ಮಂಗಳವಾರ, ಆಗಸ್ಟ್ 11, 2020
24 °C

ಉಘೇ ಉಘೇ ಮೈಲಾರಲಿಂಗ

ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ಉಘೇ ಉಘೇ ಮೈಲಾರಲಿಂಗ

ಯಾದಗಿರಿ ಜಿಲ್ಲೆಯ ಚಿಕ್ಕ ಊರು ಮೈಲಾಪುರ. ಇಲ್ಲಿನ ಬೆಟ್ಟದ ಮೇಲಿರುವ ಗುಹಾಂತರ ದೇವಾಲಯಗಳಲ್ಲಿ ಈಗ ಜಾತ್ರೆಯ ಸಂಭ್ರಮ (ಜನವರಿ 14ರಂದು ಪಲ್ಲಕ್ಕಿ ಉತ್ಸವ). ಮೈಲಾಪುರದ ಆರಾಧ್ಯದೈವ ಮೈಲಾರಲಿಂಗನ ಈ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತಾದಿಗಳ ದಂಡು ಹರಿದು ಬರುತ್ತದೆ.

ಮೈಲಾರಲಿಂಗ ದೇವಾಲಯ, ಆತನ ಪತ್ನಿಯರಾದ ತುರಂಗಿ ಮಾಳಮ್ಮ, ಗಂಗಿ ಮಾಳಮ್ಮ ದೇವಾಲಯಗಳೆಲ್ಲವೂ ಗುಹೆಯೊಳಗೆ ಇವೆ. 150 ಮೆಟ್ಟಿಲುಗಳನ್ನು ಏರಿ ಬಂದರೆ ಈ ದೈವಗಳ ದರ್ಶನವಾಗುತ್ತದೆ. ಐದು ಅಡಿ ಎತ್ತರವಿರುವ ದೇವಾಲಯಗಳಲ್ಲಿ ಎಲ್ಲರೂ ತಗ್ಗಿಕೊಂಡೇ ಹೋಗಬೇಕು. ದೇವಾಲಯದ ಪಕ್ಕದಲ್ಲಿರುವ ತಾವರೆ ಹೂಗಳಿಂದ ಕಂಗೊಳಿಸುವ ಹೊನ್ನಕೆರೆ ಕಣ್ಣಿಗೆ ಆಹ್ಲಾದ ಉಂಟು ಮಾಡುತ್ತದೆ.

ಮಲ್ಲಯ್ಯ ಎಂದೇ ಇಲ್ಲಿನ ಜನಮನದಲ್ಲಿ ಆರಾಧನೆಗೊಳ್ಳುವ ಮೈಲಾರಲಿಂಗೇಶ್ವರನ ಜಾತ್ರೆ ಬುಡಕಟ್ಟು ಪರಂಪರೆಯ ಪ್ರತೀಕ. ಆಂಧ್ರದ ಶ್ರೀಶೈಲದಿಂದ ಮೈಲಾಪುರಕ್ಕೆ ಬಂದು ಜನರಿಗೆ ಕಂಟಕವಾಗಿದ್ದ ಇಲ್ಲಿನ ಅಸುರರನ್ನು ಸಂಹರಿಸಿ ಮೈಲಾರಲಿಂಗ ಇಲ್ಲಿಯೇ ನೆಲೆಸಿದ. ಈತ ಶಿವನ ಕಡೆಯ ಅವತಾರ ಎಂದು ಅರ್ಚಕ ಭೀಮಾಶಂಕರ್ ಹೇಳುತ್ತಾರೆ.

ಮೈಲಾರಲಿಂಗನ ಜಾತ್ರೆಯಲ್ಲಿ ಹಿಂದೂಗಳ ಜತೆಗೆ ಮುಸ್ಲಿಮರೂ ಭಾಗವಹಿಸುತ್ತಾರೆ. ಅಲ್ಲದೇ ಜಾತ್ರೆಯಲ್ಲಿ ಜನರ ಮನಸೂರೆಗೊಳ್ಳುವ ಬೆಂಡುಬತ್ತಾಸ್‌, ಬಳೆ ಮಾರುವವರು ಹೆಚ್ಚಾಗಿ ಮುಸ್ಲಿಮರೇ ಇರುತ್ತಾರೆ.

ಅಷ್ಟೇ ಅಲ್ಲ, ಹಿಂದೂಗಳು ಬಳಸುವ ಕುಂಕುಮ, ದೇವ ಭಂಡಾರವನ್ನೂ ಬೀದರ್ ಜಿಲ್ಲೆಯ ಮಸೂದ್‌ ಪ್ರತಿವರ್ಷ ಇಲ್ಲಿನ ಜಾತ್ರೆಯಲ್ಲಿ ಮಾರುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾಗುತ್ತಾರೆ.

ಮೈಲಾಪುರದ ಹೊನ್ನಕೆರೆಯಂಗಳದ ತುಂಬಾ ತೆಲಂಗಾಣ, ಸೀಮಾಂಧ್ರದ ರಾಜ್ಯಗಳ ಭಕ್ತರು ಬೀಡುಬಿಟ್ಟಿರುತ್ತಾರೆ. ಅಲ್ಲಿಯೇ ಅಡುಗೆ ಮಾಡುವ ಅವರು, ಅದಕ್ಕಾಗಿ ಮಣ್ಣಿನ ಮಡಿಕೆ, ಕುಡಿಕೆಗಳನ್ನೇ ಬಳಸುತ್ತಾರೆ. ಕೆರೆ ಅಂಗಳದಲ್ಲಿ ಗುಂಪುಗುಂಪಾಗಿ ಬೀಡುಬಿಟ್ಟ ಇವರು ಹೊನ್ನಕೆರೆ ನೀರನ್ನು ಬಳಸಿ ಅಡುಗೆ ತಯಾರಿಸುತ್ತಾರೆ. ನಂತರ ನೈವೇದ್ಯಕ್ಕೆ ಅಣಿ ಮಾಡಿ ಮಲ್ಲಯ್ಯ ಹೆಸರಿನ ಗೊರವರನ್ನು ಕರೆಯಿಸಿ ಪೂಜೆ ಸಲ್ಲಿಸುತ್ತಾರೆ. ನಂತರ ಅವರಿಗೆ ಕಾಣಿಕೆ ನೀಡಿ ಜಾತ್ರೆಯ ವೈಭವಕ್ಕೆ ಚಾಲನೆ ನೀಡುತ್ತಾರೆ.

ಗುಡಿಯಿಂದ ಮೈಲಾರಲಿಂಗ ಪಲ್ಲಕ್ಕಿ ಏರಿ ಹೊನ್ನಕೆರೆಯತ್ತ ಹೊರಟಾಗ ಜಾತ್ರಾ ವೈಭವ ವಿಜೃಂಭಿಸುತ್ತದೆ. ‘ಏಳು ಕೋಟಿ ಏಳು ಕೋಟಿ’ ‘ಮಲ್ಲಯ್ಯ ಪರಾಕ್’ ಘೋಷಗಳು ಕಿವಿಗಳನ್ನು ತುಂಬುತ್ತವೆ. ಎರಚಿದ ಭಂಡಾರ ನಿರ್ಮಿಸುವ ಹಳದಿ ಮೋಡಗಳು ಜಾತ್ರೆಗೆ ಕಳೆ ಕಟ್ಟುತ್ತವೆ.

ಹೊನ್ನಕೆರೆಯ ಹಾದಿಯುದ್ದಕ್ಕೂ ಇರುವ ಬೆಟ್ಟಗಳ ಮೇಲೆ ಜನ ಕುಳಿತು ಪಲ್ಲಕ್ಕಿಯಲ್ಲಿ ವಿರಾಜಮಾನವಾಗಿರುವ ಮೈಲಾರಲಿಂಗನ ದರ್ಶನ ಪಡೆದು ಪುನೀತರಾಗುತ್ತಾರೆ. ಹರಕೆ ತೀರಿಸಲು ಭಕ್ತರು ಈ ಹಿಂದೆ ಕುರಿಯ ಮರಿಗಳನ್ನು ಪಲ್ಲಕ್ಕಿಯ ಮೇಲೆ ಎಸೆಯುತ್ತಿದ್ದರು. ಜೀವಂತ ಕುರಿಗಳನ್ನು ದೇವರಿಗೆ ಅರ್ಪಿಸಿದರೆ, ವರ್ಷಪೂರ್ತಿ ತಮ್ಮ ಕುರಿಗಳಿಗೆ ಯಾವುದೇ ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆ ಅವರದಾಗಿತ್ತು. ಆದರೆ ಜಿಲ್ಲಾಡಳಿತ ಕುರಿ ಹಾರಿಸುವುದನ್ನು ಈಗ ಸಂಪೂರ್ಣ ನಿಷೇಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.