ಬಲಿಜ ಸಮುದಾಯ ಸದೃಢವಾಗಬೇಕಿದೆ

7

ಬಲಿಜ ಸಮುದಾಯ ಸದೃಢವಾಗಬೇಕಿದೆ

Published:
Updated:

ವಿರಾಜಪೇಟೆ: ಜಿಲ್ಲೆಯಲ್ಲಿ ಶತಮಾನಗಳಿಂದಲೂ ನೆಲೆ ನಿಂತಿರುವ ಬಲಿಜ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅಭಿಪ್ರಾಯಪಟ್ಟರು.

ಪಟ್ಟಣದ ಪುರಭವನದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಬಲಿಜ ಸಮಾಜ ಹಾಗೂ ತಾಲ್ಲೂಕು ಬಲಿಜ ಸಮಾಜದ ನಿರ್ದೇಶಕರ ಸಭೆಯಲ್ಲಿ ಅವರು ಮಾತನಾಡಿದರು.

‘ಬಲಿಜ ಜನಾಂಗದ ಏಳಿಗೆ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂ.ಎಸ್.ರಾಮಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಪದವಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಜಿಲ್ಲಾ ಬಲಿಜ ಸಮಾಜದ ಸಮುದಾಯ ಭವನ ಹಾಗೂ ಅಭ್ಯುದಯ ಕಾರ್ಯಗಳಿಗೆ ಸರ್ಕಾರಿ ನಿವೇಶನ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಲಿಜ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್, ‘ಕೊಡಗು ಜಿಲ್ಲೆಯಲ್ಲಿ ಸಮುದಾಯವನ್ನು ರಾಜಕೀಯ ರಹಿತವಾಗಿ ಸಂಘಟಿಸಲಾಗುತ್ತಿದೆ. ಮೇ 19 ಹಾಗೂ 20ರಂದು ಹಾತೂರಿನಲ್ಲಿ ಕೊಡಗು ಜಿಲ್ಲಾ ಬಲಿಜ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ. ಇತರೆ ಕೌಟುಂಬಿಕ ಕ್ರೀಡಾ ಹಬ್ಬಗಳಿಗೆ ಅನುದಾನ ನೀಡುತ್ತಿರುವಂತೆ ಬಲಿಜ ಕ್ರೀಡಾ ಹಬ್ಬಕ್ಕೂ ಅನುದಾನ ಕಲ್ಪಿಸಬೇಕು’ ಎಂದು ಅವರು ಮನವಿ ಮಾಡಿದರು.

ವಿರಾಜಪೇಟೆ ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಎಸ್.ಕೆ.ಗಣೇಶ್ ನಾಯ್ಡು, ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಡಿ.ದಯಾನಂದ್ ಹಾಗೂ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಮಾತನಾಡಿದರು.

40 ವರ್ಷಗಳಿಂದ ಬಲಿಜ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವ ಸಿದ್ಧಾಪುರ ಸಮೀಪದ ಗುಹ್ಯದ ಪದ್ಮಾ ಎಸ್ಟೇಟ್ ಮಾಲೀಕರಾದ ವಿಜಯಲಕ್ಷ್ಮಿ ಸಂಪತ್‌ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಬಲಿಜ ಸಮಾಜ ಕಾನೂನು ಸಲಹೆಗಾರ ಸಂಜಯ್ ರಾಜ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಉಸ್ತವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್‌ ಬೋಪಣ್ಣ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಟ್ಟು ಚಂಗಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry