ಗುರುವಾರ , ಮೇ 28, 2020
27 °C

ಸಿದ್ಧಗಂಗಾ ಮಠದಲ್ಲಿ ರಾಸುಗಳ ಜಾತ್ರೆ ಜೋರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ಧಗಂಗಾ ಮಠದಲ್ಲಿ ರಾಸುಗಳ ಜಾತ್ರೆ ಜೋರು...

ತುಮಕೂರು: ಎಷ್ಟು ದೂರ ಕಣ್ಣು ಹಾಯಿಸಿದರೂ ಬೆಳ್ಳನೆ ಕಾಣಿಸುವ ವಿವಿಧ ತಳಿಯ ಎತ್ತುಗಳು, ಹೆಗಲ ಮೇಲೆ ಟವೆಲ್‌ ಹಾಕಿಕೊಂಡು ರಾಸುಗಳನ್ನು ಕೊಳ್ಳಲು ಲೆಕ್ಕಾಚಾರ ಹಾಕುತ್ತಿರುವ ರೈತರು, ಮಾರುವವರ ಮತ್ತು ಕೊಳ್ಳುವವರ ನಡುವೆ ವ್ಯವಹಾರ ಕುದುರಿಸಿ ಲಾಭ ಮಾಡಿಕೊಳ್ಳಬೇಕು ಎಂದು ಕಾಯುತ್ತಿರುವ ದಲ್ಲಾಳಿಗಳು....

ಈ ದೃಶ್ಯ ಕಂಡುಬಂದಿದ್ದು ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ. ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿ ಪ್ರಯುಕ್ತ ನಡೆಯುತ್ತಿರುವ ಜಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ರಾಸುಗಳು ಬಂದಿದ್ದು, ಆರು ಲಕ್ಷ ರೂಪಾಯಿವರೆಗೆ ಬೆಲೆ ಬಾಳುವ ಎತ್ತಿನ ಜೋಡಿಗಳು ಇವೆ.

ಫೆ.13 ಶಿವರಾತ್ರಿಯಂದು ಸಿದ್ಧಗಂಗಾ ಮಠದಲ್ಲಿ ಜಾತ್ರೆ ನಡೆಯಲಿದ್ದು, ಇದರ ಪ್ರಯುಕ್ತ ವಾರದ ಮೊದಲೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ದನಗಳ ಪರಿಷೆ ನಡೆಯುತ್ತದೆ.

ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚನ್ನರಾಯಪಟ್ಟಣ, ಪಾಂಡವಪುರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರಾಸುಗಳನ್ನು ರೈತರು ತಂದಿದ್ದಾರೆ.

ಸಿದ್ಧಗಂಗಾ ಮಠದ ಆವರಣ ಪ್ರವೇಶಿಸುತ್ತಿದ್ದಂತೆಯೇ ನಾಟಿ ಕರು, ಹೋರಿ ಮತ್ತು ನಾಟಿ ಎತ್ತುಗಳು ಸೇರಿದಂತೆ ಹಳ್ಳಿಕಾರ್‌ನಂತಹ ವಿಶೇಷ ತಳಿಯ ರಾಸುಗಳು ಜನರನ್ನು ಆಕರ್ಷಿಸುತ್ತಿವೆ. ಇನ್ನು ಗ್ರಾಮೀಣ ಭಾಗದ ರೈತರು ರಾಸುಗಳನ್ನು ವೀಕ್ಷಿಸುವ ಮತ್ತು ಖರೀದಿಸುವ ಸಲುವಾಗಿಯೇ ಜಾತ್ರಗೆ ಬರುವ ಪರಿಪಾಟಲನ್ನು ಇಟ್ಟುಕೊಂಡಿರುವುದು ಈ ಜಾತ್ರೆಯ ವಿಶೇಷ.

ಜಾತ್ರೆಯಲ್ಲಿ ನಾಟಿ ರಾಸುಗಳೇ ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಇನ್ನೂ ಹಲ್ಲು ಮೂಡದ ಹೋರಿಗಳಿಂದ ಹಿಡಿದು ಕಡೆ ಹಲ್ಲಿನ ಎತ್ತುಗಳು ಕೂಡ ಜಾತ್ರೆಯಲ್ಲಿರುವುದರಿಂದ ರಾಸುಗಳನ್ನು ಕೊಳ್ಳಲು ಬರುವ ರೈತರಿಗೆ ಜಾತ್ರೆಯಲ್ಲಿ ಎಲ್ಲಾ ರೀತಿಯ ಆಯ್ಕೆಗಳಿವೆ.

ಪರಿಷೆಗೆ ಬಂದಿರುವ ರಾಸುಗಳಿಗೆ ನೀರು, ನೆರಳು, ಮೇವಿನ ವ್ಯವಸ್ಥೆಯನ್ನು ಸಿದ್ಧಗಂಗಾ ಮಠದ ಆಡಳಿತ ಮಾಡಲು ಶ್ರಮಿಸುತ್ತಿದೆ. ರಾಸುಗಳಿಗೆ ಸಾಂಕ್ರಾಮಿಕ ರೋಗ ಹರಡದಂತೆಯೂ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಸುಗಳಿಗೆ ಬಿಸಿಲು ತಾಕದಂತೆ ಕೆಲವು ರೈತರು ಪೆಂಡಾಲ್‌ ಹಾಕೊಕೊಂಡಿದ್ದಾರೆ. ಕೆಲವರು ಬರುವಾಗಲೇ ತಮ್ಮ ರಾಉಗಳಿಗೆ ಅಗತ್ಯವಿರುವಷ್ಟು ಬೂಸಾ, ಹುಲ್ಲುಗಳನ್ನು ತಂದಿದ್ದಾರೆ.

‘ರಾಸುಗಳನ್ನು ಉಳುಮೆ ಮಾಡಲೆಂದು ಸಾಕುತ್ತೇವೆ. ಆಗಾಗ ಇಂತಹ ಜಾತ್ರೆಗಳಿಗೂ ಹೋಗುತ್ತೇವೆ. ಕೃಷಿ ಜೀವನ ನಡೆಸುವವರಿಗೆ ಎತ್ತುಗಳು ತಮ್ಮ ಮಕ್ಕಳ ಸಮಾನ. ಹೀಗಾಗಿ ನಾವು ಉಪವಾಸವಿದ್ದರೂ ಅವುಗಳಿಗೆ ಹುರುಳಿ, ಬೂಸಾ, ಚಕ್ಕೆ ಬೂಸಾ ಮುಂತಾದವುಗಳನ್ನು ಆಹಾರವಾಗಿ ನೀಡುತ್ತೇವೆ’ ಎಂದು ರಾಸುಗಳನ್ನು ಕರೆತಂದಿದ್ದ ಜಿ.ಹೊಸಹಳ್ಳಿಯ ನಂಜುಂಡಪ್ಪ ಹೇಳುತ್ತಾರೆ.

‘ಪ್ರತಿ ವರ್ಷ ನಾವು ಸಿದ್ಧಗಂಗಾ ಮಠದ ಜಾತ್ರೆಗೆ ಎತ್ತುಗಳನ್ನು ಕರೆತರುತ್ತೇವೆ. ಈ ವರ್ಷವೂ 4 ಜೋಡಿಗಳನ್ನು ಕರೆತಂದಿದ್ದೇವೆ. ಈ ಜಾತ್ರೆಯಲ್ಲಿ ಹೆಚ್ಚು ನಾಟಿ ರಾಸುಗಳೇ ಬಂದಿರುತ್ತವೆ. ನಮ್ಮ ಎತ್ತುಗಳಿಗೆ ₹ 1.5 ಲಕ್ಷದಷ್ಟು ಹೇಳುತ್ತಿದ್ದೇವೆ’ ಎಂದು ಹೊಳೆನರಸೀಪುರದ ಬೋರೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇಲ್ಲಿಯವರೆಗೆ ನಾವು ಕರೆತಂದಿದ್ದ ಎತ್ತುಗಳು ಬಹುತೇಕ ಬಾರಿ ಮಾರಾಟವಾಗಿವೆ. ನಮ್ಮ ಬೆಲೆಗೆ ಬರದೇ ಹೋದಾಗ ಎತ್ತುಗಳನ್ನು ವಾಪಸು ಕರೆದುಕೊಂಡು ಹೋಗುತ್ತೇವೆ’ ಎಂದರು.

ಟವೆಲ್‌ ಒಳಗಿನ ವ್ಯವಹಾರ

‘ರಾಸುಗಳ ಖರೀದಿ ಹಾಗೂ ಮಾರಾಟದಲ್ಲಿ ದಲ್ಲಾಳಿಗಳೇ ಮುಖ್ಯ ಕಾರ್ಯನಿರ್ವಹಿಸುತ್ತಾರೆ. ಇಲ್ಲಿ ಎಲ್ಲ ವ್ಯವಹಾರಗಳು ಟವೆಲ್‌ ಒಳಗಿನಿಂದಲೇ ನಡೆಯುತ್ತವೆ. ರೈತರನ್ನು ಮಾತಿನಲ್ಲೇ ಕಟ್ಟಿ ಹಾಕಿ, ವ್ಯಾಪಾರ ಕುದುರಿಸಿಬಿಡುತ್ತಾರೆ’ ಎನ್ನುತ್ತಾರೆ ಜಿ.ಹೊಸಹಳ್ಳಿಯ ರೈತ ನಂಜುಂಡಪ್ಪ.

‘ಇತ್ತ ರೈತರಿಗೂ ಲಾಭವಾಗುವುದಿಲ್ಲ. ಅತ್ತ ಖರೀದಿದಾರರಿಗೂ ಹೆಚ್ಚಿನ ಲಾಭವಾಗುವುದಿಲ್ಲ. ಆದರೆ ಚುರುಕು ಮಾತಿನ ದಲ್ಲಾಳಿಗಳು ಇಬ್ಬರಿಂದಲೂ ಕಮಿಷನ್‌ ಪಡೆದು ಜೇಬಿಗಿಳಿಸಿಕೊಳ್ಳುತ್ತಾರೆ’ ಎಂದು ಅಳಲು ತೋಡಿಕೊಂಡರು.

ಟವೆಲ್‌ ಒಳಗೆ ವ್ಯವಹರಿಸುವವರಿಗೆ ಇಲ್ಲಿ ಬಳಸುವ ಸಂಕೇತಗಳ ಪರಿಚಯವಿರಬೇಕು. ದಲ್ಲಾಳಿ ಮತ್ತು ದನಗಳ ವ್ಯವಹಾರ ಮಾಡುವವರು ಈ ಸಂಕೇತಗಳ ಮೂಲಕವೇ ಕೈ ಬೆರಳುಗಳನ್ನು ಹಿಚುಕಿ ವ್ಯವಹಾರ ನಡೆಸುತ್ತಾರೆ.

ಬೀಜದ ಹೋರಿಗೆ ಭಾರಿ ಬೇಡಿಕೆ

ಜಾತ್ರೆಯಲ್ಲಿ ಕರು, ಹೋರಿ ಮತ್ತು ಎತ್ತುಗಳ ಜತೆ ಬೀಜದ ಹೋರಿಗಳಿಗೆ ಭಾರಿ ಬೇಡಿಕೆ ಇರುವುದು ಕಂಡುಬಂತು. ಕೇವಲ ದನಗಳ ವಂಶಾಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬಹುದಾದ ಈ ಹೋರಿಗಳನ್ನು ರೈತರು ದಷ್ಟಪುಷ್ಟವಾಗಿ ತಯಾರು ಮಾಡಿರುತ್ತಾರೆ. ಹೀಗಾಗಿಯೇ ಉಳಿದ ಎತ್ತುಗಳಿಗಿಂತಲೂ ಈ ಹೋರಿಗಳು ನೋಡಲು ಶಕ್ತಿಯುತವಾಗಿ ಕಾಣಿಸುತ್ತವೆ. ಹೀಗಾಗಿ ಜಾತ್ರೆಗೆ ಬಂದಿದ್ದ ಮಕ್ಕಳು ಮತ್ತು ಸಾರ್ವಜನಿಕರು ಈ ಹೋರಿಗಳನ್ನು ನೋಡಿ ಕಣ್ತುಂಬಿಕೊಂಡರು.

‘ಕೆಲವು ಕಡೆ ಇಂಜೆಕ್ಷನ್‌ ಬಳಸಿ ದನಗಳ ವಂಶಾಭಿವೃದ್ಧಿ ಮಾಡಲಾಗುತ್ತದೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ಹೋರಿಗಳ ಮೂಲಕವೇ ಹಸುಗಳಿಗೆ ಗರ್ಭ ತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೀಗಾಗಿ ಕಟ್ಟುಮಸ್ತಾದ ಹೋರಿಗಳನ್ನು ಸಾಕಿ, ಅವುಗಳನ್ನು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಗಂಜಲಗುಂಟೆಯ ಈರಣ್ಣ. ಈ ಬೀಜದ ಹೋರಿಗಳಿಗೆ ₹ 90 ಸಾವಿರದಿಂದ ₹ 3.5 ಲಕ್ಷದವರೆಗೂ ಬೆಲೆ ನಿಗದಿ ಮಾಡಲಾಗಿತ್ತು.

ಹಳ್ಳಿಕಾರ್‌ ಎತ್ತಿನ ಜೋಡಿಗೆ ₹ 6 ಲಕ್ಷ...

‌ಹೆಬ್ಬೂರಿನ ಚಿಕ್ಕಣ್ಣಸ್ವಾಮಿ ಕ್ಷೇತ್ರದಿಂದ ಜಾತ್ರೆಗೆ ಕರೆತಂದಿರುವ ಹಳ್ಳಿಕಾರ್‌ ಎತ್ತುಗಳಿಗೆ ₹ 6 ಲಕ್ಷ ಬೆಲೆ ನಿಗದಿ ಮಾಡಲಾಗಿತ್ತು. 2, 4 ಮತ್ತು 6 ಹಲ್ಲುಗಳಲ್ಲಿದ್ದ 6 ಜೋಡಿ ಎತ್ತಿನ ಜೋಡಿಗಳನ್ನು ತಂದಿದ್ದೇವೆ. ಪ್ರತಿ ವರ್ಷವೂ ಜಾತ್ರೆಗೆ ಎತ್ತುಗಳನ್ನು ತರುವುದು ನಮ್ಮ ಕ್ಷೇತ್ರದ ವಾಡಿಕೆ’ ಎನ್ನುತ್ತಾರೆ ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಧರ್ಮಾಧಿಕಾರಿ ಪಾಪಣ್ಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.