ಆಧಾರ್‌ ಕಾರ್ಡ್‌ನಿಂದ ₹ 57,000 ಕೋಟಿ ಉಳಿತಾಯ: ರಾಮನಾಥ ಕೋವಿಂದ್

7

ಆಧಾರ್‌ ಕಾರ್ಡ್‌ನಿಂದ ₹ 57,000 ಕೋಟಿ ಉಳಿತಾಯ: ರಾಮನಾಥ ಕೋವಿಂದ್

Published:
Updated:
ಆಧಾರ್‌ ಕಾರ್ಡ್‌ನಿಂದ ₹ 57,000 ಕೋಟಿ ಉಳಿತಾಯ: ರಾಮನಾಥ ಕೋವಿಂದ್

ನವದೆಹಲಿ: ಆಧಾರ್‌ ಕಾರ್ಡ್ ಸಹಾಯದಿಂದಾಗಿ ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಗಳ ಹಂಗಿಲ್ಲದೆ ನೇರವಾಗಿ ಫಲಾನುಭವಿಗಳನ್ನು ತಲುಪುವಂತಾಗಿದೆ. ಇದರಿಂದ ಬೊಕ್ಕಸಕ್ಕೆ ₹ 57,000 ಕೋಟಿ ಉಳಿತಾಯವಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.

ಬಜೆಟ್‌ ಅಧಿವೇಶನದ ಆರಂಭಕ್ಕೂ ಮುನ್ನ ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಭಾಷಣ ಆರಂಭಿಸಿದ ಅವರು, ಈ ಸರ್ಕಾರ ಸುಮಾರು 400 ಯೋಜನೆಗಳಿಗೆ ಡಿಜಿಟಲ್ ಪಾವತಿ ವಿಧಾನ ಬಳಸುತ್ತಿದೆ ಎಂದರು.

ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಸ್ಥಿರವಾಗಿರಲಾರದು ಎಂಬುದಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು ಎಂದು ಕೋವಿಂದ್ ಹೇಳಿದರು.

ಸ್ವಚ್ಛಭಾರತದ ಆಶಯ: 2018 ಆರಂಭವಾಗಿದೆ. ಈ ಹೊಸ ವರ್ಷ ನವಭಾರತದ ಕನಸುಗಳನ್ನು ಸಾಕಾರ ಮಾಡಲು ಇರುವುದಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಅಲ್ಲದೆ, 2019ರಲ್ಲಿ ನಾವು ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷವನ್ನು ಆಚರಿಸಲಿದ್ದೇವೆ. ಆ ವೇಳೆಗೆ ದೇಶವನ್ನು ಸ್ವಚ್ಛಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದರು.

ಗರ್ಭಿಣಿಯರಿಗೆ ವೇತನ ಸಹಿತ ರಜೆಯ ಅವಧಿಯನ್ನು 26 ವಾರಗಳಿಗೆ ವಿಸ್ತರಿಸುವ ಮಸೂದೆಗೆ ಸಂಸತ್ತು ಅನುಮೋದನೆ ನೀಡಿರುವುದನ್ನೂ ರಾಷ್ಟ್ರಪತಿಗಳು ಉಲ್ಲೇಖಿಸಿದರು.

ರೈತರ ಆದಾಯ ದ್ವಿಗುಣ: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಕೋವಿಂದ್ ಹೇಳಿದರು.

ಭಾಷಣದ ಪ್ರಮುಖ ಅಂಶಗಳು

* ಹಳ್ಳಿಗಳಿಗೆ ಬ್ರಾಡ್‌ಬ್ರ್ಯಾಂಡ್‌ ಸಂಪರ್ಕ ಕಲ್ಪಿಸುವ ಕೆಲಸ ಆರಂಭವಾಗಿದೆ. 2.5 ಲಕ್ಷ ಪಂಚಾಯಿತಿಗಳಿಗೆ ಈಗಾಗಲೇ ಬ್ರಾಡ್‌ಬ್ರ್ಯಾಂಡ್‌ ಸಂಪರ್ಕ ಒದಗಿಸಲಾಗಿದೆ.

* ಕಡಿಮೆ ದರದಲ್ಲಿ ಡಿಜಿಟಲ್ ಸೇವೆ ಒದಗಿಸುವುದಕ್ಕಾಗಿ ದೇಶದಾದ್ಯಂತ 2.70 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ.

* ತ್ರಿವಳಿ ತಲಾಖ್ ಮಸೂದೆಗೆ ಶೀಘ್ರ ಅನುಮೋದನೆ ದೊರೆಯಲಿದೆ ಎಂಬ ನಿರೀಕ್ಷೆ ಇದ್ದು, ಇದರಿಂದ ಮುಸ್ಲಿಂ ಮಹಿಳೆಯರು ಗೌರವದಿಂದ ಮತ್ತು ಭೀತಿಯಿಲ್ಲದೆ ಬಾಳುವಂತಾಗಲಿದೆ

* ದೇಶದ ಪ್ರತಿಯೊಬ್ಬರನ್ನೂ ಅಭಿವೃದ್ಧಿ ಅಡಿ ತರಲು ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 2014ರಲ್ಲಿ ಶೇ 56ರಷ್ಟು ಹಳ್ಳಿಗಳಿಗೆ ರಸ್ತೆ ಸಂಪರ್ಕ ಇತ್ತು. ಈಗ ಶೇ 82 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಈ ಪೈಕಿ ದುರ್ಗಮ ಪ್ರದೇಶಗಳೇ ಹೆಚ್ಚಿವೆ.

* ನಮ್ಮ ದೇಶ ಯುವ ರಾಷ್ಟ್ರ. ಯುವಕರಿಗೆ ನೆರವಾಗಲು ಮತ್ತು ಅವರನ್ನು ಸ್ವ ಉದ್ಯೋಗಿಗಳನ್ನಾಗಿಸಲು ಸರ್ಕಾರ ಸ್ಟಾರ್ಟ್‌ ಅಪ್ ಇಂಡಿಯಾ, ಕೌಶಲ ಭಾರತ ಮತ್ತು ಪ್ರಧಾನಮಂತ್ರಿ ಮುದ್ರಾ ಯೋಜನೆಗಳನ್ನು ಆರಂಭಿಸಿದೆ.

* ಕಾರ್ಮಿಕರ ಕನಿಷ್ಠ ವೇತನವನ್ನು ಶೇ 40ಕ್ಕಿಂತಲೂ ಹೆಚ್ಚಳ ಮಾಡಲಾಗಿದೆ.

* ಸ್ವಾತಂತ್ರ್ಯಾನಂತರ ವಾಣಿಜ್ಯ ವಿಮಾನಗಳಿಗಾಗಿ 76 ವಿಮಾನ ನಿಲ್ದಾಣಗಳ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಉಡಾನ್ ಯೋಜನೆ ಅಡಿ ಕೇವಲ 15 ತಿಂಗಳುಗಳಲ್ಲಿ 56 ವಿಮಾನ ನಿಲ್ದಾಣಗಳು ಮತ್ತು 31 ಹೆಲಿಪ್ಯಾಡ್‌ಗಳ ಸಂಪರ್ಕ ಕಲ್ಪಿಸಲಾಗಿದೆ.

* ಹುತಾತ್ಮ ಯೋಧರ ಸೇವೆ ಸ್ಮರಿಸಿದ ರಾಷ್ಟ್ರಪತಿಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಭಯೋತ್ಪಾದನೆ ವಿರುದ್ಧ ಜತೆಯಾಗಿ ಹೋರಾಡುತ್ತಿವೆ ಎಂದರು.

* ಅಸಮಾನತೆ ನಿರ್ಮೂಲನೆಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry