ಭಾನುವಾರ, ಮೇ 31, 2020
27 °C

ವಿಜಯ ಹಜಾರೆ ಟ್ರೋಫಿ: ಮೂರನೇ ಗೆಲುವಿನತ್ತ ಕರ್ನಾಟಕದ ಕಣ್ಣು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ವಿಜಯ ಹಜಾರೆ ಟ್ರೋಫಿ: ಮೂರನೇ ಗೆಲುವಿನತ್ತ ಕರ್ನಾಟಕದ ಕಣ್ಣು

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸುವ ಕನಸು ಕಾಣುತ್ತಿರುವ ಕರ್ನಾಟಕ ತಂಡವು ಉತ್ತಮ ಆರಂಭ ಮಾಡಿದೆ. ಟೂರ್ನಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ತಂಡವು ಶನಿವಾರ ಹರಿಯಾಣ ತಂಡದ ಸವಾಲು ಎದುರಿಸಲು ಸನ್ನದ್ಧವಾಗಿದೆ.

ರಾಜಾನುಕುಂಟೆಯ ಜಸ್ಟ್ ಕ್ರಿಕೆಟ್‌ ಅಕಾಡೆಮಿ ಮೈದಾನದಲ್ಲಿ ಎರಡೂ ಪಂದ್ಯಗಳು ನಡೆದಿದ್ದವು. ಮೊದಲ ಪಂದ್ಯದಲ್ಲಿ ಬರೋಡಾ ಮತ್ತು ಎರಡನೇ ಪಂದ್ಯದಲ್ಲಿ ಅಸ್ಸಾಂ ವಿರುದ್ಧ  ಆತಿಥೇಯ ತಂಡವು ಅಧಿಕಾರಯುತ ಜಯ ದಾಖಲಿಸಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಉತ್ಕೃಷ್ಟ  ಆಟವಾಡಿತ್ತು.

ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಮಯಂಕ್ ಅಗರವಾಲ್ ಎರಡನೇಯದ್ದರಲ್ಲಿ 84 ರನ್‌ ಗಳಿಸಿ ಅಮೋಘ ಲಯದಲ್ಲಿದ್ದಾರೆ. ಆದರೆ ಕೆ.ಎಲ್. ರಾಹುಲ್ ಇನ್ನೂ ದೊಡ್ಡ ಮೊತ್ತ ಗಳಿಸುವಲ್ಲಿ ಸಫಲರಾಗಿಲ್ಲ. ಕರುಣ್ ನಾಯರ್,  ಆರ್. ಸಮರ್ಥ್, ಧಾರವಾಡದ ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ ಕೂಡ ಮಿಂಚಿದ್ದರು. ಅದರಿಂದಾಗಿ 300ಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ಪೇರಿಸಲು ತಂಡಕ್ಕೆ ಸಾಧ್ಯವಾಗಿತ್ತು. ಇವರೆಲ್ಲರೂ ಹರಿಯಾಣ ವಿರುದ್ಧವೂ ಮಿಂಚುವ ನಿರೀಕ್ಷೆ ಇದೆ. ಗಾಯಗೊಂಡಿರುವ ಸಿ.ಎಂ. ಗೌತಮ್ ಬದಲಿಗೆ ಶರತ್ ಶ್ರೀನಿವಾಸ್ ಸ್ಥಾನ ಪಡೆದಿದ್ದಾರೆ. ಸ್ಟುವರ್ಟ್‌ ಬಿನ್ನಿ ತಂಡಕ್ಕೆ ಮರಳುವ ಕುರಿತು ಖಚಿತವಾಗಿಲ್ಲ. ಒಂದೊಮ್ಮೆ ಬಿನ್ನಿ ಸ್ಥಾನ ಪಡೆದರೆ, ಪವನ್ ಅಥವಾ ಅನಿರುದ್ಧ ಜೋಶಿ ವಿಶ್ರಾಂತಿ ಪಡೆಯಬಹುದು.

ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಆರ್. ವಿನ ಯಕುಮಾರ್ ಕೂಡ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದ್ದರಿಂದ ಟಿ.ಪ್ರದೀಪ್ ವಿಶ್ರಾಂತಿ ಪಡೆಯಬಹುದು. ಕಳೆದ ಪಂದ್ಯದಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದ ಪ್ರಸಿದ್ಧ ಎಂ ಕೃಷ್ಣ ಅವರು ವಿನಯ್‌ ಮತ್ತು ಮಿಥುನ್ ಜೊತೆಗೆ ಬೌಲಿಂಗ್ ಹೊಣೆ ನಿರ್ವಹಿಸುವ ನಿರೀಕ್ಷೆ ಇದೆ.   ಆಲ್ ರೌಂಡರ್‌ಗಳಾದ ಶ್ರೇಯಸ್ ಗೋಪಾಲ್ ಮತ್ತು ಕೆ. ಗೌತಮ್ ಕೂಡ ಉತ್ತಮ ಫಾರ್ಮ್‌ನಲ್ಲಿರುವುದು ಹರಿಯಾಣ ತಂಡಕ್ಕೆ ಕಠಿಣ ಸವಾಲು ಒಡ್ಡಬಲ್ಲರು.ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ನಾಯಕತ್ವದ ಹರಿಯಾಣ ತಂಡವು ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಿದೆ. ಬರೋಡಾ ಎದುರು ಸೋತಿತ್ತು. ಆದರೆ ಬಲಿಷ್ಠ ಪಂಜಾಬ್ ಎದುರು ಗೆದ್ದಿದೆ.

ಆ ಪಂದ್ಯದಲ್ಲ ಆರಂಭಿಕ ಬ್ಯಾಟ್ಸ್‌ ಮನ್ ಶುಭಂ ರೋಹಿಲ್ಲಾ 96 ರನ್‌ ಗಳಿಸಿದ್ದರು. ಚೈತನ್ಯ ಬಿಷ್ಣೊಯ್, ಹಿಮಾಂಶು ರಾಣಾ ಅವರು ಕೂಡ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಬರೀಂದರ್ ಸಿಂಗ್ ಸ್ರಾನ್, ಮನಪ್ರೀತ್ ಸಿಂಗ್ ಗ್ರೆವರ್ ಮತ್ತು ಸಿದ್ಧಾರ್ಥ್ ಕೌಲ್ ತಲಾ ಎರಡು ವಿಕೆಟ್ ಕಬಳಿಸಿ ಹರಿಯಾಣಕ್ಕೆ ಗೆಲುವು ಸುಲಭ ಗೊಳಿಸಿದ್ದರು. ಪಂಜಾಬ್ ತಂಡದ ಯುವರಾಜ್ ಸಿಂಗ್, ಶುಭಮನ್ ಗಿಲ್ ಅವರನ್ನು ಕಟ್ಟಿಹಾಕುವಲ್ಲಿ ಸಫಲರಾಗಿದ್ದರು. ಈ ಬೌಲರ್‌ಗಳು ಕರ್ನಾಟಕದ ಬ್ಯಾಟಿಂಗ್ ಪಡೆಗೆ ಕಠಿಣ ಸವಾಲು ಒಡ್ಡಬಹುದು. ಇದರಿಂದಾಗಿ ಪಂದ್ಯವು ರೋಚಕ ಘಟ್ಟ ತಲುಪುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.