ಗುರುವಾರ , ಜೂನ್ 4, 2020
27 °C

ಹರ್ಮನ್‌ಪ್ರೀತ್‌, ಕುಲದೀಪ್‌, ಯಜುವೇಂದ್ರ ಚಾಹಲ್‌ಗೆ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ಹರ್ಮನ್‌ಪ್ರೀತ್‌, ಕುಲದೀಪ್‌, ಯಜುವೇಂದ್ರ ಚಾಹಲ್‌ಗೆ ಪ್ರಶಸ್ತಿ

ನವದೆಹಲಿ (ಪಿಟಿಐ): ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿದ್ದ ಭಾರತ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಆಟಗಾರರಾದ ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್ ಆವರು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವಾರ್ಷಿಕ ಪ್ರಶಸ್ತಿ ಗೌರವಕ್ಕೆ

ಪಾತ್ರರಾಗಿದ್ದಾರೆ. ಒಟ್ಟು 12 ಪ್ರಶಸ್ತಿಗಳಲ್ಲಿ ಭಾರತಕ್ಕೆ ಮೂರು ಪ್ರಶಸ್ತಿ ಸಿಕ್ಕಿವೆ.

ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಅಜೇಯ 171 ರನ್‌ ದಾಖಲಿಸಿದ್ದ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಮಹಿಳೆಯರ ವಿಭಾಗದ ‘ವರ್ಷದ ಶ್ರೇಷ್ಠ ಬ್ಯಾಟ್ಸ್‌ವುಮನ್‌’ ಪುರಸ್ಕಾರ ಸಿಕ್ಕಿದೆ.

ಲೆಗ್‌ ಬ್ರೇಕ್‌ ಬೌಲರ್‌ ಚಾಹಲ್‌ ಅವರಿಗೆ ಟ್ವೆಂಟಿ–20 ವಿಭಾಗದ ‘ವರ್ಷದ ಶ್ರೇಷ್ಠ ಬೌಲರ್‌ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂಗ್ಲೆಂಡ್ ಎದುರು ನಡೆದ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಚಾಹಲ್‌ 25ರನ್‌ಗಳಿಗೆ ಆರು ವಿಕೆಟ್ ಪಡೆದುಕೊಂಡಿದ್ದರು.

ಕುಲದೀಪ್‌ ಯಾದವ್ ಅವರಿಗೆ ‘ವರ್ಷದ ಉದಯೋನ್ಮುಖ ಆಟಗಾರ’ ಪ್ರಶಸ್ತಿ ಸಿಕ್ಕಿದೆ. 2017ರಲ್ಲಿ ಅವರು ಆಡಿದ ಮೂರು ಮಾದರಿಗಳ ಪಂದ್ಯಗಳಲ್ಲಿ ಒಟ್ಟು 43 ವಿಕೆಟ್‌ಗಳನ್ನು ಗಳಿಸಿದ್ದಾರೆ. ಎರಡನೇ ಬಾರಿಗೆ ಇಎಸ್‌ಪಿಎನ್ ಕ್ರಿಕ್‌ಇನ್ಫೊ  ಅಂತರರಾಷ್ಟ್ರೀಯ ಮೂರೂ ಮಾದರಿಗಳಲ್ಲಿ ಉತ್ತಮವಾಗಿ ಆಡಿದ ಆಟಗಾರ್ತಿಯರಿಗೂ ಪ್ರಶಸ್ತಿ ನೀಡುತ್ತಿದೆ.

‘ಶ್ರೇಷ್ಠ ನಾಯಕಿ‘ ಪ್ರಶಸ್ತಿ ಹೀಥರ್ ನೈಟ್ ಅವರಿಗೆ ಲಭಿಸಿದೆ. ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡವನ್ನು ಅವರು ಮುನ್ನಡೆಸಿದ್ದರು. ಇಂಗ್ಲೆಂಡ್‌ 2017ರಲ್ಲಿ ಆಡಿದ 12 ಏಕದಿನ ಪಂದ್ಯಗಳಲ್ಲಿ 9ರಲ್ಲಿ ಗೆದ್ದಿದೆ.

ಇಂಗ್ಲೆಂಡ್‌ ತಂಡದ ಆಟಗಾರ್ತಿ ಅನ್ಯಾ ಶ್ರುಬ್ಸೋಲ್ ಅವರಿಗೆ ‘ವರ್ಷದ ಅತ್ಯುತ್ತಮ ಬೌಲರ್‌‘ ಪ್ರಶಸ್ತಿ ಲಭಿಸಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಎದರು ಅವರು 46ರನ್‌ಗಳಿಗೆ 6 ವಿಕೆಟ್‌ ಕಬಳಿಸಿದ್ದರು.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್‌ ಅವರಿಗೆ ಟೆಸ್ಟ್ ಮಾದರಿಯಲ್ಲಿ ನೀಡಲಾಗುವ ‘ವರ್ಷದ ಅತ್ಯುತ್ತಮ ಬ್ಯಾಟ್ಸ್‌ಮನ್‌’ ಪ್ರಶಸ್ತಿ ಲಭಿಸಿದೆ. ಬಾರ್ಡರ್–ಗಾವಸ್ಕರ್‌ ಟೆಸ್ಟ್ ಪಂದ್ಯದಲ್ಲಿ ಸ್ಮಿತ್‌ 109 ರನ್‌ ದಾಖಲಿಸಿದ್ದರು.

ಆಸ್ಟ್ರೇಲಿಯಾದ ನಥಾನ್‌ ಲಿಯಾನ್‌ ಅವರಿಗೆ ಟೆಸ್ಟ್ ವಿಭಾಗದ ‘ವರ್ಷದ ಅತ್ಯುತ್ತಮ ಬೌಲರ್‌‘ ಪ್ರಶಸ್ತಿ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ಭಾರತ ಎದುರಿನ ಎರಡನೇ ಪಂದ್ಯದಲ್ಲಿ ಅವರು 50ರನ್‌ಗಳಿಗೆ ಎಂಟು ವಿಕೆಟ್ ಪಡೆದಿದ್ದರು.

ವೆಸ್ಟ್‌ಇಂಡೀಸ್ ತಂಡದ ಎವಿನ್ ಲೂಯಿಸ್‌ ಟ್ವೆಂಟಿ–20 ವಿಭಾಗದ ‘ಶ್ರೇಷ್ಠ ಬ್ಯಾಟ್ಸ್‌ಮನ್‌’ ಗೌರವ ಗಳಿಸಿದ್ದಾರೆ. ಕಿಂಗ್ಸ್‌ಟನ್‌ನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಲೂಯಿಸ್ ಅಜೇಯ 125ರನ್ ಸಿಡಿಸಿದ್ದರು. ಈ ಪಂದ್ಯವನ್ನು ವೆಸ್ಟ್‌ಇಂಡೀಸ್‌ ತಂಡ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು.

ಐಸಿಸಿ ಚಾಂಪಿಯನ್ಸ್‌ ಟ್ರೋಪಿಯಲ್ಲಿ ಮಿಂಚುವ ಮೂಲಕ ಪಾಕಿಸ್ತಾನ ತಂಡದ ಗೆಲುವಿನ ರೂವಾರಿಗಳಾಗಿದ್ದ ಫಖ್ರ್ ಜಮಾನ್ ಮತ್ತು ಮಹಮ್ಮದ್ ಅಮೀರ್‌ ಅವರು ಕ್ರಮವಾಗಿ ಏಕದಿನ ಮಾದರಿಯ ‘ಶ್ರೇಷ್ಠ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌’ ಪ್ರಶಸ್ತಿ ಗಳಿಸಿದ್ದಾರೆ.

18 ಸದಸ್ಯರ ಆಯ್ಕೆ ಸಮಿತಿ ಪ್ರಶಸ್ತಿ ಪಟ್ಟಿಯನ್ನು ಅಂತಿಮಗೊಳಿಸಿದೆ. ಹಿರಿಯ ಕ್ರಿಕೆಟಿಗ ಇಯಾನ್ ಚಾಪೆಲ್‌, ರಮೀಜ್ ರಾಜಾ, ಮಾರ್ಕ್

ಬೌಷರ್‌, ರಸೆಲ್‌ ಅರ್ನಾಲ್ಡ್, ಹಿರಿಯ ಅಂಪೈರ್‌ ಸೈಮನ್ ಟಾಫೆಲ್‌ ಸಮಿತಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.