ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾನ್ಯ ಜ್ಞಾನ ಇಲ್ಲದ ಸರ್ಕಾರ’

Last Updated 9 ಫೆಬ್ರುವರಿ 2018, 10:15 IST
ಅಕ್ಷರ ಗಾತ್ರ

ಹಾಸನ : ‘ಮಠ, ಮಾನ್ಯಗಳಿಗೆ ಸರ್ಕಾರ ಕಡಿವಾಣ ಹಾಕುವ ವಿಚಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಸರ್ಕಾರಕ್ಕೆ ಕನಿಷ್ಠ ಸಾಮಾನ್ಯ ಜ್ಞಾನ ಇದೆಯಾ? ಇದು ಹುಚ್ಚರ ಸರ್ಕಾರ’ ಎಂದು ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.

ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜ್ಯದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದು, ರಾಜ್ಯಕ್ಕೆ ಖಳನಾಯಕನಾಗಲು ಹೊರಟಿದ್ದಾರೆ. ಇಂಥದ ಪಾಪದ ಚಿಂತನೆ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರುವ ಸಂದರ್ಭದಲ್ಲಿ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಖ್ಯಮಂತ್ರಿ ಕೈ ಹಾಕಿದ್ದಾರೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂರನ್ನು ಓಲೈಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಕಾರ್ಯಕರ್ತರನ್ನು ಒಗ್ಗೂಡಿಸಲು ರಾಜ್ಯದಲ್ಲಿ ಹಮ್ಮಿಕೊಂಡಿರುವ ಎರಡನೇ ಹಂತದ ಸಮಾವೇಶ ಫೆ. 9ರಂದು ಸಕಲೇಶಪುರದಿಂದ ಆರಂಭಗೊಳ್ಳಲಿದೆ. ಪರಿವರ್ತನಾ ಯಾತ್ರೆ ನಂತರ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳುತ್ತಿದ್ದು, ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಪೂಜೆ ಸಲ್ಲಿಸಿ ಸಮಾವೇಶಕ್ಕೆ ಚಾಲನೆ ನೀಡುವರು ಎಂದು ವಿವರಿಸಿದರು. ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಸ್ಥಳೀಯ ಸಮಸ್ಯೆಗಳ ಕುರಿತು ಪಕ್ಷದ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗುವುದು. ಈ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಪಕ್ಷದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಮುಖಂಡ ಕೆ. ಶಿವರಾಂ ಆಗಮಿಸುವರು. 35 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮುಂದಿನ ದಿನಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಸಭೆಗಳನ್ನು ಮಾಡಲಾಗುವುದು. ಈ ಮೂಲಕ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಲು ಮುನ್ನುಡಿ ಬರೆಯಲಾಗುವುದು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಮಿಷನ್ 150 ವಿಫಲವಾಗಲು ಬಿಡುವುದಿಲ್ಲ. ಇದರಲ್ಲಿ ಸಕಲೇಶಪುರ, ಬೇಲೂರು, ಹಾಸನ, ಅರಸೀಕೆರೆ, ಹೊಳೆನರಸೀಪುರ ಕ್ಷೇತ್ರಗಳೂ ಸೇರಿವೆ. ಹಾಸನ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಉತ್ತಮ ವಾತಾವರಣವಿದ್ದು, ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು, ಆನೆ ಕಾರಿಡಾರ್‌ನಿರ್ಮಾಣಕ್ಕೆ ಕೇಂದ್ರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ತಿಳಿಸಿದರು.

ಪಕ್ಷದ ತೀರ್ಮಾನದಂತೆ ಸ್ಪರ್ಧೆ

ಜಿಲ್ಲೆಯ ಅರಸೀಕೆರೆ, ಚಾಮರಾಜನಗರ, ಬೆಂಗಳೂರಿನ ವಿಜಯನಗರ, ಗೋವಿಂದರಾಜ್ ನಗರ ಪೈಕಿ ಪಕ್ಷ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಬ್ಯಾಗ್ ರೆಡಿ ಇದೆ. ವರುಣಾ ಕ್ಷೇತ್ರಕ್ಕೆ ಹೋಗುವುದಿಲ್ಲ. ರಾಜ್ಯ ನಾಯಕರು ಈಗಾಗಲೇ ಅಲ್ಲಿಗೆ ಅಭ್ಯರ್ಥಿಯನ್ನು ಗೊತ್ತು ಮಾಡಿದ್ದಾರೆ. ಅರಸೀಕೆರೆಯಿಂದ ಸ್ಪರ್ಧಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಪಕ್ಷದ ನಿರ್ಣಯವೇ ಅಂತಿಮ ಎಂದು ವಿ.ಸೋಮಣ್ಣ ಹೇಳಿದರು.

ಪಕ್ಷಕ್ಕೆ ಬರುವವರಿಗೆ ಸ್ವಾಗತ

ವಸತಿ ಸಚಿವ ಕೃಷ್ಣಪ್ಪ ಹಾಗೂ ಪುತ್ರ ಪ್ರಿಯ ಕೃಷ್ಣ ಬಿಜೆಪಿ ಸೇರುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಅವರು ಬಂದರೂ, ಬಾರದೇ ಇದ್ದರೂ ನನಗೆ ಸಮಸ್ಯೆ ಇಲ್ಲ. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಲಿದ್ದಾರೆ. ಆದರೆ, ಅವರ ಪೂರ್ವಪರ ಗಮನಿಸಬೇಕಾಗುತ್ತದೆ ಎಂದು ಸೋಮಣ್ಣ ಹೇಳಿದರು.

* * 

ಕಾರ್ಯಕರ್ತರನ್ನು ಒಗ್ಗೂಡಿಸಲು ಎರಡನೇ ಹಂತದ ಸಮಾವೇಶ ಫೆ. 9ರಂದು ಸಕಲೇಶಪುರದಿಂದ ಆರಂಭಗೊಳ್ಳಲಿದೆ
ವಿ.ಸೋಮಣ್ಣ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT