ತಾರಸಿ ತೋಟದಿಂದ ತಾಜಾ ತರಕಾರಿ

7

ತಾರಸಿ ತೋಟದಿಂದ ತಾಜಾ ತರಕಾರಿ

Published:
Updated:

ಮೂಡಿಗೆರೆ: ಮನೆಗೆ ಬೇಕಾದ ತಾಜಾ ತರಕಾರಿಗಳನ್ನು ಪಡೆದುಕೊಳ್ಳಲು ತಾರಸಿ ತೋಟಗಳ ನಿರ್ಮಾಣ ಅಗತ್ಯವಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್‌ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ‘ತಾರಸಿ ತೋಟಗಳ ನಿರ್ವಹಣಾ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿ ವ್ಯರ್ಥವಾಗುವ ತ್ಯಾಜ್ಯಗಳನ್ನು ಬಳಸಿಕೊಂಡು, ಮನೆಯ ಮೇಲಿನ ತಾರಸಿಯಲ್ಲಿ ತರಕಾರಿ, ಹಣ್ಣು, ಸೊಪ್ಪಿನ ಗಿಡಗಳನ್ನು ಸುಲಭವಾಗಿ ಬೆಳೆಯಬಹುದು. ಮಲೆನಾಡಿನಲ್ಲಿ ಬೆಳೆಯುವ ಬಸಲೆ ಸೊಪ್ಪಿಗೆ ಸರ್ವ ಕಾಲದಲ್ಲೂ ಬೇಡಿಕೆಯಿದ್ದು, ತಾರಸಿಯಲ್ಲಿ ಬೆಳೆದು ಮಾರಾಟ ಮಾಡಲು ಅವಕಾಶವಿದೆ ಎಂದರು.

ತ್ರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಮಾತನಾಡಿ, ‘ಅನಾದಿ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಮನೆಗೆ ಬೇಕಾದ ಸೊಪ್ಪು ತರಕಾರಿಗಳನ್ನು ಮನೆಯಂಗಳದಲ್ಲಿಯೇ ಬೆಳೆಯುವ ಪದ್ಧತಿಯಿತ್ತು. ಆದರೆ, ನಾಡೆಲ್ಲವೂ ಕಾಂಕ್ರೀಟೀಕರಣಗೊಂಡ ನಂತರ ಭೂಮಿಯ ಕೊರತೆಯಿಂದ, ತಾರಸಿ ಬೆಳೆಯ ಬಳಕೆ ಜಾರಿಗೆ ಬಂದಿದ್ದು, ತಾರಸಿ ಬೆಳೆಯು ಪಟ್ಟಣದಲ್ಲಿ ಹೆಚ್ಚು ಉಪಯುಕ್ತವಾಗಿದೆ. ತರಕಾರಿಗಳನ್ನು ಬೆಳೆಯಲು ಜಾಗವಿಲ್ಲ ಎಂಬ ಧೋರಣೆಯನ್ನು ಕೈಬಿಟ್ಟು, ಮನೆಯ ತಾರಸಿಯಲ್ಲಿಯೇ ಅಗತ್ಯ ವಸ್ತುಗಳನ್ನು ಬೆಳೆಯಬೇಕು’ ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಅಮಿನ್‌ ಅಹಮ್ಮದ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ತಾರಸಿ ತೋಟಗಾರಿಕೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ತಾರಸಿ ಕೃಷಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಸರ್ಕಾರವು ತಾರಸಿ ತೋಟಗಳ ನಿರ್ವಹಣೆ ಕುರಿತು ತರಬೇತಿ ನೀಡುತ್ತಿದ್ದು, ತರಬೇತಿಯಲ್ಲಿ ಪಾಲ್ಗೊಂಡ ಫಲಾನುಭವಿಗಳು ಉತ್ತಮ ನಿರ್ವಹಣೆಯೊಂದಿಗೆ ಮಾದರಿ ತೋಟಗಳನ್ನು ನಿರ್ಮಿಸಿ ಲಾಭ ಗಳಿಸಬೇಕು’ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ದೇವರಾಜ್‌, ಭಾರತಿ ರವೀಂದ್ರ ಇದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry