ಸ್ವಯಂ ಚಾಲಿತ ವಾಹನಕ್ಕೆ ಮೆದುಳು

7

ಸ್ವಯಂ ಚಾಲಿತ ವಾಹನಕ್ಕೆ ಮೆದುಳು

Published:
Updated:
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

ಬಹುತೇಕ ತಂತ್ರಜ್ಞಾನ ಪ್ರದರ್ಶನಗಳಲ್ಲಿ ವಾಸ್ತವದಿಂದ ಬಹುದೂರದ ಕಾಲ್ಪನಿಕ ಮಾದರಿಗಳನ್ನು ಸಿದ್ಧಪಡಿಸಿ ಗಮನಸೆಳೆಯುವ ಪ್ರಯತ್ನ ನಡೆಸಲಾಗುತ್ತದೆ. ಕೆಲವು ಸಂಸ್ಥೆಗಳು ಮಾದರಿಗಳಿಗಳಷ್ಟೇ ಹೊಸ ತಂತ್ರಜ್ಞಾನವನ್ನು ಸೀಮಿತಿಗೊಳಿಸುತ್ತವೆ.

ಸ್ವಯಂ ಚಾಲಿತ ವಾಹನಗಳ ಬಗೆಗೂ ಇಂಥದೇ ನಿಲುವು. ಆದರೆ, ‘ಎನ್‍ವಿಡಿಯಾ’ ಹೊರತಂದಿರುವ ‘ಎಕ್ಸವಿಯರ್ ಪ್ರೊಸೆಸರ್’ ಚಾಲಕರಹಿತ ಕಾರುಗಳ ಬಹುಮುಖ್ಯ ಶಕ್ತಿಯಾಗಿ ತೋರುತ್ತಿದ್ದು, ಈ ಪ್ರೊಸೆಸರ್ ಬಳಕೆಯಿಂದ ಕೆಲವೇ ತಿಂಗಳಲ್ಲಿ ಸ್ವಯಂ ಚಾಲಿತ ವಾಹನಗಳು ಸಾರ್ವಜನಿಕ ಬಳಕೆಗೆ ಸಿಗುವ ಸಾಧ್ಯತೆ ದ್ವಿಗುಣಗೊಂಡಿದೆ.

ಈ ಪ್ರೊಸೆಸರ್ ಕಾರಿನ ಮೆದುಳಿನಂತೆ ಕಾರ್ಯನಿರ್ವಹಿಸುತ್ತದೆ. 900 ಕೋಟಿ ಟ್ರಾನ್ಸಿಸ್ಟರ್‌ಗಳು, 8 ಕೋರ್, 512-ಕೋರ್ ಗ್ರಾಫಿಕಲ್ ಪ್ರೊಸೆಸಿಂಗ್ ಯುನಿಟ್(ಜಿಪಿಯು), 8ಕೆ ಎಚ್‍ಡಿಆರ್ ವಿಡಿಯೊ ಪ್ರೊಸೆಸ್ ಮಾಡುವ ಸಾಮರ್ಥ್ಯ ಹಾಗೂ ಅರ್ಥೈಸಿಕೊಳ್ಳುವ ವ್ಯವಸ್ಥೆಯು ರಡಾರ್, ಲಿಡಾರ್‌, ಕ್ಯಾಮೆರಾ ಮತ್ತು ಅಲ್ಟ್ರಾಸಾನಿಕ್ ಸೆನ್ಸರ್‌ಗಳಿಂದ ಮಾಹಿತಿ ಗ್ರಹಿಸಿ ವಾಹನವನ್ನು ಸ್ವಯಂ ಚಾಲಿತಗೊಳಿಸುತ್ತದೆ. ಸ್ಟೀರಿಂಗ್ ವೀಲ್ ಕೂಡ ಅಗತ್ಯವಿಲ್ಲದ ಉನ್ನತ ಮಟ್ಟದ ಸ್ವಯಂ ಚಾಲಿತ ವಾಹನ ತಂತ್ರಜ್ಞಾನದ ಅನುಷ್ಠಾನ ಇದರಿಂದ ಸಾಧ್ಯ ಎನ್ನಲಾಗಿದೆ.

ಈಗಾಗಲೇ ಟೆಸ್ಲಾದ ‘ಎಸ್’ ಮಾದರಿ ಸ್ವಯಂ ಚಾಲಿತ ಕಾರುಗಳಲ್ಲಿ ಎನ್‍ವಿಡಿಯಾ ಚಿಪ್ ಬಳಕೆಯಾಗಿದೆ. ಪೋಕ್ಸ್‌ವ್ಯಾಗನ್ ಮತ್ತು ಹ್ಯುಂಡೈ ಸಂಸ್ಥೆಗಳೊಂದಿಗೆ ಎನ್‍ವಿಡಿಯಾ ಪಾಲುದಾರಿಕೆ ಹೊಂದಿದ್ದು, ಶೀಘ್ರದಲ್ಲಿ ವಿನೂತನ ಮಾದರಿ ಸ್ವಯಂ ಚಾಲಿತ ಕಾರು, ಬಸ್ ಮಾರುಕಟ್ಟೆ ಪ್ರವೇಶಿಸಲಿವೆ.

* ಲೋಹದ 3ಡಿ ಮುದ್ರಣಕ್ಕೆ ಹೊಸ ಪ್ರಿಂಟರ್‌

ವೈದ್ಯಕೀಯದಿಂದ ಕಲೆಯವರೆಗೂ ಬಹಳಷ್ಟು ಕ್ಷೇತ್ರಗಳಲ್ಲಿ 3ಡಿ ಪ್ರಿಂಟರ್‌ಗಳ ಉಪಯೋಗ ಕಂಡುಕೊಳ್ಳಲಾಗಿದೆ. ಆದರೆ, ಪ್ಲಾಸ್ಟಿಕ್‌ನ ಮುದ್ರಣಗಳನ್ನು ಪಡೆಯುವ ಪ್ರಿಂಟರ್‌ಗಳ ಸಂಖ್ಯೆ ಹೆಚ್ಚು. ಲೋಹದ ಮುದ್ರಣ ಪಡೆಯಬಹುದಾದ ಪ್ರಿಂಟರ್‌ ಬೆಲೆ 10 ಲಕ್ಷ ಡಾಲರ್‌ಗೂ ಅಧಿಕ ಇರುವುದೇ ಇದಕ್ಕೆ ಕಾರಣ. ‘ಡೆಸ್ಕ್‌ಟಾಪ್‌ ಮೆಟಲ್‌’ ಸಂಸ್ಥೆ ಡಿಎಂ ಸ್ಟುಡಿಯೊ ಹಾಗೂ ಡಿಎಂ ಪ್ರೊಡಕ್ಷನ್‌ ಸಿಸ್ಟಮ್‌ ಎಂಬ ಎರಡು ಮಾದರಿಯ ಪ್ರಿಂಟರ್‌ ಬಿಡುಗಡೆ ಮಾಡಿದ್ದು, ಅಲ್ಯುಮಿನಿಯಂ, ತಾಮ್ರ, ಟೈಟಾನಿಯಂ, ಸ್ಟೀಲ್‌ನಂತಹ ಲೋಹಗಳಿಂದ 3ಡಿ ಮುದ್ರಣ ಪಡೆಯಬಹುದು.

ಇಂಜಿನಿಯರಿಂಗ್ ಮತ್ತು ವಿನ್ಯಾಸದ ಕಾರ್ಯ ನಡೆಸುವ ತಂಡಗಳು ಅತಿ ಸಂಕೀರ್ಣ ವಿನ್ಯಾಸದ ಸಣ್ಣ ಭಾಗಗಳನ್ನು ಲೋಹದಲ್ಲಿ ಕಡಿಮೆ ಸಮಯದಲ್ಲಿ ಮುದ್ರಿಸಿಕೊಳ್ಳಲು ಡಿಎಂ ಸ್ಟುಡಿಯೊ ಸಹಕಾರಿಯಾಗಿದೆ. ಪ್ರಾರಂಭಿಕ ಬೆಲೆ:₹31.73 ಲಕ್ಷ(49,900 ಡಾಲರ್‌)

ಬೃಹತ್‌ ಕೈಗಾರಿಕೆಗಳಲ್ಲಿ ಬಳಕೆಗೆ ಡಿಎಂ ಪ್ರೊಡಕ್ಷನ್‌ ಸಿಸ್ಟಮ್‌ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪ್ರತಿ ಗಂಟೆಗೆ 8,200 ಘನ ಸೆಂ.ಮೀ.ನಷ್ಟು ಲೋಹದ ವಸ್ತುಗಳನ್ನು ಮುದ್ರಿಸಿಕೊಳ್ಳಬಹುದು. ಬೆಲೆ: ₹2.67 ಕೋಟಿ(4.20 ಲಕ್ಷ ಡಾಲರ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry