ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೆಳೆಯರೇ ಊಟ ತಯಾರಿದೆ’

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಈ ಕರಿ ತಲೆಯ ಪುಟ್ಟಹಕ್ಕಿ (* onchura Ma* acca ಎಂಬ ತಳಿಯದ್ದು)ಗೆ ತ್ರಿವರ್ಣ ಮುನಿ ಎಂದೂ ಹೆಸರಿದೆ. ಈ ಹಕ್ಕಿ ಸಂಘ ಜೀವಿ.. ಗುಂಪು ಗುಂಪಾಗಿ ಹುಲ್ಲುಗಾವಲು, ಕಾಳು ಕಡಿ ಬೆಳೆದ ಗದ್ದೆ- ಹಸಿರು ಮೈದಾನ, ತೋಟ ಮತ್ತು ನೀರಿನಾಶ್ರಯದ ತಟಗಳಲ್ಲಿ ರೆಂಬೆ ಕೊಂಬೆಗಳಲ್ಲಿ ಪುಟಾಣಿ ಕಾಯಿ ಹಣ್ಣುಗಳಿಂದ ತುಂಬಿ ಬೆಳೆಯುವ ಚಿಕ್ಕಪುಟ್ಟ ಮರ ಗಿಡಗಳ ಮೇಲೆ ಸ್ವಚ್ಛಂದವಾಗಿ ಹಾರಾಡುತ್ತಿರುತ್ತವೆ, ಭಾರತದ ಅನೇಕ ಕಡೆ, ಸುತ್ತಲ ಶ್ರೀಲಂಕಾ, ಬಾಂಗ್ಲಾ, ದಕ್ಷಿಣ ಚೀನಾ, ಮತ್ತಿತರ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಬೆಂಗಳೂರಿನ ಸುತ್ತಲ ಗದ್ದೆ, ಹಸಿರು ಮೈದಾನಗಳಲ್ಲಿ ಹೇರಳವಾಗಿ ಇವು ಕಾಣಸಿಗುತ್ತವೆ. ಒಟ್ಟೊಟ್ಟಿಗೇ ನೂರಾರು ಹಕ್ಕಿಗಳು ಕಾಳು ಕಡಿ ಹುಡುಕುತ್ತಾ, ಭೋಜನ ಕಂಡೊಡನೇ ಒಂದನ್ನಿನ್ನೊಂದು ಕೂಗಿ ಕರೆಯುತ್ತಾ, ಬಾಯಿ ಚಪ್ಪರಿಸುವ ದೃಶ್ಯ ನೋಡಲು ಚಂದ. ಅಂತಹುದ್ದೊಂದು ‘ಲಂಚ್ ಟೈಂ’ನ್ನು, ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೆರೆಯ ದಡದಲ್ಲಿ ಇದೇ ಜನವರಿಯ ಒಂದು ಮುಂಜಾನೆ ಸಿದ್ಧನಹಳ್ಳಿ ನಿವಾಸಿ, ಕಾರ್ವಿಲ್ ಕುಮಾರ್ ಸಿದ್ದಪ್ಪನವರು ಸೆರೆಹಿಡಿದಿದ್ದಾರೆ. ತೆನೆಯೊಂದರಲ್ಲಿ ಕಾಳು ಹೆಕ್ಕಿ ಕೊಕ್ಕಿನಲ್ಲಿಡುತ್ತಲೇ ಇತರ ಹಕ್ಕಿಗಳನ್ನೂ ಕರೆಯುತ್ತಿರುವ ಕ್ಷಣವನ್ನು ನೆಲದ ಮೇಲೆ ಮಲಗಿ ತೆವಳುತ್ತಾ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ.

ಎಂ.ಎಫ್‌.ಎಕ್ಸ್ ಇನ್ಫೋಟೆಕ್‌ನಲ್ಲಿ ಟೀಂ ಲೀಡರ್ ಆಗಿರುವ ಅವರು ಮೂರು ವರ್ಷಗಳಿಂದ ವನ್ಯಜೀವಿ ಮತ್ತು ಮ್ಯಾಕ್ರೋ ಛಾಯಾಗ್ರಹಣದಲ್ಲಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಲ್ಲಿ ಅವರು ಬಳಸಿದ ಕ್ಯಾಮೆರಾ ನಿಕಾನ್ D 750, ಜೊತೆಗೆ 200- 500 ಎಂ.ಎಂ. ಜೂಂ ಲೆನ್ಸ್. ಅದರ ಎಕ್ಸ್‌ಪೋಶರ್ ವಿವರ ಇಂತಿವೆ:  

500 ಎಂ.ಎಂ. ಫೋಕಲ್ ಲೆಂಗ್ತ್‌ನಲ್ಲಿ, ಅಪರ್ಚರ್ F 5.6, ಷಟರ್ ವೇಗ 1/500 ಸೆಕೆಂಡ್, ಐ.ಎಸ್.ಒ 320,   ಎಕ್ಸ್‌ಪೋಶರ್ ಕಾಂಪನ್ಸೇಶನ್ (-) 2/3  ಮತ್ತು ಟ್ರೈಪಾಡ್ ಬಳಕೆಯಾಗಿದೆ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಮಾಡುವುದಿದ್ದರೆ, ಈ ಕೆಲವು ಅಂಶಗಳು ಮುಖ್ಯವೆನಿಸುತ್ತವೆ: ಕ್ಯಾಮೆರಾದ ತಾಂತ್ರಿಕ ಹಿಡಿತಗಳ ಮತ್ತು, ನೆಲಮಟ್ಟದಲ್ಲಿ ಕ್ಯಾಮೆರಾದ ಕೋನ (ಲೋ ಆ್ಯಂಗಲ್ ಆಫ್ ವ್ಯೂ) ಈ ಪುಟ್ಟ ಹಕ್ಕಿಯ ಸಹಜ ಶೈಲಿಯನ್ನು ಸೆರೆಹಿಡಿಯುವಲ್ಲಿ ಸಮರ್ಪಕವಾಗಿವೆ. ಛಾಯಾಚಿತ್ರಕಾರ ನಿಂತಲ್ಲಿಯೇ ಅಥವಾ ಎತ್ತರದ ಬಂಡೆಯ ಮೇಲೆ ನಿಂತು ಕ್ಲಿಕ್ಕಿಸಿದ್ದರೆ, ಮುನಿಯನ ಕೊಕ್ಕಿನೊಳಗಿನಿಂದ ಇಣುಕುತ್ತಿರುವ ಬೀಜ ಕಾಣಿಸುತ್ತಿರಲಿಲ್ಲ ಮತ್ತು ಇಡೀ ಹಕ್ಕಿಯೇ ಈಗಿನಂತೆ ಉತ್ತಮ ‘ಪರ್ಸ್ಪೆಕ್ಟಿವ್‌’ ಹೊಂದದೇ ಯಾವುದೋ ಪುಟಾಣಿ ಗುಬ್ಬಿಯಂತೆ ಕಾಣುತ್ತಿತ್ತು. ಅದರ ಜೀವನ ಕ್ರಮವನ್ನು ಸುಂದರವಾಗಿ, ಸ್ಫುಟವಾಗಿ ನೋಡುಗನಿಗೆ ದರ್ಶನ ಮಾಡಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ದಿಸೆಯಲ್ಲಿ ಕುಮಾರ್ ಸಿದ್ದಪ್ಪನವರ ಸಾಧನೆ ಮೆಚ್ಚತಕ್ಕದ್ದೇ.

* ನೆಲದಿಂದ ಒಂದಡಿ ಎತ್ತರದಲ್ಲಿ ಕ್ಯಾಮೆರಾ ಹಿಡಿದು, ಅದರ ಉದ್ದನೆಯ 500 ಎಂ.ಎಂ. ಜೂಂ ಲೆನ್ಸ್‌ ಅನ್ನು ನಿಭಾಯಿಸುವುದು ಸುಲಭಸಾದ್ಯವಲ್ಲ. ಕಾರಣವೇನೆಂದರೆ, ಉದ್ದನೆಯ ಲೆನ್ಸ್ ಸ್ಥಿರವಾಗಿರುವ ಬದಲು ಕೊಂಚ ಅಲುಗಾಡುತ್ತಲಿರುತ್ತದೆ. ಆ ಅಲುಗಾಟವನ್ನು ಹಕ್ಕಿ ಗಮನಿಸಿದರೆ, ಭಯದಿಂದ ಪುರ‍್ರೆಂದು ಹಾರಿಹೋಗದಿರದು.

* ಹಕ್ಕಿಗಳು ಬರುವ ಸಮಯ ನೋಡಿ, ಅವು ಮತ್ತೆ ಮತ್ತೆ ಆಹಾರಕ್ಕಾಗಿ ಬರುವ ಸಾಧ್ಯತೆ ಇರುವ ಕಾಳು ಕಡಿ ತುಂಬಿದ ಈ ಬಗೆಯ ತೆನೆಗಳ ದೃಶ್ಯವನ್ನು ಮೊದಲೇ ಆರಿಸಿ, ನೆಲದ ಸಮಾನಾಂತರವಾಗಿ ಮಲಗಿಕೊಂಡು (ಸಾಧ್ಯವಾದರೆ ಹೈಡ್ ಮಾಡಿಕೊಂಡು),  ಉತ್ತಮವಾದ ಟ್ರೈಪಾಡಿನ ಮೇಲೆ ಕ್ಯಾಮೆರಾ ಅಳವಡಿಸಿ ಅಲುಗಾಡದೇ ಕ್ಲಿಕ್ಕಿಸುವ ಅವಕಾಶಕ್ಕೆ ಕಾಯ್ದರೆ ಮಾತ್ರ ಚೌಕಟ್ಟಿಗೆ ಇಂತಹ ಸುಂದರ ಚಿತ್ರ ದಕ್ಕಲು ಸಾಧ್ಯ. ಒಂದು ಬಗೆಯಲ್ಲಿ ಅದೊಂದು ತಪಸ್ಸು. ಆಗ ಸಿಗುವ ‘ಆ ಕ್ಷಣ’ದಲ್ಲಿ  ಎಲ್ಲವನ್ನೂ ಸರಿಯಾಗಿ ಫಲಪ್ರದಗೊಳಿಸಿಕೊಳ್ಳಲು ತಾಂತ್ರಿಕ ಪರಿಣಿತಿ ಕೂಡಾ ಅನಿವಾರ್ಯ ತಾನೇ? ಹೊಸಬರಿಗೆ ಇದೊಂದು ಉತ್ತಮ ಮಾದರಿಯಾಗಬಲ್ಲದು.

* ಕಲಾತ್ಮಕವಾಗಿ ಇದೊಂದು ಸುಂದರ ಚಿತ್ರಣ. F 5.6 (ಸಂಕುಚಿತ ಡೆಪ್ತ್ ಆಫ್ ಫೀಲ್ಡ್) ಅಪರ್ಚರ್ ದೆಸೆಯಿಂದ ಹಕ್ಕಿ ಮತ್ತು ಕಾಳು ತುಂಬಿದ ತೆನೆಯ ಭಾಗಗಳು ಸ್ಫುಟವಾಗಿ ಫೋಕಸ್ ಆಗಿವೆ. ಹಿನ್ನೆಲೆಯ ಹುಲ್ಲು ಪ್ರದೇಶ ಮಂದವಾಗಿದೆ. ಹಾಗಾಗಿ ಇಡೀ ದೃಶ್ಯ ಮೋಹಕವಾಗಿ ನೋಡುಗನ ಕಣ್ಣಿಗೆ ಬೀಳುತ್ತದೆ.

* ಓರೆಯಿಂದ ಬೀಳುತ್ತಿರುವ ಮುಂಜಾನೆಯ ಸೂರ್ಯನ ಬೆಳಕು ಹಕ್ಕಿಯ ಮೃದುವಾದ ಮೈ ಪದರಿನ ಸೂಕ್ಷ್ಮತೆಯನ್ನು (ಟೆಕ್ಸ್ಚರ್), ಅದರ ತ್ರಿವರ್ಣ ಛಾಯಾಂತರವನ್ನು (ಟೋನಲ್ ಡಿಸ್ಟ್ರಿಬ್ಯೂಶನ್) ಮತ್ತು ತೆನೆಯಲ್ಲಿನ ಗೊಂಚಲು ಕಾಳುಗಳು ಕೂಡಾ ಕಣ್ಣಿಗೆ ಚಂದವಾಗಿ ಕಾಣುವಂತೆ ಮಾಡಿರುವ ಸಹಜ ದೃಶ್ಯವನ್ನು, ಸೆರೆಹಿಡಿಯುವಲ್ಲಿ ಸಹಕಾರಿಯಾಗಿದೆ.

* ಚಿತ್ರಕಲಾ ಅಭ್ಯಾಸಿಗಳು ಅನುಸರಿಸುವ ‘ಗೋಲ್ಡನ್ ಕ್ರಾಸ್ ರೂಲ್’ ಈ ಚೌಕಟ್ಟಿನಲ್ಲಿ ಸಮರ್ಪಕವಾಗಿ ಮೂಡಿದೆ. ಮುಖ್ಯ ವಸ್ತುವಾದ ಮುನಿಯನ ತಲೆಯ ಭಾಗ, ಅದರಲ್ಲೂ ಕೊಕ್ಕಿನ ಜಾಗ ಇಡೀ ಚೌಕಟ್ಟಿನ ಮೇಲೆ- ಕೆಳಗೆ ಹಾಗೂ ಎಡ – ಬಲದ ಅಳತೆಯ ಒಂದು ಮೂರಾಂಶದ ಚೌಕದ ಬಿಂದುವಿನಲ್ಲಿರುವುದು ಮತ್ತು ಅದರ ಮುಂಭಾಗದಲ್ಲಿ ಸಾಕಷ್ಟು ‘ರಿಲೀಫ್’ ಇರುವುದು, ಕಾಳು ತುಂಬಿದ ತೆನೆಯ ದಂಟುಗಳು, ಹಕ್ಕಿಯ ಜೊತೆಗೂಡಿ ಭಾವನೆಯ ಸಂವಹನಕ್ಕೆ ಪೂರಕವಾಗಿರುವುದು ಚಿತ್ರಕ್ಕೆ ಸೌಂದರ್ಯ ತಂದುಕೊಟ್ಟಿದೆ. ಒಟ್ಟಾರೆ ಇದೊಂದು ಭಾವಪೂರಿತ ಚಿತ್ರದ ಕ್ಯಾನ್ವಾಸ್‌ನ ಮಾದರಿಯೆಂದೆನಿಸುತ್ತದೆ. 


ಕಾರ್ವಿಲ್ ಕುಮಾರ್ ಸಿದ್ದಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT