ಗುರುವಾರ , ಜೂನ್ 4, 2020
27 °C

‘ವಾಸನಾಲಯ’ವಾದ ವಾಚನಾಲಯ!

ವಿಜಯ ಸಿ.ಕೆಂಗಲಹಳ್ಳಿ Updated:

ಅಕ್ಷರ ಗಾತ್ರ : | |

‘ವಾಸನಾಲಯ’ವಾದ ವಾಚನಾಲಯ!

ದಾವಣಗೆರೆ: ಇದು ಸಾರ್ವಜನಿಕರಿಗಾಗಿ ತೆರೆಯಲಾದ ವಾಚನಾಲಯ. ಆದರೆ ವ್ಯವಸ್ಥೆ ಮಾತ್ರ ಅಧೋಗತಿ. ಚಾವಡಿಯಲ್ಲಿ ದಟ್ಟ ದೂಳು, ಎಲ್ಲೆಂದರಲ್ಲಿ ಕಸದ ರಾಶಿ, ಪ್ಲಾಸ್ಟಿಕ್‌ ಹಾಗೂ ಕಬ್ಬಿಣದ ಪೈಪುಗಳ ಸಂಗ್ರಹ ಸ್ಥಾನವಾಗಿ ಇದು ಬದಲಾಗಿದೆ. ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಉದ್ಯಾನಲ್ಲಿರುವ ವಾಟರ್‌ಟ್ಯಾಂಕ್‌ ವಾಚನಾಲಯ ಈ ಎಲ್ಲಾ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ.

ನಗರದ ಕೇಂದ್ರ ಗ್ರಂಥಾಲಯದಲ್ಲಿ ಉತ್ತಮ ಆಸನಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು ಓದುಗರಿಗೆ ಲಭ್ಯವಾಗುತ್ತಿವೆ. ಆದರೆ ಮಹಾನಗರ ಪಾಲಿಕೆ ಹಾಗೂ ವಾಚನಾಲಯದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆ ಉಂಟಾಗುತ್ತಿದೆ.

ವಿಶಾಲವಾದ ಗಿಡ–ಮರಗಳ ಮಧ್ಯೆ ಹೊರಗಿನಿಂದ ನೋಡಲು ವೃತ್ತಾಕಾರದ ವಾಟರ್‌ ಟ್ಯಾಂಕ್‌ ಸುಂದರವಾಗಿದೆ. ಟ್ಯಾಂಕ್‌ನ ಕೆಳಭಾಗದ ಸ್ತಂಭದಲ್ಲಿ ಇರುವ ಸಾರ್ವಜನಿಕ ವಾಚನಾಲಯ ಮಾತ್ರ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.

ನಗರದ ಕಾಸಲ್‌ ಶ್ರೀನಿವಾಸ ಶ್ರೇಷ್ಠಿ ಉದ್ಯಾನ, ಸರಸ್ವತಿ ಬಡಾವಣೆಯ ‘ಬಿ’ ಬ್ಲಾಕ್‌ನ ವಾಟರ್‌ ಟ್ಯಾಂಕ್‌ನಲ್ಲಿ ತೆರೆಯಲಾದ ವಾಚನಾಲಯಗಳು ವ್ಯವಸ್ಥಿತವಾಗಿವೆ. ಸಾರ್ವಜನಿಕರಿಗೆ ಅನುಕೂಲಕರವಾಗಿವೆ. ಆದರೆ, ವಿಶ್ವೇಶ್ವರಯ್ಯ ಉದ್ಯಾನದಲ್ಲಿನ ವಾಚನಾಲಯದ ಸ್ಥಿತಿ ಮಾತ್ರ ಕೆಟ್ಟದಾಗಿದೆ.

ದಾವಣಗೆರೆಯ ವಿಶ್ವೇಶ್ವರಯ್ಯ ಉದ್ಯಾನವು ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿಕರು, ಜನಸಾಮಾನ್ಯರಿಂದಾಗಿ ದಟ್ಟಣೆಯಿಂದ ಕೂಡಿರುತ್ತದೆ. ಆದರೆ, ಹಾಗೆ ಬರುವ ಜನರಿಗೆ ಶೌಚಾಲಯ, ಕುಡಿಯಲು ಶುದ್ಧ ನೀರು ಲಭ್ಯವಾಗುತ್ತಿಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಪಾಲಿಕೆ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎನ್ನುವುದು ಇಲ್ಲಿನ ಹಿರಿಯ ನಾಗರಿಕರು ದೂರು.

ಹನ್ನೊಂದಕ್ಕಿಂತ ಹೆಚ್ಚು ದಿನಪತ್ರಿಕೆಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಯತಕಾಲಿಕೆಗಳು ಹಾಗೂ ಓದುಗರಿಗಾಗಿ ಸುಧಾ, ಮಯೂರ, ಕರ್ಮವೀರದಂತಹ ನಿಯತಕಾಲಿಕೆಗಳು ಇಲ್ಲಿ ಲಭ್ಯವಿವೆ. ಅಲ್ಲದೇ 24ಕ್ಕಿಂತ ಹೆಚ್ಚು ಸುವ್ಯವಸ್ಥಿತ ಆಸನಗಳಿರುವ ಈ ಪುಟ್ಟ ವಾಚನಾಲಯ ಓದುಗರ ಆಸಕ್ತಿಯನ್ನು ಹೆಚ್ಚಿಸಿದೆ.

ವಾಚನಾಲಯದ ಸಮೀಪವೇ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಉಂಟಾಗುವ ದುರ್ನಾತದಿಂದ ಓದುಗರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಹಿರಿಯ ನಾಗರಿಕ ಜಗನ್ನಾಥ್‌.

‌ಮಹಾನಗರ ಪಾಲಿಕೆಯಿಂದ ಉದ್ಯಾನ ಆವರಣದ ಒಂದು ಕಡೆ ಶೌಚಾಲಯ ಕಟ್ಟಲು ಈ ಹಿಂದೆ ಟೆಂಡರ್‌ ಕರೆಯಲಾಗಿತ್ತು. ವಾಚನಾಲಯದಿಂದ ಆ ಜಾಗ ದೂರ ಇತ್ತಾದ್ದರಿಂದ ಕೆಲ ಹಿರಿಯ ನಾಗರಿಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ನಂತರ ಆವರಣದ ಹೊರಗಿನ ಸುಲಭ ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಓಪನ್‌ ಗೇಟ್‌ ಮಾಡಿಕೊಡುವಂತೆ ಪಾಲಿಕೆಗೆ ಒತ್ತಾಯಿಸಿದ್ದರು ಎಂದು ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್‌ ತಿಳಿಸಿದರು.

‘ವಾಚನಾಲಯದ ಬಳಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾದುಹೋಗಿರುವುದರಿಂದ ಅಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಪರ್ಯಾಯ ಚಿಂತನೆ ಮಾಡಲಾಗುತ್ತಿದೆ. ಜತೆಗೆ ಪಿ.ಜೆ. ಬಡಾವಣೆಯ ಜನರಿಗೆ ಹಾಗೂ ಹಿರಿಯ ನಾಗರಿಕರಿಗೆ, ವಾಯುವಿಹಾರಿಗಳಿಗೆ ಕುಡಿಯುವ ನೀರು ದೊರಕಿಸುವ ಉದ್ದೇಶದಿಂದ ಜಲ ಶುದ್ಧೀಕರಣ ಘಟಕ ಅಳವಡಿಸಬೇಕೆಂದು ಪಾಲಿಕೆಗೆ ಮನವಿ ಸಲ್ಲಿಸಿದ್ದೇವೆ. ಆದೇಶ ಬಂದ ಕೂಡಲೇ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವೆ’ ಎಂದು ಭರವಸೆ ಕೊಟ್ಟರು.

ಉದ್ಯಾನದಲ್ಲಿ ನಿತ್ಯ ಕಸಗೂಡಿಸುವ ಕೆಲಸಗಾರರು ಕಸವನ್ನೆಲ್ಲಾ ತಂದು ವಾಚನಾಲಯದ ಮುಂದೆಯೇ ರಾಶಿ ಹಾಕುತ್ತಾರೆ. ಪ್ರತ್ಯೇಕವಾಗಿ ಕಸ ಹಾಕುವುದಕ್ಕಾಗಿಯೇ ಕಸದ ಗುಂಡಿ ಇದ್ದರೂ ಅಲ್ಲಿ ಹಾಕುತ್ತಿಲ್ಲ. ವಾಚನಾಲಯದಲ್ಲಿ ಪ್ರತ್ಯೇಕವಾಗಿಯೇ ಕಸ ಗೂಡಿಸುವವರಿಲ್ಲ. ಹಾಗಾಗಿ ವಾಚನಾಲಯದ ನಿರ್ವಾಹಕರೇ ಶುಚಿಗಾರರಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಸ್ವಚ್ಛತೆ ಕಾಪಾಡಲು ಅವರಿಗೇನು ಪ್ರತ್ಯೇಕ ಸಂಬಳ ನೀಡುತ್ತಿಲ್ಲ. ಕೆಲವೊಮ್ಮೆ ಕೆಲಸದ ನಿಮಿತ್ತ ವಾಚನಾಲಯದಲ್ಲಿಯೇ ಪಾಲಿಕೆಯ ಸಿಬ್ಬಂದಿ ಪರಿಕರಗಳನ್ನು ಇಡುತ್ತಾರೆ, ಜನರ ಓಡಾಟವು ಹೆಚ್ಚಿರುತ್ತದೆ. ಆದ್ದರಿಂದ ಕಸ ಹರಡಿರುತ್ತದೆ ಎನ್ನುತ್ತಾರೆ ಇಲ್ಲಿನ ಸಹಾಯಕ ಗ್ರಂಥಪಾಲಕ ಸಂಗಣ್ಣ ಬೆಳಗಲ್‌.

ಸ್ವಚ್ಛತೆಗೆ ಆದ್ಯತೆ ನೀಡಿ ಸಮಸ್ಯೆ ಪರಿಹರಿಸುವೆ....

ಸರ್‌.ಎಂ.ವಿಶ್ವೇಶ್ವರಯ್ಯ ಉದ್ಯಾನದಲ್ಲಿನ ನೀರನ ಟ್ಯಾಂಕ್ ಕೆಳಗೆ ವಾಚನಾಲಯ ನಡೆಸಲು ಪಾಲಿಕೆಯಿಂದ ಜಾಗ ನೀಡಲಾಗಿದೆ. ಅದರ ನಿರ್ವಹಣೆಯ ಜವಾಬ್ದಾರಿಯೆಲ್ಲಾ ನಗರಕೇಂದ್ರಕ್ಕೆ ವಹಿಸಲಾಗಿದೆ. ವಾಚನಾಲಯದ ಹೊರಗೆ ಕಸ ವಿಲೇವಾರಿ ಇತ್ಯಾದಿ ಸಮಸ್ಯೆಗಳಿಂದ ಹಿರಿಯ ನಾಗರಿಕರಿಗೆ ಆಗುವ ಸಮಸ್ಯೆ ಪರಿಹರಿಸಲು ನಾನು ಬದ್ಧನಾಗಿದ್ದೇನೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳತ್ತೇನೆ ಎಂದು ಪಾಲಿಕೆಯ 28ನೇ ವಾರ್ಡಿನ ಸದಸ್ಯೆ ಅಶ್ವಿನಿ ಪ್ರಶಾಂತ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.