ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಹೆ ಸೇರುತ್ತಿವೆ ಕಾಂಗ್ರೆಸ್‌ ಹುಲಿಗಳು’

Last Updated 19 ಫೆಬ್ರುವರಿ 2018, 6:34 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರೆಸ್‌ ವಿರುದ್ಧ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಶುರುವಾಗಿದ್ದು, ಸೋಲಿನ ಭೀತಿ ಎದುರಾಗಿದೆ. ಇದು ಅಮಿತ್ ಶಾ ಅವರನ್ನು ಕಂಡರೆ ಕಾಂಗ್ರೆಸ್‌ಗೆ ಭಯ. ಶಾ ಭೇಟಿ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಹುಲಿಗಳು ಗುಹೆ ಸೇರುತ್ತಿವೆ’ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

‘ಚುನಾವಣಾ ತಾಲೀಮಿನಲ್ಲೇ ಭಯಭೀತರಾಗಿರುವ ಕಾಂಗ್ರೆಸ್‌ನವರು ಚುನಾವಣೆಗೆ ಮೊದಲೇ ಶಸ್ತ್ರ ಸನ್ಯಾಸ ಸ್ವೀಕರಿಸಲಿದ್ದಾರೆ’  ಎಂದು ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಮಿತ್‌ ಶಾ ಅವರು ಭೇಟಿ ನೀಡಿದರೆ ರಾಜ್ಯದಲ್ಲಿ ಕೋಮುಗಲಭೆ ಆಗುತ್ತದೆ ಎಂದು ಸಚಿವ ದಿನೇಶ್‌ ಗುಂಡೂರಾವ್ ಅವರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಕಾಲ ಘಟ್ಟದಲ್ಲೇ ಹೆಚ್ಚಿನ ಕೋಮುಗಲಭೆ, ಗ್ಯಾಂಗ್‌ವಾರ್‌ಗಳಾಗಿವೆ. ಅಮಿತ್ ಶಾ ಈವೆರೆಗ ಮೂರು ಬಾರಿ ಬಂದು ಹೋಗಿದ್ದಾರೆ. ಕೋಮುಗಲಭೆಗಳಾಗಿಲ್ಲ ಎಂದರು.

‘2004ರಲ್ಲಿ ಗಂಭೀರ ಎನಿಸಿದ ಕೋಮುಗಲಭೆಗಳಾಗಿದ್ದು, ಕಾಂಗ್ರೆಸ್ ಅವಧಿಯಲ್ಲೇ. ಸಚಿವ ರಮಾನಾಥ ರೈ ಗೃಹ ಸಚಿವರಾಗಿದ್ದಾಗ, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಗಲಭೆಗಳು ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಚಾರ ಮಾಡಿದ ಕಡೆಯಲೆಲ್ಲಾ ಕೋಮುಗಲಭೆಗಳಾಗಿವೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಕುದ್ರೋಳಿ ದೇವಾಲಯದ ಕಾರ್ಯಕ್ರಮದಲ್ಲಿ ಅವರದೇ ಪಕ್ಷದ ಮುಖಂಡ ಜನಾರ್ದನ ಪೂಜಾರಿಯವರು ಕಾದು ಕುಳಿತರೂ ಅಲ್ಲಿಗೆ ಹೋಗಲಿಲ್ಲ, ಕಾಂಗ್ರೆಸ್‌ನ ಸಚಿವರು ಮೊದಲು ಮುಖ್ಯಮಂತ್ರಿಗೆ ಪಾಠ ಹೇಳಬೇಕು’ ಎಂದರು.

ಅಡಿಕೆ ವಿಚಾರ ಚರ್ಚೆ: ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಎಂಬ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ನಳಿನ್‌ ಹೇಳಿದರು.

ಆರೋಗ್ಯ, ಕೃಷಿ ಹಾಗೂ ಕಾನೂನು ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕೃಷಿ ಸಚಿವರಿಗೆ ಅದೊಂದು ಆಹಾರದ ಬೆಳೆ ಎಂದು ಕೃಷಿ ಸಚಿವರಿಗೆ, ಕ್ಯಾನ್ಸರ್‌ಕಾರಕವಲ್ಲ ಎಂದು ಆರೋಗ್ಯ ಸಚಿವರಿಗೂ ಹಾಗೂ ಕಾನೂನಿನ ತೊಡಕನ್ನು ನಿವಾರಣೆ ಮಾಡಬೇಕು ಎಂದು ಕಾನೂನು ಸಚಿವರಿಗೆ ಸಭೆಗಳನ್ನು ಮಾಡಿ ಮನವರಿಕೆ ಮಾಡಿಕೊಡಲಾಗಿದೆ. ಸಚಿವರು ನಮ್ಮ ಮನವಿಯನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು, ಚುನಾವಣಾ ಉಸ್ತುವಾರಿ ಮೋನಪ್ಪ ಭಂಡಾರಿ, ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ವೇದವ್ಯಾಸ ಕಾಮತ್, ಪೂಜಾ ಪೈ, ಭರತ್‌ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಶಾ ಪ್ರವಾಸ

19 ರಂದು ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ, ಕಾರ್ಯಕರ್ತರಿಂದ ಸ್ವಾಗತ, ಸಂಜೆ 6ಗಂಟೆಗೆ ಸುಬ್ರಹ್ಮಣ್ಯಕ್ಕೆ ಭೇಟಿ, ಮುಖಂಡರ ಜತೆ ಚರ್ಚೆ ನಂತರ ವಿಶ್ರಾಂತಿ,

20ರಂದು ಬೆಳಿಗ್ಗೆ 8.15ರಿಂದ 9ರವರೆಗೆ ಸುಬ್ರಹ್ಮಣ್ಯ ದೇವರ ದರ್ಶನ, ಕುಲ್ಕುಂದದಲ್ಲಿ ನವಶಕ್ತಿ ಸಮಾವೇಶದಲ್ಲಿ ಭಾಗಿ, 10.15 ಪುತ್ತೂರಿನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ, 12.30 ಬಂಟ್ವಾಳದಲ್ಲಿ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರಗಳ ನವಶಕ್ತಿ ಸಮಾವೇಶ, 2 ಗಂಟೆಗೆ ಹೊರಟು, 3 ಗಂಟೆಗೆ ಸುರತ್ಕಲ್‌ನ ದೀಪಕ್‌ರಾವ್ ಮನೆಗೆ ಭೇಟಿ, ಪತ್ರಿಕಾಗೋಷ್ಠಿ, ಸಂಜೆ 4.15ಕ್ಕೆ ಮಲ್ಪೆಯಲ್ಲಿ ಮೀನುಗಾರರ ಸಮಾವೇಶ.

* * 

ಈ ಬಾರಿಯ ಚುನಾವಣೆಯಲ್ಲಿ ದ.ಕ.ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ, ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಇಲ್ಲ.
ನಳಿನ್‌ ಕುಮಾರ್ ಕಟೀಲ್‌. ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT