₹ 1 ಲಕ್ಷ ಮೌಲ್ಯದ ಹೋರಿಗಳೇ ಆಕರ್ಷಣೆ

7

₹ 1 ಲಕ್ಷ ಮೌಲ್ಯದ ಹೋರಿಗಳೇ ಆಕರ್ಷಣೆ

Published:
Updated:

ಶನಿವಾರಸಂತೆ: ಸಮೀಪದ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಈವರ್ಷ ಕಲೆಗುಂದಿದ್ದರೂ ಹಾಸನ ಜಿಲ್ಲೆ ಜಿಲ್ಲೆ ಮಾದನೂರು ಗ್ರಾಮದ ಹೋರಿಗಳು ಜಾತ್ರೆಯ ಆಕರ್ಷಣೆಯಾಗಿದ್ದವು.

ಗ್ರಾಮದ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 14 ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಜಾನುವಾರುಗಳ ಸಂಖ್ಯೆ ಈ ಬಾರಿ ಕಡಿಮೆಯಾಗಿದ್ದರೂ ಜಾತ್ರೆಯ ಅಬ್ಬರಕ್ಕೆ ಕೊರತೆಯಿಲ್ಲ.

ಜಾತ್ರೆಯಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಾದನೂರು ಗ್ರಾಮದ ಯುವ ರೈತ ಪ್ರದೀಪ್ ಪ್ರದರ್ಶನ ಹಾಗೂ ಹಾಗೂ ಮಾರಾಟಕ್ಕೆ ತಂದಿರುವ ಹಲ್ಲು ಮೂಡದ 1.3 ವರ್ಷದ ₹ 1 ಲಕ್ಷ ಮೌಲ್ಯದ ಜತೆ ಎತ್ತುಗಳು ಆಕರ್ಷಣೆಯ ಕೇಂದ್ರವಾಗಿದೆ.

₹ 90.6 ಸಾವಿರ ಮೌಲ್ಯದ ಮತ್ತೆರಡು ಜೋಡಿ ಎತ್ತುಗಳನ್ನೂ ತಂದಿದ್ದಾರೆ. ಜಾತ್ರೆಯಲ್ಲಿ ಸುಮಾರು 400 ಜಾನುವಾರುಗಳು ಬಂದಿದ್ದು ₹ 15ಸಾವಿರದಿಂದ ₹ 1ಲಕ್ಷದವರೆಗೆ ಬೆಲೆ ಬಾಳುವ ಜೋಡಿಗಳಿವೆ.

ಈ ಹಿಂದೆ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ, ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದಲೂ ಐದಾರು ಸಾವಿರ ಸಂಖ್ಯೆಯಲ್ಲಿ ಜಾನುವಾರುಗಳು ಬರುತ್ತಿದ್ದವು. ಕ್ರಮೇಣ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಈ ವರ್ಷ ಪ್ರಮಾಣ ತೀರಾ ಕಡಿಮೆಯಾಗಿದೆ. ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯಾದ್ಯಂತ ರೈತ ವರ್ಗದಲ್ಲಿ ಕೃಷಿಯ ಬಗ್ಗೆ ಹಾಗೂ ಪಶುಪಾಲನೆಯ ಬಗ್ಗೆ ಒಲವು ತೀರಾ ಕಡಿಮೆಯಾಗಿರುವುದು ಜಾತ್ರೆ ಕಳೆಗಟ್ಟದಿರುವುದಕ್ಕೆ ಕಾರಣ ಎಂಬ ಮಾತುಗಳು ಜನರಿಂದ ಕೇಳಿ ಬಂದವು.

‘ಪಶುಪಾಲನೆಯತ್ತ ರೈತರ ಒಲವು ಕಡಿಮೆಯಾಗಿವುದು ಮೂಲ ಕಾರಣ. ಇದರಿಂದ ಜನತೆಯ ಮನೋರಂಜನೆಗಾಗಿ ಜಾತ್ರೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ್ ಬೆಳ್ಳಿ ಬೇಸರ ವ್ಯಕ್ತಪಡಿಸಿದರು.

ಜಾತ್ರಾ ಸಮಿತಿ ಪ್ರತಿವರ್ಷ ಜಾತ್ರೆಯ ಅಭಿವೃದ್ಧಿಯ ಬಗ್ಗೆ ಶ್ರಮಿಸುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಮನೋರಂಜನೆಯ ಉತ್ಸವಗಳು ಈ ಭಾಗದಲ್ಲಿ ಇಲ್ಲವಾದ ಕಾರಣ ಪ್ರತಿವರ್ಷ ಆಚರಿಸುವ ಜಯದೇವ ಜಾತ್ರೆಯಲ್ಲಿ ಪಾಲ್ಗೊಳ್ಳಲು ಜನ ಕಾತರರಾಗಿರುತ್ತಾರೆ. ಅಲ್ಲದೇ ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಂಭ್ರಮ–ಸಡಗರದಿಂದ ಪಾಲ್ಗೊಳ್ಳುತ್ತಾರೆ.

ಖರೀದಿ ಭರಾಟೆ: ಬಳೆ, ಮಣಿಸರ, ಶೃಂಗಾರ ಸಾಧನ, ಮಕ್ಕಳ ಆಟಿಕೆ, ಮನೆ ಬಳಕೆಯ ಸಾಮಗ್ರಿ, ಸಿದ್ಧ ಉಡುಪು ಹೀಗೆ ವಿವಿಧ ವಸ್ತುಗಳ ಖರೀದಿಯಲ್ಲಿ ಹಾಗೂ ಮನೋರಂಜನಾ ಪ್ರದರ್ಶನಗಳ ವೀಕ್ಷಣೆಯಲ್ಲಿ ಜನ ಖುಷಿ ಪಡುತ್ತಿದ್ದಾರೆ. ಅದರಲ್ಲೂ ಸಂಜೆ 5ರಿಂದ ಆರಂಭವಾಗುವ ಜನದಟ್ಟಣೆ ರಾತ್ರಿ 12ರವರೆಗೂ ಇರುತ್ತದೆ. ಮಹಿಳೆಯರು ಹಾಗೂ ಮಕ್ಕಳನ್ನು ಬಹಳವಾಗಿ ಆಕರ್ಷಿಸಿರುವ ಜಾತ್ರಾ ಮಹೋತ್ಸವಕ್ಕೆ ಫೆ. 8ರಂದು ತೆರೆ ಬೀಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry