ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಊರಿನಲ್ಲೇ ಉದ್ಯೋಗಬೇಕೆಂಬ ಭಾವನೆ ಬೇಡ’

Last Updated 8 ಜನವರಿ 2018, 9:39 IST
ಅಕ್ಷರ ಗಾತ್ರ

ಧಾರವಾಡ: ನಮ್ಮ ಊರಿನಲ್ಲಿಯೇ ಉದ್ಯೋಗಬೇಕೆಂಬ ಮನೋಭಾವನೆಯನ್ನು ಉದ್ಯೋಗ ಆಕಾಂಕ್ಷಿಗಳು ಬಿಡಬೇಕು ಎಂದು ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಭಾನುವಾರ ವೈಶುದೀಪ ಫೌಂಡೇಶನ್‌ ಹಾಗೂ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗವನ್ನು ಆಯ್ದುಕೊಳ್ಳುವಾಗ ಸ್ಪಷ್ಟತೆ, ಬದ್ಧತೆ, ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು. ಬೇರೆ ರಾಜ್ಯದ ಜನ ನಮ್ಮ ರಾಜ್ಯಕ್ಕೆ ಉದ್ಯೋಗಕ್ಕಾಗಿ ಬಂದು, ಉದ್ಯೋಗ ಪಡೆಯುತ್ತಿರುವಾಗ ನಮಗೇಕೆ ಉದ್ಯೋಗ ದೊರಕುತ್ತಿಲ್ಲವೆಂಬುದನ್ನು ಪರಾಮರ್ಶಿಸಿಕೊಳ್ಳಬೇಕು. ಕೇವಲ ವೇತನ ಹಾಗೂ ಆಧುನಿಕ ಶೈಲಿಯ ಉದ್ಯೋಗಕ್ಕೆ ಜೋತು ಬೀಳದೇ ಗೌರವದಿಂದ ಬದುಕುವ ಯಾವುದೇ ಉದ್ಯೊಗವಿದ್ದರು ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು.

ಇಂದಿನ ದಿನಗಳಲ್ಲಿ ಹಲವಾರು ಸಂಸ್ಥೆಗಳು ಸ್ವಯಂ ಉದ್ಯೊಗಕ್ಕೆ ತರಬೇತಿ ನೀಡುತ್ತಿದ್ದು, ತರಬೇತಿ ಪಡೆದು ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಸ್ವಂತ ಉದ್ಯೋಗ ಪ್ರಾರಂಭಿಸಿ ಇತರರಿಗೂ ಉದ್ಯೋಗ ನೀಡುವಂತವರಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಸಂಸ್ಥೆ ವಿತ್ತಾಕಾರಿ ಡಾ.ಅಜಿತ್‌ ಪ್ರಸಾದ ಮಾತನಾಡಿ, ಶಿಕ್ಷಣ ಪಡೆಯುವಾಗಲೇ ನಿಮ್ಮ ಗುರಿ ಸ್ಪಷ್ಟವಾಗಿರಲಿ ಸಂದರ್ಶನಗಳಿಗೆ ಸರಿಯಾದ ತಯಾರಿ ಹಾಗೂ ಮಾಹಿತಿಯೊಂದಿಗೆ ಹೋಗಬೇಕು. ತಾಂತ್ರಿಕ ಕೋರ್ಸ್‌ಗಳಿಗೆ ಇಂದು ಅಪಾರ ಬೇಡಿಕೆ ಇದೆ. ತರಬೇತಿ ನೀಡಿ ಉದ್ಯೋಗ ನೀಡುವ ಹಲವಾರು ಯೋಜನೆಗಳನ್ನು ಜೆಎಸ್ಎಸ್ ಸಂಸ್ಥೆ ಹಮ್ಮಿಕೊಂಡಿದ್ದು, ಅವುಗಳ ಪ್ರಯೋಜನ ಪಡೆಯಬೇಕು ಎಂದರು.

ಮಹಾವೀರ ಉಪಾದ್ಯೆ ಮಾತನಾಡಿ, ಉದ್ಯೋಗ ಎನ್ನುವುದು ಒಂದು ಕುಟುಂಬಕ್ಕೆ ಆಧಾರ ಸ್ತಂಭ. ಆದ ಕಾರಣ ಮೇಲಿಂದ ಮೇಲೆ ಉದ್ಯೋಗ ಬದಲಿಸಬೇಡಿ, ಪಡೆದ ಉದ್ಯೋಗದಲ್ಲಿ ನಿಮ್ಮ ಪ್ರಾವೀಣ್ಯತೆ ಏನು ಎಂಬುದನ್ನು ತೋರಿಸಿ ಎಂದರು.

20 ಕಂಪೆನಿಗಳ ಪ್ರತಿನಿಧಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಒಟ್ಟು 515 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ 121 ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆ ಆಯಾದರು. ವೈಶುದೀಪ ಫೌಂಡಶನ್‌ನ ಕಾರ್ಯದರ್ಶಿ ಶಿವಲೀಲಾ ಕುಲಕರ್ಣಿ, ಉದ್ಯೋಗ ವಿನಿಮಯ ಕೇಂದ್ರದ ನಿರ್ದೇಶಕಿ ಸಾಧನಾ ಕೋಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT