ಸೋಮವಾರ, ಮೇ 25, 2020
27 °C

ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲ ಮಾಡಿದ್ದೇ ಸಿದ್ದರಾಮಯ್ಯ ಸಾಧನೆ

ಮೈಸೂರು: ರಾಜ್ಯದ ಮೇಲಿನ ಸಾಲದ ಹೊರೆಯನ್ನು ಹೆಚ್ಚಿಸಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಲ್ಕೂವರೆ ವರ್ಷಗಳ ಸಾಧನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಬಿಜೆಪಿ ನಗರ ಕಾರ್ಯಕಾರಿಣಿಯನ್ನು ಗುರುವಾರ ನಗರದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದ ಸಾಲದ ಮೊತ್ತ ₹ 2.5 ಲಕ್ಷ ಕೋಟಿ ಇದೆ. ಇದರಲ್ಲಿ ₹ 1.42 ಲಕ್ಷ ಕೋಟಿ ಸಾಲ ಮಾಡಿದ್ದು ಸಿದ್ದರಾಮಯ್ಯ. ಉಳಿದ ಎಲ್ಲ ಮುಖ್ಯಮಂತ್ರಿಗಳ ಅವಧಿಯಲ್ಲಿ ಮಾಡಿದ ಸಾಲಕ್ಕಿಂತಲೂ ಇದು ಹೆಚ್ಚು’ ಎಂದು ಆರೋಪಿಸಿದರು.

‘ಬಿಜೆಪಿ ಅಧಿಕಾರವಧಿಯಲ್ಲಿ ₹ 18 ಸಾವಿರ ಕೋಟಿ ವೆಚ್ಚ ಮಾಡಿ 7 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ಕಾಂಗ್ರೆಸ್‌ ಅವಧಿಯಲ್ಲಿ ₹ 46 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಆದರೂ ನೀರಾವರಿ ಸೌಲಭ್ಯ ಪಡೆದುಕೊಂಡ ಜಮೀನು 5 ಲಕ್ಷ ಹೆಕ್ಟೇರ್‌ ಮಾತ್ರ. ಕಳ್ಳ ಬಿಲ್ಲು, ಸುಳ್ಳು ಲೆಕ್ಕ ನೀಡಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ’ ಎಂದರು.

‘ಐದು ವರ್ಷ ಆಳ್ವಿಕೆ ನಡೆಸಿದ ಸಿದ್ದರಾಮಯ್ಯ ಅವರಲ್ಲಿ ಆತ್ಮವಿಶ್ವಾಸ ಕಾಣುತ್ತಿಲ್ಲ. ಅಧಿಕಾರ ಕಳೆದುಕೊಳ್ಳುವ ಭಯ ಅವರನ್ನು ಕಾಡುತ್ತಿದೆ. ಜಾತಿ, ಭಾಷೆ ಹಾಗೂ ಬಾವುಟದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಅವರು ಮಹಾತ್ಮ ಗಾಂಧೀಜಿಯ ವಾರಸುದಾರರಾಗಲು ಸಾಧ್ಯವಿಲ್ಲ. ವಿಭಜನೆ ಹಾಗೂ ವಿಷಯಾಂತರ ರಾಜಕಾರಣ ಮಾಡಿ ಮೊಹಮ್ಮದ್‌ ಅಲಿ ಜಿನ್ನಾ ಅನುಯಾಯಿಗಳಾಗಿದ್ದಾರೆ’ ಎಂದು ದೂರಿದರು.

‘1994ರಲ್ಲಿ ಮೈಸೂರು ನಗರ ವ್ಯಾಪ್ತಿಯ ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಪಕ್ಷ ಈಗ ಇನ್ನಷ್ಟು ಪ್ರಬಲವಾಗಿದೆ. ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಬೇಕು. ಬೂತ್ ಮಟ್ಟದಲ್ಲಿ ಗೆದ್ದರೆ ಮಾತ್ರ ರಾಜ್ಯ ಗೆಲ್ಲಲು ಸಾಧ್ಯ. ಪಕ್ಷ ನೀಡಿದ 19 ಸೂತ್ರಗಳನ್ನು ಪಾಲಿಸಿದರೆ ಗೆಲುವು ನಿಶ್ಚಿತ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಎಸ್‌.ಎ.ರಾಮದಾಸ್, ಎಚ್‌.ವಿ.ರಾಜೀವ್‌, ಕೆ.ಆರ್.ಮೋಹನಕುಮಾರ್‌, ಸಿ.ಬಸವೇಗೌಡ, ಎಲ್‌.ನಾಗೇಂದ್ರ, ನಂದೀಶ್‌ ಪ್ರೀತಂ, ಸುರೇಶ್‌ ಬಾಬು, ರಾಜೇಶ್‌ ಹಾಗೂ ಸತೀಶ್‌ ಇದ್ದರು.

‘ಇದು ಕೌರವರ ರಾಜ್ಯ’

ಮೈಸೂರು: ‘ಅತ್ಯಾಚಾರ, ರೈತರ ಆತ್ಮಹತ್ಯೆ ಹಾಗೂ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಪಾಂಡವರ ರಾಜ್ಯ ಇರಲು ಹೇಗೆ ಸಾಧ್ಯ? ಅನಾಚಾರಗಳೇ ತುಂಬಿರುವ ಸಿದ್ದರಾಮಯ್ಯ ಅವರದು ಕೌರವರ ರಾಜ್ಯ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇಲ್ಲಿ ಟೀಕಿಸಿದರು.

‘ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷ ಕಳೆದರೂ ಹಂತಕರನ್ನು ಬಂಧಿಸಿಲ್ಲ. ಪತ್ರಕರ್ತೆ ಗೌರಿ ಲಂಕೇಶ್‌ ಹಂತಕರ ಸುಳಿವು ಸಿಕ್ಕಿದೆ ಎಂದು ಹೇಳುತ್ತಿರುವ ಗೃಹ ಸಚಿವರು ಆರೋಪಿಗಳನ್ನು ಪತ್ತೆ ಮಾಡುತ್ತಿಲ್ಲ. ಪ್ರಗತಿಪರರ ಹತ್ಯೆಯ ಕುರಿತು ಇರುವ ಸಂಶಯಗಳನ್ನು ಬಿಜೆಪಿಯ ತಲೆಗೆ ಕಟ್ಟಿ ರಾಜಕೀಯ ಲಾಭ ಪಡೆದುಕೊಳ್ಳಲು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ ಮಟ್ಟು ಹವಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

* * 

ಮೇಯರ್‌ ಚುನಾವಣೆಯಲ್ಲಿ ಮೀಸಲಾತಿ ವಿಚಾರದಲ್ಲಿ ಸಿ.ಎಂ ರಾಜಕೀಯ ಮಾಡಿದರು. ಕಾಂಗ್ರೆಸ್‌ ಸೋಲಿಸಿ ತಕ್ಕ ಪಾಠ ಕಲಿಸಿದ್ದೇವೆ. ಸಿದ್ದರಾಮಯ್ಯ ಅವರ ಶಕ್ತಿ ಕುಸಿಯುತ್ತಿದೆ

ಡಾ.ಬಿ.ಎಚ್‌.ಮಂಜುನಾಥ್‌

ಬಿಜೆಪಿ ನಗರ ಘಟಕದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.