ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ಸ್ವಾತಂತ್ರ್ಯಕ್ಕೆ ಸರ್ಕಾರ ಬದ್ಧ

‘ಅಪರಿಚಿತ’ ಸಂಸ್ಥೆಗಳ ಮೇಲಷ್ಟೇ ಪ್ರಕರಣ ದಾಖಲು: ರವಿಶಂಕರ ಪ್ರಸಾದ್‌
Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ₹500 ಕೊಟ್ಟರೆ ಆಧಾರ್‌ ಮಾಹಿತಿಗಳು ದೊರೆಯುತ್ತವೆ ಎಂಬ ವರದಿ ಪ್ರಕಟಿಸಿದ್ದ ‘ದ ಟ್ರಿಬ್ಯೂನ್‌’ ಪತ್ರಿಕೆಯ ವಿರುದ್ಧ ದೂರು ದಾಖಲಾದ ಬೆನ್ನಿಗೇ, ಪತ್ರಿಕಾ ಸ್ವಾತಂತ್ರ್ಯಕ್ಕೆ ಸರ್ಕಾರ ಬದ್ಧ ಎಂದು ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ. ಆಧಾರ್‌ ಮಾಹಿತಿ ಸೋರಿಕೆಗೆ ಸಂಬಂಧಿಸಿ ‘ಅಪರಿಚಿತ’ ಸಂಸ್ಥೆಗಳ ವಿರುದ್ಧವಷ್ಟೇ ದೂರು ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಅಧಿಕಾರಿಗಳು ನೀಡಿದ ದೂರಿನಂತೆ ಪತ್ರಿಕೆ ವರದಿಗಾರರ ವಿರುದ್ಧ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತನಿಖಾ ಪತ್ರಿಕೋದ್ಯಮ ನಡೆಸಲು ಅಗತ್ಯವಾದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವುದಾಗಿ ಪತ್ರಿಕೆ ಹೇಳಿದೆ.

ಯಾವುದೇ ಆಧಾರ್‌ ಸಂಖ್ಯೆಯ ವಿವರಗಳನ್ನು ಪಡೆಯಬಲ್ಲ ಲಿಂಕ್‌ ಅನ್ನು ಅಪರಿಚಿತ ಮಾರಾಟಗಾರರಿಂದ ವಾಟ್ಸ್‌ಆ್ಯಪ್‌ ಮೂಲಕ ಖರೀದಿ ಮಾಡಿರುವುದಾಗಿ ‘ದ ಟ್ರಿಬ್ಯೂನ್‌’ ಪತ್ರಿಕೆ ಹೇಳಿದೆ ಎಂದು ಯುಐಡಿಎಐ ಉಪ ನಿರ್ದೇಶಕ ಬಿ.ಎಂ. ಪಟ್ನಾಯಕ್‌ ಪೊಲೀಸರಿಗೆ ತಿಳಿಸಿದ್ದಾರೆ.

ವರದಿಗಾರರ ವಿರುದ್ಧ ದೂರು ದಾಖಲಿಸಿರುವುದನ್ನು ಭಾರತೀಯ ಸಂಪಾದಕರ ಕೂಟ ಮತ್ತು ವಿವಿಧ ರಾಜಕೀಯ ಪಕ್ಷಗಳು ಖಂಡಿಸಿವೆ.

ತಪ್ಪಿತಸ್ಥರನ್ನು ಪತ್ತೆ ಮಾಡಲು ಪೊಲೀಸರ ತನಿಖೆಗೆ ಸಹಕರಿಸುವಂತೆ ‘ದ ಟ್ರಿಬ್ಯೂನ್‌’ ಪತ್ರಿಕೆ ಮತ್ತು ಅದರ ಪತ್ರಕರ್ತರನ್ನು ಕೋರುವಂತೆ ಯುಐಡಿಎಐಗೆ ಸೂಚಿಸಿರುವುದಾಗಿ ರವಿಶಂಕರ ಪ್ರಸಾದ್‌ ಹೇಳಿದ್ದಾರೆ.
*
ಇದು ಸರ್ವಾಧಿಕಾರಿ ದೇಶವೇ: ಶತ್ರುಘ್ನ ಪ್ರಶ್ನೆ
‘ಆಧಾರ್‌ ವಿವರಗಳು ದುರ್ಬಳಕೆಯಾಗುತ್ತಿವೆ ಎಂದು ವರದಿ ಮಾಡಿರುವ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಲಾಗಿದೆ. ನಾವು ‘ಸರ್ವಾಧಿಕಾರಿ ರಾಷ್ಟ್ರ’ವಾಗಿ ಬದಲಾಗಿದ್ದೇವೆಯೇ’ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹ ಪ್ರಶ್ನಿಸಿದ್ದಾರೆ.

‘ಇದು ಯಾವ ನ್ಯಾಯ? ಇಲ್ಲಿ ದ್ವೇಷ ರಾಜಕಾರಣ ಮಾತ್ರ ಇದೆಯೇ? ಸಮಾಜ ಮತ್ತು ದೇಶದ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿರುವ ಜನರನ್ನೂ ಬಲಿಪಶು ಮಾಡಲಾಗುತ್ತಿದೆ’ ಎಂದು ಶತ್ರುಘ್ನ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕತ್ವದ ವಿರುದ್ಧ ವಿವಿಧ ವಿಚಾರಗಳಲ್ಲಿ ಶತ್ರುಘ್ನ ಅವರು ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT