಾರಿಗಳು ನಡೆಸಿದ್ದಾರೆ. ಇಲ್ಲಿ ತರಬೇತಿ ಪಡೆಯುವುದು ಬಹು ಸುಲಭ ಎಂಬ ಭಾವನೆಯನ್ನು ಬಿಟ್ಟು ತರಬೇತಿ ನಮ್ಮ ಜೀವನವನ್ನು ರೂಪಿಸುತ್ತದೆ ಎಂಬ ಸಕಾರಾತ್ಮಕ ಭಾವನೆಯಿಂದ ಪಡೆಯಬೇಕು’ ಎಂದರು.

ತರಬೇತಿ ಶಾಲೆಯ ಪ್ರಾಂಶುಪಾಲ ಎಸ್‌ಪಿ ಚನ್ನಯ್ಯ ಪ್ರಾಸ್ತವಿಕವಾಗಿ ಮಾತನಾಡಿ, ‘ಈ ಶಾಲೆಯ ಮೂರನೇ ತಂಡದ ತರಬೇತಿ ಆರಂಭವಾಗಿದ್ದು, ವಿವಿಧ ಜಿಲ್ಲೆಗಳ 495 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯಲಿದ್ದಾರೆ. ಅವರಿಗೆ ಬೇಕಾದ ಮೂಲ ಸೌಲಭ್ಯ ಒದಗಿ ಸಲಾಗಿದೆ’ ಎಂದು ನುಡಿದರು.

ಪೊಲೀಸ್ ತರಬೇತಿ ಕೇಂದ್ರದಲ್ಲಿ ಜಿಮ್ ಮತ್ತು ಗ್ರಂಥಾಲಯವನ್ನು ಉದ್ಘಾಟಿಸಿ ನಂತರ ಮಾದರಿ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಇನ್‌ಸ್ಪೆಕ್ಟರ್‌ ನಾರಾಯಣ್ ಪೂಜಾರಿ, ಕಾಂತರೆಡ್ಡಿ, ಎಡಿಪಿ ನಾಗರತ್ನಮ್ಮ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.