ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್‌ ಸಿಟಿಯಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ವಿವಿಧ ಭಾಗಗಳ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಆಸ್ವಾದಿಸುವ ಅವಕಾಶ ನಗರದ ಕಲಾಸಕ್ತರಿಗೆ ಒದಗಿ ಬಂತು.

ಆಳ್ವಾಸ್‌ ನುಡಿಸಿರಿ ವಿರಾಸತ್‌ ಘಟಕ ನಗರದ ಅರಮನೆ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಆಳ್ವಾಸ್‌ ಸಾಂಸ್ಕೃತಿಕ ವೈಭವದಲ್ಲಿ  ಆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಲಿಕಾನ್‌ ಸಿಟಿಯ ಕಲಾ ರಸಿಕರು ಮಾರುಹೋದರು.

ಮೂರೂವರೆ ಗಂಟೆಗಳು ನಡೆದ ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಕೇರಳದ ಮೋಹಿನಿಯಾಟ್ಟಂ- ಗಣೇಶ ಸ್ತುತಿ, ಬಡಗುತಿಟ್ಟಿನ ಯಕ್ಷ ಪ್ರಯೋಗ– ಶ್ರೀರಾಮ ಪಟ್ಟಾಭಿಷೇಕ, ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಭರತನಾಟ್ಯ- ಭೋ ಶಂಭೋ ನರ್ತನ, ಮಲ್ಲಕಂಬ-ರೋಪ್ ಕಸರತ್ತು, ಮಣಿಪುರಿ ದೋಲ್‌ ಚಲಮ್‌, ಕಥಕ್‌ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ‌ಗುಜರಾತ್ ದಾಂಡಿಯಾ ಮತ್ತು ಗಾರ್ಭ, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನಗಳು ಪ್ರೇಕ್ಷಕರನ್ನು ರಂಜಿಸಿದವು.

ಪುರಿ ಜಗನ್ನಾಥನ ಆರಾಧನೆಯ ಒಡಿಸಿ ಗೋಟಿಪುವ ನೃತ್ಯ ಚಿತ್ತಾಕರ್ಷಕವಾಗಿತ್ತು. ಯೋಗಾಸನ ಕಸರತ್ತಿನಿಂದ ಮಿಳಿತಗೊಂಡಿದ್ದ ಈ ನೃತ್ಯವನ್ನು ಕಲಾವಿದರು ಪ್ರೇಕ್ಷಕರು ತಲೆದೂಗುವಂತೆ ಪ್ರಸ್ತುತಪಡಿಸಿದರು. ಮೈನವಿರೇಳಿಸುವಂತಿದ್ದ ಸ್ಟಿಕ್‌ ಡಾನ್ಸ್‌ಗೆ ಸಭಾಂಗಣದಲ್ಲಿ ಪ್ರೇಕ್ಷಕರಿಂದ ಕರತಾಡನ, ಶಿಳ್ಳೆ ಮೊಳಗಿತು. ಅಪರೂಪದ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಸಭಾಂಗಣದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಸಭಾಂಗಣದಲ್ಲಿ ಅರ್ಧದಷ್ಟು ಆಸನಗಳು ಖಾಲಿ ಇದ್ದವು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ‌ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ‘ಕಲೆ, ಸಂಸ್ಕೃತಿ, ಪರಂಪರೆಯನ್ನು ಆಳ್ವಾಸ್‌ ನುಡಿಸಿರಿ ಮೂಲಕ ಬೆಳೆಸುತ್ತಿದೆ. ಪಠ್ಯದ ಜತೆಗೆ ‍ಪ್ರತಿ ಮಗುವು ಒಂದಲ್ಲ ಒಂದು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ’ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ‘ಕಲೆ, ಕಲಾವಿದ, ಸಂಸ್ಕೃತಿ, ಪರಿಸರ ಹಾಗೂ ಸಾಮರಸ್ಯದ ಬದಕು ಪ್ರೀತಿಸದವರು ಎಂದಿಗೂ ದೇಶವನ್ನು ಪ್ರೀತಿಸಲಾರರು. ಇಂತಹವರೇ ನಮ್ಮ ದೇಶಕ್ಕೆ ಬಹುದೊಡ್ಡ ಅಪಾಯಕಾರಿ’ ಎಂದು ಹೇಳಿದರು.

ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ‘ಹೊಸ ವರ್ಷಾಚರಣೆಗೆ ಮೋಹಕ ತಾರೆಯೊಬ್ಬರು ಬರಬೇಕು ಎಂದು ದೊಡ್ಡ ಚರ್ಚೆ ನಡೆಯಿತು. ಆ ತಾರೆ ಬಾರದ ಕಾರಣಕ್ಕೆ ಕೆಲವು ನೊಂದ ಜೀವಗಳು ನಮ್ಮ ಪೊಲೀಸರಿಂದ ರಕ್ಷಣೆ ಕೊಡಲು ಆಗಲಿಲ್ಲವೆಂದೂ ದೂರಿದವು. ನಾವು ಈ ರೀತಿ ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕಾ’ ಎಂದು ಪ್ರಶ್ನಿಸಿದರು.

***
ಕಲೆ, ಸಂಸ್ಕೃತಿಯ ರಸಸ್ವಾದ ಸವಿಯಲಾಗದಂತಹ ರೋಗ ಮಹಾನಗರಗಳಲ್ಲಿ ಆವರಿಸಿಕೊಂಡಿದೆ. ಜನರು ದ್ವೀಪದಂತಾಗುತ್ತಿದ್ದಾರೆ. ನೆರೆಮನೆಯವರ ನಿಟ್ಟುಸಿರು ಕೇಳಿಸಿಕೊಳ್ಳದಷ್ಟು ಕಿವುಡರು, ಅಂಧರೂ ಆಗುತ್ತಿದ್ದಾರೆ ಎಂದು ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT