ಸೂರು ಕಾಣದ ಮೂರು ತಲೆಮಾರು!

7
ಕೀಲಾರ: 80 ವರ್ಷಗಳಿಂದ ಸಿಗದ ನೆಲೆ, ಬೆಂಕಿ ಬಲೆಯಲ್ಲಿ ಬಡ ಕಾರ್ಮಿಕರ ಬದುಕು

ಸೂರು ಕಾಣದ ಮೂರು ತಲೆಮಾರು!

Published:
Updated:
ಸೂರು ಕಾಣದ ಮೂರು ತಲೆಮಾರು!

ಮಂಡ್ಯ: ಎಂಟು ದಶಕಗಳ ಹಿಂದೆ ತಮಿಳುನಾಡಿನಿಂದ ಬಂದು ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನೆಲೆಸಿದ ಕೃಷಿ ಕೂಲಿ ಕಾರ್ಮಿಕರು ಇಂದಿಗೂ ಬೆಂಕಿಯಲ್ಲಿ ಅರಳುತ್ತಿದ್ದಾರೆ. ನಾಲ್ಕೈದು ಬಾರಿ ಗುಡಿಸಲುಗಳಿಗೆ ಬೆಂಕಿಬಿದ್ದು ಕಾರ್ಮಿಕರ ಬದುಕು ಬೀದಿಗೆ ಬಿದ್ದಿದ್ದರೂ ಸ್ವಂತ ಸೂರಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ.

ಕಳೆದ ವಾರ ಆಕಸ್ಮಿಕ ಬೆಂಕಿಗೆ ತಮಿಳು ಕಾಲೊನಿಯ 11 ಗುಡಿಸಲು ಭಸ್ಮವಾದವು. ನಿವಾಸಿಗಳೆಲ್ಲರೂ ಕೆಲಸಕ್ಕೆ ತೆರಳಿದ್ದ ಕಾರಣ ಪ್ರಾಣಕ್ಕೆ ಯಾವುದೇ ಅಪಾಯವಾಗಲಿಲ್ಲ. ಜಾನುವಾರು, ಧವಸ ಧಾನ್ಯವೆಲ್ಲ ಬೂದಿಯಾಯಿತು. ಕೆಲ ಮುಖಂಡರು ಭೇಟಿ ನೀಡಿ ಹೋದರೆ ಹೊರತು ಶಾಶ್ವತ ಪರಿಹಾರ ಕೊಡಿಸಲಿಲ್ಲ.

ನಾಲ್ಕು ದಶಕಗಳಿಂದ ಮೂರು ತಲೆಮಾರುಗಳ ಜನರು ತಮಿಳು ಕಾಲೊನಿಯಲ್ಲಿ (ಅರೆಕಲ್ಲು ಶೆಡ್ಡು) ಜೀವನ ನಡೆಸುತ್ತಿದ್ದಾರೆ. ಅವರೆಲ್ಲರೂ ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದಿದ್ದಾರೆ. ಅವರ ಮಾತೃಭಾಷೆ ತಮಿಳಾದರೂ ತಮಿಳುನಾಡಿನ ಒಡನಾಟ ಅವರಿಗೆ ಇಲ್ಲ. ಧರ್ಮಲಿಂಗಂ ಎಂಬ 85 ವರ್ಷದ ವೃದ್ಧರೊಬ್ಬರನ್ನು ಬಿಟ್ಟರೆ ತಮಿಳುನಾಡಿನಿಂದ ವಲಸೆ ಬಂದ ನೆನಪು ಯಾರಲ್ಲೂ ಇಲ್ಲ. ತಂದೆ, ತಾತಂದಿರು ಕೆಲಸ ಅರಸಿ ಬಂದಿದ್ದರು. ಮಕ್ಕಳು ಇಲ್ಲಿಯೇ ಹುಟ್ಟಿ, ಬೆಳೆದವರು. ಅವರಿಗೆ ಆಧಾರ್‌ ಕಾರ್ಡ್‌, ಮತದಾನ ಚೀಟಿ, ಪಡಿತರ ಚೀಟಿ ಎಲ್ಲವೂ ಇವೆ. ಆದರೆ ಮನೆ ಮಾತ್ರ ಗಗನಕುಸುಮವಾಗಿದೆ.

‘ಕೀಲಾರಕ್ಕೆ ಬಂದಾಗ ನಾನು 5 ವರ್ಷದ ಹುಡುಗ. ಕೆಲಸಕ್ಕೆಂದು ನಮ್ಮ ತಂದೆ ಇಲ್ಲಿಗೆ ಕುಟುಂಬವನ್ನು ಕರೆದುಕೊಂಡು ಬಂದರು. ಕಾವೇರಿ ನೀರು ಕುಡಿದೇ ಬೆಳೆದಿದ್ದೇವೆ. ಒಂದು ಸೂರಿಗಾಗಿ ಅಲೆಯದ ಕಚೇರಿಗಳೇ ಇಲ್ಲ. ಆದರೂ ನಮ್ಮ ಕನಸು ನನಸಾಗಿಲ್ಲ. ಚುನಾವಣೆ ಇರುವುದರಿಂದ ಎಲ್ಲರೂ ಬಂದು ಸಹಾಯ ಮಾಡುತ್ತಿದ್ದಾರೆ. ಚುನಾವಣೆ ಮಗಿದ ಕೂಡಲೇ ನಮ್ಮ ಕಡೆ ಯಾರೂ ತಿರುಗಿ ನೋಡುವುದಿಲ್ಲ. ಕೀಲಾರ ಗ್ರಾಮಸ್ಥರೇ ನಮ್ಮ ಪಾಲಿನ ದೇವರು’ ಎಂದು ಧರ್ಮಲಿಂಗಂ ತಿಳಿಸಿದರು.

30 ಕುಟುಂಬಗಳು: ಕೀಲಾರ ಗ್ರಾಮದಲ್ಲಿ 30 ತಮಿಳು ಕುಟುಂಬಗಳು ಇವೆ. ಇವರಲ್ಲಿ 18 ಕುಟುಂಬಗಳು ವಿವಿಧ ವಸತಿ ಯೋಜನೆ ಅಡಿ ಸೂರು ಪಡೆದಿದ್ದಾರೆ. ಉಳಿದ 12 ಕುಟುಂಬಳಿಗೆ ಸ್ವಂತ ಮನೆ ಕೊಡಿಸಲು ಸಾಧ್ಯವಾಗಿಲ್ಲ.

ತಮಿಳುನಾಡಿನಿಂದ ವಲಸೆ ಬಂದ 7 ಸಾವಿರ ಜನರು ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದಾರೆ. ತಾಲ್ಲೂಕಿನ ಬೂದನೂರು, ಮದ್ದೂರು ತಾಲ್ಲೂಕಿನ ಮಾದರಹಳ್ಳಿ, ನಗರದ ತಮಿಳು ಕಾಲೊನಿಯಲ್ಲಿ ಅವರು ವಾಸ ಮಾಡುತ್ತಿದ್ದಾರೆ.

‘ಇವರನ್ನು ತಮಿಳರು ಎಂದು ಗುರುತಿಸುವುದೇ ತಪ್ಪು. ಇಲ್ಲೇ ಹುಟ್ಟಿ, ಇಲ್ಲೇ ಹಲವು ಸೌಲಭ್ಯ ಪಡೆಯುತ್ತಿರುವ ಕಾರಣ ಅವರನ್ನೂ ಮೂಲ ನಿವಾಸಿಗಳಂತೆಯೇ ಪರಿಗಣಿಸಿ ಸರ್ಕಾರ ಮನೆಭಾಗ್ಯ ಕರುಣಿಸಬೇಕು’ ಎಂದು ಕೀಲಾರ ಗ್ರಾಮದ ಶಿವರಾಮು ಒತ್ತಾಯಿಸುತ್ತಾರೆ.

‘ಸರ್ಕಾರಿ ಜಾಗ ಗುರುತಿಸಿ ಹಕ್ಕುಪತ್ರ ವಿತರಣೆ ಮಾಡುವಂತೆ ತಹಶೀಲ್ದಾರ್‌ಗೆ ಮನವಿ ನೀಡಿದ್ದೇವೆ. ಅವರು ಸರಿಯಾಗಿ ಸ್ಪಂದಿಸದಿದ್ದರೆ ಗ್ರಾಮ ಪಂಚಾಯಿತಿ ವತಿಯಿಂದ ಈಗಿದ್ದ ಸ್ಥಳದಲ್ಲೇ ಹೊಸದಾಗಿ ಗುಡಿಸಲು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಗ್ರಾ.ಪಂ ಸದಸ್ಯ ರಮೇಶ್‌ ಹೇಳಿದರು.

***

ಜ.20ರಂದು ಪ್ರತಿಭಟನೆ

ಕೀಲಾರ ಗ್ರಾಮದ ತಮಿಳು ಕಾಲೊನಿ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸುವಂತೆ ಒತ್ತಾಯಿಸಿ ‘ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ’ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಜ.20ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ವಸತಿ ಸಚಿವರೂ ಆಗಿದ್ದಾರೆ. ಆದರೆ ಈ ನಿವಾಸಿಗಳಿಗೆ ಶಾಶ್ವತ ಸೂರಿನ ಭಾಗ್ಯ ಸಿಕ್ಕಿಲ್ಲ. ಎಲ್ಲಾ ಭಾಗ್ಯಗಳನ್ನು ಕರುಣಿಸಿರುವ ರಾಜ್ಯ ಸರ್ಕಾರ ಈ ಬಡ ಕೃಷಿ ಕಾರ್ಮಿಕರಿಗೆ ಸೂರಿನ ಭಾಗ್ಯವನ್ನೂ ಕರುಣಿಸಬೇಕು’ ಎಂದು ಸಮಿತಿ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry