ಭಾನುವಾರ, ಜೂನ್ 7, 2020
29 °C

ಪ್ರೇಯಸಿಯ ಮುತ್ತು; ಪದಕಕ್ಕೆ ಕುತ್ತು!

ಬಾಲಚಂದ್ರ Updated:

ಅಕ್ಷರ ಗಾತ್ರ : | |

ಪ್ರೇಯಸಿಯ ಮುತ್ತು; ಪದಕಕ್ಕೆ ಕುತ್ತು!

2016ರ ರಿಯೋ ಒಲಿಪಿಂಕ್ಸ್‌ನ ಪುರುಷರ 4X400 ಮೀಟರ್ಸ್ ರಿಲೇ ಓಟದಲ್ಲಿ ಗಿಲ್‌ ರಾಬರ್ಟ್ಸ್ ಚಿನ್ನ ಗೆದ್ದು ಸುದ್ದಿಯಾದ ಕ್ರೀಡಾಪಟು. ಆದರೆ ಹೋದ ವರ್ಷ ಅವರು ಉದ್ದೀಪನ ಮದ್ದು ಸೇವನೆಯ ಕಳಂಕ ಅನುಭವಿಸಿದ್ದರು. ಇದೀಗ ಅದರಿಂದ ನಿರಪರಾಧಿಯಾಗಿ ಹೊರಬಂದ ಸ್ವಾರಸ್ವಕರ ಕಥೆ ಇಲ್ಲಿದೆ.

2017ರ ಮೇ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೂ ಮುನ್ನ ಪರೀಕ್ಷೆ ನಡೆಸಿದಾಗ ಗಿಲ್‌ ಅವರ ದೇಹದಲ್ಲಿ ನಿಷೇಧಿತ ‘ಪ್ರೊಬ್‌ನೆಸಿಡ್’ ಅಂಶಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ, ಅಮೆರಿಕ ಉದ್ದೀಪನ ಮದ್ದು ತಡೆ ಘಟಕವು ರಾಬರ್ಟ್ಸ್ ಅವರಿಗೆ ನಾಲ್ಕು ವರ್ಷಗಳ ನಿಷೇಧ ಹೇರಿತ್ತು,  ಪ್ರತಿಷ್ಠಿತ ಕಂಪನಿಗಳ ಪ್ರಾಯೋಜಕತ್ವವೂ ಕೈಬಿಟ್ಟುಹೋಗಿತ್ತು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು, ತಾರೆ ಎಂದೇ ಬಿಂಬಿಸಲ್ಪಟ್ಟಿದ್ದ ರಾಬರ್ಟ್ಸ್ ದಿನ ಬೆಳಗಾಗುವುದರೊಳಗಾಗಿ ಖಳನಾಯಕರಾಗಿ ಬಿಂಬಿಸಲ್ಪಟ್ಟಿದ್ದರು.

ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ, ಗಿಲ್ ಮಾತ್ರ ತನ್ನದೇನೂ ತಪ್ಪಿಲ್ಲ ಎಂದೇ ವಾದಿಸಲು ಶುರುಮಾಡಿದರು. ಇವರ ಮಾತು ಒಂದರ್ಥದಲ್ಲಿ ಅರಣ್ಯರೋದವಾಯಿತು. ಆದರೆ ಅವರು ಹೇಳಿದ ಅದೊಂದು ‘ಮಾತು’ ಕೇಳಿ ಎಲ್ಲರೂ ಅಚ್ಚರಿಗೆ ಒಳಗಾಗಿದ್ದರು.

ಅಸಲಿಗೆ, ಉದ್ದೀಪನಾ ಔಷಧವನ್ನು ರಾಬರ್ಟ್ಸ್ ತೆಗೆದುಕೊಂಡಿರಲಿಲ್ಲ, ಬದಲಿಗೆ ಅವರ ಪ್ರೇಯಸಿ ಅಲೆಕ್ಸ್ ಸಲಾಸಾರ್ ದೇಹದಲ್ಲಿತ್ತು. ‘ಉದ್ದೀಪನ ಮದ್ದು ಪರೀಕ್ಷೆಗೂ ಮುನ್ನ ಪ್ರೇಯಸಿಯನ್ನು ದೀರ್ಘವಾಗಿ ಚುಂಬಿಸಿದ್ದರಿಂದ ನಿಷೇಧಿತ ಮದ್ದು ನನ್ನ ದೇಹಕ್ಕೆ ವರ್ಗಾವಣೆಯಾಗಿದೆ' ಎಂದು ತನಿಖೆ ವೇಳೆ ಸತ್ಯ ಬಾಯ್ಬಿಟ್ಟಿದ್ದರು. 4 ವರ್ಷಗಳ ಕಾಲ ಅಮೆರಿಕದಲ್ಲಿ ಕುತೂಹಲ ಕೆರಳಿಸಿದ್ದ ಅಂತಿಮ ತೀರ್ಪು ಹೊರಬಿದ್ದಿದ್ದು, ಕ್ರೀಡಾ ಇತಿಹಾಸದಲ್ಲಿ ಇದೊಂದು ವಿಶೇಷ ಪ್ರಕರಣ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ನಿಜಕ್ಕೂ ನಡೆದಿದ್ದೇನು ?

ರಾಬರ್ಟ್ಸ್ ಪ್ರೇಯಸಿ ಅಲೆಕ್ಸ್ 2017 ರ ಮಾರ್ಚ್ ತಿಂಗಳಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಇಲ್ಲಿನ ಪ್ರತಿಕೂಲ ಹವಾಮಾನದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಲ್ಲಿನ ವೈದ್ಯರನ್ನು ಸಂಪರ್ಕಿಸಿ, ಔಷಧಿಯನ್ನು ಪಡೆದಿದ್ದರು. ಅದರಂತೆ ವೈದ್ಯರು ಸೂಚಿಸಿದ ‘ಮೊಕ್ಸಿಲೊಂಗ್’ ಹಾಗೂ ‘ಅಮೊಕ್ಸಿಲಿನ್’ ಮಾತ್ರೆ ಸೇವಿಸಲು ಆರಂಭಿಸಿದ್ದರು. ಅಲೆಕ್ಸ್ ಸೇವಿಸಿದ್ದ ಮೊಕ್ಸಿಲೊಂಗ್ ಮಾತ್ರೆಯಲ್ಲಿ ನಿಷೇಧಿತ ‘ಪ್ರೊಬ್‌ನೆಸಿಡ್’ ಅಂಶ ಒಳಗೊಂಡಿತ್ತು.

ಮಾರ್ಚ್ 17ರಂದೇ ಅಲೆಕ್ಸ್ ಮರಳಿ ಅಮೆರಿಕಕ್ಕೆ ಮರಳಿದ್ದರೂ, ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟಿರಲಿಲ್ಲ. ಮಾತ್ರೆಯನ್ನು ನೇರವಾಗಿ ನುಂಗುವುದೆಂದರೆ ಆಗುತ್ತಿರಲಿಲ್ಲವಂತೆ. ಅದಕ್ಕಾಗಿ ಮಾತ್ರೆಯ ಪೊಟ್ಟಣವನ್ನು ತೆರೆದು, ಅದರಲ್ಲಿದ ಮದ್ದಿನ ಅಂಶವನ್ನು ನಾಲಗೆಗೆ ಹಾಕ್ಕೊಂಡು ಚಪ್ಪರಿಸಿ ನಂತರ ತಿನ್ನುತ್ತಿದ್ದಳು.

ಈ ವಿಷಯ ರಾಬರ್ಟ್ಸ್‌ಗೆ ತಿಳಿದಿರಲಿಲ್ಲ. ಮಾರ್ಚ್ 24ರಂದು ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಯುವ ಸ್ವಲ್ಪ ಹೊತ್ತಿಗೆ ಮುಂಚೆ ಪ್ರೇಯಸಿಯನ್ನು ಭೇಟಿಯಾಗಿದ್ದಾನೆ. ಉಭಯ ಕುಶಲೋಪರಿ ಬಳಿಕ ‘ಮುತ್ತಿ’ನ ಮಳೆಗರೆದಿದ್ದಾನೆ. ನಂತರ ಮೂತ್ರ ಪರೀಕ್ಷೆ ನಡೆಸಿ ಮನೆಗೆ ಮರಳಿದ್ದಾನೆ. ಅದೇ ವಾರದಲ್ಲಿ ಅವರು ಕ್ರೀಡಾಕೂಟದಲ್ಲಿ ಪದಕ ಗೆದ್ದರು.

ಆದರೆ, ಆ ಸಂಭ್ರಮ ಬಹಳ ಹೊತ್ತಿರಲಿಲ್ಲ. ಉದ್ದೀಪನ ಮದ್ದು ತಡೆ ಘಟಕವು ನೀಡಿದ ವರದಿಯಲ್ಲಿ ರಾಬರ್ಟ್ಸ್‌ ತಪ್ಪಿತಸ್ಥರಾಗಿದ್ದರು. ತಕ್ಷಣವೇ, ನಡೆದ ವಿಚಾರವನ್ನು ಸಮಿತಿ ಮುಂದೆ ವಿವರಿಸಿದ್ದಾನೆ. ಆದರೂ, ಮೂತ್ರ ಪರೀಕ್ಷಾ ವರದಿಯನ್ನು ಪರಿಗಣಿಸಿದ ಅಮೆರಿಕ ಕ್ರೀಡಾಸಮಿತಿಯೂ ನಾಲ್ಕು ವರ್ಷಗಳ ಕಾಲ ಆಟದಿಂದ ನಿಷೇಧ ಹೇರಿತ್ತು.

ತನಿಖೆಯಲ್ಲಿ ಸಿಕ್ತು ಜಯ!

ರಾಬರ್ಟ್ಸ್ ಕಾರಣ ಹೇಳಿದ ತಕ್ಷಣ ನಂಬಲು ಅಧಿಕಾರಿಗಳು ತಯಾರಿರಲಿಲ್ಲ. 2007ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಇಂತದ್ದೇ ಪ್ರಕರಣವನ್ನು ಬಯಲಿಗೆಳೆದಿದ್ದ ಸ್ಟಾರ್ಸ್‌ಬೊರ್ಗ್ ವಿವಿಯ ಪ್ರಾಧ್ಯಾಪಕ ಡಾ.ಫಾಸ್ಕಲ್ ಕಿಟ್ಸ್ ನೇತೃತ್ವದಲ್ಲಿ ಇಬ್ಬರನ್ನೂ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿಲಾಯಿತು. ಮುತ್ತಿನಿಂದಲೇ ನಿಷೇಧಿತ ಪದಾರ್ಥ ರಾಬರ್ಟ್ಸ್ ದೇಹ ಸೇರಿರುವುದು ನಿಜ ಎಂದು ಪರೀಕ್ಷೆಯಲ್ಲೂ ಸಾಬೀತಾಯಿತು.

ಇತ್ತ ತನ್ನಿಂದ ರಾಬರ್ಟ್ಸ್ ಸಂಕಷ್ಟಕ್ಕೆ ಸಿಲುಕಿದ್ದಕ್ಕೆ ಮರುಗಿದ ಪ್ರೇಯಸಿ ಅಲೆಕ್ಸ್, ಪಾಸ್‌ಪೋರ್ಟ್, ಔಷಧಚೀಟಿ ಸೇರಿದಂತೆ ಹಲವು ದಾಖಲೆ ಸಮೇತ ತನಿಖಾ ತಂಡದ ಮುಂದೆ ಹಾಜರಾಗಿ ಸತ್ಯ ಬಿಚ್ಚಿಟ್ದಿದ್ದಳು. ಎಲ್ಲವನ್ನೂ ಪರಿಗಣಿಸಿರುವ ಅಮೆರಿಕ ಕ್ರೀಡಾ ಸಮಿತಿಯೂ ರಾಬರ್ಟ್ಸ್ ಮೇಲೆ ವಿಧಿಸಿರುವ ನಿಷೇಧವನ್ನು ಹಿಂದಕ್ಕೆ ಪಡೆದಿದೆ. ಇದರ ಬೆನ್ನಲ್ಲೇ ರಾಬರ್ಟ್ಸ್ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ತಯಾರಿ ನಡೆಸಿದ್ದಾರೆ. ಈ ಪ್ರಕರಣವೂ ಕ್ರೀಡೆಯಲ್ಲಿ ಮಹತ್ತರ ಸಾಧಿಸಲು ಹೊರಟ ಎಲ್ಲ ಕ್ರೀಡಾಪಟುಗಳಿಗೆ ಒಂದು ಎಚ್ಚರಿಕೆ ಗಂಟೆಯಾದರೆ ಒಳ್ಳೆಯದು...!

‘ಉದ್ದೇಶಪೂರ್ವಕ ಸಂಚು’

ಈ ಪ್ರಕರಣವನ್ನು ಗಮನಿಸಿದರೆ ಗಿಲ್‌ ಉದ್ದೇಶಪೂರ್ವಕವಾಗಿ ಸಂಚು ಎಸಗಿರುವುದು ಕಂಡುಬರುತ್ತದೆ. ಆದರೆ ಕ್ರೀಡಾನ್ಯಾಯಾಲಯವು ಸಾಕ್ಷಿಗಳನ್ನು ಪರಿಗಣಿಸಿ, ವೈಜ್ಞಾನಿಕ ಆಧಾರದ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಷಯದಲ್ಲಿ ಇಬ್ಬರೂ ಸೂಕ್ತ ಸಾಕ್ಷಿಗಳನ್ನು ಸಲ್ಲಿಸಿದ್ದು, ಖುಲಾಸೆಗೊಂಡಿದ್ದಾರೆ.

– ಕಿರಣ್‌ ಕುಲಕರ್ಣಿ, ಕ್ರೀಡಾವೈದ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.