ಗುರುವಾರ , ಮೇ 28, 2020
27 °C

ಬೇಸಿಗೆ ಮುನ್ನವೇ ಕುಡಿವ ನೀರಿನ ಸಮಸ್ಯೆ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಬೇಸಿಗೆ ಮುನ್ನವೇ ಕುಡಿವ ನೀರಿನ ಸಮಸ್ಯೆ

ಶಹಾಪುರ: ಬೇಸಿಗೆ ಕಾಲ ಆರಂಭ ಗೊಳ್ಳುವ ಮುನ್ನವೇ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತಾಲ್ಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಬೊಮ್ಮನಹಳ್ಳಿಯಲ್ಲಿ ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಸುಮಾರು 1,500 ಜನಸಂಖ್ಯೆ ಇದೆ.

‘ಗ್ರಾಮದ ಹೊರವಲಯದಲ್ಲಿರುವ ಕೊಳವೆಬಾವಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಸರಿಯಾದ ನಿರ್ವಹಣೆ ಮತ್ತು ಕಳಪೆಮಟ್ಟದ ಪೈಪುಗಳನ್ನು ಹಾಕಿರುವುದರಿಂದ ನೀರು ಸೋರಿಕೆಯಾಗುತ್ತಿದೆ. ಬೇಸಿಗೆ ಆರಂಭದ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಲವು ತಿಂಗಳಿಂದ ವಾರಕ್ಕೆ ಒಮ್ಮೆ ನೀರು ಬಿಡುತ್ತಾರೆ. ಅನಿವಾರ್ಯವಾಗಿ ಹಳ್ಳದ ನೀರು ಸೇವಿಸುವ ದುಃಸ್ಥಿತಿ ಬಂದಿದೆ. ಕಲುಷಿತ ನೀರು ಸೇವೆನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಜನರನ್ನು ಕಾಡುತ್ತಿದೆ’ ಎಂದು ಗ್ರಾಮದ ಮುಖಂಡರಾದ ಯಲ್ಲಾಲಿಂಗ, ಪರಶುರಾಮ ಆರೋಪಿಸತ್ತಾರೆ.

‘ಗ್ರಾಮದಲ್ಲಿ 1ರಿಂದ 5ನೇ ತರಗತಿಯವರೆಗೆ ಶಾಲೆ ಇದೆ. ಸುಮಾರು 450 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಭಯದ ಭೀತಿಯಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ಬಿಸಿಯೂಟದ ಕೋಣೆ ಇಲ್ಲದ ಕಾರಣ ಶಾಲೆಯ ಒಂದು ಕೋಣೆಯಲ್ಲಿ ಸಾಮಗ್ರಿಗಳನ್ನು ಇಡಲಾಗಿದೆ. ಛಾವಣಿಯ ಸಿಮೆಂಟ್‌ ಬೀಳುತ್ತಿರುವುದರಿಂದ ಶಿಕ್ಷಕರೂ ಆತಂಕದಲ್ಲಿ ಪಾಠ ಮಾಡುವಂತೆ ಆಗಿದೆ’ ಎಂದು ಪಾಲಕರು ತಿಳಿಸಿದರು.

‘ಗ್ರಾಮದಲ್ಲಿ ಒಳಚರಂಡಿ ಹಾಗೂ ಸಿ.ಸಿ ರಸ್ತೆ ನಿರ್ಮಿಸಿಲ್ಲ. ಮನೆಯ ನೀರು ರಸ್ತೆ ಮೇಲೆ ಆಕ್ರಮಿಸಿಕೊಂಡು ಸಂಚಾರಕ್ಕೂ ಪರದಾಡುವಂತೆ ಆಗಿದೆ. ವೈಯಕ್ತಿಕ ಶೌಚಾಲಯ ನಿರ್ಮಾಣ ಇನ್ನೂ ನೆಲವನ್ನು ಬಿಟ್ಟು ಮೇಲೆ ಹೇಳುತ್ತಿಲ್ಲ. ಶೌಚಾಲಯ ನಿರ್ಮಾಣದ ಸಹಾಯಧನವು ಸಮರ್ಪಕವಾಗಿ ಬರುತ್ತಿಲ್ಲ. ಇದರಿಂದ ಕೆಲವು ಕಡೆ ಗುಂಡಿ ತೋಡಿ ಬಿಟ್ಟಿದ್ದೇವೆ. ಬಯಲು ಶೌಚಾಲಯವೇ ಗತಿ. ಸರ್ಕಾರದ ವಸತಿ ಯೋಜನೆಯು ಉಳ್ಳವರ ಪಾಲು ಆಗಿವೆ. ನಿಜವಾದ ನಿರ್ಗತಿಕರಿಗೆ ಮನೆ ಇಲ್ಲ. ಸಾಕಷ್ಟು ಬಾರಿ ಹೋರಾಟ ಮಾಡಿ ಮನೆ ಹಂಚಿಕೆ ತಾರತಮ್ಯ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾರು ಸ್ಪಂದಿಸುತ್ತಿಲ್ಲ’ ಎಂದು ದಲಿತ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ರಡ್ಡಿ ಆರೋಪಿಸಿದ್ದಾರೆ.

‘ಗ್ರಾಮಕ್ಕೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕು. ಗ್ರಾಮೀಣ ಜನರು ಗೌರವಯುತವಾಗಿ ಬಾಳುವಂತಾಗಲು ಅಧಿಕಾರಿಗಳು ಮೂಲ ಸೌಕರ್ಯ ಒದಗಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

* * 

ಗ್ರಾಮಕ್ಕೆ ಪ್ರತಿದಿನ ಕುಡಿಯುವ ನೀರು ಬಿಡಲಾಗುತ್ತಿದೆ. ಕೆಲ ದಿನದ ಹಿಂದೆ ಪೈಪು ಒಡೆದು ಸಮಸ್ಯೆ ಆಗಿತ್ತು. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ.

ಶಾರದಾ ಪಿಡಿಒ, ಗುಂಡಗುರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.