ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಲೀದಾಗೆ ಐದು ವರ್ಷ ಜೈಲು

ಹಣ ದುರ್ಬಳಕೆಗಾಗಿ ಶಿಕ್ಷೆ: ಢಾಕಾದ ವಿಶೇಷ ನ್ಯಾಯಾಲಯದ ತೀರ್ಪು
Last Updated 8 ಫೆಬ್ರುವರಿ 2018, 20:06 IST
ಅಕ್ಷರ ಗಾತ್ರ

ಢಾಕಾ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ (72) ಅವರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಈ ತೀರ್ಪು ನೀಡಿದೆ. ಇದರಿಂದ ಖಲೀದಾ ಜಿಯಾ ಅವರು ಡಿಸೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳ್ಳುವ ಸಾಧ್ಯತೆಗಳಿವೆ. ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷಕ್ಕೆ (ಬಿಎನ್‌ಪಿ) ಈ ಬೆಳವಣಿಗೆಯಿಂದ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

‘ಜಿಯಾ ಅನಾಥಾಶ್ರಮ ಟ್ರಸ್ಟ್‌’ ಹೆಸರಿನಲ್ಲಿ ದೇಣಿಗೆ ಪಡೆಯಲಾಗಿದ್ದ  ₹16.21 ಕೋಟಿ ಮೊತ್ತವನ್ನು ಖಲೀದಾ ಜಿಯಾ ಮತ್ತು ಇತರರು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಇದೇ ಪ್ರಕರಣದಲ್ಲಿ ಜಿಯಾ ಅವರ ಪುತ್ರ ಮತ್ತು ಬಿಎನ್‌ಪಿ ಹಿರಿಯ ಉಪಾಧ್ಯಕ್ಷ ತಾರೀಖ್‌ ರೆಹಮಾನ್‌ ಹಾಗೂ ಇತರ ನಾಲ್ವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 632 ಪುಟಗಳ ತೀರ್ಪಿನ ಮುಖ್ಯ ಸಾರಾಂಶವನ್ನು 10 ನಿಮಿಷಗಳಲ್ಲಿ ನ್ಯಾಯಾಧೀಶರು ಓದಿದರು.

ನಾಲ್ಕು ವರ್ಷಗಳ ಹಿಂದೆಯೇ ಜಿಯಾ ಮತ್ತು ಇತರರು ತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಆಯೋಗ ಜಿಯಾ ಮತ್ತು ಇತರರ ವಿರುದ್ಧ ಸಲ್ಲಿಸಿದ್ದ ದೋಷಾರೋಪಣೆಯನ್ನು ಪರಿಗಣಿಸಿ 2014ರ ಮಾರ್ಚ್‌ 19ರಂದು ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿತ್ತು.

ದೇಣಿಗೆ ಪಡೆಯಲು ಎರಡು ಟ್ರಸ್ಟ್‌ಗಳನ್ನು ಸ್ಥಾಪಿಸಲಾಗಿತ್ತು. ಆದರೆ, ‘ಜಿಯಾ ಚಾರಿಟೆಬಲ್‌ ಟ್ರಸ್ಟ್‌’ ಎನ್ನುವುದು ಅಸ್ತಿತ್ವದಲ್ಲಿ ಇರಲೇ ಇಲ್ಲ. ಈ ಟ್ರಸ್ಟ್‌ಗಳ ಹೆಸರಿನಲ್ಲಿ ಅಪಾರ ಹಣ ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಭ್ರಷ್ಟಾಚಾರ ನಿಗ್ರಹ ಆಯೋಗ ದೋಷಾರೋಪಣೆಯಲ್ಲಿ ಉಲ್ಲೇಖಿಸಿತ್ತು.

ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಜಿಯಾ ಪರ ವಕೀಲರ ಖೋಂಡ್ಕೆರ್‌ ಮಹಬೂಬ್‌ ಹುಸೇನ್‌ ತಿಳಿಸಿದ್ದಾರೆ.

**

ಪೊಲೀಸರ ಜತೆ ಘರ್ಷಣೆ

ಜಿಯಾ ಅವರಿಗೆ ಶಿಕ್ಷೆ ವಿಧಿಸಬಹುದು ಎನ್ನುವ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಢಾಕಾದಲ್ಲಿ ಪೊಲೀಸರು ಮತ್ತು ಬಿಎನ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕಾರ್ಯಕರ್ತರ ಗುಂಪು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ನಗರದ ರಸ್ತೆಗಳಲ್ಲೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

**

ವಯಸ್ಸು, ಆರೋಗ್ಯ ಮತ್ತು ಸಾಮಾಜಿಕ ಸ್ಥಾನಮಾನವನ್ನು ಪರಿಗಣಿಸಿ ಜಿಯಾ ಅವರಿಗೆ ಕಡಿಮೆ ಶಿಕ್ಷೆ ವಿಧಿಸಲಾಗಿದೆ.

–ಮೊಹಮ್ಮದ್‌ ಅಖ್ತರುಝಮಾನ್‌, ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT