ಗುರುವಾರ , ಮೇ 28, 2020
27 °C

ಧರ್ಮ ಮತ್ತು ರಾಜಕೀಯ ನಡುವಿನ ಸಂಬಂಧ

ಎಸ್.ಎ೦. ಜಾಮದಾರ Updated:

ಅಕ್ಷರ ಗಾತ್ರ : | |

ಧರ್ಮ ಮತ್ತು ರಾಜಕೀಯ ನಡುವಿನ ಸಂಬಂಧ

ರಾಜಕೀಯದಲ್ಲಿ ಧಾರ್ಮಿಕ ಪ್ರಭಾವ ಇರಬಾರದೆಂದು ಬಹುತೇಕರು ಬಯಸುತ್ತಾರೆ. ಆದರೆ ಜಗತ್ತಿನ ಬಹುತೇಕ ದೇಶಗಳಲ್ಲಿ ಅನಾದಿಕಾಲದಿಂದಲೂ ಯಾವುದೇ ರಾಜ್ಯ ಪದ್ಧತಿಯಿದ್ದರೂ (ಗ್ರೀಸ್‌ ಮತ್ತು ರೋಮ್‌ ಬಿಟ್ಟು) ಧರ್ಮವನ್ನು ರಾಜಕೀಯದಿಂದ ದೂರವಿಟ್ಟಿದ್ದು ಅತಿ ವಿರಳ. ಆಯಾ ಕಾಲದ ರಾಜರು ರಾಜಧರ್ಮವೆಂದು ಸ್ವೀಕರಿಸಿದ ನಂತರವೆ ಕ್ರಿಶ್ಚಿಯನ್, ಇಸ್ಲಾಂ, ಬೌದ್ಧ, ಪಾರ್ಸಿ, ಸಿಖ್ ಮತ್ತು ಲಿಂಗಾಯತ ಧರ್ಮಗಳು ದೊಡ್ಡ ಪ್ರಮಾಣದಲ್ಲಿ ಬೆಳೆದವು. ಹಿಂದೂ ಸಾಮಾಜಿಕ ವ್ಯವಸ್ಥೆಯ ವರ್ಣಾಶ್ರಮ ಪದ್ಧತಿಯಲ್ಲಿ ಧರ್ಮವನ್ನು ಕಾಪಾಡಿ ಬೆಳೆಸುವುದು ರಾಜನ ಆದ್ಯ ಕರ್ತವ್ಯವಾಗಿತ್ತು. ಹೀಗೆ ಬಹುತೇಕ ರಾಜಕೀಯ ವಿಷಯಗಳನ್ನು ಧರ್ಮದಿಂದ ಬೇರ್ಪಡಿಸುವುದು ಆಗ ಕಷ್ಟಸಾಧ್ಯವಾಗಿತ್ತು.

ಈಗ ಧಾರ್ಮಿಕ ನಂಬಿಕೆ, ವಿಚಾರ– ಆಚಾರಗಳಲ್ಲಿ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಧಾರ್ಮಿಕ ಸಂಗತಿಗಳನ್ನು ತರ್ಕಬದ್ಧವಾಗಿ ಚರ್ಚಿಸಬಹುದಾಗಿದೆ. ಆದ್ದರಿಂದಲೇ ಇಂದು ‘ಜಾತ್ಯತೀತ’ ಎಂಬ ತತ್ವವು ಜನಪ್ರಿಯವಾಗಿದೆ. ಅದು ಯುರೋಪ್‌ನ ಪುನರುತ್ಥಾನ ಕಾಲದಲ್ಲಿ (16ರಿಂದ 18ನೆಯ ಶತಮಾನ) ರಾಜಕೀಯ ವಿಷಯಗಳಲ್ಲಿ ಚರ್ಚ್‌ ಪ್ರಭಾವವನ್ನು ನಿಯಂತ್ರಿಸುವ ಪ್ರಯತ್ನಗಳಿಂದ ಬೆಳೆದ ಸಿದ್ಧಾಂತ. ಅದರಿಂದ ಯುರೋಪ್‌ನ ಬಹುತೇಕ ದೇಶಗಳು ರಾಜಕೀಯವನ್ನು ಧರ್ಮದಿಂದ ಬೇರ್ಪಡಿಸಿಕೊಂಡಿವೆ.

ನಮ್ಮ ಸಂವಿಧಾನ ರಚನಾಕಾರರು ಪಾಶ್ಚಾತ್ಯ ಮಾದರಿಗಳಿಂದಲೇ ವಿವಿಧ ಪರಿಕಲ್ಪನೆಗಳನ್ನು ಆಯ್ದುಕೊಂಡರು. ಬ್ರಿಟನ್ನಿನ ಪಾರ್ಲಿಮೆಂಟರಿ ಪದ್ಧತಿ, ಐರ್ಲೆಂಡ್‌ನ ನಿರ್ದೇಶಕ ತತ್ವಗಳು, ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಮೂಲಭೂತ ಹಕ್ಕುಗಳು ಮತ್ತು ಸ್ವತಂತ್ರ ನ್ಯಾಯಪದ್ಧತಿ... ನಾವು ಎರವಲು ಪಡೆದುಕೊಂಡ ಸಿದ್ಧಾಂತಗಳಾಗಿವೆ. ಸಮಾನತೆ, ಗಣರಾಜ್ಯ, ಸಮನ್ಯಾಯ, ಜಾತ್ಯತೀತ ತತ್ವಗಳು ನಮ್ಮ ಸಂವಿಧಾನದ ಜೀವಾಳಗಳು. ಅವು ಅಮೆರಿಕ ಮತ್ತು ಫ್ರೆಂಚ್‌ ಕ್ರಾಂತಿಗಳಿಗೆ ಆದರ್ಶಗಳಾಗಿದ್ದವು.

ನಮ್ಮ ದೇಶದಲ್ಲಿ ಆದರ್ಶಗಳಿಗೂ ಮತ್ತು ನಿತ್ಯ ಜೀವನದ ವಾಸ್ತವಿಕ ಆಗುಹೋಗುಗಳಿಗೂ ಬಹಳ ವ್ಯತ್ಯಾಸವಿದೆ. ಅವುಗಳ ನಡುವಿನ ಅಂತರಗಳೇ ಅವಾಂತರಗಳಾಗುತ್ತವೆ. ಹಿಂದೆಂದೂ ಸಮಾನತೆಯನ್ನು ಕಾಣದ, ಯಜಮಾನಿಕೆ ಮನೋಭಾವದ, ಧಾರ್ಮಿಕ ಗೊಂದಲಗಳ ಬೀಡಾದ ಭಾರತದಲ್ಲಿ ಪಾಶ್ಚಾತ್ಯ ಮಾದರಿಯ ಸಂವಿಧಾನದ ಪ್ರಯೋಗವು ಪಾಳು ಭೂಮಿಯಲ್ಲಿ ಹುಲುಸಾಗಿ ಬೆಳೆಯುವ ಬೀಜಗಳನ್ನು ಬಿತ್ತಿದಂತಾಗಿದೆ!

ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಪ್ರಜಾರಾಜ್ಯದ ಆಧಾರಸ್ತಂಭಗಳಾಗಿವೆ. ಆದರೆ ನಮ್ಮ ಚುನಾವಣೆಗಳು ಹಣಬಲ ಮತ್ತು ತೋಳ್ಬಲಗಳ ಪ್ರಭಾವದಿಂದ, ಧರ್ಮ ಮತ್ತು ಜಾತಿಗಳ ಬಳಕೆಯಿಂದ, ಕಳಂಕಿತರಿಗೆ ನೀಡುವ ಮನ್ನಣೆಯಿಂದ ವಿಚಿತ್ರ ಸರ್ಕಸ್‌ಗಳಂತೆ ಕಾಣುತ್ತಿವೆ.

ಇಂತಹ ಸನ್ನಿವೇಶದಲ್ಲಿ ಲಿಂಗಾಯತರ ಹೋರಾಟವನ್ನು ಚುನಾವಣಾ ಸಮೀಕರಣದ ದೃಷ್ಟಿಯಿಂದ ನೋಡಲು ಕಾರಣವೆಂದರೆ ಅವರು ಹೆಚ್ಚು ಮತಗಳನ್ನು ಹೊಂದಿದ್ದಾರೆ ಎಂಬುದು. ಹೀಗಾಗಿ ಲಿಂಗಾಯತ ಸಮುದಾಯ ಯಾವ ಕಡೆ ವಾಲುತ್ತದೆ ಎನ್ನುವುದು ಚುನಾವಣೆಗಳಲ್ಲಿ ಮಹತ್ವ ಪಡೆಯುತ್ತದೆ. ಅವರ ಬೆಂಬಲದಿಂದ 1956 ರಿಂದ 1971ರ ವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆಗ ಲಿಂಗಾಯತ ಸಮುದಾಯದ ನಾಲ್ವರು ಮುಖ್ಯಮಂತ್ರಿಗಳಾಗಿದ್ದರು. ಅದೇ ರೀತಿ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜನತಾ ಪಕ್ಷ ಮತ್ತು ಒಮ್ಮೆ ಅಧಿಕಾರ ಪಡೆದಿದ್ದ ಬಿಜೆಪಿಯಲ್ಲಿ ಇಬ್ಬಿಬ್ಬರು ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದರು. ಎಲ್ಲ ರಾಜಕೀಯ ಪಕ್ಷಗಳೂ ಪ್ರತಿ ಚುನಾವಣೆಯಲ್ಲಿಯೂ ದಲಿತ, ಅಲ್ಪಸಂಖ್ಯಾತ ಮತ್ತು ಲಿಂಗಾಯತರ ಮತಗಳನ್ನು ಪಡೆಯಲು ಸರ್ಕಸ್ ಮಾಡುತ್ತವೆ.

ಇಂದು ‘ಲಿಂಗಾಯತರ ಹೋರಾಟವನ್ನು ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ಬಳಸಿಕೊಳ್ಳುತ್ತಿದೆ’ ಎಂದು ಟೀಕಿಸುವ ಬಿಜೆಪಿ ನಾಯಕರು 2008ರ ಚುನಾವಣೆಯಲ್ಲಿ ಲಿಂಗಾಯತ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ‘ಅವರಿಗೆ ಮುಖ್ಯಮಂತ್ರಿ ಗದ್ದುಗೆ ತಪ್ಪಿಸಿದ್ದು ಲಿಂಗಾಯತ ಸಮುದಾಯಕ್ಕೆ ಮಾಡಿದ ಅನ್ಯಾಯ’ ಎಂದು ಬಿಂಬಿಸಿ ಲಿಂಗಾಯತರ ಮತಗಳಿಂದ ಅಧಿಕಾರಕ್ಕೆ ಬಂದಿದ್ದರು. ಅದು ಸರಿಯೆಂದಾದರೆ ಅಂತಹುದೇ ಬೇರೊಂದು ಕಾರಣವನ್ನು ನೀಡಿ ಬೇರೆ ಪಕ್ಷವು ಲಿಂಗಾಯತರನ್ನು ಬಳಸಿಕೊಂಡರೆ ಅದು ಹೇಗೆ ತಪ್ಪಾಗುತ್ತದೆ? ಲಿಂಗಾಯತರನ್ನು ಆಗ ಕಾಂಗ್ರೆಸ್ಸಿನ ವಿರೋಧಿಗಳೆಂದೂ; ಬಿಜೆಪಿಯ ಬೆಂಬಲಿಗರೆಂದು ಭಾವಿಸಲಾಯಿತು. ಹಾಗಾದರೆ 2013ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ... ಈ ಎರಡೂ ಪಕ್ಷಗಳು ಏಕೆ ಹೀನಾಯವಾಗಿ ಸೋತು ಹೋದವು?

ಲಿಂಗಾಯತರು ಮೂರ್ಖರಲ್ಲ. ತಮ್ಮ ಸಮುದಾಯಕ್ಕೆ ಒಳ್ಳೆಯದನ್ನು ಮಾಡುವ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ಹೀಗೆ ಬೆಂಬಲ ನೀಡುವುದು ಸಮುದಾಯಗಳ ಸ್ವಾರ್ಥವೆಂದರೂ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದೇನೂ ಅಲ್ಲ. ಅದನ್ನು ಲಿಂಗಾಯತರು ಅನೇಕ ಬಾರಿ ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಯಾವುದೇ ರಾಜಕೀಯ ಪಕ್ಷವು ಯಾವುದೇ ಸಮುದಾಯವನ್ನು ತನ್ನ ಶಾಶ್ವತ ಮತಬ್ಯಾಂಕ್ ಎಂದು ತಿಳಿದರೆ ಆ ಪಕ್ಷ ಇತಿಹಾಸದಿಂದ ಪಾಠ ಕಲಿತಿಲ್ಲವೆಂದೇ ಅರ್ಥ.

ಈಗ ಅಜ್ಞಾತವಾಸದಲ್ಲಿರುವ ಹಿಂದಿನ ಜನತಾ ಪಕ್ಷವು ಲಿಂಗಾಯತ ಮತ್ತು ಒಕ್ಕಲಿಗರ ಪಕ್ಷವೆಂದೇ ಬಿಂಬಿತವಾಗಿತ್ತು. ಜನತಾ ದಳ (ಎಸ್) ಅನ್ನು ಒಕ್ಕಲಿಗರ ಪಕ್ಷವೆಂದು ಬಹುತೇಕರು ಕರೆಯುತ್ತಾರೆ. ಬಿಜೆಪಿಯನ್ನು ಬ್ರಾಹ್ಮಣರ ಮತ್ತು ಉನ್ನತ ಜಾತಿಗಳ ಪಕ್ಷವೆಂದು ತಿಳಿಯಲಾಗುತ್ತಿದೆ. ಹಾಗೆಯೇ ಹಿಂದುತ್ವ ಎನ್ನುವುದು ಜಾತ್ಯತೀತವೆ? ಕಾಂಗ್ರೆಸ್ ಪಕ್ಷವನ್ನು ಅಹಿಂದದವರ ಪಕ್ಷವೆಂದು ಗುರುತಿಸಲಾಗುತ್ತಿದೆ. ಜಾತಿಯ ಬದಲು ವರ್ಗ ಬಂದಿದೆ. ಆದರೆ ವರ್ಗದ ಮೂಲ ಆಧಾರ ಜಾತಿಯೆ ಆಗಿದೆ.

ಹೀಗೆ ನಮ್ಮ ದೇಶದಲ್ಲಿ ರಾಜಕೀಯ ಪಕ್ಷಗಳು ಜಾತಿ ಮತ್ತು ಧರ್ಮಗಳನ್ನು ರಾಜಕೀಯಕ್ಕೆ ಧಾರಾಳವಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ವಾಸ್ತವಿಕವಾಗಿ ‘ಜಾತ್ಯತೀತತೆ ಇಲ್ಲ; ಜಾತೀಯತೆ ಇದೆ’. ಇದು ನಮ್ಮ ಪ್ರಜಾಪ್ರಭುತ್ವದ ಮಾದರಿ!

ಲಿಂಗಾಯತರ ಹೋರಾಟ ರಾಜಕೀಯವಲ್ಲ. ಅದು ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಚಳವಳಿ. ಬಸವಣ್ಣನವರು ಬೋಧಿಸಿದ ಬಹುತೇಕ ತತ್ವಗಳು ಈಗಿನ ಪ್ರಜಾಸತ್ತಾತ್ಮಕ ಸಿದ್ಧಾಂತವೇ ಆಗಿದೆ ಎಂಬುದನ್ನು ಬಸವ ತತ್ವಗಳನ್ನು ಅರಿತವರೆಲ್ಲರೂ ಬಲ್ಲರು.

ಹುಟ್ಟಿನಿಂದ ಬ್ರಾಹ್ಮಣನಾಗಿದ್ದ ಬಸವಣ್ಣ ವೇದ, ಆಗಮ, ಪುರಾಣ, ಶಾಸ್ತ್ರಗಳನ್ನು ಧಿಕ್ಕರಿಸಿ ಬೌದ್ಧ, ಜೈನ ಧರ್ಮಗಳ ಹಾಗೆ ಹನ್ನೆರಡನೆಯ ಶತಮಾನದಲ್ಲಿ ಹೊಸ ಧರ್ಮವನ್ನು ಸೃಷ್ಟಿಸಿದ. ಅದುವೇ ಲಿಂಗಾಯತ! ಅದರಲ್ಲಿ ಜಾತಿಗಳಿಲ್ಲ. ಆದ್ದರಿಂದ ಲಿಂಗಾಯತದಲ್ಲಿ ಮೇಲು ಕೀಳುಗಳಿಲ್ಲ. ಅದನ್ನು ಆಧರಿಸಿ ಬಸವಣ್ಣ ದಲಿತ ಯುವಕನ ಮದುವೆಯನ್ನು ಬ್ರಾಹ್ಮಣ ಯುವತಿಯೊಂದಿಗೆ ಮಾಡಿದ. ಸ್ತ್ರೀಯರು ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಪುರುಷರಿಗೆ ಸಮಾನರಾಗಿದ್ದಾರೆ. ಬಾಲ್ಯ ವಿವಾಹವಿಲ್ಲ, ವಿಧವೆಯರು ಮರು ಮದುವೆಯಾಗುತ್ತಾರೆ, ಋತುಮತಿಯಾದಾಗ ಹೆಣ್ಣಿಗೆ ಮಡಿಮೈಲಿಗೆಯಿಲ್ಲ. ಲಿಂಗಾಯತದಲ್ಲಿ ಕರ್ಮವಿಲ್ಲ, ಕಾಯಕವಿದೆ. ಆದ್ದರಿಂದ ಕಾಯಕಕ್ಕೆ ತನ್ನದೇ ಆದ ಘನತೆಯಿದೆ. ಅದರಲ್ಲಿ ಪುನರ್ಜನ್ಮವಿಲ್ಲ, ಲಿಂಗೈಕ್ಯವಿದೆ. ಸ್ವರ್ಗ- ನರಕಗಳು ಮೇಲಿಲ್ಲ. ಇಲ್ಲಿವೆ. ಮೂರ್ತಿ ಪೂಜೆಗೆ ಸ್ಥಾನವಿಲ್ಲ, ದೇವಾಲಯಗಳಿಲ್ಲ, ಆದ್ದರಿಂದ ಪುರೋಹಿತರಿಲ್ಲ. ಸತ್ಯಶುದ್ಧ ಕಾಯಕದಿಂದ ಬಂದ ಆದಾಯದಲ್ಲಿ ಸಮಾಜದ ಪಾಲು ಇದೆ, ಅದೇ ದಾಸೋಹ ತತ್ವ.

ಲಿಂಗಾಯತರ ಸಾವಿರಾರು ಶಾಲೆ ಕಾಲೇಜುಗಳು; ತುಮಕೂರು, ಸುತ್ತೂರು, ಸಿರಿಗೆರೆ, ಗದಗ, ಧಾರವಾಡ, ಚಿತ್ರದುರ್ಗ ಮುಂತಾದ ಸಾವಿರಾರು ಮಠಗಳಲ್ಲಿ ನಡೆಯುತ್ತಿರುವ ಉಚಿತ ಪ್ರಸಾದ ನಿಲಯಗಳು ಮತ್ತು ವಿದ್ಯಾರ್ಥಿ ನಿಲಯಗಳು ಈ ದಾಸೋಹಕ್ಕೆ ಸಾಕ್ಷ್ಯಗಳು.

ಆದರೆ ವೀರಶೈವವೆಂಬ ಒಂದು ಹಿಂದೂ ಪಂಗಡವು ಮಧ್ಯದಲ್ಲಿ ಲಿಂಗಾಯತದಲ್ಲಿ ನುಸುಳಿದೆ. ಆ ವೀರಶೈವರು ‘ತಾವೇ ಲಿಂಗಾಯತ ಧರ್ಮದ ಸ್ಥಾಪಕರು’ ಎಂದು ಬೀಗುತ್ತ ಅದನ್ನು ಒಳಗಿನಿಂದಲೆ ಭ್ರಷ್ಟಗೊಳಿಸುತ್ತಿದ್ದಾರೆ. ಅವರನ್ನು ವೀರಶೈವ ಮಹಾಸಭೆ ಪ್ರೋತ್ಸಾಹಿಸುತ್ತಿದೆ. ಬಿಜೆಪಿ, ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ಗಳೂ ಬೆಂಬಲಿಸುತ್ತಿವೆ. ಏಕೆಂದರೆ, ವೀರಶೈವರು ‘ತಾವು ಹಿಂದೂಗಳೆಂದು, ವೇದ ಆಗಮ ಪುರಾಣಗಳನ್ನು ಒಪ್ಪುತ್ತೇವೆ’ ಎಂದೂ ಘೋಷಿಸುತ್ತಾರೆ. ಅವು ಹಿಂದುತ್ವಕ್ಕೆ ಪೂರಕವಾಗಿವೆಯೆಂದು ಬೇರೆ ಹೇಳಬೇಕಿಲ್ಲ.

ಆದ್ದರಿಂದಲೆ ಈ ಚಳವಳಿಯು ವೀರಶೈವ ಮಹಾಸಭೆಯಿಂದ ಹೊರಬಂದು ತನ್ನದೇ ಆದ ‘ಲಿಂಗಾಯತ ಮಹಾಸಭೆ’ಯನ್ನು ಕಟ್ಟಿಕೊಂಡಿದೆ. ಪ್ರಜಾಸತ್ತಾತ್ಮಕ ತತ್ವಗಳಿಗೆ ಪೂರಕವಾಗಿ ಬಸವಣ್ಣನವರು ಬೋಧಿಸಿದ ತತ್ವಗಳಿಗೆ ಮಾನ್ಯತೆ ನೀಡಿ ಮತ್ತೊಮ್ಮೆ ಸ್ಥಾಪಿಸುವುದು ಇದರ ಗುರಿಯಾಗಿದೆ. ಚುನಾವಣೆಗಳು ಬರಲಿ ಹೋಗಲಿ, ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಹೋಗಲಿ, ಈ ಚಳವಳಿ ನಿಲ್ಲವುದಿಲ್ಲ.

ಆಡಳಿತಾರೂಢ ಪಕ್ಷವು ಈ ಚಳವಳಿಯನ್ನು ಮುಂಬರುವ ವಿಧಾನಸಭೆ ಚುನಾವಣೆಗೆ ದಾಳವಾಗಿ ಬಳಸಿಕೊಳ್ಳುತ್ತಿದೆ ಎನ್ನುವುದರ ಹಿನ್ನೆಲೆಯನ್ನು ನೋಡೋಣ. ಜೂನ್ 14ರಂದು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ವೀರಶೈವ ಮಹಾಸಭೆಯು ‘ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಲು’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿತು. ಆಗ ಧಾರಾಳವಾಗಿ ಆ ಬೇಡಿಕೆಯನ್ನು ಬೆಂಬಲಿಸುವುದಾಗಿ ಮುಖ್ಯಮಂತ್ರಿ ಹೇಳಿದರು. ಇದು ಏಳು ತಿಂಗಳ ಹಿಂದಿನ ಮಾತು. ಆಗ ಚುನಾವಣೆ ಇನ್ನೂ ದೂರವಿತ್ತು. ಅಂತಹ ವಿನಂತಿಯನ್ನು ಮಾಡಿಕೊಳ್ಳಬೇಕೆಂದು ಮಹಾಸಭೆಗೆ ಮುಖ್ಯಮಂತ್ರಿ ಏನಾದರೂ ಹೇಳಿದ್ದರೆ? ಆ ಕ್ಷಣದಲ್ಲಿ ಆ ಸ್ಥಳದಲ್ಲಿ ಈ ವಿವಾದವು ಮುಂದಿನ ಚುನಾವಣೆಗಳ ವರೆಗೆ ಜಗ್ಗುವುದೆಂದು ಅವರಿಗೇನಾದರೂ ಕನಸು ಬಿದ್ದಿತ್ತೇ?

ಕೊನೆಯದಾಗಿ ಹೇಳಬೇಕೆಂದರೆ, ಕೆಲವು ಕಾಂಗ್ರೆಸ್ ಮಂತ್ರಿಗಳು ಲಿಂಗಾಯತ ಹೋರಾಟದಲ್ಲಿ ಭಾಗವಹಿಸಿರಬಹುದು. ಆದರೆ ಅದು ಅವರ ವೈಯಕ್ತಿಕ ಆಸಕ್ತಿ. ಈ ಸಂಘಟನೆಯ ಅಧ್ಯಕ್ಷರು ಜನತಾ ದಳದವರೇ ಹೊರತು ಕಾಂಗ್ರೆಸ್ಸಿಗರಲ್ಲ. ಜಿಲ್ಲಾ ಮತ್ತು ತಾಲೂಕು ಮಟ್ಟದ ಬಹಳಷ್ಟು ಬಿಜೆಪಿ ಸದಸ್ಯರೂ ಈ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಅದರಿಂದ, ಲಿಂಗಾಯತರ ಪ್ರಶ್ನಾತೀತ ನಾಯಕರೆಂದು ಬೀಗುತ್ತಿದ್ದವರಿಗೆ ಈಗ ದಿಗ್ಭ್ರಮೆಯಾಗಿದೆ! ತಮಗೆ ಬರಬೇಕಾದ ಮತಗಳು ಮತ್ತೊಂದು ಪಕ್ಷಕ್ಕೆ ಹೋಗಬಹುದೆಂಬ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದ ಈಗ ಗಾಳ, ದಾಳ, ತಂತ್ರ–ಕುತಂತ್ರಗಳ ಮಾತು ಪ್ರಾರಂಭವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.