ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ₹4.14 ಲಕ್ಷ ನಷ್ಟ ವಸೂಲಿಗೆ ಆದೇಶ

Last Updated 7 ಫೆಬ್ರುವರಿ 2018, 7:10 IST
ಅಕ್ಷರ ಗಾತ್ರ

ರಾಮನಗರ: ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚನಹಳ್ಳಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿ ನಿರ್ಮಾಣವಾದ ಎರಡು ಚೆಕ್‌ ಡ್ಯಾಮ್‌ ಹಾಗೂ ಒಂದು ಕಾಂಕ್ರೀಟ್‌ ಚರಂಡಿ ಕಾಮಗಾರಿಯಲ್ಲಿ ಲೋಪಗಳಾಗಿದ್ದು, ಇದರ ನಷ್ಟವಾಗಿ ₹4.14 ಲಕ್ಷವನ್ನು ಸಂಬಂಧಿಸಿದವರಿಂದ ವಸೂಲಿ ಮಾಡುವಂತೆ ಜಿಲ್ಲಾ ಒಂಬುಡ್ಸ್‌ಮನ್‌ ಕಾರ್ಯಾಲಯವು ಆದೇಶಿಸಿದೆ.

‘ಈ ಮೂರು ಕಾಮಗಾರಿಗಳೂ ಕಳಪೆಯಾಗಿವೆ. ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ. ಮರಳು ಮಾಫಿಯಾಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಚೆಕ್‌ ಡ್ಯಾಮ್‌ ವಿನ್ಯಾಸಗಳನ್ನೇ ಬದಲಿಸಲಾಗಿದೆ’ ಎಂದು ಕಂಚನಹಳ್ಳಿಯವರೇ ಆದ ಮಾಹಿತಿ ಹಕ್ಕು ಕಾರ್ಯಕರ್ತ ರವಿಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರು ಹಾಗೂ ರಾಮನಗರ ಜಿಲ್ಲಾ ಪಂಚಾಯಿತಿಯ ಒಂಬುಡ್ಸ್‌ಮನ್‌ ಕಾರ್ಯಾಲಯಕ್ಕೆ 2017ರ ಅಕ್ಟೋಬರ್‌ನಲ್ಲಿ ದೂರು ನೀಡಿದ್ದರು.

ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರು ಜಿಲ್ಲಾ ಗುಣಮಟ್ಟ ನಿಯಂತ್ರಣ ಮೇಲ್ವಿಚಾರಕ (ಮಾನಿಟರ್‌) ಎಚ್‌.ಎಸ್‌. ರಾಮಕೃಷ್ಣ ರಾವ್‌ ಅವರನ್ನು ನೇಮಿಸಿದ್ದರು. ಇವರೊಟ್ಟಿಗೆ ಜಿಲ್ಲಾ ಒಂಬುಡ್ಸ್‌ಮನ್‌ ಅಧಿಕಾರಿ ವಿಷಕಂಠ ಅವರೂ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು.

ಆದೇಶದಲ್ಲಿ ಏನಿದೆ: ಮೂರೂ ಕಾಮಗಾರಿಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ. ಅದರಂತೆ ಗುಣಮಟ್ಟ ನಿಯಂತ್ರಣ ಮಾನಿಟರ್‌ ಅವರ ಪ್ರಕಾರ ₹3.58 ಲಕ್ಷ ಹಾಗೂ ಒಂಬುಡ್ಸ್‌ಮನ್ ಅವರ ಪ್ರಕಾರ ₹56,430 ನಷ್ಟವಾಗಿದೆ ಎಂದು ಹೇಳಲಾಗಿದೆ.

ಯಾವ್ಯಾವ ಕಾಮಗಾರಿ: ಕಂಚನಹಳ್ಳಿ ಗ್ರಾಮದ ಶಿವಣ್ಣನವರ ಜಮೀನಿನ ಹತ್ತಿರ ₹7.52 ಲಕ್ಷ ವೆಚ್ಚದಲ್ಲಿ ಚೆಕ್‌ ಡ್ಯಾಮ್‌, ಸಿದ್ದೇಗೌಡರ ಗ್ರಾಮದ ಜಮೀನಿನ ಹತ್ತಿರ ಹಳ್ಳಕ್ಕೆ ₹6.25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಚೆಕ್ ಡ್ಯಾಮ್‌ ಹಾಗೂ ಗ್ರಾಮದಲ್ಲಿ ₹9.95 ಲಕ್ಷ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಉಲ್ಲೇಖಿಸಿರುವಷ್ಟು ಸಂಖ್ಯೆಯಲ್ಲಿ ನರೇಗಾ ಅಡಿ ಕಾರ್ಮಿಕರನ್ನು ಬಳಸಿಕೊಂಡಿಲ್ಲ. ಅಲ್ಲದೆ ಸಿಮೆಂಟ್‌, ಕಬ್ಬಿಣ ಖರೀದಿ ವೆಚ್ಚ ಒಂದು ಲಕ್ಷ ರೂಪಾಯಿ ಮೀರಿದ್ದರೂ ಪಾರದರ್ಶಕ ಟೆಂಡರ್ ಕರೆಯದೇ ನಿಯಮ ಉಲ್ಲಂಘಿಸಲಾಗಿದೆ. ಕಾಮಗಾರಿಯಲ್ಲಿ ಬಳಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಖರೀದಿ ಮಾಡಲಾಗಿದೆ. ಗುಣಮಟ್ಟವೂ ಸಮರ್ಪಕವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಶಿಸ್ತು ಕ್ರಮಕ್ಕೆ ಶಿಫಾರಸು: ಈ ಕಾಮಗಾರಿಗಳ ನಿರ್ವಹಣೆಯಲ್ಲಿ ಲೋಪ ಎಸಗಿರುವ ಕಬ್ಬಾಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಡಿ.ಆರ್. ವೆಂಕಟರಾಜು ಹಾಗೂ ಬಿ. ಬಸವರಾಜು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒಂಬುಡ್ಸ್‌ಮನ್‌ ಅವರು ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

* * 

ಜಿಲ್ಲಾ ಒಂಬುಡ್ಸ್‌ಮನ್ ಕಾರ್ಯಾಲಯವು ನ್ಯಾಯಸಮ್ಮತ ಆದೇಶ ನೀಡಿದೆ. ವರದಿಯಲ್ಲಿ ಉಲ್ಲೇಖಿಸಿರುವಂತೆ ತಪ್ಪಿತಸ್ಥರಿಂದ ಶೀಘ್ರ ನಷ್ಟ ವಸೂಲಿ ಮಾಡಬೇಕು
ರವಿಕುಮಾರ್
ದೂರುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT