ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್ 2018–19: ಗ್ರಾಮೀಣರತ್ತ ಲಕ್ಷ್ಯ, ಮಧ್ಯಮ ವರ್ಗ ಅಲಕ್ಷ್ಯ

Last Updated 2 ಜುಲೈ 2019, 16:35 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಕೊನೆಯ ಪೂರ್ಣಾವಧಿ ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶದ ಜನರು ಮತ್ತು ಕೃಷಿಕರತ್ತ ಗಮನ ಹರಿಸಿದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ತನ್ನ ಸಾಂಪ್ರದಾಯಿಕ ಬೆಂಬಲಿಗರಾದ ಮಧ್ಯಮ ವರ್ಗವನ್ನು ನಿರ್ಲಕ್ಷಿಸಿದೆ.

ವೇತನದಾರ ವರ್ಗಕ್ಕೆ ಯಾವುದೇ ಕೊಡುಗೆಗಳನ್ನು ಪ್ರಕಟಿಸಲಾಗಿಲ್ಲ. ಆದಾಯ ತೆರಿಗೆ ವಿನಾಯಿತಿ ಮಿತಿ ಈಗಿನ ₹2.5 ಲಕ್ಷದಿಂದ ಕನಿಷ್ಠ ₹3 ಲಕ್ಷಕ್ಕಾದರೂ ಏರಿಕೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ವೈದ್ಯಕೀಯ ಮತ್ತು ಸಾರಿಗೆ ಭತ್ಯೆಗೆ ಸಂಬಂಧಿಸಿ ಆದಾಯ ತೆರಿಗೆಯಲ್ಲಿ ₹40 ಸಾವಿರದ ವಿನಾಯಿತಿ ಪ್ರಕಟಿಸಲಾಗಿದೆ.

ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಂಡರು ಎಂಬಂತೆ ಆರೋಗ್ಯ ಮತ್ತು ಶಿಕ್ಷಣದ ಉಪತೆರಿಗೆಯನ್ನು ಶೇ 3ರಿಂದ ಶೇ 4ಕ್ಕೆ ಏರಿಸಲಾಗಿದೆ. ಇದು ಆದಾಯ ತೆರಿಗೆ ಮತ್ತು ಕಂಪನಿ ತೆರಿಗೆಗಳೆರಡಕ್ಕೂ ಅನ್ವಯ ಆಗಲಿದೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯಿಂದ ₹1 ಲಕ್ಷಕ್ಕಿಂತ ಹೆಚ್ಚಿನ ಗಳಿಕೆಗೆ ಶೇ 10ರಷ್ಟು ತೆರಿಗೆ ಹಾಕಲಾಗಿದೆ. 2004ರ ಬಳಿಕ ಬಂಡವಾಳ ಗಳಿಕೆಗೆ ತೆರಿಗೆ ಇರಲಿಲ್ಲ.

ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದಿರುವ ಸರ್ಕಾರ ಮುಂಗಾರು ಬೆಳೆ ಬೆಂಬಲ ಬೆಲೆಯನ್ನು ಅದರ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಿಸಿದೆ. ಕೃಷಿ ಕ್ಷೇತ್ರಕ್ಕೆ ಸಾಲ ನೀಡಲು ₹11 ಲಕ್ಷ ಕೋಟಿ ಮೀಸಲಿರಿಸಲಾಗಿದೆ. ಕಳೆದ ವರ್ಷ ಈ ಮೊತ್ತ ₹10 ಲಕ್ಷ ಕೋಟಿ ಇತ್ತು. ಕೃಷಿ ಉತ್ಪನ್ನ ತಯಾರಿಕಾ ಸಂಸ್ಥೆಗಳಿಗೆ ಶೇಕಡಾ ನೂರರಷ್ಟು ತೆರಿಗೆ ವಿನಾಯಿತಿಯನ್ನೂ ನೀಡಲಾಗಿದೆ.

ಹತ್ತು ಕೋಟಿ ಕುಟುಂಬಗಳ ಸುಮಾರು 50 ಕೋಟಿ ಜನರನ್ನು ಒಳಗೊಳ್ಳುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯನ್ನು ಜೇಟ್ಲಿ ಅವರು ಘೋಷಿಸಿದ್ದಾರೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳಿಗಾಗಿ ವರ್ಷಕ್ಕೆ ₹5 ಲಕ್ಷ ನೀಡುವ ಕಾರ್ಯಕ್ರಮ ಇದು. ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ಯೋಜನೆ ಇದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಆದರೆ ಈ ಯೋಜನೆಗೆ ಮೀಸಲಿರಿಸಿರುವ ಮೊತ್ತ ₹1,473 ಕೋಟಿ ಮಾತ್ರ.

ಸಾರ್ವತ್ರಿಕ ಆರೋಗ್ಯ ಯೋಜನೆಯತ್ತ ದೇಶ ಸಾಗುತ್ತಿದೆ. ಈಗ ಪ್ರಕಟಿಸಿರುವ ಯೋಜನೆಯನ್ನು ಅಮೆರಿಕದ ‘ಒಬಾಮ ಕೇರ್‌’ ಯೋಜನೆಯೊಂದಿಗೆ ಹೋಲಿಸಬಹುದು ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಜೀವನೋಪಾಯ ಸೃಷ್ಟಿಗಾಗಿ ಮೀಸಲಿರಿಸುವ ಒಟ್ಟು ಮೊತ್ತ ₹14.34 ಲಕ್ಷ ಕೋಟಿ. ಅಷ್ಟಲ್ಲದೆ, 3.71 ಲಕ್ಷ ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣದ ಗುರಿ ಇರಿಸಿಕೊಳ್ಳಲಾಗಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ 1.88 ಲಕ್ಷ ಶೌಚಾಲಯ ನಿರ್ಮಾಣ, 51 ಲಕ್ಷ ಮನೆ ನಿರ್ಮಾಣ ಗ್ರಾಮೀಣ ಪ್ರದೇಶಕ್ಕೆ ಸಿಕ್ಕ ಇತರ ಯೋಜನೆಗಳು. 1.75 ಕೋಟಿ ಮನೆಗಳಿಗೆ ವಿದ್ಯುತ್‌ ಸಂಪರ್ಕದ ಕೊಡುಗೆಯೂ ಬಜೆಟ್‌ನಲ್ಲಿ ಸೇರಿದೆ.

ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು, ಈ ವರ್ಷ ಎಂಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗಾಗಿ ‘ನಗರದ ಪಕ್ಷ’ ಎಂಬ ಹಣೆಪಟ್ಟಿ ಇರುವ ಬಿಜೆಪಿ, ಗ್ರಾಮೀಣ ಜನರ ಮನಗೆಲ್ಲಲು ಬಜೆಟ್‌ನಲ್ಲಿ ಮುಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.

[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT