ಗುರುವಾರ , ಮೇ 28, 2020
27 °C

ಗಾಯದ ಮೇಲೆ ಬರೆ ಎಳೆಯುವ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

ಗಾಯದ ಮೇಲೆ ಬರೆ ಎಳೆಯುವ ಕನಸು

ಸೆಂಚುರಿಯನ್, ದಕ್ಷಿಣ ಆಫ್ರಿಕಾ : ಟೆಸ್ಟ್ ಸರಣಿಯಲ್ಲಿ ನಿರಾಸೆ ಕಂಡರೂ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಲಿದೆ.

ಏಕದಿನ ಸರಣಿ ಆರಂಭವಾಗುವ ಮೊದಲೇ ಗಾಯದ ಸಮಸ್ಯೆಯಿಂದ ಎಬಿ ಡಿವಿಲಿಯರ್ಸ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಮೊದಲ ಪಂದ್ಯದಲ್ಲಿ ಗಾಯಗೊಂಡ ನಾಯಕ ಫಾಫ್ ಡುಪ್ಲೆಸಿ ಸರಣಿಯಲ್ಲಿ ಮುಂದಿನ ಪಂದ್ಯಗಳನ್ನು ಆಡುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಶುಕ್ರವಾರ ಪ್ರಕಟಿಸಿದೆ.ಇದು ಆತಿಥೇಯರಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಆದರೆ ಆತಿಥೇಯರ ಗಾಯದ ಮೇಲೆ ಬರೆ ಎಳೆದು ಸರಣಿಯಲ್ಲಿ ಮುನ್ನಡೆ ಸಾಧಿಸುವುದು ವಿರಾಟ್ ಕೊಹ್ಲಿ ಬಳಗದ ಉದ್ದೇಶ.

ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿದ ಭಾರತ ಆತಿಥೇಯರು ತವರಿನಲ್ಲಿ ನಿರಂತರ 17ನೇ ಗೆಲುವು ಸಾಧಿಸುವ ದಾಖಲೆಗೆ ಅಡ್ಡಿಯಾಗಿದ್ದರು. ಇದೇ ಲಯದಲ್ಲಿ ಭಾನುವಾರವೂ ಆಡಿ ಗೆಲ್ಲಲು ತಂಡ ತಯಾರಾಗಿದೆ.

ಫಾಫ್ ಡುಪ್ಲೆಸಿ ಬದಲಿಗೆ ಏಡನ್ ಮರ್ಕರಮ್ ಅವರ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸಿದ್ದು ಬ್ಯಾಟ್ಸ್‌ಮನ್‌ ಫರ್ಹಾನ್‌ ಬೆಹ್ರದೀನ್‌ ಅವರನ್ನು ಪಾಪಸ್ ಕರೆಸಿಕೊಳ್ಳಲಾಗಿದೆ. ದೇಶಿ ಏಕದಿನ ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಗಳಿಸಿ ಮಿಂಚಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಹೆನ್ರಿಕ್‌ ಕ್ಲಾಸೆನ್‌ ಅವರನ್ನೂ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಫಾರ್ಮ್‌ನಲ್ಲಿಲ್ಲದ ಡಿಕಾಕ್ ಬದಲಿಗೆ ಕ್ಲಾಸೆನ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ನಿಚ್ಚಳವಾಗಿದೆ.

ಭಾರತಕ್ಕೆ ನೆಚ್ಚಿನ ತಾಣ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ನೆಚ್ಚಿನ ತಾಣ ಇದು. ಇಲ್ಲಿ ಭಾರತ ಒಟ್ಟು 11 ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಗೆದ್ದಿದೆ. 2003ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಇಲ್ಲಿ ಗೆದ್ದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಇಲ್ಲಿ ಐದು ಪಂದ್ಯಗಳನ್ನು ಆಡಿದ್ದು ತಲಾ ಎರಡು ಗೆಲುವು ಮತ್ತು ಸೋಲು ಕಂಡಿದೆ.

ಶತಕದೊಂದಿಗೆ ಮಿಂಚಿದ ನಾಯಕ ವಿರಾಟ್ ಕೊಹ್ಲಿ ಮತ್ತು ಉತ್ತಮ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ ತಂಡದ ಬ್ಯಾಟಿಂಗ್‌ ಬಲಕ್ಕೆ ವಿಶ್ವಾಸ ತುಂಬಿದ್ದಾರೆ. ಕಳೆದ ಪಂದ್ಯದಲ್ಲಿ ಬೌಲರ್‌ಗಳು ಕೂಡ ತಂಡದ ಕೈ ಹಿಡಿದಿದ್ದರು. ಹೀಗಾಗಿ ಮತ್ತೊಂದು ಜಯಕ್ಕೆ ತಂಡದ ಕಾತರಗೊಂಡಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30.

ನೇರ ಪ್ರಸಾರ:

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.