ಕ್ರೀಡಾಕೂಟಕ್ಕೆ ಸ್ಪರ್ಧಿಗಳ ಕೊರತೆ

7

ಕ್ರೀಡಾಕೂಟಕ್ಕೆ ಸ್ಪರ್ಧಿಗಳ ಕೊರತೆ

Published:
Updated:

ಹಿರೀಸಾವೆ: ಹೋಬಳಿಯ ಬೂಕನ ಬೆಟ್ಟದ ರಂಗನಾಥಸ್ವಾಮಿಯ 87ನೇ ರಾಸುಗಳ ಜಾತ್ರೆ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ನಾಲ್ಕು ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳಲ್ಲಿ ಕೆಲವೇ ಮಂದಿ ಭಾಗವಹಿಸಿದ್ದರು. ಬೆರಳೆಣಿಕೆಯಷ್ಟು ಮಂದಿ ಕ್ರೀಡೆಗಳನ್ನು ವೀಕ್ಷಿಸಿದರು.

ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ 10 ಮಹಿಳೆಯರು ಭಾಗವಹಿಸಿದ್ದರು. ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ 6 ಮಂದಿ, ನಿಧಾನಗತಿಯ ಸೈಕಲ್ ರೇಸ್‌ನ ವಿಭಾಗದಲ್ಲಿ 5 ಮಂದಿ ಭಾಗವಹಿಸಿದ್ದರೆ, ಹಗ್ಗ–ಜಗ್ಗಾಟ ಸ್ಪರ್ಧೆಯಲ್ಲಿ 4 ತಂಡಗಳು ಸ್ಪರ್ಧಿಸಿದ್ದವು.

ಹಲವು ವರ್ಷಗಳ ಹಿಂದೆ ನಡೆಸುತ್ತಿದ್ದ ತೆಂಗಿನ ಕಾಯಿ ಸುಲಿಯುವುದು, ಕಲ್ಲು ಗುಂಡು ಎತ್ತುವುದು, 50 ಕೆ.ಜಿ ತೂಕದ ಮೂಟೆ ಹೊತ್ತು 75 ಮೀಟರ್ ಓಡುವುದು, ಹೂವು ಕಟ್ಟುವುದು, ರಾಗಿ ಬೀಸುವ ಸ್ಪರ್ಧೆಗಳನ್ನು ಕಳೆದ 2 ವರ್ಷಗಳಿಂದ ನಿಲ್ಲಿಸಲಾಗಿದೆ. ಜಾತ್ರೆಯಲ್ಲಿ ಹೆಚ್ಚು ರಾಸುಗಳು ಇರುವ ದಿನಗಳಲ್ಲಿ ಅಥವಾ ರಥೋತ್ಸವದ ದಿನ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಉಪತಹಶೀಲ್ದಾರ್ ಮೋಹನ ಕುಮಾರ್, ಪಾರುಪತ್ತೆದಾರ ರಂಗರಾಜು, ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಅಣ್ಣೇಗೌಡರ ನೇತೃತ್ವದಲ್ಲಿ, ತಾಲ್ಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಹತ್ತು ದಿನಗಳ ಹಿಂದೆ ರಾಸುಗಳ ಜಾತ್ರೆಯು ಪ್ರಾರಂಭವಾಗಿತ್ತು. ರಾಸುಗಳು ಜಾತ್ರಾ ಆವರಣದಿಂದ ಹೊರಹೋಗಿರುವುದರಿಂದ ಕೀಡಾ ಕೂಟದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಆಯೋಜಕರ ಅಭಿಪ್ರಾಯವಾಗಿತ್ತು. ಕ್ರವಾರ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಮಧ್ಯಾಹ್ನ ಮೇಷ ಲಗ್ನದಲ್ಲಿ ನಡೆಯಲಿದೆ ಎಂದು ಉಪ ತಹಶೀಲ್ದಾರ್ ಮೋಹನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಂಗೋಲಿ ಸ್ಪರ್ಧೆಯಲ್ಲಿ, ನುಗ್ಗೇಹಳ್ಳಿಯ ನೇತ್ರಾವತಿ ಪ್ರಥಮ, ಕೆ. ಹೊಸೂರಿನ ಕಾವ್ಯ ದ್ವೀತಿಯ ಮತ್ತು ನುಗ್ಗೇಹಳ್ಳಿಯ ರೇಣುಕಾ ತೃತೀಯ ಬಹುಮಾನ ಗಳಿಸಿದರು. ನಿಧಾನ ಗತಿಯ ಸೈಕಲ್ ರೇಸ್‌ನಲ್ಲಿ ಬೂಕದ ವಿವೇಕ್‌, ಪ್ರಥಮ, ಹಿರೀಸಾವೆ ಯದು ದ್ವೀತಿಯ, ಗುರುಕೀರಣ್ ತೃತೀಯರಾದರು. ಮ್ಯಾರಥಾನ್ ಓಟದಲ್ಲಿ ಹಿರೀಸಾವೆಯ ಯದು ಪ್ರಥಮ, ರಂಸ್ವಾಮಿ ದ್ವಿತೀಯ, ಗುರುಕೀರಣ್ ತೃತೀಯ ಬಹುಮಾನ ಗಳಿಸಿದರು. ಹಗ್ಗ–ಜಗ್ಗಾಟದ ಸ್ಪರ್ಧೆಯಲ್ಲಿ ಬೂಕ ಗ್ರಾಮದ ತಂಡ ಪ್ರಥಮ ಮತ್ತು ಬೂಕನಬೆಟ್ಟದ ತಂಡ ದ್ವೀತಿಯ ಬಹುಮಾನ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry