ಸೋಮವಾರ, ಡಿಸೆಂಬರ್ 9, 2019
17 °C

ಫೇಸ್‌ಬುಕ್‌ ಸುದ್ದಿಗಳಿಗೆ ಸಿಗಲಿದೆ ರ‍್ಯಾಂಕ್‌

Published:
Updated:
ಫೇಸ್‌ಬುಕ್‌ ಸುದ್ದಿಗಳಿಗೆ ಸಿಗಲಿದೆ ರ‍್ಯಾಂಕ್‌

ವೆಬ್‌ ಮಾಧ್ಯಮದ ಮೂಲಕ ಸಾಮಾಜಿಕ ಸಂಬಂಧಗಳನ್ನು ದೃಢಪಡಿಸುವ ದೃಷ್ಟಿಯಿಂದ ಬಳಕೆಗೆ ಬಂದ ಫೇಸ್‌ಬುಕ್‌ನಲ್ಲಿ ದಿನದಿಂದ ದಿನಕ್ಕೆ ಸುದ್ದಿ–ಮಾಹಿತಿ ಪೋಸ್ಟ್‌ಗಳ ಸಂಖ್ಯೆ ಹೆಚ್ಚುತ್ತಿದೆ.

ಆಕರ್ಷಕ ಸುದ್ದಿಗಳನ್ನು ಫೇಸ್‌ಬುಕ್‌ನಲ್ಲಿ ಬಿತ್ತರಿಸುವ ಮೂಲಕ ವೀಕ್ಷಕ, ಓದುಗ ವರ್ಗವನ್ನು ತಲುಪುವ ಅಭ್ಯಾಸ ಹೆಚ್ಚಾಗುತ್ತಿರುವುದು ಸದ್ಯದ ಟ್ರೆಂಡ್‌ ಆಗಿದೆ.

ಒಂದೊಮ್ಮೆ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಆ್ಯಪ್‌ ತೆರೆದೊಡನೆ ಸುದ್ದಿಗಳು, ಲೈವ್‌ ವಿಡಿಯೊಗಳು ಸರತಿ ಸಾಲಿನಲ್ಲಿ ಕಾಣಸಿಗುತ್ತವೆ.

ಸುತ್ತಮುತ್ತಲಿನ ಸುದ್ದಿ– ಸಮಾಚಾರಗಳನ್ನು ತಿಳಿಯುವ ನಿಟ್ಟಿನಲ್ಲಿ ಬಳಕೆದಾರರು ಸಹ ಉತ್ಸಾಹಿಗಳಾಗಿರುವುದನ್ನು ಗಮನಿಸಿರುವ ಫೇಸ್‌ಬುಕ್‌, ಸುದ್ದಿ ಪೋಸ್ಟ್‌ ಮಾಡುವ ಪೇಜ್‌ಗಳಿಗೆ ಬಳಕೆದಾರರಿಂದಲೇ ರ‍್ಯಾಂಕ್‌ ಕೊಡಿಸುವ ಯೋಜನೆಯೊಂದನ್ನು ರೂಪಿಸಿದೆ.

ಬಳಕೆದಾರರು ನೀಡುವ ರ‍್ಯಾಂಕ್‌ನ ಆಧಾರದಲ್ಲಿ ಫೇಸ್‌ಬುಕ್‌ ವಿಶ್ವಾಸಾರ್ಹ ಮತ್ತು ಕಳಪೆ ಸುದ್ದಿ ನೀಡುವ ಫೇಸ್‌ಬುಕ್‌ ಪೇಜ್‌ಗಳನ್ನು ನಿರ್ಧರಿಸಲಿದೆ.

ಪ್ರತಿ ತಿಂಗಳಿಗೆ 2 ಬಿಲಿಯನ್‌ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿರುವ ಫೇಸ್‌ಬುಕ್‌, ಸರ್ವೆಯಾಧಾರಿತ ರ‍್ಯಾಂಕಿಂಗ್‌ ಮೊರೆ ಹೋಗಿದ್ದು ವಾಸ್ತುನಿಷ್ಠ ಸುದ್ದಿ ಪ್ರಸರಿಸುವ ಸಂಸ್ಥೆಯ ಹುಡುಕಾಟ ನಡೆಸಲಿದೆ.

ವೈಭವಯುತ ಸುದ್ದಿಗಳು ಹಾಗೂ ಸುಳ್ಳು ಸುದ್ದಿಗಳು, ಓದುಗರ ಗ್ರಹಿಕೆಯ ಮೇಲೆ ನಕಾರಾತ್ಮಕ ಧೋರಣೆ ಮೂಡಿಸುತ್ತಿದ್ದು, ಹೊಸ ರ‍್ಯಾಂಕಿಂಗ್‌ ವ್ಯವಸ್ಥೆಯಿಂದ ವಿಶ್ವಾಸಾರ್ಹ ಸುದ್ದಿ ಮೂಲಗಳನ್ನು ‘high quality news’ ಎಂಬ ಪಟ್ಟಿಗೆ ಸೇರಿಸಲಿದೆ ಹಾಗೂ ಕಳಪೆ ಗುಣಮಟ್ಟದ ಸುದ್ದಿ ಪೋಸ್ಟ್‌ ಮಾಡುತ್ತಿರುವ ಸಂಸ್ಥೆಗಳನ್ನು ‘less trusted source’ ಪಟ್ಟಿಗೆ ಸೇರಿಸುವುದಿದೆ.

ನ್ಯೂಸ್‌ ಫೀಡ್‌ ವಿಷಯದಲ್ಲಿ ರ‍್ಯಾಂಕ್‌ ಆಧಾರಿತ ಸುದ್ದಿಗಳನ್ನು ನೀಡುವುದರಿಂದ ಫೇಸ್‌ಬುಕ್‌ ಸಮುದಾಯದ ಸದಸ್ಯರಿಗೆ ಗುಣಮಟ್ಟದ ಸುದ್ದಿಗಳು ದೊರೆಯಲಿವೆ ಎಂದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ಜುಗರ್‌ಬರ್ಗ್‌ ತಿಳಿಸಿದ್ದಾರೆ. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು