ಶುಕ್ರವಾರ, ಡಿಸೆಂಬರ್ 6, 2019
26 °C

ವಾಲ್ಮೀಕಿವೃಕ್ಷದಲ್ಲಿ ರಾಮಕಥೆಯ ಬಿಳಲುಗಳು

Published:
Updated:
ವಾಲ್ಮೀಕಿವೃಕ್ಷದಲ್ಲಿ ರಾಮಕಥೆಯ ಬಿಳಲುಗಳು

ನಾವು ನಿತ್ಯ ಮಾತನಾಡುವಾಗ ಮಾತು ದೀರ್ಘವಾಗುತ್ತ, ಅದು ಎಲ್ಲೆಲ್ಲೋ ಸಾಗುವುದುಂಟು ಅಲ್ಲವೆ? ಆಗೆಲ್ಲ ನಾವು ‘ಇದೊಳ್ಳೆ ರಾಮಾಯಣ ಆಯಿತಲ್ಲ!’ ಎಂದು ಉದ್ಗರಿಸುತ್ತೇವಷ್ಟೆ. ರಾಮಾಯಣಪರಂಪರೆ ಹಲವು ಬಳ್ಳಿಗಳಲ್ಲಿ ಬೆಳೆಯುತ್ತ, ಹಲವು ಮರಗಳನ್ನೂ ಚಪ್ಪರಗಳನ್ನೂ ಆವರಿಸಿಕೊಂಡಿದೆ ಎನ್ನುವುದಕ್ಕೂ ನಮ್ಮ ಮಾನಸಿಕತೆ ಅವನ್ನು ಹೇಗೆ ನೆಚ್ಚಿದೆ, ಒಪ್ಪಿದೆ, ಅಪ್ಪಿದೆ ಎನ್ನುವುದಕ್ಕೂ ನಿದರ್ಶನವಾಗುತ್ತದೆ, ಈ ಸಹಜಸ್ಪಂದನ.

ರಾಮಾಯಣಕ್ಕೆ ಅಂಟಿರುವ ‘ಪ್ರಕ್ಷಿಪ್ತ’ಗಳನ್ನು ಕುರಿತು ನೋಡುತ್ತಿದ್ದೇವೆ. ಇಡಿಯ ಕಾಂಡಗಳನ್ನೇ ಪ್ರಕ್ಷಿಪ್ತ ಎಂದು ಹೇಳುವುದನ್ನು ನೋಡಿದೆವು. ಈಗ ಆ ಕಾಂಡಗಳಲ್ಲಿಯೇ ಇಣುಕುವ ಪ್ರಕ್ಷಿಪ್ತಗಳನ್ನು ನೋಡಬಹುದು. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು  ‘ಆದಿಕವಿ ವಾಲ್ಮೀಕಿ’ಯಲ್ಲಿ ಅವನ್ನು ಸಂಗ್ರಹಿಸಿದ್ದಾರೆ; ಅವುಗಳಲ್ಲಿ ಕೆಲವನ್ನು ಸಂಗ್ರಹರೂಪದಲ್ಲಿ ಇಲ್ಲಿ ಉಲ್ಲೇಖಿಸಬಹುದು:

‘ಈ ಮಹಾಕಾವ್ಯದಲ್ಲಿ ಪ್ರಕ್ಷಿಪ್ತ ಭಾಗಗಳಿವೆಯೆಂಬುದನ್ನು ಸಂಪ್ರದಾಯದ ಅನುಯಾಯಿಗಳು ಹೇಳುತ್ತಾರೆ. ಆದರೆ ಯಾವುದು ಪ್ರಕ್ಷಿಪ್ತ ಎಂಬ ವಿಷಯದಲ್ಲಿ ಮತಭೇದ ಕಾಣುತ್ತದೆ. ಆಧುನಿಕ ವಿಚಾರದ ದೃಷ್ಟಿಯಿಂದ ಪ್ರಕ್ಷೇಪವೆನ್ನುವ ಭಾಗದಲ್ಲಿ ಉತ್ತರಕಾಂಡವನ್ನು ನಾವು ಮೊದಲಲ್ಲಿ ಹೇಳಬೇಕು... ವಾಲ್ಮೀಕಿಯ ಕೃತಿಯನ್ನು ಹಾಡಿಕೊಂಡು ಬಂದ ಕುಶೀಲವರು ರಾಮನ ಎದುರಿಗೆ ಹಾಡಿದ್ದು ಆರು ಕಾಂಡವನ್ನು ಮಾತ್ರ ಇರಬೇಕು. ಆಗ್ಯೆ ಇವರು ಕುಶೀಲವರು. ಈ ಮಾತು ಕುಶಲವ ಆಗಿ ಸೀತೆಯ ಮಕ್ಕಳ ಹೆಸರಾದದ್ದು ಉತ್ತರಕಾಂಡದ ರಚನೆಯ ಕಾಲಕ್ಕೆ... ಉತ್ತರಕಾಂಡ ವಾಲ್ಮೀಕಿಯ ಕೃತಿಯಲ್ಲವೆಂಬ ಮಾತನ್ನು ನಮ್ಮ ಜನ ಶಾಸ್ತ್ರದೃಷ್ಟಿಯಿಂದ ಒಪ್ಪುವುದಿಲ್ಲವಾದರೂ ನಡತೆಯಿಂದ ಸರಿಯೆಂದು ಒಪ್ಪಿದ್ದಾರೆ. ರಾಮಾಯಣದ ಪಾರಾಯಣವೆಂದರೆ ಆರು ಕಾಂಡದ ಪಾರಾಯಣ; ಏಳನೆಯ ಕಾಂಡವನ್ನು ಯಾರೂ ಪಾರಾಯಣ ಮಾಡುವುದಿಲ್ಲ.

‘... ಮುಖ್ಯವಾಗಿ ಇದು ಕಲ್ಪನಾರಾಜ್ಯ; ಸಂಗತಿ ಹೀಗೆಯೇ ನಡೆಯಿತೆಂದು ನಾವು ಹೇಳುವಂತಿಲ್ಲ; ಆದರೆ ಏನೋ ನಡೆದಿರಬೇಕೆನ್ನುವುದು ನಿಸ್ಸಂದೇಹ... ರಾಮನು ವಿಷ್ಣುವಿನ ಅವತಾರವೆಂದು ಹೇಳುವುದಕ್ಕೆ ಪ್ರವೃತ್ತವಾಗಿರುವ ಸರ್ಗ ಮತ್ತು ವಾಕ್ಯಗಳು, ವಿಷ್ಣು ಶಿವನಿಗಿಂತ ಹೆಚ್ಚು, ಶಿವ ವಿಷ್ಣುವಿಗಿಂತ ಹೆಚ್ಚು ಎಂದು, ಅಥವಾ ಇವರ ಮಹಿಮೆಯನ್ನು ತೋರಿಸುವುದಕ್ಕಾಗಿ ಪ್ರವೃತ್ತವಾಗಿರುವ ವಾಕ್ಯಗಳು, ಇವೆಲ್ಲ ಬೇರೆಯ ಜನರು ಸೇರಿಸಿದುವೇ. ರಾಮನು ವಿಷ್ಣುವಿನ ಅವತಾರವೆಂದು ಸಾಧಿಸುವುದಕ್ಕಾಗಿ ಹೇಳಿರುವ ಕಥಾಭಾಗ ಋಷ್ಯಶೃಂಗನ ವೃತ್ತಾಂತದಂತೆ ಆ ಸ್ಥಲ ಬಿರುಕುಬಿಟ್ಟು ಕಾಣುತ್ತದೆ.

ನಮ್ಮ ದೇಶದ ಕಾವ್ಯಗಳಲ್ಲಿ, ಪುರಾಣಗಳಲ್ಲಿ, ಕಲೆಯಲ್ಲಿ, ಶಾಸ್ತ್ರದಲ್ಲಿ, ಶಿವಭಕ್ತರು ವಿಷ್ಣುವಿನಿಂದಲೂ, ವಿಷ್ಣುಭಕ್ತರು ಶಿವನಿಂದಲೂ ತಮ್ಮ ದೇವರ ಮಹಿಮೆಯನ್ನು ಹೊಗಳಿಸಿ ತಮ್ಮ ದೇವರಿಗೆ ಸೇವೆ ಮಾಡಿಸಿ ತಮ್ಮ ದೊಡ್ಡಸ್ತಿಕೆಯನ್ನು ಸಿದ್ಧಾಂತ ಮಾಡುತ್ತಬಂದಿರುವುದು ಕಾಣುತ್ತದೆ. ರಾಮಾಯಣ ಇಂಥವರ ಕೈಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಸಗರನ ಕಥೆ, ವಶಿಷ್ಠ ವಿಶ್ವಾಮಿತ್ರರ ಕಲಹದ ಕಥೆ, ಪರಶುರಾಮನ ಕಥೆ, ಕಾಕಾಸುರ ಕಥೆ, ಇವೂ ಪ್ರಕ್ಷಿಪ್ತವೆಂದು ಕಾಣುತ್ತದೆ. ಹೀಗೆಯೇ ಅಲ್ಲಲ್ಲಿ ಅಧಿಕ ಪಾಠ ಸರ್ಗಗಳಿವೆ; ಗಯೆ ಮೊದಲಾದ ಸ್ಥಲಗಳ ಮಹಿಮೆಯ ವರ್ಣನೆಯಿದೆ... ಸೀತಾಪಹರಣವಾದ ಒಡನೆ ಬರುವ ಸರ್ಗಗಳು ಹಲವು ಪ್ರಕ್ಷಿಪ್ತವೆಂದು ಕಾಣುತ್ತವೆ. ಲಂಕಾದಹನದ ಕತೆಯೆಲ್ಲ ಪ್ರಕ್ಷಿಪ್ತವಾಗಿ ಕಾಣುತ್ತದೆ... ಹೀಗೆ ರಾಮಾಯಣದಲ್ಲಿ ಬರಬರುತ್ತ ಅಲ್ಲೆರಡು ಮಾತು ಇಲ್ಲೊಂದು ಸರ್ಗ, ಇನ್ನೊಂದು ಕಡೆ ಒಂದು ಕಥಾಸಂದರ್ಭ, ಹೀಗೆ ಇತರರು ವಿಷಯವನ್ನು ಸೇರಿಸಿ ವಾಲ್ಮೀಕಿ ಬರೆದ ಕಾವ್ಯವನ್ನು ಹಿಗ್ಗಿಸಿದ್ದಾರೆ.

ಆದರೆ ಮೊತ್ತದಲ್ಲಿ ಇಂಥ ಪ್ರಕ್ಷೇಪಣ ಹೊರಕ್ಕೆ ಕಾಣುತ್ತದೆ; ಒಳಗೆ ಬೆರೆತಿಲ್ಲ; ವಾಲ್ಮೀಕಿಯ ಕವಿತೆಯ ಯೋಗ್ಯತೆಯನ್ನು ಕಡಿಮೆ ಮಾಡಿಲ್ಲ... ಕಾವ್ಯದ ಜೀವಭೂತವಾದ ಭಾಗ ವಾಲ್ಮೀಕಿಯದೇ ಅಹುದು ಎಂದು ಹೇಳುವುದಕ್ಕೆ ಎಲ್ಲರೂ ಒಪ್ಪುತ್ತಾರೆ ಮತ್ತು ಯಾವ ಅಡ್ಡಿಯೂ ಇಲ್ಲ. ರಾಮಾಯಣದ ಮಹಿಮೆಯಿರುವುದು ಈ ಭಾಗದಲ್ಲಿ; ವಾಲ್ಮೀಕಿಯ ಕವಿತೆಯ ಶಿಖರವಿರುವುದೂ ರಾಮಾಯಣವು ಪ್ರಪಂಚದ ಕಾವ್ಯಗಳಲ್ಲೆಲ್ಲ ಹಿರಿದಾಗಿ ಕಾಣುವುದೂ ಈ ಭಾಗದಲ್ಲಿ, ಸತ್ಯದ ದೃಷ್ಟಿಯಿಂದ ಈಗ ಪ್ರಾಚುರ್ಯದಲ್ಲಿರುವ ಕಾವ್ಯದ ಕೆಲವು ಭಾಗ ಅಲ್ಲಿ ಇಲ್ಲಿ ವಾಲ್ಮೀಕಿಯದಲ್ಲವೆಂದು ಜ್ಞಾಪಕದಲ್ಲಿಟ್ಟುಕೊಳ್ಳುವುದು ಅವಶ್ಯಕ. ಇದಾದ ಮೇಲೆ ನಾವು ನಮ್ಮ ಗಮನವನ್ನು ಸಂಪೂರ್ಣವಾಗಿ ವಾಲ್ಮೀಕಿಯ ಕವಿತೆಗೆ ಕೊಡಬಹುದು.’

ಮಾಸ್ತಿ ಅವರ ಮಾತುಗಳಲ್ಲಿ ಭಾರತೀಯ ಕಾವ್ಯತತ್ತ್ವವನ್ನೂ ಸಾಂಸ್ಕೃತಿಕ ಸತ್ತ್ವವನ್ನೂ ಜೀರ್ಣಿಸಿಕೊಂಡ ಹದ ಮತ್ತು ಪಾಕವನ್ನು ಗಮನಿಸಬಹುದು.

ಕಾವ್ಯಕಲೆಯ ಬಗ್ಗೆಯೇ ಕಾವ್ಯವನ್ನು ಬರೆದವನು ಪ್ರಾಚೀನ ಗ್ರೀಸ್‌ನ ಹೊರೆಸ್‌; ಮಹಾಕವಿಗಳೂ ಕೂಡ ಅನವಧಾನದಿಂದ ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ ಎಂಬುದನ್ನು ಸೂಚಿಸಲು ‘ಹೋಮರನೂ ತೂಕಡಿಸುತ್ತಾನೆ’ (Homer nods) ಎಂದಿದ್ದಾನೆ.

‘Even Homer nods’ ಎಂಬ ನುಡಿಗಟ್ಟು ಇದರಿಂದ ಹುಟ್ಟಿಕೊಂಡಿದೆ. ವಾಲ್ಮೀಕಿಯಂಥ ವಾಲ್ಮೀಕಿಯೂ ಕೂಡ ರಾಮಾಯಣದಲ್ಲಿ ಹೀಗೆ ಹಲವು ತಪ್ಪುಗಳನ್ನು ಮಾಡಿದ್ದಾನೆ, ಎಂದು ಗೌರೀಶ ಕಾಯ್ಕಿಣಿ ಹಲವು ಲೇಖನಗಳನ್ನು ಬರೆದು, ಆ ಗುಚ್ಛಕ್ಕೆ ‘ವಾಲ್ಮೀಕಿ ತೂಕಡಿಸಿದಾಗ’ ಎಂದು ಹೆಸರಿಸಿದ್ದಾರೆ. (ಯಥಾವಕಾಶ ಈ ವಿವರಗಳನ್ನು ಮುಂದೆ ನೋಡಿ, ವಿಮರ್ಶಿಸಲಾಗುವುದು.) ಒಟ್ಟಿನಲ್ಲಿ ಪ್ರಕ್ಷಿಪ್ತಗಳ ಮತ್ತು ಕಾವ್ಯದೋಷಗಳ ಬಲೆಯಲ್ಲಿ ವಾಲ್ಮೀಕಿರಾಮಾಯಣವೂ ಸೆರೆ ಸಿಕ್ಕಿದೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ಪ್ರಕ್ಷಿಪ್ತವನ್ನಾಗಲೀ ಕಾವ್ಯಕರ್ಮವನ್ನಾಗಲೀ ಭಾರತೀಯ ಸಂಸ್ಕೃತಿ ಹೇಗೆ ಕಂಡಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಪರಂಪರೆಯ ಈ ನಿಲುವನ್ನು ಪಾದೆಕಲ್ಲು ನರಸಿಂಹ ಭಟ್ಟ ಅವರು ಗ್ರಹಿಸಿರುವ ವಿಧಾನ ಅನನ್ಯವಾಗಿದೆ:

‘ಪ್ರಕ್ಷಿಪ್ತಾಂಶಗಳ ನಿರ್ಣಯದ ಉದ್ದೇಶವೇನು ಎಂಬುದನ್ನು ಮಥಿಸಿಕೊಳ್ಳದೆ ಈ ಕಾರ್ಯ ನಡೆದುದರಿಂದ ಸಂವೇದನೆ ತಪ್ಪುದಾರಿ ಹಿಡಿಯುವಂತಾಗಿದೆ! ಒಂದು ಗ್ರಂಥಾಂಶ ಗ್ರಂಥಕಾರನದ್ದಲ್ಲವಾದರೂ ಗ್ರಂಥಕಾರನ ಹೃದಯಕ್ಕೆ ಸಂವಾದಿಯಾಗಿರುವ ಸಾಧ್ಯತೆ ಇಲ್ಲದೆ ಇಲ್ಲ. ಉದಾಹರಣೆಗೆ, ರಾಮಾಯಣದ ಬಾಲಕಾಂಡ–ಉತ್ತರಕಾಂಡಗಳು ವಾಲ್ಮೀಕಿ ವಿರಚಿತವಲ್ಲದಿರಬಹುದು; ಆದರೆ ಅದೇ ಪರಂಪರೆಗೆ ಸೇರಿದ ಇನ್ನೊಬ್ಬ ಕವಿ ರಾಮಾಯಣದ ಪ್ರಾಶಸ್ತ್ಯವನ್ನು ವಿಮರ್ಶಾತ್ಮಕವಾಗಿಯೇ ಎತ್ತಿಹಿಡಿಯುವ ಅಂಶಗಳನ್ನು ರಚಿಸಿ ಅವನ್ನು ರಾಮಾಯಣ ಭಾಗಗಳೆಂಬಂತೆ ಜೋಡಿಸುವುದು ಅಂದಿನ ವಿಮರ್ಶಾಸಂಪ್ರದಾಯವೇ ಆಗಿದ್ದು ಅದು ವಾಲ್ಮೀಕಿಹೃದಯಕ್ಕೆ ಸಮ್ಮತ ಆಗಿರುವ ಸಾಧ್ಯತೆ ಇದೆ.

ಇನ್ನೊಂದು ಸ್ಪಷ್ಟನೆ ಕೊಡುವುದಿದ್ದರೆ: ಒಂದು ಕಾಲದಲ್ಲಿ ಗ್ರಂಥಪೀಠಿಕೆಯನ್ನು ಪ್ರತ್ಯೇಕಿಸಿ ಬರೆಯುವ ವಿಧಾನವಿದ್ದರೆ (ಇಂದಿನಂತೆ), ಇನ್ನೊಂದು ಕಾಲದಲ್ಲಿ ಪೀಠಿಕೆಯನ್ನು ಗ್ರಂಥಭಾಗವೆಂದೇ ಕಾಣುವಂತೆ ಸೇರಿಸಿ ಬರೆಯುವ ವಿಧಾನ ಇರಬಾರದೆಂದಿಲ್ಲ. ಇಂತಹ ಸಂದರ್ಭದಲ್ಲಿ ಗ್ರಂಥಕಾರನಿಗೂ ಪೀಠಿಕಾಕಾರನಿಗೂ ಶತಮಾನಗಳ ಅಂತರವಿದ್ದರೂ ಅವರಿಬ್ಬರೂ ತಾತ್ತ್ವಿಕ ಐಕ್ಯವನ್ನು ಹೊಂದಿದವರಾಗಿರುತ್ತಾರೆ. ಈ ತಾತ್ತ್ವಿಕ ಐಕ್ಯವನ್ನೇ ಅವಧರಿಸಿ ವ್ಯಕ್ತಿ–ಭಿನ್ನತೆಯನ್ನು ಇದ್ದರೂ ಇಲ್ಲದಂತೆ ಭಾವಿಸಿ ಗ್ರಂಥರಚನೆಯಾಗುತ್ತಿದ್ದ ಕಾಲದಲ್ಲಿ ಉಂಟಾದ ಗ್ರಂಥಗಳ ಕರ್ತೃತ್ವದ ಕುರಿತು ವಿಮರ್ಶಿಸುವಾಗ ಸಿಗುವ ಪ್ರಕ್ಷಿಪ್ತತೆಯನ್ನು ತನ್ನ ಪ್ರತಿಷ್ಠೆಗೋಸ್ಕರ ಕೀಳುಕವಿ ತಾನು ರಚಿಸಿದ್ದನ್ನು ಮೇಲುಕವಿಯ ಕಾವ್ಯದ ಅಂಶವಾಗಿಸುವ ಪ್ರಕ್ಷಿಪ್ತತೆಯೊಂದಿಗೆ ಸಮೀಕರಿಸಿದಲ್ಲಿ ಸಂವೇದನೆಗೆ ದೊಡ್ಡ ಅಪಚಾರವಾಗುತ್ತದೆ. ಈ ಸೂಕ್ಷ್ಮಾಂಶವನ್ನು ಕಾಲನಿರ್ಣಯಕಾರರು ಗಮನಿಸಿಲ್ಲ.

ಪ್ರಕ್ಷಿಪ್ತಾಂಶನಿರ್ಣಯದ ಸಂದರ್ಭದಲ್ಲಿ ಗ್ರಂಥಸಂವೇದನೆಯಿಂದಲೇ ಪ್ರೇರಿತವಾಗಿ ರೂಪುಗೊಂಡು ಗ್ರಂಥಾಂಶವಾಗಿ ಸೇರಿದ ‘ಸಹಜಪ್ರಕ್ಷಿಪ್ತ’ ಮತ್ತು ಗ್ರಂಥಸ್ವಾರಸ್ಯವನ್ನು ಕೆಡಿಸುವಂತೆ ಸೇರಿದ ‘ಕೃತಕಪ್ರಕ್ಷಿಪ್ತ’ ಎಂಬ ಎರಡು ಪ್ರಕಾರಗಳ ವಿವೇಚನೆ ಭಾರತೀಯ ಗ್ರಂಥಗಳ ಅಧ್ಯಯನ ಸಂದರ್ಭದಲ್ಲಿ ಅಗತ್ಯ, ಯಾಕೆಂದರೆ ಎರಡೂ ಪ್ರಕ್ಷಿಪ್ತಗಳು ಆಗಿರುವ ಸಾಧ್ಯತೆ ಇದೆ.’

ಈಗ ಕುಶ–ಲವರು ರಾಮಾಯಣವನ್ನು ಹಾಡಲು ಸಿದ್ಧರಾಗಿದ್ದಾರೆ. ಇನ್ನು ತಡಮಾಡುವುದು ಬೇಡ; ಕೇಳೋಣ.

 

ಪ್ರತಿಕ್ರಿಯಿಸಿ (+)