ಶಿಕ್ಷಣದ ಗುಣಮಟ್ಟ ವೃದ್ಧಿಗೆ ಒತ್ತುಕೊಡಲು ಸಲಹೆ

6

ಶಿಕ್ಷಣದ ಗುಣಮಟ್ಟ ವೃದ್ಧಿಗೆ ಒತ್ತುಕೊಡಲು ಸಲಹೆ

Published:
Updated:
ಶಿಕ್ಷಣದ ಗುಣಮಟ್ಟ ವೃದ್ಧಿಗೆ ಒತ್ತುಕೊಡಲು ಸಲಹೆ

ಬೆಂಗಳೂರು: ಶಿಕ್ಷಣ ಕ್ಷೇತ್ರದ ನ್ಯೂನತೆಗಳನ್ನು ನಿವಾರಿಸಿ, ಶಿಕ್ಷಣದ ಗುಣಮಟ್ಟ ವೃದ್ಧಿಗೆ ಒತ್ತುಕೊಡುವಂತೆ ಬಿಜೆಪಿ ಪ್ರಣಾಳಿಕೆಗಾಗಿ ಶಿಕ್ಷಣ ತಜ್ಞರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಸಲಹೆಗಳು ಕೇಳಿಬಂದವು.

ಬಿಜೆಪಿಯ ‘ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ’ ವೇದಿಕೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

‘ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆಯಿದೆ. ಬೋಧಕ ಸಿಬ್ಬಂದಿ ನೇಮಕಾತಿ ಸರಿಯಾಗಿ ಆಗುತ್ತಿಲ್ಲ. ಪ್ರಯೋಗಾಲಯಗಳ ಕೊರತೆ ಇದೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು’ ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್‌.ಸಿ. ಶರ್ಮಾ ಹೇಳಿದರು.

‘ಮೂರು ವರ್ಷಕ್ಕೊಮ್ಮೆ ಬೋಧಕ ಸಿಬ್ಬಂದಿಯ ಮೌಲ್ಯಮಾಪನ ನಡೆಯಬೇಕು. ಗುಣಮಟ್ಟದ ಸಂಶೋಧನೆ ಕಡೆಗೆ ಪ್ರಾಧ್ಯಾಪಕರು ಗಮನ ನೀಡಬೇಕು. ಶಿಕ್ಷಣ ಸಂಸ್ಥೆಗಳಿಂದ ಜಾತಿ ವ್ಯವಸ್ಥೆ ದೂರವಾಗಬೇಕು. ಕುಲಪತಿಯೊಬ್ಬರು ನಿವೃತ್ತರಾದ ಬಳಿಕ ಆ ಹುದ್ದೆಗಾಗಿ ಮತ್ತೊಬ್ಬರನ್ನು ಹುಡುಕುವ ಬದಲು ಆ ಹುದ್ದೆ ಖಾಲಿಯಾದ ಕೂಡಲೆ ಮತ್ತೊಬ್ಬ ಯೋಗ್ಯರನ್ನು ಆ ಸ್ಥಾನಕ್ಕೆ ನೇಮಿಸುವ ಕೆಲಸವಾಗಬೇಕು’ ಎಂದು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ತಿಳಿಸಿದರು.

‘ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಹುದ್ದೆ ಖಾಲಿ ಇದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳು ಕೊನೆಗೊಂಡು ಆದಷ್ಟು ಬೇಗ ಕುಲಪತಿಗಳ ನೇಮಕವಾಗಬೇಕು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್‌.ಆರ್‌. ಶೆಟ್ಟಿ ಹೇಳಿದರು.

‘ರಾಜ್ಯದಲ್ಲಿ ಉನ್ನತ ಶಿಕ್ಷಣದ ಪರಿಸ್ಥಿತಿ ಗಂಭೀರವಾಗಿದೆ. ವಿಶ್ವವಿದ್ಯಾಲಯಗಳ ಪ್ರಸ್ತುತತೆ ಏನು ಎಂಬ ಬಗ್ಗೆ ಯೋಚಿಸುವಂತಾಗಿದೆ. ರಾಜ್ಯದ ಹಲವು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳು, ಬೋಧಕ ಸಿಬ್ಬಂದಿಯ ನೇಮಕವಾಗಿಲ್ಲ. ಹಲವು ವಿಶ್ವವಿದ್ಯಾಲಯಗಳು, ಕಾಲೇಜುಗಳು ಅತಿಥಿ ಉಪನ್ಯಾಸಕರನ್ನು ಅವಲಂಭಿಸಿವೆ. ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ್ ಶಹಾಪುರ ತಿಳಿಸಿದರು.

‘ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಪೂರಕವಾದ ವಾತಾವರಣ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ತಾವು ಆಯ್ದುಕೊಂಡಿರುವ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಸಾಧಿಸಬೇಕು’ ಎಂದು ಆರ್‌.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಕೆ. ಪಾಂಡುರಂಗ ಶೆಟ್ಟಿ ಹೇಳಿದರು.

‘ಶಿಕ್ಷಣ ತಜ್ಞರು ನೀಡಿರುವ ಸಲಹೆಗಳ ಪೈಕಿ ಪ್ರಮುಖವಾದವುಗಳನ್ನು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು’ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry