ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಅಭಿವೃದ್ಧಿ ಗುರಿ: ಸೇಠ್

Last Updated 27 ಜನವರಿ 2018, 7:04 IST
ಅಕ್ಷರ ಗಾತ್ರ

ಸಿರವಾರ : ‘ನಾವು ಜನರ ಏಳಿಗೆಗಾಗಿ ದುಡಿಯುತ್ತಿದ್ದು, ಎಲ್ಲಾ ವರ್ಗದವರ ಅಭಿವೃದ್ದಿಯೇ ನಮ್ಮ ಗುರಿ' ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನೂತನ ತಾಲ್ಲೂಕು ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರವು ಗ್ರಾಮಗಳ ಅಭಿವೃದ್ಧಿಯ ದೂರದೃಷ್ಠಿಯಿಂದ 49 ನೂತನ ತಾಲ್ಲೂಕು ಕೇಂದ್ರಗಳನ್ನು ಪ್ರಾರಂಭ ಮಾಡಿದೆ. ಪ್ರಥಮ ತಾಲ್ಲೂಕು ಕೇಂದ್ರವಾಗಿ ಸಿರವಾರ ಅಸ್ತಿತ್ವಕ್ಕೆ ಬಂದಿರುವುದು ಗ್ರಾಮಸ್ಥರ ಹೆಗ್ಗಳಿಕೆ’ ಎಂದರು.

ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಸಹಿಸದ ವಿರೋಧಿ ಗಳಿಗೆ ಜಿಲ್ಲೆಯಲ್ಲೇ ತಾಲ್ಲೂಕನ್ನು ಅಭಿವೃದ್ಧಿಪಡಿಸಿ ತಕ್ಕ ಪಾಠ ಕಲಿಸಲಾ ಗುವುದು. ತಾಲ್ಲೂಕು ರಚನೆಯಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಅಗತ್ಯಕ್ಕೆ ತಕ್ಕಂತೆ ಕಂದಾಯ ಇಲಾಖೆಯ 57 ಗ್ರಾಮಗಳನ್ನು ಸೇರಿಸಿ ಹೋಬಳಿಗಳಿಗೆ ತೊಂದರೆಯಾಗದಂತೆ ರಚನೆ ಮಾಡಲಾಗಿದೆ. ಈಗಾಗಲೇ ಪದವಿ ಕಾಲೇಜು ಮಂಜೂರು ಮಾಡಲಾಗಿದ್ದು ಇನ್ನುಳಿದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಎನ್‌.ಎಸ್. ಭೋಸರಾಜ ಮಾತನಾಡಿ, ‘ತಾಲ್ಲೂಕು ಪಟ್ಟಿಯಲ್ಲಿ ಸಿರವಾರ ಇಲ್ಲದಿದ್ದರೂ ಶಾಸಕರ ಶ್ರಮದಿಂದ ತಾಲ್ಲೂಕು ಕೇಂದ್ರವಾಗಲು ಸಾಧ್ಯವಾಯಿತು’ ಎಂದರು.

ಹೋರಾಟಗಾರರ ಬಂಧನ

ಸಿರವಾರ: ಸರ್ಕಾರಿ ಕಚೇರಿಗಳಿಗೆ ಮೂಲ ಸೌಕರ್ಯ ಕಲ್ಪಿಸದೆ ನೂತನ ತಾಲ್ಲೂಕು ಕೇಂದ್ರವನ್ನು ತರಾತುರಿಯಲ್ಲಿ ಉದ್ಘಾಟನೆ ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ ತಾಲ್ಲೂಕು ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದರು. ನಂತರ ಬಿಡುಗಡೆಗೊಳಿಸಿದರು.
ಸಚಿವ ತನ್ವೀರ್‌ಸೇಠ ಅವರನ್ನು ಘೇರಾವ್‌ ಹಾಕಿದ ಪ್ರತಿಭಟನಾಕಾರರು ಕಾರ್ಯಕ್ರಮದ ಉದ್ಘಾಟನೆಗೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ‘ತಾಲ್ಲೂಕು ವ್ಯಾಪ್ತಿಗೆ ಕೆಲ ಗ್ರಾಮಗಳನ್ನು ಕೈ ಬಿಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ವಿವಿಧ ಸರ್ಕಾರಿ ಕಚೇರಿಗಳನ್ನುಆರಂಭಿಸಲು ಆಯ್ಕೆ ಮಾಡಿದ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳಲ್ಲಿ ಅಧಿಕಾರಿಗಳು ಮತ್ತು ಮೂಲಸೌಕರ್ಯ ವ್ಯವಸ್ಥೆ ಸೇರಿದಂತೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಹಲವು ಕಟ್ಟಡಗಳಿಗೆ ಗುರುವಾರ ರಾತ್ರಿ ದಿಢೀರ್‌ ಸುಣ್ಣ ಬಳಿಯಲಾಗಿದೆ. ಉದ್ಘಾಟನೆ ಕುರಿತು ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳು ಮತ್ತು ತಾಲ್ಲೂಕು ಹೋರಾಟ ಸಮಿತಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಜೆ.ದೇವರಾಜಗೌಡ, ಉಪಾಧ್ಯಕ್ಷ ಸೂಗಪ್ಪ ಹೇರೂರು, ಬಿಜೆಪಿ ರಾಯಚೂರು ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವರಶರಣಗೌಡ ಲಕ್ಕಂದಿನ್ನಿ, ಚನ್ನಬಸವ ಗಡ್ಲ,ಜೆ.ಬಸವರಾಜಗೌಡ, ಗುರುಗೌಡ, ಎಂ.ಪ್ರಕಾಶ, ಬಸವರಾಜ ಗಡ್ಲ, ಕರವೇ ಸದಸ್ಯರಾದ ರಾಘು.ಕೆ.ಕುಮಾರ ಭಜಂತ್ರಿ,ಶಂಕ್ರಗೌಡ ಹರವಿ, ವೀರನಗೌಡ ಇದ್ದರು.

* * 

ಸಿರವಾರ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಗ್ರಾಮಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ತಾಲ್ಲೂಕುಗಳನ್ನು ರಚಿಸಲಾಗಿದೆ.
ತನ್ವೀರ್ ಸೇಠ್  ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT